Wednesday, January 6, 2010

ಮತದಾನ

ಜಗತ್ತಿನ ಬೇರೆ ಬೇರೆ ದೇಶಂಗಳಲ್ಲಿಪ್ಪ ವಿವಿಧ ರಾಜಕೀಯ ವ್ಯವಸ್ಥೆಗಳಲ್ಲಿ ಪ್ರಜಾಪ್ರಭುತ್ವವೇ ಶ್ರೇಷ್ಠ ಹೇಳುದು ಸಾಮಾನ್ಯ ನಂಬಿಕೆ. ಇಲ್ಲಿ ಪ್ರಜೆಗಳೇ ಅವರವರ ಪ್ರತಿನಿಧಿಗಳ ಆಯ್ಕೆ ಮಾಡುವ ಕಾರಣ ತಮಗೆ ತಾವೇ ಧನಿಗೊ ಹೇಳುವ ವಾದ. ನಮ್ಮದು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಹೇಳುವ ಹೆಗ್ಗಳಿಕೆ ಬೇರೆ ಭಾರತೀಯರಾದ ನವಗಿದ್ದು.


ಪ್ರಜಾಪ್ರಭುತ್ವ ಹೇಳುದು ಬಹುಮತದ ಆಧಾರದ ಮೇಲೆ ನಡವ ವ್ಯವಸ್ಥೆ ಆದ ಕಾರಣ, ಇಲ್ಲಿ ಚುನಾವಣೆ ಒಂದು ಮಾಮೂಲು ಪ್ರಕ್ರಿಯೆ. ಇದರಿಂದಾಗಿ ಮತದಾನಕ್ಕೆ ಅಮೂಲ್ಯವಾದ ಮೂಲಭೂತ ಹಕ್ಕು ಹೇಳುವ ಹೆಸರು ಬಂತು. ಚುನಾವಣೆಲಿ ನಮ್ಮ ಮತಂಗಳ ಅತಿ ಯೋಗ್ಯ (ಇಪ್ಪವರಲ್ಲಿ) ಪ್ರತಿನಿಧಿಗೆ ಕೊಡೆಕ್ಕಾದ್ದು ಪ್ರಜೆಗಳ ಕರ್ತವ್ಯ. ಆದರೆ, ಮತಂಗಳ ಮಾರಾಟ ಅಥವಾ ಖರೀದಿ ಆದರೆ, ಪ್ರಜಾಪ್ರಭುತ್ವ ಕಂಗಾಲಾವುತ್ತು. ನಮ್ಮ ದೇಶದ ಪ್ರಜಾಪ್ರಭುತ್ವಕ್ಕೆ ಹೀಂಗಿಪ್ಪ ಒಂದು ಕಪ್ಪು ಚುಕ್ಕೆ ಇದ್ದು. ಸಮಾಜಲ್ಲಿ ವ್ಯಾಪಕವಾಗಿಪ್ಪ ಭ್ರಷ್ಟಾಚಾರದ ಪಿಡುಗು ಚುನಾವಣೆಯನ್ನೂ ಬಿಟ್ಟಿದಿಲ್ಲೆ. ಕಾಲಕ್ರಮೇಣ ಚುನಾವಣೆಗೆ ಒಂದು "ವ್ಯವಹಾರದ" ದೃಷ್ಟಿಕೋನ ಬಂತು. "ಎಷ್ಟು ಪೈಸೆ ಭಂಡವಾಳ ಹಾಕಿರೆ ಎಷ್ಟು ತೆಗವಲಕ್ಕು" ಹೇಳುವ ಲೆಕ್ಕಾಚಾರ ಸುರುವಾತು. ಮತದಾರರ ಮುಗ್ಧತೆಯ ದುರುಪಯೋಗ ಪಡಿಸಿಗೊಂಡು ರಾಜಕಾರಣಿಗೊ ಬರೀ ಆಶ್ವಾಸನೆ ಮಾತ್ರ ಕೊಟ್ಟು ಬದುಕ್ಕುದು ಕಲ್ತುಗೊಂಡವು. ತಿರುಗ ಚುನಾವಣೆ ಬಪ್ಪಗ ಇನ್ನೊಂದೆಂತಾರೂ ನಾಟಕ ಮಾಡುವ ಅಥವಾ ಪಕ್ಷ ಬದಲಿಸಿ ಚುನಾವಣೆಯ ಕಣಕ್ಕಿಳಿವ ವಿದ್ಯೆಲಿ ಪಳಗಿದವು. ಎಷ್ಟೋ ವರ್ಷ "ಪೆತ್ತ ಕಂಜಿ" ಚುನಾವಣಾ ಚಿಹ್ನೆ ಆಗಿತ್ತ ಒಂದು ಪಕ್ಷದವು ಮಾಡಿಗೊಂಡು ಬಂದದು ಇದನ್ನೇ. ಒಟ್ಟಾರೆ ಗೆದ್ದರೆ ಆತನ್ನೆ ? ನಿಜವಾಗಿ ಹೇಳ್ತರೆ, ನಮ್ಮ ಸಂಸತ್ತಿಲ್ಲಿ ಅರ್ಹ ಪ್ರತಿನಿಧಿಗೊ ಹೇಳಿಸಿಗೊಂಬವು ಕಾಂಬಲೆ ಸಿಕ್ಕುದು ಅಪರೂಪ. ಒಟ್ಟಾರೆ, ಒಂದು ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಿ ನಡೆಯಕ್ಕಾದರೆ ಅಲ್ಲಿಯ ಪ್ರಜೆಗೊ ಪ್ರಬುದ್ಧರಾಗಿರೆಕು. ಇದಕ್ಕೆ ಕನಿಷ್ಠ ವಿದ್ಯಾಭ್ಯಾಸ ಹೊಂದಿಪ್ಪ ಸಂಪೂರ್ಣ ಸಾಕ್ಷರ ಸಮಾಜ ಇರೆಕು.

ಹೀಂಗಿದ್ದರೂ ನಮ್ಮಲ್ಲಿ ಪ್ರಜಾಪ್ರಭುತ್ವ ಬೆಳೆಯದ್ರೂ ಉಳುಕ್ಕೊಂಡು ಬೈಂದು. ಇದಕ್ಕೆ ಒಂದು ಮುಖ್ಯ ಕಾರಣ ಹೇಳಿರೆ, ಸಂವಿಧಾನದ ಉಳಿದ ಎರಡು ಅಂಗಂಗೊ - ನ್ಯಾಯಾಂಗ ಮತ್ತು ಕಾರ್ಯಾಂಗ - ರಜ ಆದರೂ ಸರಿಯಾಗಿ ಕೆಲಸ ಮಾಡ್ತಾ ಇಪ್ಪದು. ಇನ್ನೊಂದು ಕಾರಣ ಹೇಳಿರೆ, ನಮ್ಮ ಸೈನ್ಯದವರ ವಿಧೇಯತೆ. ಅವು ತಮ್ಮ ಕೆಲಸದ ಹೊರತಾಗಿ ರಾಜಕೀಯ ಅಧಿಕಾರದ ಕುರ್ಚಿಗೆ ಕಣ್ಣು ಹಾಕಿದ್ದವಿಲ್ಲೆ. ಇಲ್ಲದ್ರೆ, ನಮ್ಮಲ್ಲಿಪ್ಪ ಅವ್ಯವಸ್ಥೆಯ ನೋಡಿರೆ ನಮ್ಮ ನೆರೆಕರೆಯವರ ಹಾಂಗೆ ಇಲ್ಲಿಯೂ ಯಾವಾಗಳೇ ಮಿಲಿಟ್ರಿ ಆಢಳಿತ ಬರೆಕಾಗಿತ್ತು. ನಾವೇ ಸುಮಾರು ಸರ್ತಿ ಹತಾಶರಾಗಿ ನಮ್ಮೊಳಾಣ ಅಸಹಾಯಕತೆಯ ಹೆರಹಾಕುಲೆ "ನವಗೆ ಮಿಲಿಟ್ರಿ ಆಢಳಿತವೇ ಸರಿ" ಅಥವಾ "ಬ್ರಿಟಿಷರ ಆಳ್ವಿಕೆಯ ಕಾಲವೇ ಎಷ್ಟೋ ವಾಸಿ ಇತ್ತಡ" ಇತ್ಯಾದಿಯಾಗಿ ಹೇಳಿಗೊಂಡಿಕ್ಕು. ಅಂಬಗಾಣ ಸೇನಾಧಿಪತಿಯಾಗಿತ್ತ ಮಾಣಿಕ್ ಶಾಂಗೆ ಇತ್ತ ತಥಾಕಥಿತ ರಾಜಕೀಯದ ಮಹತ್ವಾಕಾಂಕ್ಷೆಗೆ ಸಂಬಂಧಿಸಿದ ಅನುಮಾನಂದಾಗಿಯೇ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದ್ದದು ಹೇಳುವ ಶುದ್ದಿ ಒಂದು ಕೆಟ್ಟ ಕಾರ್ಯವ ಸಮರ್ಥಿಸಿಗೊಂಬಲೆ ಹುಟ್ಟುಹಾಕಿದ ಲೊಟ್ಟೆ ಹೇಳಿಯೇ ಎನ್ನ ನಂಬಿಕೆ.

ಚುನಾವಣೆಯ ವಿಷಯ ಬಪ್ಪಗ ಟಿ.ಯನ್.ಶೇಷನ್ ಹೇಳುವ ವ್ಯಂಗ್ಯ ಚಿತ್ರಕಾರರಿಂಗೆ ಸ್ಪೂರ್ತಿ ಕೊಡ್ಳೆ ಹೇಳಿಯೇ ಹುಟ್ಟಿದನೋ ಹೇಳಿ ಕಾಂಬ ಹಾಂಗಿತ್ತ ಡೊಳ್ಳು ಹೊಟ್ಟೆಯ, ಬೋಳು ತಲೆಯ ಭೂತಪೂರ್ವ ಚುನಾವಣಾ ಆಯುಕ್ತನ ಬಗ್ಗೆ ರಜ ಮಾತಾಡದ್ರೆ ಆಗ. ಇವಂದು ಕಾರ್ಯಾಂಗದ ಕುರ್ಚಿಗೆ ಹೇಳಿ ಮಾಡಿಸಿದ ಹಾಂಗಿಪ್ಪ ವ್ಯಕ್ತಿತ್ವ. (ಕುರ್ಚಿಯನ್ನೇ ಇವನ ಅಳತೆಗೆ ಪ್ರತ್ಯೇಕ ತಯಾರಿಸೆಕ್ಕಾಗಿ ಬಂತು ಹೇಳುವ ಕುಚೇಷ್ಟೆಯ ಶುದ್ದಿಯೂ ಇದ್ದು). ಇವಂದಾಗಿ ಚುನಾವಣಾ ಆಯೋಗ ಹೇಳುವ ಒಂದು ಸಂಸ್ಥೆ ಅಸ್ತಿತ್ವಲ್ಲಿ ಇದ್ದು ಹೇಳುದು ಸಾರ್ವಜನಿಕರಿಂಗೆ ಗೊಂತಪ್ಪ ಹಾಂಗೆ ಆತು. ಆಯೋಗದ ಮತ್ತು ಆಯುಕ್ತನ ಅಧಿಕಾರಂಗಳ ಪ್ರಭಾವಶಾಲಿಯಾಗಿ ಉಪಯೋಗಿಸಿದ. ಹೊತ್ತಲ್ಲದ್ದ ಹೊತ್ತಿಲ್ಲಿ ಮೈಕದ ಅಬ್ಬರ, ಸಿಕ್ಕಿದಲ್ಲಿ ಪೂರಾ ಕಾಂಬ ಪೋಸ್ಟರುಗಳ ಹಾವಳಿಗೊಕ್ಕೆ ಸುಮಾರು ಕಡಿವಾಣ ಹಾಕಿದ. ಪ್ರಚಾರದ ಸಮಯಲ್ಲಿ ನೀತಿ ಸಂಹಿತೆಯ ಉಲ್ಲಂಘಿಸಿದವರ ಮೇಲೆ ಎಡಿಗಾದಷ್ಟು ಕ್ರಮ ತೆಕ್ಕೊಂಡ. ಒಟ್ಟಾರೆ ಚುನಾವಣೆಗೊ ತಕ್ಕಮಟ್ಟಿಂಗೆ ನಿಷ್ಪಕ್ಷ, ನಿಯಂತ್ರಿತ ಕಾರ್ಯಕ್ರಮ ಹೇಳಿ ಕಾಂಬ ಹಾಂಗಿಪ್ಪ ವ್ಯವಸ್ಥೆಗಳ ಜ್ಯಾರಿ ಮಾಡಿದ. ಎಲ್ಲಕ್ಕಿಂತ ಹೆಚ್ಚಾಗಿ, ನಂತರ ಬಂದ ಆಯುಕ್ತಂಗೊಕ್ಕೂ ಇವನ ಕಾರ್ಯಕ್ಷಮತೆಯ ಮಾನದಂಡವ ಉಳಿಸಿಗೊಂಬ ಒಂದು ಮುಖ್ಯ ಹೊಣೆಗಾರಿಕೆಯ ವಹಿಸಿಕ್ಕಿ ಹೋದ. ಕೊನೆಗೆ ನಿವೃತ್ತನಾಗಿ ಸುಮಾರು ವರ್ಷ ಮನೆಲೇ ಕೂದುಗೊಂಡಿತ್ತವ ರಾಜಕೀಯವಾಗಿ ಸಕ್ರಿಯನಾಗಿ ಅಡ್ವಾಣಿಯ ಎದುರು ಕೋಂಗ್ರೇಸು ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತ. ಇವಂಗೆ ಹೀಂಗಿಪ್ಪ ದುರ್ಬುದ್ಧಿ ಬಾರದ್ದೆ ಇತ್ತಿದ್ದರೆ, ಒಳ್ಳೆಯ ಕೆಲಸ ಮಾಡಿ ಸಂಪಾದಿಸಿದ ವರ್ಚಸ್ಸಿನ ಉಳಿಸಿಗೊಂಬಲೆ ರಜ ಸುಲಭ ಆವುತ್ತೀತು !

ಇನ್ನು ಸದ್ಯಕ್ಕೆ ಚುನಾವಣೆಗೊ ಎಲ್ಲಿಯೂ ಇಲ್ಲೆ. ಆದರೂ, ಈ ವಿಷಯಲ್ಲಿ ಇತ್ತೀಚೆಗೆ ಒಂದು ಸಕಾರತ್ಮಕ ಶುದ್ದಿ ಕೇಳಿ ಬೈಂದು. ಅದೆಂತ ಹೇಳಿರೆ, ಗುಜರಾತಿಲ್ಲಿ ಮತದಾನವ ಖಡ್ಡಾಯ ಮಾಡುವ ವಿಷಯ. ಇದು ಕಳೆದ ಸುಮಾರು ೧೦ ವರ್ಷಂದ ನಮ್ಮ ದೇಶಲ್ಲಿ ಕಂಡು ಬಂದ ಅನುಕರಣೀಯ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಸುಧಾರಣೆಗಳ ಕೇಂದ್ರ ಬಿಂದುವಾಗಿಪ್ಪ ನರೇಂದ್ರ ಮೋದಿಯ ಚಿಂತನೆಯ ಫಲ. ನಮ್ಮ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಯಾವಾಗಳೂ ೫೦ ರಿಂದ ೬೦% ಅಷ್ಟೇ ಇರ್ತಷ್ಟೆ. ಇದರಲ್ಲಿ ಎಂತ ವಿಶೇಷ ಇಲ್ಲೆ. ಅಮೇರಿಕಾದ ಚುನಾವಣೆಗಳಲ್ಲಿಯುದೇ ಇಷ್ಟೇ ಮತದಾನ ಅಪ್ಪದು. ಆದರೆ, ಅಲ್ಲಿ ೧೦೦% ಅಕ್ಷರಸ್ಥರು ಇಪ್ಪ ಕಾರಣ, ಉಳಿದವು ಎಲ್ಲೋರೂ ಮತದಾನ ಮಾಡಿರೂ ಫಲಿತಾಂಶಲ್ಲಿ ಎಂತ ವಿಶೇಷ ವ್ಯತ್ಯಾಸ ಆಗ. ಆದರೆ, ನಮ್ಮ ದೇಶಲ್ಲಿಪ್ಪ ೫೦% ಅನಕ್ಷರಸ್ಥಲ್ಲಿ ಹೆಚ್ಚು ಕಮ್ಮಿ ಎಲ್ಲೋರೂ ಮತದಾನ ಮಾಡ್ತವು. ಹೇಳಿರೆ, ಅಕ್ಷರಸ್ಥರಲ್ಲಿ ಕೇವಲ ೧೦% ಮಾಂತ್ರ ಮತದಾನ ಮಾಡುದು ಹೇಳಿದ ಹಾಂಗಾತು ! ಅನಕ್ಷರಸ್ಥರೆಲ್ಲಾ ಬೆಗುಡಂಗೊ ಹೇಳುವ ತಾತ್ಪರ್ಯ ಅಲ್ಲ. ಆದರೆ, ದೈನಂದಿನ ಬವಣೆಂದ ಸೋತು ಹೋದಿಪ್ಪ ಅವರ ಕೇವಲ ತತ್ಕಾಲದ ಪರಿಹಾರಂಗಳಿಂದ ಅಥವಾ ಆಮಿಶಂಗಳಿಂದ ಪ್ರೇರೇಪಿಸಿ ಮತ ಗಿಟ್ಟಿಸಿಗೊಂಬ ಸಾಧ್ಯತೆ ಹೆಚ್ಚಿದ್ದು. ಉದಾಹರಣೆಗೆ, ಉಚಿತ ವಿದ್ಯುತ್ ಅಥವಾ ಕಿಲೋವಿಂಗೆ ೧ ರುಪಾಯಿಗೆ ಅಕ್ಕಿ ಕೊಡ್ತೆಯೋ ಹೇಳುವ ಆಶ್ವಾಸನೆಂದ ಅವು ಬಹುತೇಕ ಪ್ರಭಾವಿತರಕ್ಕು. ಅರ್ಥ ವ್ಯವಸ್ಥೆಯ ಮೇಲೆ ಇದರಿಂದ ಅಪ್ಪ ಕೆಟ್ಟ ಪರಿಣಾಮಂಗಳ ಬಗ್ಗೆ ಯೋಚಿಸುವಷ್ಟು ಅವಕ್ಕೆ ಗೊಂತಿರ್ತಿಲ್ಲೆ. ಅದೇ, ಹೆಚ್ಚು ವಿಷಯಜ್ಞಾನ ಮತ್ತು ಲೋಕಜ್ಞಾನ ಇಪ್ಪ ವಿದ್ಯಾವಂತರಿಂಗಾದರೆ ದೂರದೃಷ್ಟಿಂದ ಯೋಚನೆ ಮಾಡ್ಳೆಡಿತ್ತು. ಆದರೆ, ಸುಶಿಕ್ಷಿತರಿಂಗೆ ಟಿವಿಯ ಚರ್ಚೆಗಳಲ್ಲಿ ಭಾಗವಹಿಸಿ ದೇಶಲ್ಲಿ ಎಂತಲ್ಲಾ ಸರಿ ಇಲ್ಲೆ ಹೇಳಿ ಬೊಬ್ಬೆ ಮಾಡುದು ಬಿಟ್ರೆ, ಮತ ಚಲಾಯಿಸುವ ಕರ್ತವ್ಯದ ಬಗ್ಗೆ ನೆಂಪು ಇರ್ತಿಲ್ಲೆ. ಚುನಾವಣೆಯ ದಿನ ಇಪ್ಪ ಸಾರ್ವಜನಿಕ ರಜೆಯ ಶಾರುಕ್ ಖಾನ್ ನ ಸಿನೆಮ ನೋಡಿ ಸದುಪಯೋಗ ಪಡಿಸಿಗೊಳ್ತವೇ ಹೊರತು, ಮತಗಟ್ಟೆಗೆ ಹೋವುತ್ತವಿಲ್ಲೆ. ಹಾಂಗಾಗಿ ಮತದಾನವ ಖಡ್ಡಾಯ ಹೇಳಿ ಮಾಡುದು ಒಂದು ಒಳ್ಳೆ ಬೆಳವಣಿಗೆ ಹೇಳಿ ಕಾಣ್ತು.

ನರೇಂದ್ರ ಮೋದಿಯ ಚಿಂತನೆಗೆ ಜನರ ಅನಕ್ಷರತೆಯನ್ನೇ ರಾಜಕೀಯ ಭಂಡವಾಳವಾಗಿ ಮಾಡಿಗೊಂಡಿಪ್ಪ ಲಾಲೂವಿನ ಹಾಂಗಿಪ್ಪವರ ಸಮರ್ಥನೆ ಸಿಕ್ಕಿದ್ದು ಪರಮಾಶ್ಚರ್ಯದ ಸಂಗತಿ ! ಹಾಂಗಾಗಿ ಇದು ರಾಷ್ಟ್ರವ್ಯಾಪಿಯಾದ ಬದಲಾವಣೆಗೆ ನಾಂದಿ ಆದರೆ, ಮೋದಿಯ ಪ್ರಯತ್ನ ಸಾರ್ಥಕ.

-ಬಾಪಿ/ ಜನವರಿ ೬, ೨೦೧೦

Sunday, December 20, 2009

ತೆಲಂಗಾನ

ಆಂಧ್ರಪ್ರದೇಶವ ಎರಡು ತುಂಡು ಮಾಡಿ ತೆಲಂಗಾನ ಹೇಳುವ ಹೆಸರಿನ ಹೊಸ ರಾಜ್ಯ ಸ್ಥಾಪನೆ ಮಾಡೆಕ್ಕು ಹೇಳುವ ಬೇಡಿಕೆ ಮತ್ತು ಬೊಬ್ಬೆ ಕೆಲವು ದಿನಂದ ತಾರಕಕ್ಕೆ ಏರಿದ್ದು. ಇದರೊಟ್ಟಿಂಗೇ ಮೊದಲಿಂದಲೇ ಇತ್ತ ಇನ್ನೂ ಕೆಲವು ಪ್ರತ್ಯೇಕ ರಾಜ್ಯಂಗಳ ಬೇಡಿಕೆಗೊಕ್ಕೂ ಹೊಸ ಜೀವ ಬಂದು, ಭಾರತದ ಭೂಪಟದ ದೃಶ್ಯವೇ ಸಂಪೂರ್ಣ ಬದಲಪ್ಪ ಸಾಧ್ಯತೆ ಕಾಣ್ತಾ ಇದ್ದು. ಮೊದಲೇ ಧರ್ಮ, ಜಾತಿಗಳ ಬಾಹುಳ್ಯ ಇಪ್ಪ ನಮ್ಮ ದೇಶಲ್ಲಿ ಭಾಷಾವಾರು ಪ್ರಾಂತ್ಯಂಗಳ ನಿರ್ಮಾಣ ಮಾಡಿ ನಮ್ಮ ರಾಜಕೀಯ ನಾಯಕರು ಗೊಂದಲವ ಇನ್ನೂ ಜಾಸ್ತಿ ಮಾಡಿದವು ಹೇಳುವ ಆರೋಪದ ಬಗ್ಗೆ ಚರ್ಚೆ ಯಾವಾಗಳೂ ನಡೆತ್ತಲೇ ಬೈಂದು. ಅಂತೂ, ನಮ್ಮ ದೇಶದ ಭಾಷೆಗೊ ಜನಂಗಳ ಮಧ್ಯೆ ಸಂವಹನದ ಮಾಧ್ಯಮವಾಗಿ ಉಳಿವ ಬದಲು, ಪರಕೀಯತೆಯ ಭಾವನೆಯ ಸೃಷ್ಟಿ ಮಾಡಿದ್ದಂತೂ ಸತ್ಯ. ಕಾಸರಗೋಡು, ಬೆಳಗಾವಿ ಹಾಂಗಿಪ್ಪ ಗಡಿ ಪ್ರದೇಶಂಗಳಲ್ಲಿ ಪರಸ್ಪರ ಭಾಷಾ ವೈಷಮ್ಯ ಯಾವಾಗಳೂ ಹೊಗೆ ಆಡ್ತಾ ಇಪ್ಪದು ಇದರ ಸಣ್ಣ ನಮೂನೆ ಅಷ್ಟೆ. ಸ್ವಾತಂತ್ರ್ಯ ಪೂರ್ವಲ್ಲಿ ಇಡೀ ದೇಶವೇ ಹೆಮ್ಮೆ ಪಟ್ಟ ಯೋಧರ, ನಾಯಕರ ತಾಣವಾಗಿತ್ತ ಮಹಾರಾಷ್ಟ್ರ, ಇಂದು ಕೀಳು ಮಟ್ಟದ ಭಾಷಾ ರಾಜಕಾರಣದ ಮುಂಚೂಣಿಲಿದ್ದು. ಅಮೇರಿಕಾದ ಭೂಪಟದ ಹಾಂಗೆ, ಸರ್ತ ಗೀಟು ಹಾಕಿ ತುಂಡು ಮಾಡಿದ ಹಲ್ವಾದ ತುಂಡುಗಳ ಹಾಂಗೆ ಕಾಂಬ ರಾಜ್ಯಂಗಳ ನಮ್ಮಲ್ಲಿಯೂ ಸೃಷ್ಟಿ ಮಾಡಿದ್ದರೆ ಹೇಂಗಿರ್ತೀತು ?


ತೆಲಂಗಾನದ ವಿಷಯಲ್ಲಿ ಇಪ್ಪ ಒಂದು ವ್ಯತ್ಯಾಸ ಎಂತ ಹೇಳಿರೆ, ಇದು ಭಾಷೆಯ ತಕರಾರು ಅಲ್ಲ. ಹಾಂಗೆ ಹೇಳಿ ದೊಡ್ದ ದೂರದೃಷ್ಟಿಯ ಚಿಂತನೆಯ ಆಧರಿಸಿದ ಆಂದೋಳನವೂ ಅಲ್ಲ. ನಿಜ ಹೇಳ್ತರೆ, ಅವಭಿಜಿತ ಆಂಧ್ರದ ಸರಕಾರಲ್ಲಿ ಪಶು ಸಂಗೋಪನಾ ಸಚಿವ ಅಪ್ಪಲೂ ಯೋಗ್ಯತೆ ಇಲ್ಲದ್ದ ವ್ಯಕ್ತಿ ಒಬ್ಬ ತೆಲಂಗಾನ ಹೇಳುವ ಪ್ರತ್ಯೇಕ ರಾಜ್ಯ ಆದರೆ, ತಾನೇ ಮುಖ್ಯಮಂತ್ರಿ ಅಪ್ಪಲಕ್ಕು ಹೇಳುವ ಸ್ವಾರ್ಥಂದ ಸುರು ಮಾಡಿದ ಗಲಾಟೆಯ ಹಾಂಗೆ ಕಾಣ್ತು. ಆದರೂ, ನಮ್ಮ ದೇಶಲ್ಲಿ ಹೊಸ ಸಣ್ಣ ರಾಜ್ಯಂಗಳ ಸೃಷ್ಟಿ ಮಾಡುವ ವಾದಲ್ಲಿ ಹುರುಳು ಇದ್ದು ಹೇಳಿ ಎನ್ನ ಅಭಿಪ್ರಾಯ. ಒಟ್ಟಾರೆಯಾಗಿ, ನಮ್ಮ ಎಲ್ಲಾ ಸಮಸ್ಯೆಗಳ ತೀವ್ರತೆಯ ಹಿಂದೆಯೂ ನಮ್ಮ ಜನಸಂಖ್ಯೆಯೇ ಒಂದು ಸಾಮಾನ್ಯ ಆಂಶ ಆಗಿಪ್ಪದು ಸ್ಪಷ್ಟವಾಗಿ ಕಾಣ್ತು. ಇನ್ನೊಂದು ರೀತಿಲಿ ಹೇಳ್ತರೆ, ನಮ್ಮ ಮೊದ್ಳಾಣ ಅಜ್ಜಂದ್ರು ಸ್ವಂತಕ್ಕೆ ಇಪ್ಪ ಅರ್ಧ ಎಕ್ರೆ ತೋಟದ ಆಸ್ತಿಗೆ ೧೨ ಜನ ಮಕ್ಕಳ ದೊಡ್ಡ ಸಂತಾನವ ಸೃಷ್ಟಿ ಮಾಡಿ ಹಾಕಿ, ಯಾವ ಮಕ್ಕಳ ಮೇಲುದೇ ವಿಶೇಷ ಗಮನ ಕೊಡದ್ದೆ ಅವರವರಷ್ಟಕೇ ಬೆಳವಲೆ ಬಿಟ್ಟ ಹಾಂಗಿಪ್ಪ ಅ(ವ್ಯ)ವಸ್ಥೆ. ಭಾರತ ದೇಶದ ಭೂಪ್ರದೇಶದ ಒಟ್ಟು ವಿಸ್ತೀರ್ಣ (೧.೨ ಮಿಲಿಯ ಚದರ ಮೈಲು) ಅಮೇರಿಕಾದ ವಿಸ್ತೀರ್ಣ(೩.೫ ಮಿಲಿಯ ಚದರ ಮೈಲು)ದ ಕೇವಲ ೩೦% ಇಪ್ಪದಾದರೂ ನಮ್ಮ ಜನಸಂಖ್ಯೆ ೩.೫ ಪಟ್ಟು ಹೆಚ್ಚಿದ್ದು. ಹೇಳಿರೆ, ಇಲ್ಯಾಣ ಜನಸಾಂದ್ರತೆ ಅಮೇರಿಕಂದ ಸುಮಾರು ೧೦ ಪಟ್ಟು ಹೆಚ್ಚು. ಇನ್ನು ನಮ್ಮ ಮರುಭೂಮಿ, ಕಾಡು, ಗುಡ್ಡ ಪ್ರದೇಶಂಗಳ ಲೆಕ್ಕ ಬಿಟ್ರೆ, ಜನಸಾಂದ್ರತೆಯ ತೀವ್ರತೆ ಇನ್ನೂ ಹೆಚ್ಚಾವುತ್ತು. ಅಮೇರಿಕಾದ ರಾಜ್ಯಂಗಳ ಸರಾಸರಿ ಜನಸಂಖ್ಯೆ ೬೦ ಲಕ್ಷ ಆದರೆ, ನಮ್ಮದು ೩ ಕೋಟಿ ! ಅಲ್ಯಾಣ ಅತಿಹೆಚ್ಚು ಜನಸಂಖ್ಯೆ ಹೇಳಿರೆ ಕ್ಯಾಲಿಫೋರ್ನಿಯಾದ ೩.೫ ಕೋಟಿಯಾದರೆ, ನಮ್ಮ ಉತ್ತರಪ್ರದೇಶಲ್ಲಿ ೧೬ ಕೋಟಿ ಜನ ಇದ್ದವು. ನಮ್ಮ ಹಲವಾರು ಸಮಸ್ಯೆಗೊ ಉಲ್ಬಣ ಅಪ್ಪದು ಇದರಂದಾಗಿಯೇ ಹೇಳಿ ಧಾರಾಳ ಹೇಳ್ಳಕ್ಕು.

ಅಷ್ಟು ಹೆಚ್ಚು ಸಂಖ್ಯೆಯ ಸಾಕ್ಷರರು ಇಪ್ಪ ಮುಂದುವರಿದ ಸಮಾಜದ ವ್ಯವಸ್ಥೆಗೊ ಹೇಂಗೆ ನಡೆತ್ತಾ ಬಂದಿಕ್ಕು ಹೇಳಿ ತಿಳುಕ್ಕೊಂಬ ಉದ್ದೇಶಂದ ಅಮೇರಿಕಾದ ಹೋಲಿಕೆ ಮಾಡೆಕ್ಕಾಗಿ ಬಂತು. ನಮ್ಮಲ್ಲಿ ಅನಕ್ಷರತೆಂದ ಹಿಡುದು ಪ್ರತಿಯೊಂದು ಸಾಮಾಜಿಕ ಸಮಸ್ಯೆಯೂ ದೊಡ್ಡ ಪ್ರಮಾಣಲ್ಲಿ ಇಪ್ಪಗ, ಆದಷ್ಟು ಕಮ್ಮಿ ಜನರ ಮೇಲೆ ಗಮನ ಮತ್ತು ಶಕ್ತಿಗಳ ಕೇಂದ್ರೀಕರಿಸುಲೆ ಎಡಿಗಾದರೆ ಸುಲಭ ಅಕ್ಕು. ಗ್ರಾಮ ಪಂಚಾಯತುಗಳ ಸಬಲೀಕರಣದ ಹಿಂದೆ ಇಪ್ಪ ಚಿಂತನೆ ಇದೇ ಆದರೂ, ಆಯಾ ರಾಜ್ಯಂಗೊ ಆರ್ಥಿಕವಾಗಿ ಸುದೃಢ ಆಗದ್ರೆ, ಸ್ವಂತವಾಗಿ ಒಂದು ಸಣ್ಣ ತೋಡಿಂಗೆ ಸಂಕ ಕಟ್ಟುವ ಸಾಮರ್ಥ್ಯವೂ ಇಲ್ಲದ್ದ ಗ್ರಾಮ ಪಂಚಾಯತುಗೊಕ್ಕೆ ಎಂತ ಮಾಡ್ಳೆಡಿಗು ? ಈ ದೃಷ್ಟಿಂದ ನೋಡಿರೆ, ರಾಜ್ಯಂಗೊ ಸಣ್ಣ ಆದಷ್ಟೂ, ಕ್ಷೇತ್ರೀಯ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಹರಿಸಿ ಪರಿಹಾರ ಕಂಡುಗೊಂಡು ಬೇಗ ಉದ್ಧಾರ ಅಪ್ಪಲೆ ಸಾಧ್ಯ ಅಕ್ಕು ಹೇಳಿ ಕಾಣ್ತು. ಆದರೆ, ಇನ್ನು ಮುಂದೆ ಅಪ್ಪ ಯಾವ ರಾಜ್ಯಂಗಳ ಪುನರ್ವಿಭಜನೆಯೂ ಭಾಷೆ ಅಥವಾ ಜಾತಿಯ ಆಧಾರದ ಮೇಲೆ ಅಪ್ಪದರ ಬದಲು, ಭೌಗೋಳಿಕ ಮತ್ತು ಆರ್ಥಿಕ ಸ್ವಾವಲಂಬನೆಯ ಮಾನದಂಡಂದ ಆದರೆ ದೇಶದ ಭವಿಷ್ಯದ ದೃಷ್ಟಿಂದ ಒಳ್ಳೆದು.

-ಬಾಪಿ/ ದಶಂಬ್ರ ೨೦, ೨೦೦೯

Monday, November 30, 2009

ಚೌ ಚೌ-೦೩

ಲವ್ ಜಿಹಾದ್ : ಕೇರಳ, ಕರ್ನಾಟಕದ ಹಾಂಗಿಪ್ಪ ರಾಜ್ಯಂಗಳಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಹುಡುಗಿಯರಿಂಗೆ ಪ್ರೀತಿಯ ಬಲೆ ಬೀಸಿ, ಮದುವೆ ಆಗಿ, ಮತಾಂತರ ಮಾಡ್ಸುವ ಮುಸ್ಲಿಮರ ವ್ಯವಸ್ಥಿತ ಜಾಲವೇ ಇದ್ದಡ. ಇದಕ್ಕೆ ಲವ್-ಜಿಹಾದ್ ಹೇಳುವ ಹೆಸರಾಡ. ಈ ಹುಡುಗಿಯರಲ್ಲಿ ಹೆಚ್ಚಿನವು ಕಾಣೆ ಅಪ್ಪದು ಅಥವಾ ಬ್ಯಾರಿಗಳ ಒಟ್ಟಿಂಗೆ ಓಡಿ ಹೋಪದು. ನಮ್ಮ ಊರಿಲ್ಲಿಯೇ ಹೀಂಗಿಪ್ಪ ಬೇಕಾದಷ್ಟು ಉದಾಹರಣೆಗೊ ಇದ್ದಡ. "ಪ್ರೀತಿ ಮಾಡಿದ ಮೇಲೆ ಹೆದರಿಕೆ ಎಂತಕೆ” ಎಂಬಿತ್ಯಾದಿ ಸಿನೆಮಾದ ಸಂಭಾಷಣೆಗಳೇ ಆದರ್ಶವಾಗಿಪ್ಪ ಈಗಾಣ ಕೂಸುಗೊಕ್ಕೆ ಅಬ್ಬೆಪ್ಪನ ಮತ್ತು ಸಮಾಜದ ಎಂತ ಗೊಡವೆಯೂ ಇಪ್ಪ ಹಾಂಗೆ ಕಾಣ್ತಿಲ್ಲೆ. ಹೀಂಗೆ ಮೋಸ ಹೋದವರಲ್ಲಿ ಹೆಚ್ಚಿನವು ಜವ್ವನದ ಕಿಚ್ಚು ತಣಿದ ಮೇಲೆ ಬಹುಪತ್ನಿತ್ವದ ವ್ಯವಸ್ಥೆಯ ಸಹಿಸಿಗೊಂಡು, ಜೀವನ ನಿರ್ವಹಣೆಗಾಗಿ ಬೀಡಿ ಕಟ್ಟಿಗೊಂಡು ಬದುಕ್ಕುವ ದಯನೀಯ ಸ್ಥಿತಿಲಿದ್ದವಡ. ಇಷ್ಟೆಲ್ಲಾ ಆದ ಮೇಲೆ ಬುದ್ಧಿ ಬಂದರುದೇ ಎಂತ ಸುಖ ? ಇಷ್ಟರವರೆಗೆ ಅದೆಷ್ಟು ಸಾವಿರ ಕೂಸುಗೊ ಹೀಂಗೆ ಕಾಣೆ ಆಗಿ ಹೋಗಿ, ಬೀಡಿ ಉದ್ಯಮವ ಉದ್ಧಾರ ಮಾಡಿಗೊಂಡಿದ್ದವೋ ? ಹಿಂದೂ ಸಮಾಜಲ್ಲಿ ಒಟ್ಟಾರೆಯಾಗಿ ಎಲ್ಲದರ ಬಗ್ಗೆಯೂ ದಿವ್ಯ ನಿರ್ಲಕ್ಷ್ಯ ಮತ್ತು ನಿಷ್ಕ್ರಿಯತೆ ಇಪ್ಪ ಕಾರಣವೇ ಮುಸ್ಲಿಮರಿಂಗೆ ಹೀಂಗಿಪ್ಪ ಕುಟಿಲ ತಂತ್ರಂಗಳ ಕಾರ್ಯಗತ ಮಾಡುವ ಧೈರ್ಯ ಬಪ್ಪದು ಹೇಳಿ ಕಾಣ್ತು.

ಇಷ್ಟರ ವರೆಗೆ ಹೀಂಗಿಪ್ಪ ಯಾವ ಪ್ರಕರಣಂಗಳಲ್ಲಿಯೂ ಯಾವುದೇ ಪ್ರತಿಭಟನೆ ಆದ್ದದಾಗಲೀ, ಓಡಿ ಹೋದವರ ರಕ್ಷಿಸಿ ವಾಪಾಸು ಕರಕ್ಕೊಂಡು ಬಂದದಾಗಲೀ ಗೊಂತಾಯಿದಿಲ್ಲೆ. ಈಗ ಇದಕ್ಕೆ ವಿರುದ್ಧವಾದ ಇನ್ನೊಂದು ಘಟನೆಯ ರಜ ವಿಮರ್ಶೆ ಮಾಡುವೊ. ರಜನೀಶ್ ಶರ್ಮ ಹೇಳುವ ಜಮ್ಮುವಿನ ಹಿಂದೂ ಹುಡುಗನುದೇ ಅಮೀನಾ ಹೇಳುವ ಕಾಶ್ಮೀರದ ಮುಸ್ಲಿಮ್ ಹುಡುಗಿಯುದೇ ಪ್ರೀತಿಸಿ ಮದುವೆ ಆದವು. ಅಮೀನಾ ಮದುವೆ ಆದ ಮೇಲೆ ಆಂಚಲ್ ಶರ್ಮ ಹೇಳಿ ಹೆಸರು ಬದಲಾಯಿಸಿಗೊಂಡತ್ತು. ಇವರ ಮದುವೆ ಆಗಿ ಸುಮಾರು ಒಂದು ತಿಂಗಳು ಅಪ್ಪಗ, ಕಾಶ್ಮೀರದ ಪೋಲೀಸುಗೊ ಹುಡುಗನ ವಿಚಾರಣೆಗೆ ಹೇಳಿ ಕರಕ್ಕೊಂಡು ಹೋದವು. ಕೆಲವು ದಿನ ಆದ ಮೇಲೆ ಆ ಹುಡುಗ ಅವನ ಕೂಡಿ ಹಾಕಿದ ಕೋಣೆಲಿ ನೇಣು ಹಾಕಿಗೊಂಡು ಸತ್ತ ಹೇಳುವ ಶುದ್ದಿಯ ಪೋಲೀಸಿನವು ಬಿಡುಗಡೆ ಮಾಡಿದವು. ಸದ್ರಿ ಮುಸ್ಲಿಮ್ ಹುಡುಗಿಯ ಅಪ್ಪ ಕಾಶ್ಮೀರದ ಪೋಲೀಸು ಇಲಾಖೆಲಿ ಕೆಲಸ ಮಾಡಿಗೊಂಡಿತ್ತದು ಕೇವಲ ಕಾಕತಾಳೀಯ ! ಈ ವಿಷಯದ ಬಗ್ಗೆ ಮಾನವ ಹಕ್ಕು ಹಿತರಕ್ಷಣೆಯವಾಗಲೀ, ಮಾಧ್ಯಮದವಾಗಲೀ ಇಷ್ಟರವರೆಗೆ ಚಕಾರ ಎತ್ತಿದ್ದವಿಲ್ಲೆ. ಅದೇ, ಕಲ್ಕತ್ತಾಲ್ಲಿ ಆದ ರಿಝ್ವಾನ್ ಹೇಳುವ ಮುಸ್ಲಿಮ್ ಹುಡುಗನೊಟ್ಟಿಂಗೆ ಆದ ಪ್ರಿಯಾಂಕಾ ತೋಡಿ ಹೇಳುವ ಹಿಂದೂ ಹುಡುಗಿಯ ಮದುವೆ ಮತ್ತು ತದನಂತರ ಹುಡುಗನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ವ್ಯಾಜ್ಯವ ಪ್ರತಿದಿನ ಬಿಡದ್ದೆ ಹಿಂಬಾಲಿಸಿ ದೊಡ್ಡ ಶುದ್ದಿ ಅಪ್ಪ ಹಾಂಗೆ ಮಾಡಿತ್ತಿದ್ದವು. ಹಾಂಗೇ, ಕಾಶ್ಮೀರದ ಶೋಪಿಯಾಲ್ಲಿ ಇಬ್ಬರು ಮುಸ್ಲಿಂ ಮಹಿಳೆಯರ ಮೇಲೆ ಸೈನಿಕರು ನಡೆಶಿದವು ಹೇಳಲಾದ ಅತ್ಯಾಚಾರದ ವಿಷಯಲ್ಲಿ ತಕ್ಷಣ ಕಾರ್ಯನಿರತನಾದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಂಗೆ ರಜನೀಶ್ ಶರ್ಮನ ವಿಷಯಲ್ಲಿ ಯಾವ ಹೇಳಿಕೆಯನ್ನೂ ಕೊಡ್ಳೆ ಪುರುಸೊತ್ತು ಆಯಿದಿಲ್ಲೆ. ಇದು ಧರ್ಮ ನಿರಪೇಕ್ಷ, ಸ್ವತಂತ್ರ ಭಾರತಲ್ಲಿ ನಡೆತ್ತಾ ಇಪ್ಪ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದವರ ವೃತ್ತಿಪರ ನಡವಳಿಕೆ.

ಮುಸ್ಲಿಮರು ಬಹು ಸಂಖ್ಯಾತರಾಗಿಪ್ಪ ಕಾಶ್ಮೀರಲ್ಲಿ ಹಿಂದು ಮತ್ತು ಬೌದ್ಧ ಧರ್ಮೀಯರ ಮೇಲಿನ ದಬ್ಬಾಳಿಕೆ ಎಲ್ಲೋರಿಂಗೂ ಗೊಂತಿಪ್ಪದೇ. ಹಾಂಗಾಗಿ, ಆ ರಾಜ್ಯಲ್ಲಿ ಅಪ್ಪ ಶೋಷಣೆಯ ಹೇಂಗಾರು ಅರ್ಥ ಮಾಡಿಗೊಂಬಲಕ್ಕು. ಹಿಂದೂಗಳೇ ಬಹು ಸಂಖ್ಯಾತರಾಗಿಪ್ಪ ದಕ್ಷಿಣದ ಪ್ರದೇಶಂಗಳಲ್ಲಿ ಅಪ್ಪ ದುಷ್ಕೃತ್ಯಂಗಳನ್ನೂ ಎಂತಕೆ ಸಹಿಸಿಗೊಳೆಕ್ಕು ? ಹೀಂಗಿಪ್ಪ ವಿಷಯಂಗಳಲ್ಲಿ ಹಿಂದೂಗಳ ಪೈಕಿ ರಜ ಆದರೂ ಸಕ್ರಿಯವಾಗಿಪ್ಪವು ಹೇಳಿರೆ ಭಜರಂಗ ದಳ ಮತ್ತು ಶ್ರೀರಾಮ ಸೇನೆಯವು. ಆದರೆ ದುರ್ದೈವದ ಸಂಗತಿ ಹೇಳಿರೆ, ಈ ಸಂಸ್ಥೆಗಳ ವಿರುದ್ಧ ಹೆರಾಣವರಿಂದಲೂ ಹೆಚ್ಚು ಹಿಂದೂ ಸಮಾಜದ ಬುದ್ಧಿಜೀವಿಗಳೇ ಟೀಕೆ ಮಾಡ್ತವು. ಪ್ರೀತಿ ಹೇಳುದಕ್ಕೆ ಧರ್ಮದ ಗೋಡೆ ಅಡ್ಡ ಅಪ್ಪಲಾಗ ಹೇಳುವ ವಾದ ಸರಿಯಾಗಿಪ್ಪಲೂ ಸಾಕು. ಆದರೆ, ಅದು ಮುಂದಾಲೋಚನೆ ಇಲ್ಲದ್ದ ಕುರುಡು ಪ್ರೀತಿ ಆದರೆ ಅಥವಾ ಹುಡುಗಿಯರ ಮುಗ್ಧತೆಯ ದುರುಪಯೋಗ ಪಡಿಸಿಗೊಂಬ ನಾಟಕದ ಪ್ರೀತಿ ಆದರೆ, ಅದರ ಬಗ್ಗೆ ಜಾಗ್ರತೆ ಮಾಡೆಕ್ಕಾವುತ್ತು.

ಅಹಿಂಸಾವಾದ : ಜಗತ್ತಿನಾದ್ಯಂತ "ಶಾಂತಿದೂತ” ಹೇಳಿಯೇ ಹೆಸರು ಮಾಡಿದ ಮಹಾತ್ಮ ಗಾಂಧಿಗೆ ನೋಬೆಲ್ ಶಾಂತಿ ಪ್ರಶಸ್ತಿ ಬಾರದ್ದದು ವಿಪರ್ಯಾಸವೇ ಸರಿ. ಈ ಪ್ರಶಸ್ತಿಗಾಗಿ ಒಬಾಮಾ ಅಥವಾ ಮದರ್ ಥೆರೆಸಾನ ಹಾಂಗಿಪ್ಪ ಹೆಚ್ಚು ಅರ್ಹತೆ ಇಪ್ಪವರೊಟ್ಟಿಂಗೆ ಪೈಪೋಟಿ ಮಾಡೆಕ್ಕಾದ ಪರಿಸ್ಥಿತಿ ಇಪ್ಪಗ, ಗಾಂಧಿಗೆ ಪ್ರಶಸ್ತಿ ಸಿಕ್ಕುದಾದರೂ ಹೇಂಗೆ ? ಅದು ಹೇಂಗೂ ಇರಲಿ. ಸದ್ಯದ ಚೋದ್ಯ ಎಂತ ಹೇಳಿರೆ, ಗಾಂಧಿಯ ಅಹಿಂಸಾವಾದ ಈಗಾಣ ಕಾಲಕ್ಕೆ ಎಷ್ಟು ಪ್ರಸ್ತುತ ಹೇಳುವ ವಿಷಯ. ಈ ಚಿಂತನೆಯನ್ನೇ ಆಧರಿಸಿ ಮುನ್ನಾಭಾಯಿ ಹೇಳುವ ಎರಡು ಆವೃತ್ತಿಯ ಸಿನೆಮಾವನ್ನೂ ಮಾಡಿದವು. ಆ ಸಿನೆಮಾ ಒಳ್ಳೆ ಮನರಂಜನೆ ಕೊಟ್ಟು, ಗಾಂಧಿಯ ನೆಂಪು ಮರುಕಳಿಸುವ ಹಾಂಗೆ ಮಾಡಿತ್ತೇ ಹೊರತು ಬೇರೆಂತ ಪ್ರಯೋಜನ ಆಯಿದಿಲ್ಲೆ. ತತ್ಕಾಲದ ಯಾವ ಗಹನವಾದ ಪ್ರಶ್ನೆಗೊಕ್ಕೂ ಅದಲ್ಲಿ ಉತ್ತರ ಸಿಕ್ಕುತ್ತಿಲ್ಲೆ. ಉದಾಹರಣೆಗೆ, ಜಗತ್ತಿನ ಎಲ್ಲೆಡೆ ಹಿಂಸೆ ತಾಂಡವ ಆಡ್ತಾ ಇಪ್ಪ ಈ ಸಂದರ್ಭಲ್ಲಿ ಗಾಂಧಿ ಬದುಕ್ಕಿತ್ತಿದ್ದರೆ ಎಂತ ಮಾಡ್ತೀತ ? ಪಾಕಿಸ್ತಾನದವು ಎಷ್ಟು ಕೆಣಕಿದರೂ ನಮ್ಮ ಸರಕಾರ ತಾಳ್ಮೆ ವಹಿಸಿಗೊಂಡೇ ಬಂದರೂ, ಮತ್ತೆ ಮತ್ತೆ ಕಾಲು ಕೆದರಿ ಜಗಳಕ್ಕೆ ಬಪ್ಪ ಈ ನೆರೆಕರೆಯ ಪೀಡೆಯ ಬಗ್ಗೆ ಬೇರೆ ಯಾವ ನಮುನೆಯ ಧೋರಣೆ ಸಮರ್ಪಕ ಅಕ್ಕು ? ಅಖೇರಿಗೆ ತಡವಲೆಡಿಯದ್ದೆ ಪ್ರತೀಕಾರವಾಗಿ ನಾವುದೇ ಹಿಂಸೆಯನ್ನೇ ಕೈಗೆತ್ತಿಗೊಂಬ ಹಾಂಗೆ ಆದರೆ, ಇಷ್ಟು ದಿನ ಪಾಲಿಸಿದ ಅಹಿಂಸಾವಾದಂದ ಎಂತ ಪುರುಷಾರ್ಥ ದಕ್ಕಿದ ಹಾಂಗಾತು ?

ಅಹಿಂಸೆ ಹೇಳುದು ಒಂದು ಸೈದ್ಧಾಂತಿಕ ಮನೋಭಾವವಾದರೆ, ಹಿಂಸೆ ಹೇಳುದು ಪ್ರವೃತ್ತಿ ಅಥವಾ ಚಟವಾಗಿ ತೋರುತ್ತು. ಅಹಿಂಸೆಯ ಹಿಂದೆ ವಿವೇಕ ಇದ್ದರೆ, ಹಿಂಸೆಯ ಹಿಂದೆ ತಿಳಿಗೇಡಿತನ ಇದ್ದು. ಆದರೆ, ಅಹಿಂಸೆ ಹೇಳುದು ಹೇಡಿತನದ ಮುಖವಾಡವಾಗಿ ಕಂಡರೆ ಅಲ್ಲಿ ಹಿಂಸೆಯ ಕೈ ಮೇಲಾವುತ್ತು. ಹಾಂಗಾರೆ, ನಮ್ಮ ಅಹಿಂಸಾವಾದ ನಿಜವಾಗಿ ಸಾರ್ಥಕ ಅಪ್ಪದು ಯಾವಾಗ ? ನಾವು ಸ್ವಂತ ಬಲಶಾಲಿಗಳಾಗಿದ್ದರೂ ಬೇರೆಯವರ ಮೇಲೆ ನಾವಾಗಿ ಆಕ್ರಮಣ ಮಾಡದ್ದಿಪ್ಪಗ. ಮತ್ತೆ ಸ್ವಂತ ಸ್ಥಿಮಿತವ ಕಳಕೊಳ್ಳದ್ದ ನಮುನೆಯ ಆಕ್ರಾಮಕ ಧೋರಣೆಯ ಮೂಲಕ ಹಿಂಸೆಯ ಪ್ರಚೋದಕರು ನಮ್ಮ ಮುಟ್ಟುವಂದ ಮದಲು ೧೦೦ ಸರ್ತಿ ಆಲೋಚನೆ ಮಾಡುವ ಹಾಂಗಿಪ್ಪ ಎಚ್ಚರಿಕೆಯ ಸಂದೇಶವ ಜಗತ್ತಿಂಗೆ ನಾವು ಕಾಲಕಾಲಕ್ಕೆ ಕೊಟ್ಟುಗೊಂಡು ಬಂದಪ್ಪಗ. ಈ ಸಂದರ್ಭಲ್ಲಿ ಚರಿತ್ರೆಯ ಒಂದು ವಿಷಯವ ಉಲ್ಲೇಖ ಮಾಡ್ತೆ. ಬೌದ್ಧ ಧರ್ಮ ಪ್ರಸಾರ ಆದ ಪ್ರದೇಶದವೆಲ್ಲಾ ತಮ್ಮ ಮೊದಲಾಣ ಸ್ವಾಭಾವಿಕವಾದ ಪ್ರತಿರೋಧ ಮತ್ತು ಹೋರಾಟದ ಮನೋಭಾವವ ಕಳಕ್ಕೊಂಡ ಕಾರಣ ಮೊದಲು ಸುಭದ್ರವಾಗಿತ್ತ ಹಲವು ಸಂಸ್ಥಾನಂಗೊ ಪರಕೀಯರ ಆಕ್ರಮಣಕ್ಕೆ ಬಲಿಯಾಗಿ ನಾಶ ಆದವು ಹೇಳುವ ವಿಷಯವ ಯಾರೋ ಇತಿಹಾಸತಜ್ಞರು ವಿಮರ್ಶೆ ಮಾಡಿದ್ದರ ಓದಿದ ನೆಂಪು ಆವುತ್ತಾ ಇದ್ದು. ಇದಲ್ಲಿ ಎಲ್ಲೋರೂ ಕಲಿಯೆಕ್ಕಾದ ಒಂದು ಪಾಠ ಇದ್ದು ಹೇಳಿ ಎನಗೆ ಕಾಣ್ತು.

ನಮ್ಮ ದೇಶಲ್ಲಿ ಅಸಮರ್ಥ ಸರಕಾರ, ಅದಕ್ಷ ಆರಕ್ಷಕ ಇಲಾಖೆ, ರಾಷ್ಟ್ರೀಯ ಭದ್ರತೆಯ ವಿಷಯಲ್ಲಿಯೂ ಒಗ್ಗಟ್ಟಿಂದ ವರ್ತಿಸಲೆಡಿಯದ್ದ ಸ್ವಾರ್ಥಿ ರಾಜಕಾರಣಿಗೊ, ಛಿದ್ರವಾದ ಗಡಿಪ್ರದೇಶದ ಬೇಲಿ - ಇಷ್ಟೆಲ್ಲಾ ಮಡಿಕ್ಕೊಂಡು ಅಹಿಂಸಾವಾದದ ಮಾತಾಡಿದರೆ ಎಲ್ಲಿಗೆ ಉದ್ಧಾರ ಅಪ್ಪದು ?

- ಬಾಪಿ/ ನವೆಂಬ್ರ ೩೦, ೨೦೦೯

Tuesday, November 24, 2009

ಚೌ ಚೌ - ೦೨

ರಾಹುಲ್ ಉವಾಚ  :  ರಾಹುಲ್ ಗಾಂಧಿಗೆ ಜಾತಿವ್ಯವಸ್ಥೆಲಿ ನಂಬಿಕೆ ಇಲ್ಲೇಡ.  ಇದು ಆಕ್ಸ್ ಫರ್ಡ್  ವಿಶ್ವವಿದ್ಯಾಲಯಲ್ಲಿ ಕಲಿವಿಕೆ ಮಾಡಿದವಂಗೆ ಸಹಜವಾಗಿ ಇರೆಕಾದ ಪ್ರಗತಿಪರ ಚಿಂತನೆ ಮಾಂತ್ರ ಅಲ್ಲ,  ಭಾರತದ ರಾಜಕಾರಣಲ್ಲಿಪ್ಪ  ಢೋಂಗಿ ಜಾತ್ಯತೀತವಾದಿಗಳ ಬಾಯಿಲಿ ಬರಲೇಬೇಕಾದ ಹೇಳಿಕೆ.  ಹಾಂಗಾಗಿ ಮೆಚ್ಚೆಕ್ಕಾದ್ದೇ !   ರಜ ಸಾಮಾನ್ಯ ಜ್ಞಾನ ಇಪ್ಪವುದೇ ಊಹೆ ಮಾಡ್ಳೆಡಿಗಪ್ಪ ವಿಷಯ ಎಂತ ಹೇಳಿರೆ,  ಇವಂಗೆ ಮದುವೆ ಹೇಳಿ ಯಾವಗಾದರೂ ಇದ್ದರೆ,   ಹಿಂದೂ ಅಥವಾ ಬೇರೆ ಯಾವ ಧರ್ಮದ ಹುಡುಗಿಯೂ  ಖಂಡಿತ ಒಪ್ಪಿಗೆ ಆಗ.  ಮದುವೆ ಆವುತ್ತರೆ, ಇವನ ಹಾಂಗೆ  ಹೆರಂದ ಪ್ರಗತಿಪರ ಚಿಂತನೆಯ ತೋರ್ಪಡಿಸಿಗೊಂಡು ಒಳಂದ ಒಳ ಏಸು ಕ್ರಿಸ್ತನ ಭಜನೆ ಮಾಡುವ ತನ್ನ ಇಟೆಲಿಯ ಅಮ್ಮನ ಜಾತಿಯ  ಹುಡುಗಿ (ಮಹಿಳೆ)ಯೇ  ಆಯೆಕ್ಕಕ್ಕು.  ಮದುವೆಯನ್ನೂ ಗುಟ್ಟಿಲ್ಲಿ ಎಲ್ಯಾರೂ ಚರ್ಚಿಲ್ಲಿ ಮಾಡಿಗೊಂಡು ಮಾಧ್ಯಮದವಕ್ಕೆ ಬೇಕಾಗಿ ಒಂದು ಹೋಮದ ಕುಂಡಕ್ಕೆ ಸುತ್ತು ಬಪ್ಪ ನಾಟಕ ಮಾಡುಗು.   ಹೇಂಗೂ ಜಾತಿ ವ್ಯವಸ್ಥೆಲಿಯೇ ನಂಬಿಕೆ  ಇಲ್ಲದ್ದವ ಹೇಳಿ ಆದ ಮೇಲೆ,  ಚರ್ಚಿನ ಪಾದ್ರಿಗೊ ಅಮಾಯಕ ಹಿಂದೂಗಳ ಮತಾಂತರ ಮಾಡ್ತಾ ಇಪ್ಪ ವಿಷಯಲ್ಲಿಯೂ ಇವಂಗೆ ಎಂತ ಚಿಂತೆ ಇರ.  ಮತ್ತೆ, ಬಾಂಗ್ಲಾದೇಶಂದ ಬೇಲಿ ಹಾರಿ ಬಂದ ಮತ್ತು ನಿರಂತರವಾಗಿ ಬತ್ತಾ ಇಪ್ಪ ಕೋಟಿಗಟ್ಳೆ ಬ್ಯಾರಿಗೊ ನಮ್ಮ ದೇಶದ ಭದ್ರತೆಗೆ ಮಾರಕರಾದ ವಲಸಿಗರು ಹೇಳುವ ವಿಷಯವೂ  ಇವಂಗೆ ತುಂಬಾ ದೊಡ್ಡ ಸಮಸ್ಯೆ ಆಗಿ ಹೇಂಗೂ ಕಾಣ.  ಅಂತೂ ನಮ್ಮ ದೇಶದ ಭಾವಿ ಪ್ರಧಾನಿ ಹೇಳಿ ಹೆಸರಿಸಿಗೊಂಡವನ ಚಿಂತನೆ ಮತ್ತು ವರ್ತನೆ ತುಂಬಾ ಸ್ಪೂರ್ತಿದಾಯಕವಾಗಿ ಅಪ್ಪ ಹಾಂಗೆ ಕಾಣ್ತು.  ಇವನ ಕೈಲಿ ನಮ್ಮ ಯುವಪೀಳಿಗೆಯ ಭವಿಷ್ಯ  ಖಂಡಿತವಾಗಿ ಸುರಕ್ಷಿತ -  ಜಾತಿಪದ್ಧತಿಲಿ ನಂಬಿಕೆ ಇಲ್ಲದ್ದವು ಆಗಿದ್ದರೆ ಮಾತ್ರ !  ಇನ್ನೂ ಕೆಲವು  ಕೋಟಿ ಹಿಂದೂಗಳ ಹಿಡುದು ಮತಾಂತರ ಮಾಡಿಸಿಗೊಂಬಲಕ್ಕು  ಹೇಳುವ ಆಶೆಲಿ, ಇಟೆಲಿಯ ಪೋಪ್  ಇವ ಪ್ರಧಾನಿ ಕುರ್ಚಿಲಿ ಕೂಪದರನ್ನೇ ಕಾದುಗೊಂಡಿಕ್ಕು.

ಹೊಣೆಗಾರಿಕೆ : ಕೊಳಕ್ಕುತನಕ್ಕೆ ಎಂತಾರೂ ನೋಬೆಲ್  ಪ್ರಶಸ್ತಿ ಹೇಳಿ ಇತ್ತಿದ್ದರೆ, ಅದು  ಖಂಡಿತ ಭಾರತಕ್ಕೆ ಸಿಕ್ಕುತ್ತೀತು  ಹೇಳುವ  ಹೇಳಿಕೆ ಕೊಟ್ಟು ಕೇಂದ್ರ ಸರಕಾರದ ಮಂತ್ರಿ ಜೈರಾಮ್  ರಮೇಶ್  ಹೇಳುವವ ಇತ್ತೀಚೆಗೆ ರಜ ಶುದ್ದಿ ಮಾಡಿದ.   ಹೀಂಗಿಪ್ಪ ಹೇಳಿಕೆ ಕೊಡೆಕಾರೆ,  ಒಂದು ಜವಾಬ್ದಾರಿ ಸ್ಥಾನಲ್ಲಿ ಇಪ್ಪವಂಗೆ ನಿಜವಾಗಿ  ತುಂಬಾ ಧೈರ್ಯ ಬೇಕು.  ಆದರೆ, ಸಮಸ್ಯೆ ಎಂತ ಹೇಳಿರೆ ಇದು ಆತ್ಮ ನಿವೇದನೆಯೋ, ಹತಾಶೆಯೋ, ಅಸಹಾಯಕತೆಯೋ, ಪ್ರಚಾರಪ್ರಿಯತೆಯೋ, ಹುಂಬತನವೋ ಹೇಳಿ ಅರ್ಥ ಆಗದ್ದ ಹಾಂಗಿಪ್ಪ ಹೇಳಿಕೆಯಾಗಿ ಹೋತು !  ಭಾರತೀಯರ ಕೊಳಕ್ಕುತನ ಎಷ್ಟಾದರೂ ಜಗತ್ಪ್ರಸಿಧ್ಧ ವಿಷಯ. ಆದರೆ, ಇದರ ನಿವಾರಣೆಗೆ ಸರಕಾರ -  ಅದರಲ್ಲೂ ಸುಮಾರು ೫೦ ವರ್ಷ ರಾಜ್ಯಭಾರ ಮಾಡಿದ ಕೋಂಗ್ರೇಸು ಸರಕಾರ - ಏಕೆ ಎಂತದೂ ಕ್ರಮ ಕೈಗೊಂಡಿದಿಲ್ಲೆ  ಹೇಳುವ ಚೋದ್ಯಕ್ಕೆ  ಇವನತ್ರೆ ಎಂತಾರೂ ಸಮಾಧಾನಕರ ಉತ್ತರ ಇದ್ದಾಡವೋ ಹೇಳಿ ದೇವರೇ ಬಲ್ಲ.   ಇದಕ್ಕೆಲ್ಲಾ  ಯಾರು ಹೊಣೆ ಹೇಳಿ ಕೇಳುವಷ್ಟು ದೇಶಪ್ರೇಮ ಯಾವ ಮಾಧ್ಯಮದವರತ್ರುದೇ ಇಪ್ಪ ಹಾಂಗೆ ಕಾಣ್ತಿಲ್ಲೆ.  ಯಾಕೆ ಹೇಳಿರೆ ಅವರ ಶಕ್ತಿ ಎಲ್ಲ ಆರೆಸ್ಸೆಸ್, ಭಾಜಪ, ಶಿವಸೇನೆಗಳ  ಹುಳುಕುಗಳ ದುರ್ಬೀನು ಹಿಡುದು ಹುಡುಕ್ಕುದರಲ್ಲೇ  (ಅಪ)ವ್ಯಯ ಆವುತ್ತು.

ಭಿತ್ತಿ ಚಿತ್ರ : ಬೆಂಗ್ಳೂರು ಪೇಟೆಲಿ ಸರಕಾರೀ ಸ್ವಾಮ್ಯದ ಸಾರ್ವಜನಿಕ  ಗೋಡೆಗಳ ಸಂಪೂರ್ಣ ಕಾಯಕಲ್ಪ ಆಯಿದು.  ಈ ಗೋಡೆಗಳಲ್ಲಿತ್ತ ಸಿನೆಮಾದ ಜಾಹೀರಾತು ಚೀಟಿಗೊ, ರಾಜಕೀಯ ಪ್ರಕಟಣೆಗೊ ಇತ್ಯಾದಿ ಎಲ್ಲಾ ಮಾಯ ಆಯಿದು.  ಅದರ ಜಾಗೆಲಿ, ಕರ್ನಾಟಕದ ಪ್ರವಾಸೀ ಕೇಂದ್ರಂಗಳ ಸುಂದರ ವರ್ಣಚಿತ್ರಂಗಳ ಬರೆಶಿದ್ದವು.   ಇದು ಭರತ್ ಲಾಲ್  ಮೀನಾ ಹೇಳುವ ನಗರಪಾಲಿಕೆಯ ಆಯುಕ್ತನ ಚಿಂತನೆಯ ಮತ್ತು ಪ್ರಯತ್ನದ ಫಲ.   ನಿಜವಾಗಿಯೂ ನಂಬಲಸಾಧ್ಯವಾದ ಬದಲಾವಣೆಯೇ  ಸರಿ.  ಮೇಲೆ ಪ್ರಸ್ತಾಪಿಸಿದ ಕೊಳಕ್ಕುತನದ ನಿವಾರಣೆಗೆ ಒಂದು ಪ್ರಾಮಾಣಿಕ ಪ್ರಯತ್ನ.    ಈ ವಿಷಯಲ್ಲಿ ಚಲನಚಿತ್ರ ವಾಣಿಜ್ಯ ಮಂಡಲಿಯವು  ದೊಡ್ಡ ಗಲಾಟೆ ಮಾಡಿದವು.  ಇಷ್ಟರವರೆಗೆ  ಚೀಟಿ ಅಂಟುಸುಲೆ  ಧರ್ಮಕ್ಕೆ ಸಿಕ್ಕಿಗೊಂಡಿತ್ತ  ಇವರ ಪಿತ್ರಾರ್ಜಿತ ದರ್ಖಾಸ್ತಿನ ಸರಕಾರದವು ಆಕ್ರಮಣ ಮಾಡಿದವು  ಹೇಳಿ ಅವರ ಗೋಳು.  ಇಚ್ಛಾ ಶಕ್ತಿ ಇದ್ದರೆ ಎಲ್ಲಾ ಸಮಸ್ಯೆಗೊಕ್ಕೂ ಪರಿಹಾರ ಇದ್ದು ಹೇಳುದರ ಸಾಧಿಸಿ ತೋರಿಸಿದ  ನಗರಪಾಲಿಕೆಯ ಈ ಅಪರೂಪದ ಅಧಿಕಾರಿಗೆ  ಅಭಿನಂದನೆಯ ಪದಗುಚ್ಛದ ನಮನ.

- ಬಾಪಿ/  ೨೪ ನವೆಂಬ್ರ, ೨೦೦೯

Wednesday, October 28, 2009

ಪರಿವರ್ತನೆಯ ಗಾಳಿ

ನಮ್ಮ ಊರಿಲ್ಲಿ  ಕೆಲವು ಸಮಯಂದ ಕೇಳಿ ಬತ್ತಾ  ಇತ್ತಿದ್ದ  ಸಮಸ್ಯೆ ಹೇಳಿರೆ ಕೃಷಿಕಾರ್ಮಿಕರ ಕೊರತೆ.   ಕೂಲಿ ಆಳುಗಳ ಮಕ್ಕೊ ವಿದ್ಯಾಭ್ಯಾಸ ಪಡಕ್ಕೊಂಡು ಉದ್ಯೋಗ ವಿಕಲ್ಪಂಗಳ  ಹುಡುಕ್ಕಿಗೊಂಡು ಹೋಪಲೆ ಸುರು ಆದ್ದದು  ಹೆಚ್ಚುಕಮ್ಮಿ ಒಂದು ತಲೆಮಾರು ಹಿಂದಾಣ ಪ್ರಕ್ರಿಯೆ.  ಆನು ಶಾಲೆಗೆ ಹೋಪ ಕಾಲಕ್ಕೆ ಬೀಡಿ ಕಟ್ಟುವ ಕೆಲಸ ವ್ಯಾಪಕವಾದ ಗುಡಿ ಕೈಗಾರಿಕೆ ಆದ್ದದು (ಹೆಣ್ಣು)  ಕೃಷಿ ಕಾರ್ಮಿಕರ ಕೊರತೆ ಉಂಟಪ್ಪಲೆ  ದೊಡ್ಡ ಕಾರಣ ಆಗಿತ್ತು.  ಆ ಸಮಯಲ್ಲಿ  ಅಲ್ಪ ಸ್ವಲ್ಪ ಕಲಿವಿಕೆ ಆದ ಗೆಂಡಾಳುಗೊಕ್ಕೆ ಮೀಸಲಾತಿ ಲೆಕ್ಕಲ್ಲಿ ಸರಕಾರೀ ಬ್ಯಾಂಕುಗಳಲ್ಲಿ ಗುಮಾಸ್ತ,  ಪೇದೆಯೇ ಮೊದಲಾದ   ಕೆಲಸ ಸಿಕ್ಕಿಗೊಂಡಿತ್ತು.   ಅಂಬಗ ಕೆಲವರ ಮನೆಗಳಲ್ಲಿ ಮಾತ್ರ ಶಾಲೆಗೆ ಕಳುಸುವ ಅಭ್ಯಾಸ ಇತ್ತದಾದರೆ, ಈಗ ಪ್ರತಿಯೊಂದು ಮನೆಯ ಮಕ್ಕಳೂ ಶಾಲೆಗೆ ಹೋವುತ್ತವು.  ಈ ಬೆಳವಣಿಗೆ ಸರಕಾರದ  ಸಂಪೂರ್ಣ ಸಾಕ್ಷರತಾ ಅಭಿಯಾನವ ಯಶಸ್ವಿ ಮಾಡಿ, ಇನ್ನೊಂದು ಹೊಡೆಂದ ಕೃಷಿ ಕಾರ್ಮಿಕರ ಸಮಸ್ಯೆ ಇನ್ನೂ ಉಲ್ಬಣಿಸುವ ಹಾಂಗೆ ಮಾಡಿದ್ದು.   

ಕಲ್ತ ಮೇಲೆ ಅವರವರ ಯೋಗ್ಯತೆಯ ಮೇಲೆ ಯಾರು ಎಂತ ಬೇಕಾರೂ ಅಪ್ಪಲಕ್ಕನ್ನೆ ? ಅಲ್ಲಿಗೆ, ಜಾತಿ-ವೃತ್ತಿಗಳ ಮಧ್ಯೆ ಇತ್ತ ತಲೆತಲಾಂತರದ ಸಂಬಂಧದ ಕೊಂಡಿ ಹೆಚ್ಚು ಕಮ್ಮಿ ಮುಗುದ ಹಾಂಗೇ ಹೇಳಿ ಕಾಣ್ತು.  ಇನ್ನಾಣ ಕಾಲಲ್ಲಿ   ಭಂಡಾರಿಯ ಮಗ ವೈದ್ಯನೋ, ಕೂಲಿಯವನ ಮಗ ಶಿಕ್ಷಕನೋ ಅಪ್ಪಲಕ್ಕು.  ಹಾಂಗೇ, ಬ್ರಾಹ್ಮಣನ ಮಗ ವಾಹನ ಚಾಲಕನೂ ಅಪ್ಪಲಕ್ಕು.  ಕೆಲಸ ಹೇಳುದು ಜನ್ಮಂದ ಅಥವಾ ಜಾತಿಂದ ನಿರ್ಧಾರ ಅಪ್ಪದರ ಬದಲು ಅವರವರ ಯೋಗ್ಯತೆಯ ಮೇಲೆ ನಿರ್ಧಾರ ಆಯೆಕಾದ್ದದು ನ್ಯಾಯ ಹೇಳಿ ಒಪ್ಪಿಗೊಂಡರೆ,  ವರ್ಣಾಶ್ರಮ ವ್ಯವಸ್ಥೆಯ ಸರಿಯಾದ ವ್ಯಾಖ್ಯಾನ ಮಾಡ್ಳೆ ಎಡಿಗಕ್ಕು.  ಯಾವುದೇ ಸಮಾಜಲ್ಲಿ  ಬ್ರಾಹ್ಮಣ (ಜ್ಞಾನಿಗೊ/ಗುರುಗೊ/ಅರ್ಚಕರು), ಕ್ಷತ್ರಿಯ (ರಾಜರು/ಯೋಧರು),  ವೈಶ್ಯ (ವ್ಯಾಪಾರಿವರ್ಗ/ಕಾರ್ಖಾನೆ ಮಾಲಿಕಂಗೊ),   ಶೂದ್ರ (ಕೂಲಿಯೇ ಮೊದಲಾದ ಸಾಮಾನ್ಯ ಕೆಲಸದವು) -   ಹೀಂಗೆ ನಾಲ್ಕು ಪಂಗಡಂಗೊ ಇರೆಕಾದ್ದದು ಅತಿ ಅವಶ್ಯ.   ಮುಂದುವರಿದ ಸಮಾಜಂಗಳಲ್ಲಿಯೂ ಈ ಪಂಗಡಂಗೊ ಇದ್ದು.  ಆದರೆ, ಅವು ಶೂದ್ರ ವರ್ಗದವಕ್ಕೆ ಅಡ್ಡ ಹಂತಿ ಹಾಕದ್ದೆ ವೃತ್ತಿ ಗೌರವವ ಕಾಪಾಡಿಗೊಂಡು ಬೈಂದವು.   ಅದೇ,  ಎಷ್ಟೆಲ್ಲಾ ಒಳ್ಳೆಯ ಆಂಶಂಗೊ ಇಪ್ಪ ನಮ್ಮ ಪುರಾತನ ಘನ ಸಂಸ್ಕೃತಿಲಿ ಕೆಲವು ಸ್ವಾರ್ಥ ಮತ್ತು  ಸಣ್ಣತನದ ನಡವಳಿಕೆಗೊ  ಸೇರಿಗೊಂಡು ಜನಂಗೊ ಅದನ್ನೇ ತಮ್ಮ ಅನುಕೂಲಕ್ಕೆ ಉಪಯೋಗಿಸಿಗೊಂಬ ಹಾಂಗೆ ಆತು.  ಅಸ್ಪೃಶ್ಯತೆ ಇಂತಹ ಸಣ್ಣತನಕ್ಕೆ ಒಂದು ಉದಾಹರಣೆ.   ಮುಂದಿನ ಸುಶಿಕ್ಷಿತ ಸಮಾಜಲ್ಲಿ ಇಂತಹ ನಡವಳಿಕೆಗೊಕ್ಕೆ ಅವಕಾಶ ಇಲ್ಲದ್ದ ಕಾರಣ ಅದೆಲ್ಲಾ ತನ್ನಷ್ಟಕೇ  ನಿಂದು ಹೋಕು.  ಎಷ್ಟೋ ತಲೆಮಾರಿಂದ ಕೆಳಾಣ ವರ್ಗಲ್ಲಿದ್ದವು ಕಲ್ತು ತಕ್ಷಣ ಮುಂದೆ ಬಂದಪ್ಪಗ  ಅಲ್ಪ ಕಾಲಾವಧಿಲಿ ಗುಣಮಟ್ಟದ ಸಮಸ್ಯೆ ಉಂಟಪ್ಪ ಸಾಧ್ಯತೆ  ಇದ್ದರೂ, ಒಟ್ಟಾರೆ  ಇದೊಂದು ನಮುನೆ ಸಕಾರಾತ್ಮಕವಾದ ಬೆಳವಣಿಗೆ  ಹೇಳಿ ಎನ್ನ ಖಾಸಗಿ ಅಭಿಪ್ರಾಯ.  ಹಾಂಗಾರೆ, ಕೃಷಿಕರ ಸಮಸ್ಯೆಗೆ ಪರಿಹಾರ ಎಂತ ಹೇಳುವ ಪ್ರಶ್ನೆಗೆ ನಿಧಾನಕ್ಕೆ ಸಮಾಧಾನ ಸಿಕ್ಕೆಕ್ಕಷ್ಟೆ ಹೇಳಿ ಕಾಣ್ತು.  ಕೃಷಿಯನ್ನೇ ಇಷ್ಟ ಪಟ್ಟು ಮಾಡುವವು ತಾವೇ ಸ್ವತಃ ಕೆಲಸ ಮಾಡುವ ಸಾಮರ್ಥ್ಯ ಬೆಳೆಶಿಗೊಂಗು. ಅಥವಾ, ಅಡಕ್ಕೆಯಂತಹ ಕಷ್ಟದ ಕೃಷಿ ಬಿಟ್ಟು ಸುಲಭದ ಪರ್ಯಾಯಂಗಳ ಹುಡುಕ್ಕುಗು.  ಇಲ್ಲವೇ, ಸ್ವಂತ ಪ್ರೇರಣೆಂದ ಪರಸ್ಪರ ಸಹಕಾರಕ್ಕಾಗಿ ಕೃಷಿಕರ ಸ್ವ-ಸಹಾಯ ಗುಂಪುಗೊ ಹುಟ್ಟಿಗೊಂಗು.  ಅಂತೂ ಎಲ್ಲವೂ ಸುಖಾಂತ ಅಕ್ಕು ಹೇಳಿ ಗ್ರೇಶಿಗೊಂಬೊ.

ಈಗ ಊರಿಲ್ಲಿ ಆಳುಗಳ ಸಮಸ್ಯೆ ಬಗ್ಗೆ  ಆರೂ ಅಷ್ಟು ಮಾತಾಡ್ತವಿಲ್ಲೆ.  ಸದ್ಯದ ಬಿಸಿ ಸುದ್ದಿ ಹೇಳಿರೆ,  ಜವ್ವನಿಗರಿಂಗೆ ಮದುವೆಗೆ "ಯೋಗ್ಯ"  ಕೂಸುಗೊ ಸಿಕ್ಕದ್ದೆ ಇಪ್ಪದು.  ಅದರಲ್ಲೂ ವಿಶೇಷವಾಗಿ,  ಕೃಷಿಕರ ಮಕ್ಕೊಗೆ.    ಸದ್ಯಕ್ಕೆ ಸಮಾಜಲ್ಲಿ ಮಾಣಿ-ಕೂಸುಗಳ ಸಂಖ್ಯೆಲಿಪ್ಪ ಅಸಮತೋಲನವೇ  ಮೂಲ ಕಾರಣಂಗಳಲ್ಲಿ ಒಂದು ಆಗಿಪ್ಪಲೂ ಸಾಕು.   ಇದರ ದೈವಲೀಲೆ ಹೇಳಿ ಅನುಭವಿಸೆಕ್ಕಷ್ಟೆ.   ಮತ್ತೆ,  ಈಗ ಹೆಚ್ಚು ಹೆಚ್ಚು ಕೂಸುಗೊ ಕಲಿವಿಕೆ ಆಗಿ, ವೃತ್ತಿಜೀವನದ ಸಾಧನೆಗೆ  ಆದ್ಯತೆ ಕೊಟ್ಟುಗೊಂಡು ಆರ್ಥಿಕ ಸ್ವಾವಲಂಬನೆ ಪಡಕ್ಕೊಂಡಿಪ್ಪದುದೇ ಇನ್ನೊಂದು ಪ್ರಬಲ ಕಾರಣ ಹೇಳಿಯೂ ವಿಮರ್ಶೆ ಮಾಡ್ಳಕ್ಕು.   ೧೦ ವರ್ಷದ ಸಣ್ಣ ಪ್ರಾಯಲ್ಲಿ  ಮದುವೆ ಆಗಿ ಗೆಂಡನ ಮನೆಯವರ ಸೇವೆ ಮಾಡ್ಳೆ ಸುರು ಮಾಡಿ, ಹತ್ತತ್ತು ಮಕ್ಕಳ ಹೆತ್ತು ದೊಡ್ದ ಮಾಡಿದ  ಹಿಂದಾಣ ತಲೆಮಾರಿನ  ಎಷ್ಟೋ ಜನರ ಕಥೆ ನವಗೆ ಕೇಳಿ ಅಥವಾ ನೋಡಿ ಗೊಂತಿಕ್ಕು.  ಅದೇ  ಈಗ, ೩೦ ವರ್ಷ ಆದರೂ ಸ್ವ-ಇಚ್ಛೆಂದ ಮದುವೆ ಆಗದ್ದೆ ಇಪ್ಪ ಕೂಸುಗೊ ಎಷ್ಟುದೇ ಇದ್ದವು.   ಆದರೆ, ಕೃಷಿಮಾಡುವ ಮಾಣ್ಯಂಗೊಕ್ಕೆ ಮನೆಲಿ ಅಬ್ಬೆಗೆ ಒಬ್ಬಂಗೇ ಕೆಲಸ ಮಾಡಿಗೊಂಬಲೆ ಪೂರೈಸುತ್ತಿಲ್ಲೆ ಹೇಳಿ  ಮದುವೆ ಅಪ್ಪಲೆ ಅಂಬ್ರೆಪ್ಪು.  ಹೀಂಗೆ ದೃಷ್ಟಿಕೋಣಂಗಳ ಮಧ್ಯೆ ಇಪ್ಪ ಅಂತರಂದಾಗಿ   ಇಂದಿಂಗೆ  ಮದ್ಮಾಳುಗಳ  ತತ್ವಾರ ಕಂಡು ಬತ್ತಾ ಇದ್ದು.   ಮೊದ್ಳಾಣ ಅಜ್ಜಂದ್ರು ಎಲ್ಲಾ ಎರಡೆರಡು ಮದುವೆ ಆಗಿ ಹೆಂಡತ್ತಿಯಕ್ಕಳ ಗಾಣದ ಎತ್ತು (ಎಮ್ಮೆ) ಗಳ ಹಾಂಗೆ ನಡೆಶಿಗೊಂಡ ಪಾಪದ ಫಲವ ಪುಳ್ಯಕ್ಕೊ ಅನುಭವಿಸುತ್ತಾ ಇಪ್ಪದೋ ಏನೋ ?   ಅಂತೂ, ಮಾಣ್ಯಂಗಳ ದೊಡ್ಡಸ್ತಿಕೆಯ "ಸುವರ್ಣ ಯುಗ"  ಮುಗುತ್ತು ಹೇಳ್ಳಕ್ಕು !  ಅದರೊಟ್ಟಿಂಗೇ, ಕೂಸಿನ ಅಬ್ಬೆಪ್ಪಂದ್ರಿಂಗೆ ನಿಜವಾಗಿ ಸಲ್ಲೆಕ್ಕಾದ ಮರ್ಯಾದೆ ಸಿಕ್ಕುವ ಕಾಲವೂ  ಕೂಡಿ ಬಂತು.

ಇದರೊಟ್ಟಿಂಗೆ ಜಾತಿಯ ಬೇಲಿಯೂ ಶಿಥಿಲ ಆಗಿ ಹವ್ಯಕ-ಹವ್ಯಕೇತರರ ಮಧ್ಯೆ ಸಂಬಂಧಂಗೊ ಹೆಚ್ಚು ಸಂಖ್ಯೆಲಿ  ಕಾಂಬಲೆ, ಕೇಳ್ಳೆ  ಸಿಕ್ಕುತ್ತಾ ಇದ್ದು.   ಇಷ್ಟರವರೆಗೆ ನಮ್ಮ ಜೆಂಬ್ರಂಗಳಲ್ಲಿ   ಬರೀ ಕುಂಬ್ಳೆ ಸೀಮೆಯ ಮೇಲಾರ,  ಸುಳ್ಯ ಸೀಮೆಯ ಸೀವು ಇತ್ಯಾದಿಗಳ ವೈವಿಧ್ಯ ಆದರೆ,  ಇನ್ನು ಮುಂದೆ ಕಲ್ಕತ್ತಾದ ರಸಗುಲ್ಲಾ, ಚೆನ್ನೈಯ ಪೊಂಗಲ್, ಮಹಾರಾಷ್ಟ್ರದ ಶ್ರೀಖಂಡ್, ಪಂಜಾಬಿನ  ಜಿಲೇಬಿ ಇತ್ಯಾದಿಗಳನ್ನೂ ಚಪ್ಪರಿಸುವ  ಅವಕಾಶ  ಹೆಚ್ಚು ಹೆಚ್ಚು ಸಿಕ್ಕುಲೂ ಸಾಕು.   ಕೇವಲ  ಮೃಷ್ಟಾನ್ನವ ಅಪೇಕ್ಷೆ ಮಾಡುವ ಇತರರಿಂಗೆ ಇದು ಸುವಾರ್ತೆ  ಆದರೂ, ಆಯಾ ಮಾಣಿ-ಕೂಸುಗಳ ಅಬ್ಬೆಪ್ಪಂದ್ರಿಂಗೆ  ಖಂಡಿತ ಸುಲಭಲ್ಲಿ ಜೀರ್ಣ ಅಪ್ಪ ಸಂಗತಿ ಅಲ್ಲ.  ಸಂಪ್ರದಾಯವನ್ನೇ  ನಂಬಿಗೊಂಡು ಜೀವನ ಮಾಡಿದವಕ್ಕೆ ತಕ್ಷಣ ಯಾರೋ ಇಬ್ರಾಯಿ, ಪಿಂಟೋ, ಸರ್ದಾರ್ಜಿ, ಮೆಹ್ತಾ, ಪಟ್ನಾಯಕ್ ಅಥವಾ ಬ್ಯಾನರ್ಜಿಯ  ಅಳಿಯ ಹೇಳಿ ಸ್ವೀಕಾರ  ಮಾಡ್ಳೆ ಹೇಂಗೆ ಸಾಧ್ಯ ?  ಆದರೆ, ಪರಿವರ್ತನೆಯ ಗಾಳಿ ಪ್ರಬಲವಾಗಿಯೂ, ವ್ಯಾಪಕವಾಗಿಯೂ ಇಪ್ಪಗ  ಹವ್ಯಕ ಸಮಾಜಕ್ಕೆ ಮಾತ್ರ ತಟ್ಟದ್ದೆ ಇಪ್ಪದಾದರೂ ಹೇಂಗೆ ?

ಪರಿವರ್ತನಾಶೀಲವಾಗಿಪ್ಪದು ಸಮಾಜದ ಸಹಜ ಪ್ರವೃತ್ತಿ ಹೇಳಿ ಆದರೆ, ಅದರ ಒಪ್ಪಿಗೊಂಬದೇ ಸುಖವೋ ಏನೋ ?

- ಬಾಪಿ / ಬುಧವಾರ, ೨೮ ಅಕ್ಟೋಬರ ೨೦೦೯

Saturday, October 24, 2009

ಚೌ ಚೌ - ೦೧

ನೋಬೆಲ್ ಪ್ರಶಸ್ತಿ : ಒಬಾಮಂಗೆ ನೋಬೆಲ್ ಶಾಂತಿ ಪ್ರಶಸ್ತಿ ಬಂದ ಬಗ್ಗೆ ಬೇಕಾದಷ್ಟು ಊಹಾಪೋಹಂಗೊ ಚಲಾವಣೆಲಿ ಇದ್ದು. ಎಡಪಂಥವಾದಿಗಳೇ ಬಹುಮತಲ್ಲಿಪ್ಪ ಪ್ರಶಸ್ತಿಯ ಆಯ್ಕೆ ಸಮಿತಿಯವು ಇರಾನ್, ಉತ್ತರ ಕೊರಿಯಾ ಇತ್ಯಾದಿ ದೇಶಂಗಳ ಕುರಿತಾದ ಅಮೇರಿಕಾದ ವಿದೇಶಾಂಗ ನೀತಿಯ ತತ್ಕಾಲೀನ ಧೋರಣೆಯ ಇಕ್ಕಟ್ಟಿಲ್ಲಿ ಸಿಲುಕಿಸಲೆ ಈ ತಂತ್ರ ಹೂಡಿದ್ದದು ಹೇಳಿ ಗುಸುಗುಸು ಶುದ್ದಿ. ಅಂತೂ, ಎನ್ನ ಪ್ರಕಾರ ಇದು ಕ್ಲಾಸಿನ ಅತ್ಯಂತ ಪೋಕರಿ ಮಾಣಿಯ ಲೀಡರು ಮಾಡಿದ ಹಾಂಗಿಪ್ಪ ಕಥೆ. ಒಬಾಮಾ ಅಧಿಕಾರಕ್ಕೆ ಬಂದ ಮೇಲಾಣ ೬ ತಿಂಗಳಿಲ್ಲಿ ಸಾಧನೆ ಮಾಡಿದ್ದದು ಎಂತದೂ ಇಲ್ಲೆ ಹೇಳುದು ಎಲ್ಲೋರಿಂಗೂ ಗೊಂತಿಪ್ಪ ವಿಷಯ. ಬರೀ ಆಶ್ವಾಸನೆಯ ಮೇಲೆ ಪ್ರಶಸ್ತಿ ಕೊಡ್ತರೆ, ನಮ್ಮ ವಾಟಾಳ್ ನಾಗರಾಜಂಗೆ ಪ್ರಪಂಚದ ಎಲ್ಲಾ ಪುರಸ್ಕಾರಂಗಳೂ ಸಿಕ್ಕೆಕ್ಕಿತ್ತು. ಚರಿತ್ರೆಲಿ ಇಷ್ಟರವರೆಗೆ ನಡೆದ ಯುದ್ಧಂಗಳಲ್ಲಿ ಅಣ್ವಸ್ತ್ರ ಪ್ರಯೋಗ ಮಾಡಿದ ಒಂದೇ ಒಂದು ದೇಶವಾದ ಅಮೇರಿಕಾ, ಈಗ ಪ್ರಪಂಚದ ಬೇರೆ ಎಲ್ಲಾ ದೇಶಂಗೊಕ್ಕೆ ಪರಮಾಣು ನೀತಿಯ ಬೋಧನೆ ಮಾಡುವ ಗುರಿಕ್ಕಾರ್ತಿಗೆ ವಹಿಸಿಗೊಂಡಿಪ್ಪದು ದೊಡ್ಡ ವಿಪರ್ಯಾಸ ! ಈ ಅಧಿಕಪ್ರಸಂಗಿಗಳ ಸ್ವಂತ ಚರಿತ್ರೆಯ ಹುಳುಕಿನ ಬೊಟ್ಟು ಮಾಡಿ ತೋರುಸುವ ಧೈರ್ಯ ಯಾರಿಂಗೂ ಇಲ್ಲೆನ್ನೆ ಹೇಳುದು ಭಾರೀ ಬೇಜಾರದ ವಿಷಯ.

ಬೋಫೋರ್ಸ್ : ಕೋತ್ರೋಕಿ ಹೇಳುವ ಮಹಾಶಯನ ಬೋಫೋರ್ಸ್ ಹಗರಣಲ್ಲಿ ದೋಷಮುಕ್ತಿಗೊಳಿಸಿ ಕೇಸಿನ ಬರ್ಖಾಸ್ತು ಮಾಡೆಕ್ಕು ಹೇಳುವ ಅರ್ಜಿಯ CBIಯವು ಉಚ್ಛನ್ಯಾಯಾಲಯಲ್ಲಿ ಸಲ್ಲಿಸಿದ್ದವಡ. ಇದು ಅವಂಗೆ (ಅಕ್ರಮವಾಗಿ) ಸಲ್ಲೆಕ್ಕಾದ ಬಾಕಿ ೨೯ ಮಿಲಿಯ ಡಾಲರುಗಳ ವಿಲೇವಾರಿಯ ವ್ಯವಸ್ಥೆಯ ಸುಗಮ ಮಾಡಿಕೊಡುವ ಹೊಸ ಕಾರ್ಯತಂತ್ರ. ವಾಜಪೇಯಿಯ ಸರಕಾರದ ಅವಧಿಲಿ ಈ ಕೇಸಿನ ಬಗ್ಗೆ ಎಂತಾರು ಇತ್ಯರ್ಥ ಅಕ್ಕು ಹೇಳುವ ಆಶೆ ಎಲ್ಲೋರಿಂಗೂ ಇತ್ತು. ಆದರೆ ನಿಜ ಹೇಳ್ತರೆ, ಆ ಸರಕಾರಂದಲೂ ಹೆಚ್ಚು ಬೋಫೋರ್ಸ್ ಕೇಸಿನ ಮುಂದುವರಿಸಿದ ಹೆಗ್ಗಳಿಕೆ ನರಸಿಂಹ ರಾಯನ ಸರಕಾರಕ್ಕೆ ಸೇರೆಕ್ಕು. ಕೋತ್ರೋಕಿಯ ಹೆಸರಿನ ಅಂಬಗಂಬಗ ಹೇಳಿ ಸೋನಿಯಾ ಗಾಂಧಿಯ ಹೆದರಿಸಿ ಕೂರಿಸಿಗೊಂಡೇ ಅವ ತನ್ನ ೫ ವರ್ಷದ ರಾಜ್ಯಭಾರವ "ಯಶಸ್ವಿಯಾಗಿ" ಪೂರೈಸಿದ. ಮಹಾ ಬುದ್ಧಿವಂತ ! ಎಷ್ಟಾದರೂ ಆಂಧ್ರದ ಖಾರ ಮೆಣಸಿನ ಕಾಯಿ ತಿಂದು ಬೆಳೆದ ಜೀವ ಅಲ್ಲದಾ ?

ನಕ್ಸಲೀಯರು : ಇತ್ತೀಚೆಗೆ ನಮ್ಮ ದೇಶಲ್ಲಿ ಮಾವೋವಾದಿಗಳ ಕಾರುಬಾರು ರಜ ಜೋರು ಆಯಿದು. ನೇಪಾಳಲ್ಲಿ ಅಧಿಕಾರದ ರುಚಿ ಕಂಡ ಮೇಲೆ, ಅವರದ್ದು ಈಗ ಭಾರತದ ಮೇಲೆ ಕಣ್ಣು. ನಮ್ಮ ದೇಶದ ಮಧ್ಯ- ಉತ್ತರ -ಪೂರ್ವ ರಾಜ್ಯಂಗಳಲ್ಲಿಪ್ಪ ಹೇರಳ ಕಾಡುಪ್ರದೇಶಂಗಳ ನೆಲೆಯಾಗಿ ಮಾಡಿಗೊಂಡು, ಹೆಚ್ಚಾಗಿ ಕಾಡಿನ ಹತ್ತರಾಣ ಹಳ್ಳಿಗಳ ಮುಗ್ಧ ಜನಂಗಳ ಅಥವಾ ಪೋಲೀಸರ ಕೊಂದು ತಮ್ಮ ಸಂಸ್ಥೆಯ ಹೆಸರು ಸದಾ ಪತ್ರಿಕೆಗಳಲ್ಲಿ ಚಲಾವಣೆಲಿ ಇಪ್ಪ ಹಾಂಗೆ ನೋಡಿಗೊಳ್ತಾ ಇದ್ದವು. ಇವರ ದುಷ್ಕೃತ್ಯಂಗೊಕ್ಕೆ ಎಡಪಕ್ಷಂಗಳ ಸಹಾನುಭೂತಿ ಇಪ್ಪದಲ್ಲದ್ದೆ, ಅನೇಕ ಬುದ್ಧಿಜೀವಿಗಳದ್ದೂ ಬೆಂಬಲ ಇದ್ದು. ಇದೆಂತ ಆಶ್ಚರ್ಯದ ವಿಷಯ ಅಲ್ಲ. ಏಕೆ ಹೇಳಿರೆ, ಕೈಲಿ ಬೆಡಿ ಹಿಡುಕ್ಕೊಂಡಿಪ್ಪ ವಿಕೃತ ಮನಸ್ಸಿನ ಬುದ್ಧಿಜೀವಿಗಳೇ ನಕ್ಸಲೀಯರು ಅಲ್ಲದಾ ? ಇದೇ ಬುದ್ಧಿಜೀವಿಗೊ, ನಮ್ಮ ದೇಶದ ಸಂಸ್ಕೃತಿಗೆ ಸಂಬಂಧಿಸಿದ ವಿಷಯಲ್ಲಿ ವಿಶ್ವ ಹಿಂದೂ ಪರಿಷತ್ತು ಅಥವಾ ಭಜರಂಗ ದಳದವು ಎಂತಾರೂ ಗಲಾಟೆ ಮಾಡಿರೆ ಅದಕ್ಕೆ ಕೂಡ್ಳೇ ತಕರಾರು ಮಾಡ್ತವು ! ವಿತಂಡವಾದವೇ ಬುದ್ಧಿವಂತಿಕೆಯ ಮಾನದಂಡ ಆಗಿಪ್ಪಗ, ಒಳ್ಳೆಯ ತರ್ಕಕ್ಕೆ ಅವಕಾಶ ಎಲ್ಲಿದ್ದು ?

ಗುರುತು ಚೀಟಿ : ವಿಶಿಷ್ಠ ಗುರುತುಚೀಟಿ ಪ್ರಾಧಿಕಾರ ಹೇಳುವ ಹೊಸ ಸಂಸ್ಥೆಯ ಸುರುಮಾಡಿ, ನಂದನ್ ನೀಲಕೇಣಿಯ ಅದಕ್ಕೆ ಮುಖ್ಯಸ್ಥನಾಗಿ ಮಾಡಿದ ಮನಮೋಹನ ಸಿಂಗನ ಸರಕಾರದ ನಿರ್ಧಾರವ ಸ್ವಾಗತಿಸಿ ಚಪ್ಪಾಳೆ ತಟ್ಟಿದವರಲ್ಲಿ ಆನೂ ಒಬ್ಬ. ಆದರೆ, ಈ ಪ್ರಕ್ರಿಯೆ ಮುಗಿಶುಲೆ ೫ ವರ್ಷ ಬೇಕಕ್ಕು ಹೇಳಿಯೂ, ಈ ಗುರುತು ಚೀಟಿ ಭಾರತ ದೇಶದ ಪೌರತ್ವದ ದೃಢೀಕರಣ ಅಲ್ಲ ಹೇಳಿಯೂ ತಿಳಿಶುವ ಹೊಸ ನಿರಾಶಾದಯಕ ಸುದ್ದಿ ಇತ್ತೀಚೆಗೆ ಕೇಳಿ ಬೈಂದು. ಸದ್ಯಕ್ಕೆ ಲಂಚ ಕೊಡದ್ದೆ, ಧರ್ಮಕ್ಕೆ ಕಿಸೆಲಿ ಮಡಿಕ್ಕೊಂಬಲೆ ಒಂದು ಹೊಸ ಗುರುತು ಚೀಟಿ ಸಿಕ್ಕುಗು ಹೇಳುದಷ್ಟೇ ಭಾರತೀಯರ ಸೌಭಾಗ್ಯ. ದಾರಿಲಿ ಹೋಪವರ ಎಲ್ಲಾ ಹಿಡುದು ನಿಲ್ಲಿಸಿ ಗುರುತು ಚೀಟಿಯ ಹಂಚುವ ಅಭಿಯಾನ ಈಗಾಗಲೇ ಸುರು ಆಗಿರೆಕು. ಹಾಂಗಾರೆ, ಈ ಗುರುತಿನ ಚೀಟಿಯ ಉಪಯೋಗಿಸಿಗೊಂಡು ಬಾಂಗ್ಲಾದೇಶಂದ ಬಂದ ಕೋಟಿಗಟ್ಳೆ ಬ್ಯಾರಿಗೊ ನಿಧಾನಕ್ಕೆ ಭಾರತದ ಪೌರರಪ್ಪಲಕ್ಕು. ಅಲ್ಪ ಸಂಖ್ಯಾತರ ಸಂಖ್ಯೆಯ ಅಧಿಕೃತವಾಗಿ ಹೆಚ್ಚು ಮಾಡ್ಳೆ ಇಪ್ಪ ಸಾವಿರಾರು ಕೋಟಿಯ ಯೋಜನೆ ! ಹೇಂಗಿದ್ದು ?

ಪ್ರಳಯ : ೨೦೧೨ನೇ ಇಸವಿಲಿ ಪ್ರಳಯ ಆವುತ್ತು ಹೇಳಿ ಇತ್ತಿಚೆಗೆ ಒಂದು ಪತ್ರಿಕೆಲಿ ಸುದ್ದಿ ಬಂತು. ಇದರ ಕೇಳಿ ಜನ ಎಂತ ಭಯಂಕರ ತಲೆಬೆಶಿ ಮಾಡಿಗೊಂಡ ಹಾಂಗೆ ಕಾಣ್ತಿಲ್ಲೆ. ಅತ್ಯಂತ ಹೆಚ್ಚು ತಲೆಬೆಶಿ ಮಾಡಿಗೊಳೆಕ್ಕಾದ ಕರಾವಳಿ ಪ್ರದೇಶದ ಜನರಲ್ಲಿ ಹೆಚ್ಚಿನವು ಈಗಾಗಲೇ ಬೆಂಗ್ಳೂರಿಲ್ಯೋ, ಅಮೇರಿಕಲ್ಯೋ ಇಪ್ಪ ಮಕ್ಕಳ ಒಟ್ಟಿಂಗೆ ಬೇಕಾದ ವ್ಯವಸ್ಥೆ ಮಾಡ್ಯೊಂಡಿಕ್ಕು. ಅಂತೂ, ಇದರಿಂದಾಗಿ ಘಟ್ಟದ ಮೇಲೆ ನಿವೇಶನದ ಕ್ರಯ ಏರುದು ಖಂಡಿತ. ಇನ್ನೂ ಹೆಚ್ಚು ಸುರಕ್ಷಿತ ಜೀವನವ ಅಪೇಕ್ಷೆ ಮಾಡುವವು ನಂದಿ ಬೆಟ್ಟದ ಮೇಲೆ ಬಹುಮಹಡಿಯ ಕಟ್ಟೋಣ ಕಟ್ಟಿ, ಅತ್ಯಂತ ಮೇಲಾಣ ಮಾಳಿಗೆಲಿ ವಾಸ ಮಾಡುವ ಕೆಣಿ ಮಾಡ್ಳೂ ಸಾಕು. ಅಂತೂ ಮನುಷ್ಯಂಗೆ ಜೀವಭಯ ಹೇಳುದು ಭಯಂಕರ ದೊಡ್ಡ ಸಂಗತಿ ಅಲ್ಲದಾ ? ಒಟ್ಟಾರೆ, ಇನ್ನು ಮೂರೇ ವರ್ಷ ಇಪ್ಪದು. ಗಮ್ಮತು ಮಾಡುವಷ್ಟು ಮಾಡಿಗೊಂಬಲಕ್ಕು.

- ಬಾಪಿ / ಶನಿವಾರ, ೨೪ ಅಕ್ಟೋಬರ ೨೦೦೯

Saturday, October 10, 2009

ಸ್ವಸ್ಥ ಸಮಾಜ

ಸುಖ ಸಂಸಾರ ನಡೆಶುಲೆ ಸಹಾಯ ಅಪ್ಪ ಹಾಂಗಿಪ್ಪ ೧೨ ಸೂತ್ರಂಗಳ ಯಾರೋ ಪುಣ್ಯಾತ್ಮರು ಬೋಧನೆ ಮಾಡಿದ ವಿಷಯವ ನವಗೆಲ್ಲಾ ಕೇಳಿ ಗೊಂತಿಕ್ಕು.    ಹೀಂಗಿಪ್ಪ ಸಿದ್ಧ ಕೈಪಿಡಿಗಳ  ದಾರಿದೀಪವಾಗಿ ಉಪಯೋಗಿಸಿರೆ,  ಎಷ್ಟೋ ಸರ್ತಿ ನಾವು ಜೀವನಲ್ಲಿ ಸ್ವಂತ ಅನುಭವ ಅಪ್ಪ ವರೆಗೆ ಕಾಯುವ ಅಗತ್ಯ ಇರ್ತಿಲ್ಲೆ.   ಹೀಂಗೆ ಅಲ್ಲಿಲ್ಲಿ  ನೋಡಿ, ಬೇರೆಯವರಿಂದ ಕೇಳಿ ತಿಳುದು ಬುದ್ಧಿವಂತರಪ್ಪ ಅವಕಾಶಂಗೊ ಧಾರಾಳ ಇರ್ತು.  ಇದಕ್ಕೆ ರಜ ವ್ಯಾವಹಾರಿಕ ಜಾಣ್ಮೆ ಬೇಕಪ್ಪದಷ್ಟೆ.  

ಇಪ್ಪದರನ್ನೇ ಅನುಭವಿಸಿಗೊಂಡು  ಸದಾ ಸಂತೋಷಲಿಪ್ಪ ಜನ,  ಜಗತ್ತಿನ ಬೇರೆಲ್ಲಾ ದೇಶಂಗಳಿಂದೆಲ್ಲಾ ಹೆಚ್ಚಿನ ಸುಖೀ ಕುಟುಂಬ ವ್ಯವಸ್ಥೆ ಹೊಂದಿಪ್ಪ ಸಮಾಜ ಇದ್ದರೂ ನಮ್ಮ ದೇಶ ಇಷ್ಟು ಶೋಚನೀಯ ಪರಿಸ್ಥಿತಿಲಿಪ್ಪಲೆ ಎಂತ ಕಾರಣ ಹೇಳುವ  ಚೋದ್ಯಕ್ಕೆ ಸಮಾಧಾನ ಹುಡುಕ್ಕುವ ಕೆಲಸ ಮನಸ್ಸಿನ ತೆರೆಯ ಮರೆಲಿ  ಸದಾ ನಡೆತ್ತಲೇ  ಇರ್ತು.  ಎಂತಾರು ಸಮಸ್ಯೆಯ ಜಾಡು ಹಿಡುಕ್ಕೊಂಡು ಹೋಗಿ, ಅದರ ಉದ್ದ ಅಗಲಂಗಳ ಮಾಪನ ಮಾಡಿ ಅಪ್ಪಗ, ಜನಿವಾರದ ಗೆಂಟು ಬಿಡಿಸಿದಷ್ಟೇ  ಸಮಾಧಾನ ಆವುತ್ತು.    ಹೀಂಗೆ ಈ ವಿಷಯಲ್ಲಿಯೂ  ಕೆಲವು ವಿಚಾರಂಗೊ ಮೂಡಿ ಬಂತು.   ನಿಜವಾದ ಅರ್ಥಲ್ಲಿ  ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಎಂತ ಸೂತ್ರಂಗಳ ಪಾಲಿಸೆಕ್ಕು ?  ಭೂತ ಮತ್ತು ಭವಿಷ್ಯದ ಸರಿಯಾದ ಸಮತೋಲನ ಇದ್ದರೆ,  ಯಾವಾಗಲೂ ವರ್ತಮಾನವ  ಒಳ್ಳೆಯ ರೀತಿಲಿ  ಅನುಭವಿಸಲೆ ಎಡಿಗಾವುತ್ತು ಹೇಳುದು ಜ್ಞಾನಿಗೊ ಹೇಳಿದ ಮಾತು.   ವೈಯಕ್ತಿಕ ನೆಲೆಲಿ ನೋಡಿರೆ, ಗತಜೀವನದ ಕೃತ್ಯಂಗಳ ಪಾಪಭೀತಿಯ ಕರಾಳಛಾಯೆ ಇಲ್ಲದ್ದೆ, ಬಪ್ಪಲಿಪ್ಪ ದಿನಂಗಳ ಅನಿಶ್ಚಿತತೆಯ  ಆತಂಕವೂ ಇಲ್ಲದ್ದೆ ಕಳವ ಇಂದಿನ ದಿನ ಅತ್ಯಂತ ಸುಖಕರವಾಗಿರ್ತಲ್ಲದಾ ? ಹಾಂಗೇ, ಭವ್ಯ ಚರಿತ್ರೆಂದ ಸ್ಪೂರ್ತಿ ಪಡಕ್ಕೊಂಡು,  ಉಜ್ವಲ ಭವಿಷ್ಯದ  ಕನಸಿನ ಹೊತ್ತುಗೊಂಡಿಪ್ಪ ಯುವಪೀಳಿಗೆಯ ಸೃಷ್ಟಿ ಮಾಡ್ಳೆಡಿಗಪ್ಪ ಒಂದು ಸಮಾಜ ಸದಾ  ಸ್ವಸ್ಥವಾಗಿಪ್ಪಲೆ ಸಾಧ್ಯ ಹೇಳಿ  ಎನಗೆ ಕಾಣ್ತು.  

ಈ ದೃಷ್ಟಿಂದ ನೋಡಿರೆ, ಒಂದು  ಸ್ವಸ್ಥ ಸಮಾಜಲ್ಲ್ಲಿ ೩ ವೃತ್ತಿಯವಕ್ಕೆ ಅತ್ಯಂತ ಹೆಚ್ಚಿನ ಪ್ರಾಧಾನ್ಯ ಸಿಕ್ಕೆಕ್ಕಾವುತ್ತು ಹೇಳುವ ಎನ್ನ ಅಭಿಪ್ರಾಯವ ಇಲ್ಲಿ ಮಂಡಿಸುತ್ತೆ.  ಈ ೩ ವೃತ್ತಿಲಿಪ್ಪವು  ಅತ್ಯಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿದವಾಗಿದ್ದುಗೊಂಡು  ಸಮಾಜದ ಗೌರವಕ್ಕೆ ಪಾತ್ರರಾಗಿಪ್ಪ ಯೋಗ್ಯತಾವಂತರಾಗಿರೆಕಾವುತ್ತು.  ಸಮಾಜದ  ಈ ವಿಶೇಷತ್ರಯರು  ಯಾರು ಹೇಳಿರೆ - ವೈದ್ಯರು, ಶಿಕ್ಷಕರು  ಮತ್ತೆ  ರಾಜಕಾರಣಿಗೊ. ಈಗ  ನಮ್ಮ ದೇಶಲ್ಲಿ ಈ ಮೂರು ಅತಿ ಮುಖ್ಯ ವೃತ್ತಿಯವರ ಅವಸ್ಥೆ ಎಂತದು ಹೇಳಿ ರಜ ವಿಮರ್ಶೆ ಮಾಡುವೊ.   

ವೈದ್ಯರು  :  ಸಮಾಜದ ಜನರ ದೈಹಿಕ ಸ್ವಾಸ್ಥ್ಯ ಕಾಪಾಡುವ ಮಹತ್ವದ ಜವಾಬ್ದಾರಿ ಹೊತ್ತುಗೊಂಡಿಪ್ಪ ಈ ವೃತ್ತಿಕ್ಷೇತ್ರಕ್ಕೆ  ಸೇವಾ ಮನೋಭಾವ ಇಪ್ಪವು ಮಾತ್ರ  ಹೋದರೆ ಎಲ್ಲೋರಿಂಗೂ ಕ್ಷೇಮ.  ಹೊತ್ತೋಪಗ ಪೈಸೆಯ ಪೆಟ್ಟಿಗೆ ಎಷ್ಟು ತುಂಬಿತ್ತು ಹೇಳಿ ಮಾತ್ರ ನೋಡುವವು ಅಥವಾ  ಮೀಸಲಾತಿಯ ಲಾಭ ಪಡಕ್ಕೊಂಡು ವೈದ್ಯರಾದವರಿಂದ ಎಂತ ಸೇವೆಯ ಅಪೇಕ್ಷೆ ಮಾಡ್ಳೆಡಿಗು ? ದೊಡ್ಡ ಆಸ್ಪತ್ರೆಗಳಲ್ಲಿಯೂ ವೈದ್ಯಕೀಯ ವೃತ್ತಿ ಹೇಳುದು ಸೇವೆಯ  ಮಟ್ಟಂದ  ವ್ಯವಹಾರದ ಮಟ್ಟಕ್ಕೆ ಇಳುದು ಎಷ್ಟೋ ಸಮಯವೇ ಆತು.  ಹೆರಿಗೆಗೆ ಹೋದರೂ,  ವಿಮಾಕವಚದ ಮೊತ್ತ ಎಷ್ಟಿದ್ದು ಹೇಳಿ ಕೇಳಿಯೇ  ಕೆಲಸ ಸುರು ಮಾಡುವ ಕ್ರಮ ಈಗ ಮಾಮೂಲು.  ರಸ್ತೆ ಅಪಘಾತಲ್ಲಿ ಜಖಂ ಆಗಿ ಆಸ್ಪತ್ರೆಗೆ ಬಪ್ಪಗಳೇ ಸತ್ತು ಹೋದ ವ್ಯಕ್ತಿಯ ಸರ್ಜರಿ ಮಾಡ್ಳೆ ಹೆರಟು ಅಸಲು ಭಂಡವಾಳ ಬಯಲು ಮಾಡಿಸಿಗೊಂಡ  ಬೆಂಗ್ಳೂರಿನ ಒಂದು ಹೆಸರಾಂತ ಆಸ್ಪತ್ರೆಯ ಹೆಸರು ಹೇಳ್ಳುದೇ ಅಸಹ್ಯ ಆವುತ್ತು.  ಖಾಸಗಿ ವೈದ್ಯಂಗೊ ಆಂತೂ ಸಣ್ಣ ಸೆಮ್ಮ ಇದ್ದರೂ ಬಲವಂತಲ್ಲಿ ಹತ್ತಾರು ನಮುನೆ ಪರೀಕ್ಷೆ ಮಾಡಿಸಿ ರೋಗಿಗೊಕ್ಕೆ ಇಲ್ಲದ್ದ ಗಾಬರಿ ಹುಟ್ಟಿಸುವ ಪ್ರಯತ್ನವ ನಿರಂತರವಾಗಿ ಮಾಡಿಗೊಂಡೇ ಇದ್ದವು.    ವೈದ್ಯರ ತಯಾರು ಮಾಡುವ ಮಹಾವಿದ್ಯಾಲಯಂಗಳ ವಂತಿಗೆ, ವಿದ್ಯಾರ್ಥಿ ಶುಲ್ಕ, ಮತ್ತಿತರ ಖರ್ಚು-ವೆಚ್ಚಂಗಳಿಂದಲೇ ವೃತ್ತಿ ವ್ಯವಹಾರದ ಲೆಕ್ಕಾಚಾರ ಸುರು ಅಪ್ಪದು.  ಇನ್ನು, ವಿವಿಧ ನಮುನೆಯ ಆದ್ಯತೆಗಳ ಆಧಾರದ ಮೇಲೆ ಸುರು ಅಪ್ಪ ಹೆಚ್ಚಿನ  ವೈದ್ಯಕೀಯ ಕೋಲೇಜುಗಳಲ್ಲಿ  ಸುಸಜ್ಜಿತ ವ್ಯವಸ್ಥೆ ಆಗಲೀ, ಕಲಿಶುವ ಗುಣಮಟ್ಟ  ಆಗಲೀ ಇರ್ತಿಲ್ಲೆ.  ಇವುಗಳ ಎಲ್ಲ ಕಾನೂನುಪ್ರಕಾರ ನಿಯಂತ್ರಣ ಮಾಡುವ ಅವಕಾಶ  ಇದ್ದರೂ ಯಾವುದೂ ವ್ಯವಸ್ಥಿತವಾಗಿ ಇಲ್ಲೆ. 

ಶಿಕ್ಷಕರು :   ಕೇವಲ ಒಂದು ತಲೆಮಾರು ಮೊದಲು ಇತ್ತ ಶಿಕ್ಷಕರಿಂಗೂ ಈಗಾಣವಕ್ಕೂ ಇಪ್ಪ ವ್ಯತ್ಯಾಸ ನೋಡಿರೆ, ಈ ಅವಧಿಲಿ ನಮ್ಮ ಶಿಕ್ಷಣದ  ಅಧಃಪತನ ಎಷ್ಟಾಯಿದು ಹೇಳಿ ಗೊಂತಾವುತ್ತು.   ತಮಿಳುನಾಡಿನ ಹಳ್ಳಿಯ ಶಾಲೆಲಿ ಕಲ್ತದು ಹೇಳುವ  ಕಾರಣಂದ ವೆಂಕಟರಾಮನ್  ಹೇಳುವ ವ್ಯಕ್ತಿಲಿತ್ತ  ಪ್ರತಿಭೆಯ ಪೋಷಣೆಗೆ ಎಂತ ಕುಂದು ಬೈಂದಿಲ್ಲೆ.  ನೋಬೆಲ್  ಪ್ರಶಸ್ತಿಯೇ ಅವನ ಹುಡುಕ್ಯೊಂಡು  ಬಂತು.  ಈಗಾಣ ಕಲ್ಲಿನ ಗೋಡೆಯ,  ಅತಿ ನವೀನ, ಸಂಪೂರ್ಣ ಗಣಕೀಕೃತ, ಆಂಗ್ಲ ಮಾಧ್ಯಮದ ಮಹಾ ಬೋರ್ಡಿಂಗ್  ಶಾಲೆಗೊಕ್ಕೆ ಎಷ್ಟು ಜನ ನೋಬೆಲ್ ವಿಜ್ಞಾನಿಗಳ ತಯಾರಿಸುವ ಸಾಮರ್ಥ್ಯ ಇದ್ದು ? ಮೊದಲಾಣ ತಲೆಮಾರಿನವು ಮಹಾ ಬುದ್ಧಿವಂತರು,  ಈಗಾಣ ಮಕ್ಕೊ ಬರೀ ಬೋದಾಳಂಗೊ ಹೇಳಿ  ಎಂತ ಅಲ್ಲನ್ನೆ ?  ಹಾಂಗಾರೆ, ಮಕ್ಕೊ ಬೆಳವ ವಾತಾವರಣ ಸಂಪೂರ್ಣ ಬದಲಾಯಿದು, ಮಕ್ಕಳಲ್ಲಿ ಜ್ಞಾನದ ಹಸಿವು ಕಮ್ಮಿ ಆಯಿದು,   ಮಕ್ಕಳ ಧ್ಯಾನ ಅನಗತ್ಯವಾಗಿ ಬೇರೆ ಬೇರೆ  ದಿಕ್ಕುಗಳಲ್ಲಿ ಹೋವುತ್ತಾ ಇದ್ದು ಇತ್ಯಾದಿಯಾದ ಕಾರಣಂಗಳ ಹುಡುಕ್ಕಲಕ್ಕು.   ಎಲ್ಲದಕ್ಕಿಂತ ಹೆಚ್ಚಾಗಿ,   ಕಲಿಶುವ  ಜವಾಬ್ದಾರಿ ವಹಿಸಿಗೊಂಡವರ ಪೈಕಿ   ಮೀಸಲಾತಿಲಿ ಬಂದ  "ಆಸನ-ಹರಸೀಕೆರೆ" ಪಂಡಿತಂಗಳ ಸಂಖ್ಯೆ ಜಾಸ್ತಿ ಇದ್ದು.  ನಮ್ಮ ಸಮಾಜಕ್ಕೆ  ಶಿಕ್ಷೆ ಕೊಡುವ ಶಿಕ್ಷಕರ ಬದಲು, ಶಿಕ್ಷಣ ಕೊಡುವ ಶಿಕ್ಷಕರು ಬೇಕು.

ರಾಜಕಾರಣಿಗೊ :  ಬೇರೆ ಎಂತಕೂ ಆಗದ್ದವು ಮೊದಲು ರೌಡಿಗೊ ಅಪ್ಪದು. ಮತ್ತೆ,  ಖದ್ದರು ಆಂಗಿ ಹಾಕಿ ರಾಜಕಾರಣಿ ಆಗಿ ವೇಶ ಬದಲಾವಣೆ  ಮಾಡಿಗೊಂಬದು.  ಇದು ನಮ್ಮ ದೇಶದ ಪ್ರಜಾಪ್ರಭುತ್ವದ ಅತ್ಯಂತ ಕಠೋರ ಸತ್ಯ. ಪ್ರಜಾಪ್ರಭುತ್ವ ವ್ಯವಸ್ಥೆಲಿದ್ದುಗೊಂಡು ವಂಶ ಪಾರಂಪರ್ಯದ ಆಢಳಿತಕ್ಕೆ ಸಂಪೂರ್ಣ ಒಗ್ಗಿ ಹೋಗಿಪ್ಪ ಒಂದು ದೊಡ್ಡ ರಾಷ್ಟ್ರೀಯ ಪಕ್ಷವೇ ನಮ್ಮ  ದೇಶಲ್ಲಿದ್ದು.  ಆ ಒಂದು ವಂಶದವು ಹೇಂಗಿಪ್ಪ ಬೋಸ (ಬೋಸಿ)ಗೊ ಆದರೂ, ಅವೇ ಆ ಪಕ್ಷಕ್ಕೆ ನಾಯಕರು.   ನಾಯಕತ್ವ,  ದೂರದರ್ಶಿತ್ವ, ರಾಜಕೀಯ ಪರಿಪಕ್ವತೆ ಇತ್ಯಾದಿ ಸದ್ಗುಣಂಗೊ ಇರೆಕಾದ ರಾಜಕಾರಣಿಗಳಲ್ಲಿ ಸದ್ಯಕ್ಕೆ ನಿಜವಾಗಿ ಇಪ್ಪದು ಪೈಸೆಯ, ತೋಳಿನ (ರೌಡಿಗಳ) ಬಲ ಮಾಂತ್ರ.  ಹಾಂಗಾಗಿ ಯಾವುದೇ ಸಮಸ್ಯೆಗಾದರುದೇ ಮುಂದಾಲೋಚನೆಂದ ಪರಿಹಾರ ಕಂಡುಗೊಂಡ ಇಷ್ಟರವರೆಗಿನ ಉದಾಹರಣೆಗೊ ದೇವರದಯಂದ ಯಾವುದೂ  ನೆಂಪಾವುತ್ತಿಲ್ಲೆ.  ಸಮಸ್ಯೆ ದೊಡ್ಡ ಆಗಿ, ಇನ್ನು ತಡವಲೆಡಿಯ ಹೇಳುವಷ್ಟು ಬೆಳೆದ ಮೇಲೆಯೇ ಅದರ ಬಗ್ಗೆ ಎಂತಾರೂ ತಲೆಕೆಡಿಸಿಗೊಂಬ  ಕೆಲಸ ಸುರು ಅಪ್ಪದು.   ನಮ್ಮ ದೇಶಲ್ಲಿ ಅತ್ಯಂತ ಹೆಚ್ಚಿನ ಅಧಿಕಾರದ ಸವಲತ್ತುಗಳ ಅನುಭವಿಸಿಗೊಂಡಿದ್ದರೂ ಯಾವುದೇ ರೀತಿಯ ಉತ್ತರದಾಯಿತ್ವ ಇಲ್ಲದ್ದ ವೃತ್ತಿ ಹೇಳಿರೆ ರಾಜಕಾರಣಿಗಳದ್ದು.  ಭಾರತಮಾತೆ ಇಷ್ಟು ಬಂಜೆ ಏಕೆ ಆಗಿ ಹೋತು ? ಸಾಮರ್ಥಿಗೆ ಇಪ್ಪ ಒಬ್ಬನೇ ಒಬ್ಬ ಮುತ್ಸದ್ದಿ ಏಕೆ ಹುಟ್ಟಿ ಬತ್ತ ಇಲ್ಲೆ ?

ಇದೊಂದು ವಸ್ತು ಸ್ಥಿತಿಯ ಅವಲೋಕನದ ಪ್ರಯತ್ನ. ಹಾಂಗಾಗಿ ಋಣಾತ್ಮಕ ಆಂಶಂಗೊ ಧಾರಾಳ ಕಾಂಗು.  ಉದ್ಧಾರ ಅಪ್ಪಲೆ ಇದೊಂದೇ ದಾರಿ.  ಸಣ್ಣ ಸಣ್ಣ ನೀರಿನ ಹನಿಗೊ ಸೇರಿ ದೊಡ್ಡ ಹೊಳೆಯೇ ಅಪ್ಪ ಹಾಂಗೆ, ಸಮಾಜದ ಪ್ರತಿಯೊಬ್ಬನ  ಬಯಕೆಗಳೂ ಒಂದೇ ಆಗಿದ್ದರೆ, ಅದರಲ್ಲಿ ದಿವ್ಯ ಚೈತನ್ಯ ಇರ್ತು.  ಸಂವಹನಂದ ಸಂಚಲನ  ಉಂಟಾಗಲಿ ಹೇಳುವ ಸದಾಶಯದೊಂದಿಗೆ ಸದ್ಯಕ್ಕೆ ಅಲ್ಪ ವಿರಾಮ.

- ಬಾಪಿ / ೧೦.೧೦.೨೦೦೯