Tuesday, June 9, 2009

ಕೋಂಗ್ರೇಸು ಎಂತಕೆ ಅಪಥ್ಯ -೩

(...ಮುಂದುವರುದ್ದು)..

೫. ಶಾಲೆಯ ಸಮಾಜ ಪಾಠಲ್ಲಿ ನಮ್ಮ ಸಂವಿಧಾನದ ಬಗ್ಗೆ ಕಲಿವಗ ಜಾತ್ಯತೀತ ಹೇಳುವ ಶಬ್ದ ಇತ್ತದು ನೆಂಪಿದ್ದು.   ಅಂಬಗ, ಈ ಶಬ್ದ ಯಣ್ ಸಂಧಿಗೆ ಒಂದು ಒಳ್ಳೆಯ ಉದಾಹರಣೆ ಹೇಳಿ ಗ್ರೇಶಿಗೊಂಡಿತ್ತದಷ್ಟೇ ಹೊರತು, ಕೋಂಗೇಸಿನವಕ್ಕೆ (ಮತ್ತೆ ದೇವೇಗೌಡನ ಹಾಂಗಿಪ್ಪವಕ್ಕೂ)  ಉಪಯೋಗ ಅಪ್ಪಷ್ಟು ದೊಡ್ಡ ಅರ್ಥವ್ಯಾಪ್ತಿ ಇದಕ್ಕೆ ಇದ್ದು ಹೇಳುವ ಕಲ್ಪನೆಯೇ ಬಂದಿತ್ತಿಲ್ಲೆ !   ಈ ಶಬ್ದದ ವ್ಯಾಖ್ಯಾನ ನೋಡಿರೆ, ಜಾತಿಗಳ ಮೀರಿದ ನಡವಳಿಕೆ ಹೇಳುವ ಅರ್ಥ ಇಪ್ಪದು ಗೊಂತಾವುತ್ತು. ಇಂದ್ರಾಣ ಕೋಂಗ್ರೇಸಿನ ಹಿಂದೂ ರಾಜಕಾರಣಿಗೊ ಈ ಅರ್ಥವ ಚಾಚೂ ತಪ್ಪದ್ದೆ ತಮ್ಮ ಜೀವನಲ್ಲಿ ಅನುಷ್ಠಾನ ಮಾಡ್ತಾ ಇಪ್ಪದರ ಕಂಡು ಇವರ ಬೋದಾಳತನದ ಬಗ್ಗೆ ಕನಿಕರ ಹುಟ್ಟುತ್ತು.  ಇವೆಲ್ಲಾ ತಮ್ಮ ಸ್ವಂತ ಹಿಂದೂತ್ವವ ಮರದು ಮುಸ್ಲಿಮರ, ಕ್ರಿಶ್ಚಿಯನ್ನರ ಖುಶಿ ಪಡುಸುಲೆ ಇರುಳು ಹಗಲು ಶ್ರಮಿಸುವ ಹೃದಯ ವೈಶಾಲ್ಯ ಪ್ರದರ್ಶಿಸುತ್ತಾ ಇಪ್ಪದರ  ನೋಡಿರೆ ಹೇಸಿಗೆ ಆವುತ್ತು.   ಮತ್ತೆ, ಇಂತಹ ಉದಾರ ಹೃದಯ ಹಿಂದೂಗೊಕ್ಕೆ  ಮಾತ್ರ ಇಪ್ಪದು, ಆಚ ಹೊಡೆಂದ ಇದಕ್ಕೆ ಯಾವ ಪ್ರತಿಕ್ರಿಯೆಯಾಗಲಿ, ಕೃತಜ್ಞತೆಯಾಗಲಿ ಇಲ್ಲೆ ಹೇಳುವ ಮೂಲಭೂತ ಸತ್ಯವ ತಿಳುಕ್ಕೊಂಬ ಗೋಜಿಂಗೆ ಹೋಗದ್ದ ಮುಗ್ಧತೆ ಕಂಡು ಮರುಕ ಆವುತ್ತು.  ಅಪ್ಪಟ ಬ್ಯಾರಿಗಳ ಪಕ್ಷವಾದ ಮುಸ್ಲಿಮ್ ಲೀಗಿಂಗೂ ಜಾತ್ಯತೀತ ಹೇಳುವ ಬಿರುದು ಕೊಟ್ಟು ಅವರ ಹೆಗಲಿಂಗೆ ಕೈ ಹಾಕಿಗೊಂಡು ಓಡಾಡುದರ ನೋಡಿರೆ ಜಿಗುಪ್ಸೆ ಹುಟ್ಟುತ್ತು.  

ಕೋಂಗ್ರೇಸಿನ ಹೀಂಗಿಪ್ಪ ಆಷಾಢಭೂತಿ ರಾಜಕಾರಣಿಗೊ ಇಷ್ಟು ವರ್ಷ ಮಾಡಿದ ಅಮೋಘ ಸಮಾಜ ಸೇವೆಯ ಕಾಣಿಕೆ ಎಂತ ಹೇಳಿರೆ,  ನಮ್ಮ ದೇಶಲ್ಲಿ ಅಲ್ಪ ಸಂಖ್ಯಾತರ ಹಿಂದೂಗಳ ಭವಿಷ್ಯವನ್ನೇ ನಿರ್ಧಾರ ಮಾಡುವಷ್ಟು  ನಿರ್ಣಾಯಕರಾಗಿ ಬೆಳೆಶಿ ನಿಲ್ಸಿದ್ದದು.  ನಮ್ಮ ದೇಶಲ್ಲಿಪ್ಪ ಜೈನರು, ಬೌದ್ಧರು, ಪಾರ್ಸಿಗೊ, ಸಿಖ್ ಇತ್ಯಾದಿಯವಕ್ಕೆ ಸಮಾಜಲ್ಲಿ ಸಹಜೀವನದ ಧರ್ಮವ ಪಾಲಿಸಿಗೊಂಡು ಶಾಂತಿಂದ ಬದುಕ್ಕುಲೆ ಎಡಿಗಪ್ಪಗ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಂದು ಮಾತ್ರ ಎಂತಕೆ ಯಾವಾಗಳೂ ತಕರಾರು ?  ಇವರ ಅಸಲು ಕುಟಿಲ ಕಾರ್ಯತಂತ್ರವ ಅರ್ಥ ಮಾಡಿಗೊಂಡು ಅವರ ಸರಿಯಾದ ಜಾಗೆಲಿ ಕೂರುಸುಲೆ ನವಗೆ ಏಕೆ ಎಡಿತ್ತಿಲ್ಲೆ ?  ಧರ್ಮದ್ರೋಹಿಗಳಾದ ಕೋಂಗ್ರೇಸಿನವು ಕಿರೀಟ ಕಟ್ಟಿಗೊಂಡು ತಿರುಗಿಗೊಂಡಿಪ್ಪಗ,  ಭಾಜಪ ಮತ್ತು ಶಿವಸೇನೆ  ಹಾಂಗಿಪ್ಪ ನಿಜವಾಗಿ ಅರ್ಥಲ್ಲಿ ಜಾತ್ಯತೀತರಾಗಿದ್ದು ದೇಶಪ್ರೇಮ ಮೆರೆವ ಪಕ್ಷಂಗೊ  ಜಾತಿವಾದಿ ಹೇಳುವ ಹಣೆಪಟ್ಟಿ ಕಟ್ಟಿಗೊಳೆಕ್ಕಾಗಿ ಬಂದಿಪ್ಪದು ಇಂದ್ರಾಣ ರಾಜಕೀಯದ ವಿಪರ್ಯಾಸ ಅಲ್ಲದೋ ?  

೬.   ಇತ್ತೀಚೆಗೆ ಇಂಡಿಯನ್ ಎಕ್ಸ್ ಪ್ರೆಸ್  ಪತ್ರಿಕೆಲಿ  ಸ್ವಿಝರ್ಲ್ಯಾಂಡಿನ ನಿಯತಕಾಲಿಕ ಒಂದರಲ್ಲಿ ಮೊದಲೇ (೧೯೯೧ಲ್ಲಿ) ಪ್ರಕಟವಾದ  ಸುದ್ದಿಯ ಉದ್ಧರಿಸಿ ಒಂದು ಲೇಖನ ಬಂದಿತ್ತು. ಇದಲ್ಲಿ ಜಗತ್ತಿನ ಬೇರೆ ಬೇರೆ ದೇಶಂಗಳ ಕುಖ್ಯಾತ  ರಾಜಕಾರಣಿಗಳದ್ದು ಸ್ವಿಸ್ ಬ್ಯಾಂಕಿನ ಖಾತೆಗಳಲ್ಲಿ ಎಷ್ಟು ಹಣ ಇದ್ದು ಹೇಳುವ ವಿವರ ಇತ್ತು.  ಈ ಪಟ್ಟಿಲಿ ನಮ್ಮ ದೇಶವ ಪ್ರತಿನಿಧಿಸಿದ ಹೆಗ್ಗಳಿಕೆ ರಾಜೀವ್ ಗಾಂಧಿದು.   ವಿಮಾನದ ಪೈಲೆಟ್ ಆಗಿತ್ತವಂಗೆ ಇಷ್ಟು ಪೈಸೆ ಎಲ್ಲಿಂದ ಬಂತು ?  ಅಕಸ್ಮಾತ್ ಈ ಶುದ್ದಿ ಸುಳ್ಳಾಗಿದ್ದರೆ, ಅದರ ಖಂಡಿಸುದಾಗಲಿ, ಆ ಪತ್ರಿಕೆಯ ಮೇಲೆ  ಯಾವುದಾದರೂ ಕಾನೂನು ಕ್ರಮ ತೆಕ್ಕೊಂಬದಾಗಲಿ ಏಕೆ ಮಾಡಿದ್ದವಿಲ್ಲೆ ?  ಮರ್ಯಾದೆ ಇದ್ದರಲ್ದಾ ಹೋಪದು ಹೇಳುವ  ಮಿಜಾರು ಅಣ್ಣಪ್ಪನ ತರ್ಕಕ್ಕೆ ಇವರಷ್ಟು ಒಳ್ಳೆ ಉದಾಹರಣೆ ಬೇರೆ ಸಿಕ್ಕ.   ಚುನಾವಣಾ ಪ್ರಚಾರಲ್ಲಿ ಭಾಜಪ ಈ ವಿಷಯವ ಪ್ರಸ್ತಾಪ  ಮಾಡಿತ್ತು. ಭ್ರಷ್ಟಾಚಾರ ಹೇಳುದು ಜೀವನ ಶೈಲಿಯೇ ಆಗಿಪ್ಪ ನಮ್ಮ ದೇಶಲ್ಲಿ ಇದೊಂದು ದೊಡ್ಡ ವಿಷಯ ಆಯಿದೇ ಇಲ್ಲೆ.  ಈಗ ಭಾಜಪದ ಬೇಡಿಕೆಗೆ ಸ್ಪಂದಿಸಿ  ಇದೇ ರಾಜೀವ್ ಗಾಂಧಿಯ ಸುಪುತ್ರ ಈ ವಿಷಯವ ತನಿಖೆ ಮಾಡ್ಸುತ್ತೆ ಹೇಳಿದ್ದ.  ಕಳ್ಳನ ಮಗ ಸುಳ್ಳ ಹೇಳುದರ ನೆಂಪು ಮಾಡಿಗೊಂಡರೆ ಈ ಭರವಸೆಗೆ ಎಷ್ಟು ಮಹತ್ವ ಕೊಡ್ಳಕ್ಕು ಹೇಳುದು ಗೊಂತಾವುತ್ತು.

(ಇನ್ನೂ ಇದ್ದು...)   - ಬಾಪಿ

Friday, June 5, 2009

ಕೋಂಗ್ರೇಸು ಎಂತಕೆ ಅಪಥ್ಯ -೨

(...ಮುಂದುವರುದ್ದು)..

೩.  ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ೬೨ ವರ್ಷ ಆತು.  ಇಷ್ಟೇ ಕಾಲಾವಧಿಲಿ ೨ನೇ ಜಾಗತಿಕ ಯುದ್ಧಲ್ಲಿ ಸಂಪೂರ್ಣ ಸೋತು ಸುಣ್ಣ ಆಗಿತ್ತ ದಯನೀಯ ಪರಿಸ್ಥಿತಿಂದ  ಜರ್ಮನಿ, ಜಪಾನಿನ ಹಾಂಗಿಪ್ಪವು ತಮ್ಮ  ದೇಶಂಗಳ ಸಂಪೂರ್ಣ ಪುನರ್ನಿಮಾಣ  ಮಾಡಿ ತೋರಿಸಿದವು.  ಆದರೆ, ನಮ್ಮ ದೇಶಲ್ಲಿ ಇನ್ನೂ ಏಕೆ ಇಷ್ಟು ಬಡತನ ಇದ್ದು ? ಎಂತಕೆ ಇಷ್ಟು ದೊಡ್ಡ ಪ್ರಮಾಣದ ಅನಕ್ಷರತೆ ಇದ್ದು ? ಭಾರತೀಯರು ಹೇಳಿರೆ ಭ್ರಷ್ಟಾಚಾರ, ಅದಕ್ಷತೆಗಳ ಅಪರಾವತಾರ ಹೇಳಿ ಬೇರೆ ದೇಶದವರಿಂದ ಅಪಹಾಸ್ಯ ಮಾಡಿಸಿಗೊಂಬಷ್ಟು ನಮ್ಮ ಸಾಮಾಜಿಕ ಅವನತಿ ಹೇಂಗಾತು ? ನರೇಂದ್ರ ಮೋದಿಗೆ ಕೇವಲ ೫ ವರ್ಷಲ್ಲಿ ಗುಜರಾತಿನ ನಂಬರ್ ೧ ಸ್ಥಾನಕ್ಕೆ ತೆಕ್ಕೊಂಡು  ಹೋಪಲೆ ಎಡಿಗಾದಿಪ್ಪಗ,  ಸ್ವಾತಂತ್ರ್ಯಾನಂತರ  ೫೦ ವರ್ಷದಷ್ಟು ಕಾಲವೂ ಕೇಂದ್ರಲ್ಲಿ ಮತ್ತು ವಿವಿಧ ಪ್ರಮುಖ ರಾಜ್ಯಂಗಳಲ್ಲಿ   ಆಢಳಿತ ಮಾಡಿಗೊಂಡಿತ್ತ  ಕೋಂಗ್ರೇಸಿನ ಸಾಧನೆ ಎಂತದು ? .ಈ ೫೦ ವರ್ಷಂಗಳಲ್ಲಿ ನಮ್ಮ ದೇಶದ ಎರಡು ತಲೆಮಾರಿನವು ತಮ್ಮ ಅಮೂಲ್ಯ ಜೀವನವ ನರಕ್ಕ ಬಂದು ಅಂಧಕಾರಲ್ಲಿ ಕಳೆವ ಹಾಂಗಾದ್ದಕ್ಕೆ ಆರು ಹೊಣೆ ? ಈ ಅದಕ್ಷ ಮತ್ತು ದುರಾಢಳಿತದ ನೈತಿಕ ಜವಾಬ್ದಾರಿಯ ಕೋಂಗ್ರೇಸು ಪಕ್ಷಕ್ಕಲ್ಲದ್ದೆ ಇನ್ಯಾರಿಂಗೆ ವಹಿಸೆಕ್ಕು ?

೪. ಪ್ರಪಂಚದ ಎಲ್ಲಾ ದೇಶಂಗಳಲ್ಲಿಯೂ ಉನ್ನತ ರಾಜನೈತಿಕ ಹುದ್ದೆಗೊ ಆಯಾ ದೇಶಂಗಳಲ್ಲಿ ಜನಿಸಿದ ಮೂಲ ನಾಗರಿಕರಿಂಗೆ ಮಾತ್ರ  ಮೀಸಲಾಗಿಪ್ಪದು ಸಾಮಾನ್ಯ ವಿಷಯ. ಯಾವಗಾಣ ಹಾಂಗೆ, ಭಾರತ ಮಾಂತ್ರ ಇದಕ್ಕೆ ಅಪವಾದ !  ಎಷ್ಟಾದರೂ ಅತಿಥಿ ದೇವೋ ಭವ ಹೇಳುವ  ನಮ್ಮ ಸಂಸ್ಕೃತಿಯ ಧ್ಯೇಯ ವಾಕ್ಯವ ಪಾಲಿಸದ್ದೆ ಇಪ್ಪದು  ಹೇಂಗೆ ?  ಇದು ಆರ ಬಗ್ಗೆ  ಹೇಳುಲೆ ಮಾಡ್ತಾ ಇಪ್ಪ ಪೀಠಿಕೆ ಹೇಳಿ ಇರುಳು ಒರಕ್ಕಿಂದ ಎಬ್ಬಿಸಿ ಕೇಳಿರೂ ಆರು ಬೇಕಾರೂ ಹೇಳುಗು.  ಸೋನಿಯಾ ಗಾಂಧಿ ಕೈಗೆ ಬಂದ ಪ್ರಧಾನ ಮಂತ್ರಿ ಹುದ್ದೆಯ ತಿರಸ್ಕರಿಸಿದ್ದೆ  ಹೇಳಿ ಮೇಲ್ನೋಟಕ್ಕೆ ತಪ್ಪಿಸಿಗೊಂಬಲಕ್ಕು. ಆದರೆ, ಕೋಂಗ್ರೇಸಿಲ್ಲಿ  ಮತ್ತು  UPAಲಿ  ನಿರ್ಧಾರ ತೆಕ್ಕೊಂಬದು ಆರು ಹೇಳುದು ಕುಂಙಿ ಮಕ್ಕೊಗೂ ಗೊಂತಿಪ್ಪ ವಿಷಯ.  ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಇಷ್ಟು ಮುಖ್ಯ ಸ್ಥಾನವ ವಹಿಸಿಗೊಂಬಲೆ ಸೋನಿಯಾ ಗಾಂಧಿಯ ಯೋಗ್ಯತೆ ಎಂತದು ? ತನ್ನ ಮೂರ್ಖತನದ ನಿರ್ಧಾರಂಗಳಿಂದ  ಸೃಷ್ಟಿಯಾದ ಸಮಸ್ಯೆಗಳ ಫಲವಾಗಿ  ಹೊಟ್ಟಿದ ಬಾಂಬಿಂಗೆ ಬಲಿಯಾದ ಗೆಂಡನ ವಿಧವೆ ಆಗಿಪ್ಪದೊಂದೇ ದೊಡ್ಡ ಅರ್ಹತೆಯೋ ?  ಅಥವಾ ಸ್ವಿಝರ್ಲ್ಯಾಂಡಿಲ್ಲಿ ಹುಗ್ಗಿಸಿ ಮಡುಗಿದ ಕಪ್ಪು ಹಣ ಇಪ್ಪ ಪೆಟ್ಟಿಗೆಯ ಬೀಗದ ಕೈ ಇದರತ್ರೆ ಇಪ್ಪ ಕಾರಣವೋ ?  ಮದುವೆ ಆಗಿ ಎಷ್ಟೋ ವರ್ಷ ವರೆಗೂ ಭಾರತದ ಪೌರತ್ವವನ್ನೇ ತೆಕ್ಕೊಳದ್ದೆ ಇತ್ತ ಈ ವ್ಯಕ್ತಿಯ ದೇಶ ನಿಷ್ಠೆ  ಎಂತದು ? ಇವರ ಕುಟುಂಬಕ್ಕೂ ಇಟೆಲಿಯ ಕೋತ್ರೋಕಿ ಹೇಳುವ ಕುಖ್ಯಾತ ಮಧ್ಯವರ್ತಿಗೂ ಇಪ್ಪ ಸಂಬಂಧ ಎಂತದು ? ಎಲ್ಲಾ ವಿಷಯಂಗಳಲ್ಲಿಯೂ ಜಾಣ ಮೌನ, ಗೌಪ್ಯತೆ ಮತ್ತು ಸಂಶಯಾತ್ಮಕ ನಡವಳಿಕೆಯೇ ಚಾಳಿ ಆಗಿಪ್ಪ ಕೋಂಗ್ರೇಸಿನ ಸದ್ಯದ ಅಧ್ಯಕ್ಷೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ಬಪ್ಪದಾದರೂ ಹೇಂಗೆ ? 

(ಇನ್ನೂ ಇದ್ದು...) - ಬಾಪಿ

Tuesday, June 2, 2009

ಕೋಂಗ್ರೇಸು ಎಂತಕೆ ಅಪಥ್ಯ -೧

ರಾಜಕಾರಣ ಹೇಳುದು  ಸಮಾಜಸೇವೆ ಮಾಡ್ಳಿಪ್ಪ ಕ್ಷೇತ್ರ ಹೇಳುವ ಕಾಲ ಒಂದಿತ್ತು ಹೇಳುದರ  ನವಗೆ ಕೇಳಿ ಗೊಂತಿಕ್ಕು.  ನಮ್ಮ ಕಾಲಕ್ಕಪ್ಪಗ  ರಾಜಕೀಯ ಒಂದು ದಂಧೆಯಾಗಿ ಬದಲಾಯಿದು.  ಯಾಕೆ ಹೀಂಗಾತು ಹೇಳುದರ ಗಹನವಾಗಿ ವಿಮರ್ಶೆ ಮಾಡುವ ಅಗತ್ಯ ಇದ್ದು.  ನಾವೇ ಚುನಾವಣೆಲಿ ಒಂದು ಕೈ ನೋಡುವೋ ಹೇಳಿ  ಸ್ಪರ್ಧಿಸಿ ಪ್ರಯತ್ನ ಮಾಡ್ಳುದೇ ಅಕ್ಕು. ಆದರೆ, ಇದು  ತುಂಬಾ ದೀರ್ಘ ಪಯಣ ಮತ್ತು ಕಠಿಣ ಹಾದಿ.  ಹಾಂಗಾಗಿ, ಪರಿಸ್ಥಿತಿಯ ಬದಲಾಯಿಸುವ ಹಂಬಲ ಇದ್ದರೆ, ಸುಲಭ ವಿಧಾನ ಹೇಳಿರೆ ಚುನಾವಣೆಲಿ ತಪ್ಪದ್ದೆ ಮತ ಹಾಕುದು. ಇಷ್ಟು ಪರ್ಯಾಯಂಗೊ ಇಪ್ಪಗ, ಯಾವ ಪಕ್ಷವ ಬೆಂಬಲಿಸುದು ಹೇಳುವ ಪ್ರಶ್ನೆ ಸ್ವಾಭಾವಿಕ.  ಇಂದ್ರಾಣ ಪರಿಸ್ಥಿತಿಲಿ ಪೂರ್ಣ ಪ್ರಮಾಣದ ಆದರ್ಶವ ಪ್ರತಿಪಾದಿಸುವ ಪಕ್ಷ ಆಗಲಿ, ಅಭ್ಯರ್ಥಿ ಆಗಲೀ ಸಿಕ್ಕುದು ಕಷ್ಟ.  ಮತ್ತೆ, ಬದಲಾದ  ಜಾಗತಿಕ ವ್ಯವಸ್ಥೆಲಿ  ಪಕ್ಷಂಗಳ ಮಧ್ಯೆ ಇಪ್ಪ ಸೈದ್ಧಾಂತಿಕ ವ್ಯತ್ಯಾಸ  (ಬಹು ಮುಖ್ಯವಾದ ಆರ್ಥವ್ಯವಸ್ಥೆಗೆ ಸಂಬಂಧಿಸಿದ)  ಕಮ್ಮಿ ಆವುತ್ತಾ ಇದ್ದು.   ಹಾಂಗಾರೆ,  ಹೆಚ್ಚು ಸರ್ತಿಯೂ "ಕುರುಡಂದ ಕೋಸು ಕಣ್ಣ ಅಕ್ಕು" ಹೇಳುವ ಗಾದೆಯ ಮೊರೆ ಹೋಯೆಕ್ಕಾವುತ್ತು.  ಆದರುದೇ ಕೋಂಗ್ರೇಸು ಪಕ್ಷ ಎಷ್ಟಕ್ಕೂ ಅಪಥ್ಯ ಹೇಳುವ ಮನಃಸ್ಥಿತಿಯ ಯಾಕೋ ಬದಲಾಯಿಸುಲೆ ಎಡಿತ್ತೇ ಇಲ್ಲೆ. ಇದಕ್ಕೆ ಕಾರಣಂಗಳ ಹುಡುಕ್ಕಿ ವಿವರಿಸದ್ರೆ  ಪೂರ್ವಾಗ್ರಹದ ಚಿಂತನೆ ಹೇಳಿ ಕಾಂಗು.  ಎನ್ನ ತಲೆಮಾರಿನವು ವಿದ್ಯಾರ್ಥಿ ಜೀವನಲ್ಲಿಪ್ಪಗಾಣ ಸಮಕಾಲೀನ ಕೋಂಗ್ರೇಸಿನ  ಚರಿತ್ರೆಯ ಭೂತದ ಛಾಯೆ ಮನಸ್ಸಿನ ಮೇಲೆ  ಗಾಢವಾಗಿಪ್ಪದು ಒಂದು ಬಹು ಮುಖ್ಯ ವಿಷಯ.  ಈಗ, ಈ ಅಪಥ್ಯಕ್ಕೆ ಕಾರಣವಾದ ಸಂಗತಿಗಳ ಒಂದೊಂದಾಗಿ ನೋಡುವೋ.

೧    ಕೋಂಗ್ರೇಸು ಹೇಳುದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಹುಟ್ಟಿಹಾಕಿದ ಒಂದು ಸಂಸ್ಥೆಯ ಹೆಸರು. ಗಾಂಧೀಜಿಯ ನೇತೃತ್ವಲ್ಲಿ ಇದು ಒಂದು ಜನಾಂದೋಲನವಾಗಿ, ಹೋರಾಟದ ಕೇಂದ್ರ ಬಿಂದುವಾಗಿ ರೂಪುಗೊಂಡತ್ತು. ಉದ್ದೇಶ ಸಾಧನೆ ಆದ ಮೇಲೆ ಈ ಸಂಸ್ಥೆಯ  ವಿಸರ್ಜಿಸಿದವಡ. ಸ್ವಾತಂತ್ರ್ಯಾನಂತರ ಗಾಂಧೀಜಿಯೇ ಮೊದಲಾದವು ನಿವೃತ್ತರಾದರೆ, ನೆಹರೂ ಹಾಂಗಿಪ್ಪ ಸುಮಾರು ಜನ  ನವಭಾರತದ ರಾಜಕಾರಣಲ್ಲಿ ಸಕ್ರಿಯರಾದವು. ಕೋಂಗ್ರೇಸು ಹೇಳುವ ಹೆಸರಿಲ್ಲಿ  ಒಂದು ರಾಜಕೀಯ ಪಕ್ಷ  ಮುಂದುವರಿಕ್ಕೊಂಡು ಬಂತು.    

ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಂದ ರಾಜಕಾರಣಿಗಳಾದ ಜನಂಗೊ ಜೀವಲ್ಲಿ ಇಪ್ಪವರೆಗೆ ಕೋಂಗ್ರೇಸು ಪಕ್ಷ ಆದರ್ಶ, ಸಿದ್ಧಾಂತ, ರಾಷ್ಟ್ರಪ್ರೇಮ ಇತ್ಯಾದಿಗಳ ಎತ್ತಿಹಿಡುದ ಹೆಗ್ಗಳಿಕೆ ಪಡಕ್ಕೊಂಡಿತ್ತು.   ಆದರೆ, ಸದ್ಯಕ್ಕೆ ಈ ಪಕ್ಷ ಇದರ ಪೂರ್ವಾಶ್ರಮದ ಲಕ್ಷಣಂಗೊಕ್ಕೆ ಯಾವುದೇ ಸಾಮ್ಯ ಇಲ್ಲದ್ದ ಒಂದು ಸ್ವಾರ್ಥಿಗಳ ಗುಂಪಾಗಿ ಕಾಣ್ತು.  ವಿಶೇಷತಃ, ಇದು ಇಂದಿರಾ ಗಾಂಧಿಯ ಆಗಮನದ ನಂತರ ಆದ ಪರಿವರ್ತನೆ.   ಯಾವ ಸ್ವಾತಂತ್ರ್ಯಕ್ಕಾಗಿ ಹಳೆ ತಲೆಮಾರಿನವು ಹೋರಾಟ ಮಾಡಿದವೋ, ಅದೇ ಅಮೂಲ್ಯ ಸ್ವಾತಂತ್ರ್ಯವ ಪ್ರಜೆಗಳಿಂಗೆ  ಇಲ್ಲದ್ದ ಹಾಂಗೆ ಮಾಡಿದ ತುರ್ತು ಪರಿಸ್ಥಿತಿಯ ಕರಾಳ ಶಾಸನವ ದೇಶದ ಮೇಲೆ ವಿಧಿಸಿದ ಕ್ರೂರಿಗಳ  ಪಕ್ಷ ಇಂದ್ರಾಣ ಕೋಂಗ್ರೇಸು.   

೨.೦  ಈ ಪಕ್ಷ ಕೊಂಗ್ರೇಸು (ಐ) ಹೇಳಿ ಪುನರ್ನಾಮಕರಣಗೊಂಡದು ಅತ್ಯಂತ ಹಾಸ್ಯಾಸ್ಪದ ವಿಷಯ.  ಈ ಬೆಳವಣಿಗೆಯ  ಇಂದಿರಾ ಗಾಂಧಿ ಹೇಳುವ ದುಷ್ಟ ಮಹಿಳೆಯ ದುರ್ಬುದ್ಧಿಯ, ದುರಹಂಕಾರದ ಸಂಕೇತವಾಗಿ ಮತ್ತು ಸಾವಿರಾರು ಜನ ನಿಃಸ್ವಾರ್ಥಿಗೊ ಕಟ್ಟಿಬೆಳೆಶಿದ ಪಕ್ಷವ ತನ್ನ ಅಪ್ಪನ ಮನೆಯ ಆಸ್ತಿಯೋ ಹೇಳುವ ಹಾಂಗೆ ಸರ್ವಾಧಿಕಾರಿ ಧೋರಣೆಲಿ ನಡೆಶಿಗೊಂಡ ಪ್ರವೃತ್ತಿಯ ಪ್ರತೀಕವಾಗಿ ಜನ ನೆಂಪು ಮಾಡಿಗೊಳ್ತವು.   ನೆಹರೂವಿನ ವಂಶದ ನಾಲ್ಕನೇ ತಲೆಮಾರಿನವರ ವಂಶಪಾರಂಪರ್ಯದ  ಆಢಳಿತ ನಡೆತ್ತಾ ಇಪ್ಪ ಸದ್ಯದ ಪರಿಸ್ಥಿತಿಲಿ, ಪಕ್ಷದ ಹೆಸರಿನ ಇಟೆಲಿಯ ಹೊಸ ನೆಂಟಸ್ತನದ ಕೊಡುಗೆಯುದೇ  ನೆಂಪು ಉಳಿವ ಹಾಂಗೆ ಇನ್ನೊಂದು ಸರ್ತಿ ಬದಲಿಸಿರೆ ಸಮರ್ಪಕ ಅಕ್ಕೋ ಹೇಳುವ ಆಲೋಚನೆ ಬತ್ತಾ ಇದ್ದು.  ಹಾಂಗಾರೆ, "ಐ"  ಬದಲು "ವಿ" ಹೇಳಿ (we ಹೇಳಿರೆ ಎಂಗೊಗೆ ಮಾತ್ರ ಸೇರಿದ್ದು  ಹೇಳುವ ಅರ್ಥಲ್ಲಿ)  ಬದಲಿಸಿದರೆ ಸರಿ ಅಕ್ಕೋ ? 

(ಇನ್ನೂ ಇದ್ದು...) - ಬಾಪಿ