Wednesday, September 23, 2009

ಕಲ್ಪವೃಕ್ಷ

ಮನೆ ಕಟ್ಟುವ ಆಲೋಚನೆ ತಲೆಗೆ ಹೋದ ಮೇಲೆ, ಪುರುಸೊತ್ತು ಇಪ್ಪಗ ಎಲ್ಲಾ ನಮ್ಮ ಸುತ್ತ ಮುತ್ತ ಇಪ್ಪ ಮನೆಗಳ ಹೊರನೋಟ, ಒಳಾಣ ವಿನ್ಯಾಸ, ಕೋಣೆಗಳ ಗಾತ್ರ, ಗೋಡೆಯ ಬಣ್ಣ ಇತ್ಯಾದಿಗಳ ಗಮನಿಸುವ ಪ್ರಕ್ರಿಯೆ ಅನೈಚ್ಛಿಕವಾಗಿ ಸುರು ಆವುತ್ತು ಹೇಳುದು ಎನ್ನ ಸ್ವಂತ ಅನುಭವ.  ಯಾರಾದರೂ ಮಾರ್ಗಲ್ಲಿ ಹೋಪವು ಯಾವುದಾದರೂ ಮನೆಯ ತಿರುಗಿ ತಿರುಗಿ ನೋಡಿರೆ, ಅವು ಸ್ವಂತ ಮನೆ ಕಟ್ಟುಸುತ್ತಾ ಇದ್ದವು ಹೇಳಿಯೇ ಲೆಕ್ಕ ! ಹೀಂಗೆ ನೋಡಿ ಸಂಗ್ರಹಿಸಿದ, ಓದಿ ತಿಳಿದ ವಿಷಯಂಗಳ ಎಲ್ಲಾ ಕ್ರೋಢೀಕರಿಸಿದ  ಕನಸಿನ ಮನೆಯ ಒಂದು ನೀಲಿನಕ್ಷೆಯ ಕೊನೆಗೂ ನೋಡುವ ಹಾಂಗೆ ಅಪ್ಪಗ ಒಂದು ಸುದೀರ್ಘ ನಿಟ್ಟಿಸುರು ಬಿಡುವಷ್ಟು ಸುಸ್ತು ಆಗಿರುತ್ತು.   ಅಂತೂ,  "ಮನೆ ಕಟ್ಟಿ ನೋಡು" ಹೇಳುವ ಗಾದೆಯ ಅರ್ಥದ ಸರಿಯಾದ ಪರಿಚಯ ಅಪ್ಪದು ಅಂಬಗಳೇ. ಮನೆ ಕಟ್ಟುಸುಲೆ ಹೆರಟ ಗೆಂಡ-ಹೆಂಡತಿ ಆದರ್ಶ ದಂಪತಿ ಅಪ್ಪೋ ಅಲ್ಲದೋ ಹೇಳುವ ವಿಷಯದ ನಿಜವಾದ ಪರೀಕ್ಷೆ ಅಪ್ಪದೂ ಅಂಬಗಳೇ !  ಹೊಸ ಮನೆಗೆ ಸಂಬಂಧಿಸಿದ   ಇಂಚಿಂಚು ವಿವರಂಗಳನ್ನೂ ಕೂಲಂಕುಶ ವಿಮರ್ಶೆ ಮಾಡಿ, ತನ್ಮೂಲಕ  ಉದ್ಭವಿಸುವ ಎಲ್ಲಾ ಚರ್ಚೆ, ಜಗಳ, ಜಟಾಪಟಿ, ವೈಮನಸ್ಯಂಗಳನ್ನೂ ಮೀರಿ ಯಾವ  ದಂಪತಿ ಮುಂದೆ ಸಾಗುತ್ತವೋ, ಅಂಥವರ ಗಾಢವಾದ ಹೊಂದಾಣಿಕೆಗೆ ಮೆಚ್ಚುಗೆ ವ್ಯಕ್ತ ಪಡಿಸಲೇ ಬೇಕು.   

ಹೀಂಗೆ ಮನೆ ಬಗ್ಗೆ ಕಲೆಹಾಕಿದ ಮಾಹಿತಿಗಳ ಪೈಕಿ ಅತ್ಯಂತ ರೋಚಕವಾದ್ದು ಹೇಳಿರೆ, ಪೇಟೆಯ ಮನೆಗಳಲ್ಲಿ ಕಾಂಬಲೆ ಸಿಕ್ಕುವ  ತೆಂಗಿನ ಮರಂಗಳ ಕಥೆ.  ಎಷ್ಟು ಸಣ್ಣ ನಿವೇಶನ ಆದರೂ ತೆಂಗಿನ ಸೆಸಿಗೆ ಜಾಗೆ ಬಿಟ್ಟೇ ಹೆಚ್ಚಿನವು ಮನೆ ಕಟ್ಟುತ್ತವು. ಹಾಂಗೂ ಜಾಗೆ ಸಾಲದ್ದೆ ಬಂದರೆ, ಮನೆಂದ ಹೆರ ಮಾರ್ಗದ ಕರೆಲಿ ನೆರಳಿಂಗೆ ಹೇಳಿ ಸೆಸಿ ನೆಡುವ ಬದಲು ತೆಂಗಿನ ಸೆಸಿಯನ್ನೇ ನೆಡುವ ಪುಣ್ಯಾತ್ಮಂಗಳೂ ಇದ್ದವು.  ಮತ್ತೆ ಬೇರೆಯವರಿಂದ ಖಾಲಿ ನಿವೇಶನವ ಖರೀದಿಸಿದ ಅಸಾಮಿಗೊ  ಅಲ್ಲಿ ಮೊದಲೇ ಅಡ್ಡಾದಿಡ್ಡಿ ಬೆಳೆದ ತೆಂಗಿನ ಮರ ಏನಾರೂ ಇದ್ದರೆ, ಅದಕ್ಕೆ ಬೇಕಾಗಿ ಮನೆಯ ವಿನ್ಯಾಸಲ್ಲಿ ವಿಶೇಷ ಹೊಂದಾಣಿಕೆ ಮಾಡಿಗೊಂಬಲೂ ಹಿಂಜರಿತ್ತವಿಲ್ಲೆ    ಕೆಲವು ಕಡೆ,  ತೆಂಗಿನ ಮರ ಮೇಲೆ ಹೋಪಲೆ ಮನೆಯ ಚಾವಣಿಯ ಒಟ್ಟೆ ಮಾಡಿ ವ್ಯವಸ್ಥೆ ಮಾಡಿಕೊಟ್ಟ ಸೃಜನಶೀಲ ಶಿಖಾಮಣಿಗಳೂ ಇದ್ದವು.  ತೆಂಗಿನ ಸೆಸಿ ಬೆಳದು ಮರ  ಅಪ್ಪಗ ಅದರ ಬೇರುಗೊ ಹೊಕ್ಕು ಮನೆಯ ಕಾಂಪೌಂಡು  ಒಡದು ಹೋದ ದಾರುಣ ದೃಶ್ಯ ಸರ್ವೇಸಾಮಾನ್ಯ. ಮತ್ತೆ ಮರಂಗೊಕ್ಕೆ ಬೆಳಕು ಇಪ್ಪ ಹೊಡೆಂಗೆ  ಬೆಳವ ದುರ್ಬುದ್ಧಿ  ಇಪ್ಪ ಕಾರಣ, ಪೇಟೆಯ ಮರಂಗೊ ಸರ್ತ ಬೆಳವದು ಭಾರೀ  ಅಪರೂಪ.  ಹೆಚ್ಚಾಗಿ ಮರಂಗೊ ಅಕ್ಕ ಪಕ್ಕದ ಮನೆಗೊಕ್ಕೋ ಅಥವಾ ಮಾರ್ಗಕ್ಕೋ ಮಾಲಿಗೊಂಡೇ ಇಪ್ಪದು.

ತೆಂಗಿನ ಮರದ ಬಗ್ಗೆ ಇಷ್ಟು ಭ್ರಮೆ ಇಪ್ಪಲೆ ಎಂತ ಕಾರಣ ಆಗಿಕ್ಕು ಹೇಳುವ ಚೋದ್ಯ ಮನಸ್ಸಿನ ಕಾಡುತ್ತಲೇ ಇದ್ದು.  ಭೂಲೋಕಲ್ಲಿಪ್ಪಗ ಕಲ್ಪವೃಕ್ಷವ ಸಾಂಕಿದ ಪುಣ್ಯದ ಫಲಂದ ಸ್ವರ್ಗಕ್ಕೆ ಆದ್ಯತೆಯ  ಟಿಕೇಟು ಸಿಕ್ಕುಗು ಹೇಳುವ ಆಶೆ ಆಗಿಕ್ಕೋ ?  ಹಾಂಗಾರೆ, ಇಷ್ಟು ಧರ್ಮಿಷ್ಠರಾಗಿಪ್ಪವಕ್ಕೆ ತಾವು ನೆಟ್ಟ  ತೆಂಗಿನಮರಂಗಳಿಂದ  ಕಾಲಕಾಲಕ್ಕೆ ಕಸವು ಕೀಳುವ, ಒಣಕ್ಕಟೆ ಮಡಲು/ಕಾಯಿಗಳ   ತೆಗೆಶುವ ವ್ಯವಸ್ಥೆ ಮಾಡೆಕ್ಕು ಹೇಳುವ ಕನಿಷ್ಟ ಪರಿಜ್ಞಾನವೂ ಏಕೆ ಇರ್ತಿಲ್ಯೋ ?  ತೆಂಗಿನ ಕಾಯಿ ತಲಗೆ ಬಿದ್ದು ಸತ್ತರೆ ಸೀದಾ ಸ್ವರ್ಗಕ್ಕೆ ಹೋವುತ್ತು ಹೇಳುವ ಯಾವುದಾದರೂ ಪುರಾಣದ ದೃಷ್ಟಾಂತದ ಮೇಲಾಣ ಕುರುಡು ನಂಬಿಕೆಯೋ ಏನೋ ?  ಹಾಂಗೆ ಹೇಳಿ ಆದರೆ,   ನಡಕ್ಕೊಂದು ಹೋಪಗ ಎರಡು ಸರ್ತಿ  ಕೊಟ್ಟುಕಾಯಿ ತಲೆಯ ಮೇಲೆ ಬೀಳುದು ಸೆಕೆಂಡಿನ ಅಂತರಲ್ಲಿ ತಪ್ಪಿದ್ದದು ಎನ್ನ  ಪುಣ್ಯವೋ  ಅಥವಾ ಗ್ರಹಚಾರವೋ ಹೇಳುದು ಈಗ ದೊಡ್ಡ ಜಿಜ್ಞಾಸೆಯ ವಿಷಯವೇ ಆವುತ್ತು.   ಮತ್ತೆ, ತೆಂಗಿನ ಮರದ ಅಡಿಲಿ ನಿಲ್ಲಿಸಿದ ಎನ್ನ ಹಳತ್ತು ಕಾರಿನ ಗಾಜು ಹೊಡಿ ಆದ ಶುದ್ದಿಯ ಅನಗತ್ಯ ವಿವರಂಗಳ ಹೇಳಿ ಸುಮ್ಮನೆ  ಮರ್ಯಾದೆ ಕಳಕ್ಕೊಂಬ  ದುಃಸಾಹಸಕ್ಕೆ ಆನು ಖಂಡಿತ ಕೈಹಾಕುತ್ತಿಲ್ಲೆ.

ಈ ಸಂದರ್ಭಲ್ಲಿ ಎನ್ನ ಒಬ್ಬ ಗೆಳೆಯ ಬಾಲ್ಯಲ್ಲಿ ತೆಂಗಿನ ಮರದ ಬಗ್ಗೆ ಬರೆದ ಒಂದು ಪ್ರಬಂಧ ನೆಂಪು ಆವುತ್ತಾ ಇದ್ದು.  ಅದರಲ್ಲಿ ಅವ ತನಗಿಪ್ಪ ಸಮಸ್ತ ಜ್ಹಾನವನ್ನೂ ಧಾರೆ ಎರದು  ತೆಂಗಿನಮರದ ಸರ್ವ ಉಪಯೋಗಂಗಳನ್ನೂ ಎಳೆಎಳೆಯಾಗಿ ಬಿಡಿಸಿ ಬರದಿತ್ತಿದ್ದ. ಮಳೆಗಾಲಲ್ಲಿ ಕಾಲುನೀಡಿ ಕೂದುಗೊಂಡು ಸುಟ್ಟು ಹಾಕಿದ ಹಲಸಿನ ಹಪ್ಪಳಕ್ಕೆ ತೆಂಗಿನೆಣ್ಣೆ ಸವರಿ, ಕಾಯಿತುಂಡು ಸೇರಿಸಿ ತಿಂಬ ರುಚಿವಿಶೇಷ,  ಮನೆ ಜೆಂಬ್ರಲ್ಲಿ ತೆಂಗಿನ ಮಡಲು ಹಾಕಿದ ಜಾಲಿನ ಚಪ್ಪರದ ಒಳ ಕಂಬಾಟ ಆಡುವ ವಿಷಯ ಎಲ್ಲಾ ಸೇರಿದ ಅವನ ಬರವಣಿಗೆಯ ಶೈಲಿಗೆ ಮನಸೋತ ಶಾಲೆಯ  ಮಾಷ್ಟ್ರಂಗೆ ಕೆಲವು ಕ್ಷಣಕ್ಕಾದರೂ ತನ್ನ ಸ್ವಂತ ಬಾಲ್ಯಕ್ಕೆ ಮರಳಿದ ಮಧುರ ಅನುಭವ ಆಗಿಪ್ಪಲೇ ಬೇಕು.   ಆದರೆ ಎಷ್ಟೇ ಬರದರೂ ಮಾಷ್ಟ್ರ ಬರಕ್ಕೊಂಡು ಬಪ್ಪಲೆ ಹೇಳಿದ ಒಂದು ಪುಟ  ಭರ್ತಿ ಆಗದ್ದ ಕಾರಣ, ಈ ಮಾಣಿ ಇನ್ನೂ ರಜ ಬುದ್ಧಿವಂತಿಕೆ ಉಪಯೋಗಿಸಿದ.  ಒಳುದ ಅರ್ಧ ಪುಟಲ್ಲಿ ತೆಂಗಿನ ಮರದ ಬುಡಲ್ಲಿ ತಾಡುವ ದನಂಗಳ ಕಟ್ಟಿ ಹಾಕುವ ವಿಷಯ ನೆಂಪಾಗಿ ಅದರ ಬಗ್ಗೆ  (ದನದ ಕೊಂಬಿನ ವರ್ಣನೆಯೂ ಸೇರಿ) ಸುಮಾರು ವಿವರಂಗಳ ಸೇರಿಸಿದ.  ಹಾಂಗೇ ಮುಂದುವರುದು, ದನದ ಹಾಲು ಮತ್ತದರ ವಿವಿಧ ಉತ್ಪನ್ನಂಗೊ,  ಗೊಬ್ಬರ ಮತ್ತು ಸಾವಯವ ಕೃಷಿ ಇತ್ಯಾದಿ ಸಕಲ ವಿಷಯಂಗಳನ್ನೂ ಒಳಗೊಂಡ  ಮಹಾಪ್ರಬಂಧವನ್ನೇ ಮಂಡಿಸಿಬಿಟ್ಟ.  ಕೊನೆಗೂ ಅದರ ಓದಿ ಮುಗಿಶಿ ಅಪ್ಪಗ  ಅರ್ಜುನಂಗೆ ಆದ ವಿಶ್ವ ರೂಪ ದರ್ಶನದ ಅನುಭವವೇ ಎನಗುದೇ ಆತು.   ಎನಗೆ ಕನ್ನಡ ಸಾಹಿತ್ಯ ಪ್ರಪಂಚದ ಮೊತ್ತ ಮೊದಲ ಪರಿಚಯ ಆದ್ದದು ಈ ಪ್ರಬಂಧದ ಮೂಲಕವೇ ಹೇಳಿ ನಿಸ್ಸಂಕೋಚವಾಗಿ ಹೇಳ್ಳಕ್ಕು.

- ಬಾಪಿ / ೨೩.೦೯.೨೦೦೯

Monday, September 21, 2009

ಶ್ವಾನಪ್ರಿಯರು

ಒಂದರಿ ಒಂದು ನಾಯಿ ಉಸುಲು ಕಟ್ಟಿ, ಜೀವ ಬಿಟ್ಟು ಓಡಿಗೊಂಡಿತ್ತಡ.  ಅದರ ಕಂಡು ಇನ್ನೊಂದು ನಾಯಿ, "ಎಂತ ಸಂಗತಿ ? ಎಂತಕೆ ಮರ್ಲು ನಾಯಿ ಕಚ್ಚಿದವರ  ಹಾಂಗೆ ಓಡುತ್ತಾ ಇದ್ದೆ ?" ಹೇಳಿ ಕೇಳಿತ್ತಾಡ. ಅಂಬಗ ಈ ನಾಯಿ, "ಸಂಗತಿ ಎಂತ ಹೇಳಿರೆ, ಹತ್ರಾಣ ಮಾರ್ಗಲ್ಲಿ ಒಂದು ಹೊಸ ಕರೆಂಟಿನ ಕಂಬ ನೆಟ್ಟಿದವಡ. ಅದರ ಉದ್ಘಾಟನೆ ಮಾಡುವೊ ಹೇಳಿ ಹೋವುತ್ತಾ ಇದ್ದೆ.   ಸುಮ್ಮನೆ ಕೊರಪ್ಪಿ, ಗೌಜಿ ಮಾಡಿ ಎಲ್ಲಾ ನಾಯಿಗೊಕ್ಕೂ ಗೊಂತಪ್ಪ ಹಾಂಗೆ ಮಾಡೆಡ, ನೀನು ಬೇಕಾರೆ ಎನ್ನೊಟ್ಟಿಂಗೆ ಬಾ"  ಹೇಳಿತ್ತಾಡ.  

ಇತ್ತೀಚೆಗೆ ಬೆಂಗ್ಳೂರು ಮಹಾನಗರಲ್ಲಿ ಕಾಟು ನಾಯಿಗಳ ಹಾವಳಿ ತಡವಲೆಡಿಯದ್ದೆ ಸಾರ್ವಜನಕರಿಂಗೆ ತೊಂದರೆ ಆಗಿಪ್ಪಗ ಸರಕಾರದವು ನಾಯಿಗಳ ಹಿಡಿವ ಕೆಲಸಲ್ಲಿ ವಿಶೇಷ ತರಬೇತಿ ಇಪ್ಪವರ  ಕೇರಳಂದ  ಬಪ್ಪಲೆ ಮಾಡಿ   ಉಪದ್ರ ಕೊಡುವ ನಾಯಿಗಳ ಹಿಡಿದು ಗೂಡುಗಳಲ್ಲಿ ತುಂಬಿಸಿ ತೆಕ್ಕೊಂಡು ಹೋಪ ವ್ಯವಸ್ಥೆ ಮಾಡಿತ್ತಿದ್ದವು.   "ಕಚ್ಚುದು ನಾಯಿಗಳ ಹುಟ್ಟುಗುಣ" ಹೇಳುವ ಸಾಮಾನ್ಯಜ್ಞಾನವುದೇ ಇಲ್ಲದ್ದೆ ತಮ್ಮ ಮೇಲೆ ದೌರ್ಜನ್ಯ ಎಸಗುತ್ತಾ ಇಪ್ಪ ಸರಕಾರದ ವರ್ತನೆಯ ಖಂಡಿಸಿ ಠರಾವು ಮಂಡನೆ ಮಾಡುದರ ಮೂಲಕ ಅಸಮಾಧಾನ ವ್ಯಕ್ತಪಡಿಸುಲೆ ಹೇಳಿ ಅಖಿಲ ಭಾರತ ಶ್ವಾನ ಹಿತರಕ್ಷಣಾ ಸಮಿತಿ (ನೋಂ) - ಇವು  ಬೆಂಗ್ಳೂರಿಲ್ಲ್ಲಿಒಂದು ಮಹಾಸಭೆಯ  ಏರ್ಪಡಿಸಿದವಡ.  ಸಮ್ಮೇಳನದ ಶುಭದಿನದಂದು ಭಾರತದ ಎಲ್ಲಾ ಪ್ರದೇಶಂಗಳಿಂದ ವಿವಿಧ ರೀತಿಲಿ ಕೊರಪ್ಪುವ, ಬೇರೆ ಬೇರೆ ಬಣ್ಣ, ಗಾತ್ರದ ನಾಯಿಗೊ ಬಂದು ಸೇರಿದವಡ.  ಇಷ್ಟೆಲ್ಲಾ ವಿಭಿನ್ನತೆ ಇದ್ದರೂ ಸೇರಿದ ನಾಯಿಗೊ ಎಲ್ಲಾ ತಮ್ಮ ಸಂಪ್ರದಾಯದ ರೀತಿಲಿ ಬೀಲ ಆಡಿಸಿ ಉಭಯ ಕುಶಲೋಪರಿ ವಿಚಾರಿಸಿಗೊಂಡಿತ್ತಿದವಡ.  ಆದರೆ, ಕೆಲವು ನಾಯಿಗೊ ಮಾತ್ರ ಸಂಪ್ರದಾಯಕ್ಕೆ ಅಪಚಾರ ಹೇಳಿ ಕಾಂಬ ಹಾಂಗೆ ಬೀಲವ ಮೇಲಂದ ಕೆಳಂಗೆ ಆಡಿಸಿಗೊಂಡಿತ್ತಿದ್ದವಡ.  ಇದರ ಕಂಡು ಸಮ್ಮೇಳನದ ಸ್ವಾಗತ ಸಮಿತಿಯವಕ್ಕೆ ಇವು ಬ್ಯಾರಿಗಳ ದೇಶಂದ ಬೇಲಿನುಗ್ಗಿ ಬಂದ  ಗೂಢಚಾರಿಗೊ ಆಗಿಕ್ಕೋ ಹೇಳಿ ರಜ ಅನುಮಾನ ಬಂದು, ಆ ನಾಯಿಗಳ ಸಮ್ಮೇಳನದ ಚಪ್ಪರಂದ ಅತ್ಲಾಗಿ ಕರಕ್ಕೊಂಡು ಹೋಗಿ, "ನಿಂಗೊ ಯಾವ ಸೀಮೆಯವು ? ನಿಂಗಳ ಬೀಲ ಆಡಿಸುವ ಕ್ರಮ ತುಂಬಾ ವಿಚಿತ್ರ ಕಾಣ್ತನ್ನೆ  ?" ಹೇಳಿ ಜೋರಿಲ್ಲಿ ಕೊರಪ್ಪಿ ಕೇಳಿದವಡ. ಅಷ್ಟಪ್ಪಗ ಅವು, "ಎಂಗೊ ಬೊಂಬಾಯಿಂದ ಬಂದವು. ಎಂಗಳದ್ದುದೇ ಮೂಲಲ್ಲಿ ನಿಂಗಳ ಸಂಪ್ರದಾಯದವೇ. ಆದರೆ, ಬೊಂಬಾಯಿಲಿ ಎಂಗೊಗೆ ಜನಸಾಂದ್ರತೆಂದಾಗಿ ಅಡ್ಡಡ್ಡ ಬೀಲ ಆಡಿಸುಲೆ ಜಾಗೆ ಸಾಕವುತ್ತಿಲ್ಲೆ. ಹಾಂಗಾಗಿ ಮೇಲಂದ ಕೆಳಂಗೆ   ಆಡಿಸುತ್ತೆಯೊ. ಎಷ್ಟೋ ತಲೆಮಾರಿಂದ ಅಲ್ಲಿಯೇ ಇಪ್ಪ ಕಾರಣ ಈಗ ಇದುವೇ ಅಭ್ಯಾಸ ಆಗಿ ಹೋಯಿದು.  ಕ್ಷಮಿ ಸೆಕ್ಕು"  ಹೇಳಿದವಡ.

ಈ ಶ್ವಾನ ಕಥಾಪಠನ ಎಂತಕೆ ಮಾಡಿದ್ದದು ಹೇಳಿರೆ, ದಿನಾ ಮಾಡುವ ಕಾಲ್ನಡಿಗೆಯ ವ್ರತಾಚರಣೆಯ ಸಂದರ್ಭಲ್ಲಿ ಸುಮಾರು ಶ್ವಾನಪ್ರಿಯರು ಕಾಂಬಲೆ ಸಿಕ್ಕುತ್ತವು.  ಇವರ ಒಟ್ಟಿಂಗೆ ಇಪ್ಪ ಭಯಂಕರ ಗಾತ್ರದ ನಾಯಿಗೊ ದೊಡ್ಡ ಹೊಟ್ಟೆಯ ತಮ್ಮ ಯಜಮಾನಂಗಳನ್ನೇ ಎಳಕ್ಕೊಂಡು ಹೋವುತ್ತಾ ಇಪ್ಪ ದೃಶ್ಯ ನೋಡ್ಳೆ ಭಾರೀ ಗಮ್ಮತಿರ್ತು.  ಕೆಲವು  ನಾಯಿಗೊಕ್ಕೆ ಸಂಕೋಲೆಯುದೇ ಇರ್ತಿಲ್ಲೆ. ಯಜಮಾನಂಗೊಕ್ಕೆ ತಮ್ಮ ನಾಯಿಗಳ ಮೇಲೆ ಅಷ್ಟುದೇ ಭರವಸೆ ! ಹೀಂಗೆ ಸಂಕೋಲೆ ಇಲ್ಲದ್ದ ನಾಯಿಗೊ ಎದುರು ಸಿಕ್ಕಿದರೆ, ನಿಜವಾಗಿ ವ್ಯಾಯಾಮಕ್ಕೋಸ್ಕರ ಕಾಲ್ನಡಿಗೆ ಮಾಡುವ ಎನ್ನ ಹಾಂಗಿಪ್ಪ ಪಾಪದವಕ್ಕೆ ಪ್ರಾಣಭಯಂದ ಎದೆಬಡಿತ ಜಾಸ್ತಿ ಆವುತ್ತು.  ನಾಯಿಗೊಕ್ಕೆ  ಸ್ವಾಮಿಭಕ್ತಿ ಇಪ್ಪದು ಅಶನ ಹಾಕುವವರ  ಮೇಲೆ ಮಾಂತ್ರ, ದಾರಿಲಿ ಹೋಪವರ ಮೇಲೆ ಎಲ್ಲ ಎಂತ ಪ್ರೀತಿ ಇರ್ತಿಲ್ಲೆ ಹೇಳುವ ಸಾಮಾನ್ಯಜ್ಞಾನ ಇಲ್ಲದ್ದ ಶ್ವಾನಪ್ರಿಯ ಯಜಮಾನಂಗಳ ಮೇಲೆ ವಿಪರೀತ ಕೋಪ ಬತ್ತು. 

ಇನ್ನು, ನಾಯಿಗಳ ಹೆರ ಕರಕ್ಕೊಂಡು ಹೋಗಿ ತಿರುಗುಸುವ ಮೂಲ ಉದ್ದೇಶ ವ್ಯಾಯಾಮ ಅಥವಾ ಸ್ವಚ್ಚ ಹವಾಸೇವನೆ ಆಂತೂ ಖಂಡಿತ ಅಲ್ಲ ಹೇಳುದು ಗುಟ್ಟಿನ ಸಂಗತಿ ಎಂತ ಅಲ್ಲ.  ಈ ನಾಯಿಗೊಕ್ಕೆ  ಎಂತಲ್ಲ ತಿಂಬಲೆ ಕೊಡುತ್ತವು ಹೇಳಿ ಗೊಂತಿಲ್ಲೆ.  ಅವು ಒಂದೊಂದು ಹೆಡಗೆ ಹೇಸಿಗೆ ಮಾಡಿ ಮಡುಗುತ್ತವು. ಇದರ ಮನೆಲಿ ಒತ್ತರೆ ಮಾಡ್ಲೆ ಪುರುಸೊತ್ತು ಆಗದ್ದ ಕಾರಣ, ಮಾರ್ಗದ ಕರೆಲಿ ಗಲೀಜು  ಮಾಡಿಸಿ  ತಮ್ಮ ಕೆಲಸ ಸುಲಭ ಮಾಡಿಗೊಂಬ ಬೇಜವಾಬ್ದಾರಿ ವ್ಯಕ್ತಿಗಳೇ ಇಂತಹ ಯಜಮಾನಂಗೊ.  ಬೇರೆಯವರ ಮನೆಯ ಗೇಟಿನ ಬುಡಲ್ಲಿ, ಅವು ಹಾಕಿದ ರಂಗೋಲಿಯ ಮೇಲೆಯೇ  ತಮ್ಮ ನಾಯಿಗೊ  ಹೇಸಿಗೆ ಮಾಡುದರ ನೋಡಿ ಖುಷಿ ಪಡುವ ವಿಘ್ನ ಸಂತೋಷಿಗಳೂ ಧಾರಾಳ ಇದ್ದವು.   ಎನ್ನ ವಾಹನವ ಮಾರ್ಗದ ಕರೆಲಿ ನಿಲ್ಲಿಸಿಪ್ಪಗ  ಅದರ  ಗಾಲಿಯ ಮೇಲೆ ಶ್ವಾನಮೂತ್ರಸಿಂಚನ ಆಗದ್ದ ದಿನ ಅಪರೂಪ  ಹೇಳ್ಳಕ್ಕು.   ಹೀಂಗಿಪ್ಪ ಮೂರ್ಖ, ಸಮಾಜದ್ರೋಹಿ ಶ್ವಾನಪ್ರಿಯರ  ನಡವಳಿಕೆ ನೋಡಿರೆ, ತಮ್ಮ ಮುಂದಿನ ಜನ್ಮಲ್ಲಿ ನಾಯಿ ಆಗಿ ಹುಟ್ಟುಲೆ ಈಗಲೇ ತಾಲೀಮು ನಡೆಸುತ್ತಾ ಇಪ್ಪ ಹಾಂಗೆ ಕಾಣ್ತು.

ಈ ವಿಷಯಕ್ಕೆ ಸಂಬಂಧ ಪಟ್ಟ ಹಾಂಗೆ, ಅಮೆರಿಕಾಕ್ಕೆ ಹೋಗಿಪ್ಪಗಾಣ ಒಂದು ಅನುಭವವ ಹೇಳಲೇ ಬೇಕು. ಎನ್ನ ನಯಾಗರಾಕ್ಕೆ ಕರಕ್ಕೊಂಡು ಹೋದ ಸಹೋದ್ಯೋಗಿ ಮಿತ್ರ ಒಬ್ಬ ಪರಸ್ಪರರ ಸ್ವಂತ ಜೀವನದ ವಿಷಯ ಪ್ರಸ್ತಾಪ ಮಾಡಿಗೊಂಡಿಪ್ಪಗ, ತನ್ನ ಒಂಟಿ ಜೀವನದ ಸಂಗಾತಿಯಾದ ೧೨ ವರ್ಷದ ನಾಯಿಯ ವಿಷಯವ ಅರ್ಧ ಘಂಟೆಯಷ್ಟು ದೀರ್ಘ ಕಾಲ ಅತ್ಯಂತ ಹೆಮ್ಮೆಂದ ವಿವರಿಸಿದ. ನಾವು ಮನೆಯ ಮಕ್ಕಳ ವಿಷಯಲ್ಲಿ  ವಹಿಸುವಷ್ಟೇ ಕಾಳಜಿ ಅವನ ನಾಯಿಯ ಕುರಿತಾದ ವಿವರಣೆಲಿಯೂ ಕಂಡತ್ತು.    ಆ ನಾಯಿ  ಹೇಂಗೆ ಅವನ ಜೀವನದ ಒಂದು  ಅವಿಭಾಜ್ಯ  ಅಂಗವೇ  ಆಗಿ ಹೋಯಿದು ಹೇಳುದು ಅವನ ಕಥೆಯ ಸಾರಾಂಶ.   ಎಲ್ಲಾ ಶ್ವಾನ ಪ್ರಿಯರಿಂಗೂ ತಮ್ಮ ಸಾಕುಪ್ರಾಣಿಗಳ ಮೇಲೆ ಇಷ್ಟೇ ನೈಜವಾದ ಪ್ರೀತಿ ಇಕ್ಕು.   ಆದರೆ, ಆ ಪ್ರೀತಿಯ ಸಮಾಜಲ್ಲಿಪ್ಪ ಬೇರೆಯವಕ್ಕೆ ತೊಂದರೆ ಆಗದ್ದ ಹಾಂಗೆ ನಿಭಾಯಿಸುವ ಅಭ್ಯಾಸ ಮಾಡೆಕ್ಕು ಹೇಳಿ ಏಕೆ ಗೊಂತಾವುತ್ತಿಲ್ಲೆ ?      

ಶ್ವಾನಂಗಳ ಸ್ವಾಮಿನಿಷ್ಠೆಯನ್ನೇ ತಮ್ಮ ಸಂಸ್ಥೆಯ ಲಾಂಛನವಾಗಿ ಮಾಡಿಗೊಂಡ ಸಿಂಡಿಕೇಟ್ ಬ್ಯಾಂಕಿನ  ಆಢಳಿತವರ್ಗಕ್ಕೆ ಅಭಿನಂದನೆ ಹೇಳಲೇ ಬೇಕು.   ಆದರೆ,  ಸದರಿ ಬ್ಯಾಂಕಿನ ನೌಕರರು ಬ್ಯಾಂಕಿಂಗೆ ಬಂದ ಗ್ರಾಹಕರ ಕಂಡು  ನಾಯಿಗಳ ಹಾಂಗೆ ಕೊರಪ್ಪುತ್ತಾ ಇಪ್ಪದರ ನೋಡಿರೆ, ಇವು ತಮ್ಮ ಬ್ಯಾಂಕಿನ ಲಾಂಛನದ ಮೂಲ ಕಲ್ಪನೆಯ ತಪ್ಪು ಗ್ರಹಿಕೆ ಮಾಡಿಗೊಂಡಿಪ್ಪದು ಸ್ಪಷ್ಟ ಆಪ್ಪದಲ್ಲದ್ದೆ, ಅವರ  ಮುಗ್ಧತೆ ಬಗ್ಗೆ ಕನಿಕರ ಹುಟ್ಟುತ್ತು.  ಕೊನೆಯದಾಗಿ,  ಮೂಕಪ್ರಾಣಿಯಾದ ಶ್ವಾನದ ಪರವಾಗಿ ಒಂದು ಮನವಿ  :  ವಿಶ್ವಾಮಿತ್ರ ನಾಯಿ ಮಾಂಸ ತಿಂದ  ಪುರಾಣದ ಕಥೆಯ ಸತ್ಯಾಸತ್ಯತೆ ಬಗ್ಗೆ  ಒಂದು ನಿಷ್ಪಕ್ಷವಾದ ತನಿಖೆ ಆಯೆಕ್ಕು ಹೇಳಿ ಇತಿಹಾಸಕಾರರ ಆನು ಆಗ್ರಹ ಪೂರ್ವಕವಾಗಿ ಕೇಳಿಗೊಳ್ತೆ.   ಇದರ ಒಟ್ಟಿಂಗೇ, ಶ್ವಾನ ಮಾಂಸ ಭಕ್ಷಣೆಯ ನಂತರ ವಿಶ್ವಾಮಿತ್ರನ ವರ್ತನೆಲಿ ಎಂತಾರೂ ವ್ಯತ್ಯಾಸ ಕಂಡು ಬಂದಿತ್ತೋ, ಶ್ವಾನ ಜ್ವರದ ಬಾಧೆ  ಎಂತಾರೂ ಬಂದಿತ್ತೋ ಹೇಳುವ ವಿಷಯದ ಬಗ್ಗೆಯೂ  ವಿವರಂಗಳ ಬಹಿರಂಗ  ಪಡಿಸೆಕ್ಕು ಹೇಳಿ ವಿನಂತಿ ಮಾಡಿಗೊಳ್ತೆ .

- ಬಾಪಿ / ೨೧.೦೯.೨೦೦೯

Saturday, September 19, 2009

ಭಿನ್ನತೆಲಿಪ್ಪ ಏಕತೆ

ಇತ್ತೀಚೆಗೆ ಬೆಂಗ್ಳೂರಿನ ಹೊರವಲಯಲ್ಲಿ ಇಪ್ಪ ಒಂದು ಚರ್ಚಿನ ಮೇಲೆ ಯಾರೋ ಕಲ್ಲು ಇಡ್ಕಿ ರಜ ಗಲಾಟೆ ಆತು.  ಕಲ್ಲು ಇಡ್ಕಿದವು ಅವರವರ ಮನೆಗೆ ಹೋಗಿ  ಚಿಲಕ ಹಾಕಿ ಮನುಗುವಂದ  ಮೊದಲೇ ಸಿದ್ದರಾಮಯ್ಯ (ಯಾವ ವಿಷಯಕ್ಕೇ ಆದರೂ ಪ್ರತಿಕ್ರಿಯೆ ಎಂತ ಕೊಡೆಕ್ಕು ಹೇಳುದರ ಹುಟ್ಟುವಗಳೇ  "ಸಿದ್ಧ” ಮಾಡಿಗೊಂಡು ಬಂದ ಕಾರಣ ಇವಂಗೆ ಈ  ಹೆಸರು ತುಂಬಾ ಒಂಬುತ್ತು) ಮತ್ತು ದೇವೇಗೌಡನ ಹಾಂಗಿಪ್ಪ ರಾಜಕಾರಣಿಗೊ, ಯೆಡ್ಯೂರಪ್ಪ ರಾಜಿನಾಮೆ ಕೊಡೆಕು ಹೇಳಿ ಬೊಬ್ಬೆ ಹಾಕಿದವು.  ಈ ಘಟನೆಂದ ಕೇವಲ ಎರಡು ದಿನ ಮೊದಲು  ಸುಮಾರು ವರ್ಷ ಇಂದಿರಾಗಾಂಧಿಯ ಮನೆಲಿ ಪರಿಕರ್ಮಿ ಆಗಿ ಸಲ್ಲಿಸಿದ ಸೇವೆಯ ಪ್ರತಿಫಲವಾಗಿ ಕರ್ನಾಟಕದ ರಾಜ್ಯಪಾಲ ಆದ ಹನ್ಸರಾಜ್  ಭಾರದ್ವಾಜ್  ಹೇಳುವ ವ್ಯಕ್ತಿಯುದೇ ಕರ್ನಾಟಕಲ್ಲಿ ಅಲ್ಪಸಂಖ್ಯಾತರಿಂಗೆ ಭದ್ರತೆ ಇಲ್ಲೆ ಹೇಳುವ ಹೇಳಿಕೆ ಕೊಟ್ಟು ಶುದ್ದಿ ಮಾಡಿತ್ತಿದ್ದ.    ಶ್ರೀಕೃಷ್ಣ ಪರಮಾತ್ಮ  ಮತ್ತೆ ಮತ್ತೆ ಹುಟ್ಟಿ ಬತ್ತೆ  ಹೇಳಿದ್ದು  ಧರ್ಮ ಸಂಸ್ಥಾಪನೆಯ ಹಾಂಗಿಪ್ಪ ಘನ ಉದ್ದೇಶಕ್ಕಾದರೆ, ಈ ಮೇಲೆ ಹೆಸರಿಸಿದ ವ್ಯಕ್ತಿಗೊ   (ಇನ್ನು ತಿರುಗ ಹುಟ್ಟಿ ಬಪ್ಪಲಿಲ್ಲೆ ಹೇಳುದು ಖಂಡಿತ ಆದ ಕಾರಣ, ಬಂದರೂ ಮನುಷ್ಯ ಜಾತಿಲಿ ಬಪ್ಪದು ಸಂಶಯ ಆದ ಕಾರಣ) ಈ ಸರ್ತಿಲಿಯೇ  ನಮ್ಮ ಭರತಖಂಡಲ್ಲಿ  ಅಲ್ಪಸಂಖ್ಯಾತರ ಹಿತರಕ್ಷಣೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮುಗಿಶಿಕ್ಕಿಯೇ ಹೋಪೊ ಹೇಳಿ ದೃಢ ಸಂಕಲ್ಪ ಮಾಡಿದ ಹಾಂಗೆ ಕಾಣ್ತು. 

ಆಸ್ಟ್ರೇಲಿಯಾದ   ಪ್ರಧಾನ ಮಂತ್ರಿ ತನ್ನ ದೇಶ ಕ್ರಿಶ್ಚಿಯನ್ ಧರ್ಮದ ಸಂಪ್ರದಾಯಂಗಳ ಮೇಲೆ   ನಂಬಿಕೆ ಮಡಿಕ್ಕೊಂಡು ಅದರಂತೆ ಆಢಳಿತ ನಡೆಶಿಗೊಂಡು ಹೋಪ ದೇಶ ಹೇಳಿಯೂ, ಬೇರೆ ಧರ್ಮೀಯರಿಂಗೆ ಅಲ್ಲಿ ಇಪ್ಪಲೆ ಮುಕ್ತ ಅವಕಾಶ ಇದ್ದರೂ ಕ್ರಿಶ್ಚಿಯನ್  ನಂಬಿಕೆಗೊಕ್ಕೆ ಧಕ್ಕೆ ಅಥವಾ ಅವಮಾನ ಆಗದ್ದ ಹಾಂಗೆ ಜೀವನ ಮಾಡೆಕ್ಕು ಹೇಳುವ  ಹೇಳಿಕೆ (ಬೆದರಿಕೆ)ಯ ಘಂಟಾಘೋಷವಾಗಿ ಹೇಳಿದ್ದದು ಜಗಜ್ಜಾಹೀರು ಆಯಿದು.   ಒಂದು ದೇಶಲ್ಲಿ ಶಾಂತಿ ಕಾಪಾಡುಲೆ ಇದರಿಂದ ಸುಲಭ ಉಪಾಯ ಬೇರೆ ಎಂತ ಇದ್ದು ? ಹೆರಂದ ಬಂದವು ಹೇಂಗಿರೆಕೋ ಹಾಂಗೇ ಇದ್ದರೆ ಚಂದ.  ಶ್ರೀಲಂಕಲ್ಲಿ ತಮಿಳರು ಬೀಲ ಬಿಚ್ಚಲೆ ಹೋಗಿ ಇದ್ದಷ್ಟು ದಿನ ಊರವಕ್ಕೆಲ್ಲಾ ಉಪದ್ರ ಕೊಟ್ಟು ಅಖೇರಿಗೆ ಕೈಸುಟ್ಟುಗೊಂಡ ಕಥೆ ಎಲ್ಲೋರಿಂಗೂ ಗೊಂತಿಪ್ಪದೇ.  ಭಾರತಲ್ಲಿ ಮಾಂತ್ರ ಬಹುಸಂಖ್ಯಾತರು ಬೇರೆಯವಕ್ಕಾಗಿ ತ್ಯಾಗ ಮಾಡಿಗೊಂಡು, ಎಂತ ಮಾಡಿರೆ ಯಾರಿಂಗೆ ಬೇಜಾರ ಅಕ್ಕೋ ಹೇಳಿ ಜಾಗ್ರತೆ ಮಾಡಿಗೊಂಡು ಹೀನಾಯವಾಗಿ ಬದುಕ್ಕೆಕ್ಕಾದ ಪರಿಸ್ಥಿತಿ ಇಪ್ಪದು.  ಸಮಾಜ, ದೇಶಕ್ಕಿಂತ ಮೊದಲು ತಮ್ಮ ಸ್ವಂತ ಹಿತವ ನೋಡುವ ರಾಜಕಾರಣಿಗೊ ನಮ್ಮಲ್ಲಿ ಇಪ್ಪದೇ ಇದಕ್ಕೆಲ್ಲಾ ಕಾರಣ ಹೇಳುವ ಸತ್ಯ  ಸಂಗತಿಯ ಪದೇ ಪದೇ ಹೇಳಿ ದೊಂಡೆ  ಒಣಗಿಸಿ ಗೊಂಬ ದುರ್ದೆಸೆ ನಮ್ಮದಾಗಿ ಹೋತು. ಎಂತ ಮಾಡುದು ?

ಈಗ ತಿರುಗ ಚರ್ಚಿನ ಮೇಲೆ ಆದ ಧಾಳಿಯ ವಿಷಯಕ್ಕೆ ಬಪ್ಪೊ.  ರಾಜಕಾರಣಿಗೊ ಅಷ್ಟೆಲ್ಲಾ ಬೊಬ್ಬೆ ಹಾಕುತ್ತಾ ಇದ್ದರೂ ಆ ಚರ್ಚಿನ ಪಾದ್ರಿಗೊ ಯಾರೂ ಎಂತದೂ ಬಾಯಿ ಬಿಟ್ಟಿದವಿಲ್ಲೆ. ಅದಾಗಿ ಎರಡು ದಿನಲ್ಲಿ ಆ ಘಟನೆ  ಸದ್ರಿ ಚರ್ಚಿಂಗೆ ಬಪ್ಪ ಎರಡು ಗುಂಪುಗಳ ಮಧ್ಯದ ವೈಮನಸ್ಯಂದ ಆದ ಸಂಗತಿ ಹೇಳುದು ಬಹಿರಂಗ ಆತು.  ನಿಜ ವಿಷಯ ಎಂತ ಹೇಳಿರೆ, ಹಿಂದೂ ಧರ್ಮಲಿಪ್ಪ ಮೂರ್ತಿಪೂಜೆ ಇತ್ಯಾದಿಗಳ  ಮೂದಲಿಸಿಗೊಂಡು  ಒಂದೇ ಏಸು, ಒಂದೇ ಬೈಬಲ್ ಹೇಳಿಗೊಂಡು ತಿರುಗುವ ಕ್ರಿಶ್ಚಿಯನರಲ್ಲಿ ೧೪೬ ವಿವಿಧ "ಜಾತಿಗೊ" (ಅಥವಾ ಪಂಗಡಂಗೊ) ಇದ್ದಾಡ.  (ಇದು ಬರೀ ಕೇರಳದ ಲೆಕ್ಕಾಚಾರ ಮಾತ್ರ. ಬೇರೆ ಪ್ರದೇಶಂಗಳ ಸೇರಿಸಿರೆ  ಇನ್ನುದೇ ಜಾಸ್ತಿ ಇಪ್ಪಲೂ ಸಾಕು.)  ಇವರ ಪ್ರಾರ್ಥನಾ ಮಂದಿರಂಗಳೂ ಪ್ರತ್ಯೇಕ ಆಡ !  ಸಿರಿಯನ್ ಕ್ಯಾಥೊಲಿಕ್, ಲ್ಯಾಟಿನ್ ಕ್ಯಾಥೋಲಿಕ್, ಮಾರ್ಥೋಮಾ, ಪೆಂಟೆಕೋಸ್ಟ್, ಸಾಲ್ವೇಶನ್  ಆರ್ಮಿ, ಸೆವೆಂತ್ ಡೇ ಅಡ್ವೆಂಟಿಸ್ಟ್, ಆರ್ಥೋಡಾಕ್ಸ್, ಜಕೋಬೈಟ್ ಇತ್ಯಾದಿ ವಿವಿಧ ಪಂಗಂಡಂಗಳ ಪ್ರತ್ಯೇಕ ಚರ್ಚುಗೊ ಇಪ್ಪದು ನಮ್ಮ ಬಹುಶೃತ ಮಾಧ್ಯಮದವರ ಅವಗಾಹನೆಗೆ ಬಾರದ್ದೆ ಇಪ್ಪದು ಬೇಜಾರದ ಸಂಗತಿ. ಅಥವಾ ಗೊಂತಿದ್ದರೂ ಜಾಣ ಕುರುಡುತನ ಆಗಿಪ್ಪಲೂ ಸಾಕು.   ಇಂತದೇ ಗುಟ್ಟು ಮುಸ್ಲಿಮರಲ್ಲಿಯೂ ಇಪ್ಪದು ನಮ್ಮಲ್ಲಿ ಹೆಚ್ಚು ಜನಕ್ಕೆ ಗೊಂತಿರ.  ಸುನ್ನಿ, ಶಿಯಾ, ಅಹ್ಮದೀಯ, ಸುಫಿ, ಮುಜಾಹಿದ್ದೀನ್  ಇತ್ಯಾದಿ  ಗುಂಪುಗೊಕ್ಕೆ ಪ್ರತ್ಯೇಕ ಪ್ರತ್ಯೇಕ ೧೩ ನಮುನೆಯ ಮಸೀದಿಗೊ ಇದ್ದಡ.  (ಮುಸ್ಲಿಮರ ಈ ಗುಂಪುಗಾರಿಕೆಯ  ಉಪಯೋಗಿಸಿಗೊಂಡೇ ಅಮೆರಿಕಾದವು ಇರಾಕಿನ ಮೇಲೆ ಧಾಳಿ ಮಾಡಿದ್ದದು !)

ಕ್ರಿಶ್ಚಿಯನರು, ಬ್ಯಾರಿಗಳ ನಿಜ ಪುರಾಣ  ಹೀಂಗಾದರೆ   ಸಾವಿರಗಟ್ಳೆ ಧರ್ಮ ಗ್ರಂಥಂಗೊ, ಭಾಷ್ಯಂಗೊ, ೩೩ ಕೋಟಿ ದೇವರುಗೊ, ಜಾತಿಗೊ ಇತ್ಯಾದಿಗಳ ಒಳಗೊಂಡಿಪ್ಪ ವಿಶಾಲ ಹಿಂದೂ ಸಮಾಜಕ್ಕೆಲ್ಲಾ ಒಂದೇ ನಮುನೆ ದೇವಸ್ಥಾನ !  ಹಾಂಗಿದ್ದರೂ,  ಗುರುವಾಯೂರಿನ ಹಾಂಗಿಪ್ಪ ಸಂಪ್ರದಾಯವಾದಿ ದೇವಸ್ಥಾನಂಗಳಲ್ಲಿ "ಹಿಂದುಗೊ ಅಲ್ಲದ್ದವಕ್ಕೆ" ಪ್ರವೇಶ ನಿಷೇಧಿಸಿದರೆ ಅದು ಮಾಧ್ಯಮದವಕ್ಕೆ ದೊಡ್ಡ ಚರ್ಚೆಯ ವಿಷಯ ಆವುತ್ತು.   ಕಾಟು ರಾಜಕಾರಣಿಗೊ ಇಲ್ಲದ್ರೆ ಹಿಂದೂ ಸಮಾಜ ಯಾವಗಂಗೂ ಬಲಿಷ್ಠ  ಆಗಿ ಇಕ್ಕು.  ಭಾರತಲ್ಲಿ  ಸುಖ, ಶಾಂತಿಯೂ ಇಕ್ಕು.  ನಮ್ಮ ಸನಾತನ ಧರ್ಮಲ್ಲಿ ಬದಲಾದ ತತ್ಕಾಲದ ಪರಿಸ್ಥಿತಿಗೆ ಅನುಗುಣವಾದ  ಸುಧಾರಣೆಗಳ ಅಗತ್ಯ ಖಂಡಿತವಾಗಿ ಇದ್ದರೂ, ಹಿಂದುಗೊಕ್ಕೆ ಹಿಂದೂಗಳಿಂದ  ಯಾವ ಆತಂಕವೂ ಇಲ್ಲೆ.  ಹಿಂದೂಗಳ ನಿಜವಾದ  ವೈರಿಗೊ  ಕೋಂಗ್ರೇಸಿಲಿಪ್ಪ ಹಿಂದೂ ರಾಜಕಾರಣಿಗೊ.  ಇಂತಹ   ಸ್ವಾಭಿಮಾನಹೀನ, ಸಮಯಸಾಧಕರಿಂಗೆ  ಧಿಕ್ಕಾರವಿರಲಿ.

-ಬಾಪಿ  / ೧೯.೦೯.೨೦೦೯        

Monday, August 24, 2009

ಗಣೇಶ ಮಹಿಮೆ

ಎಲ್ಲೋರೂ ಚೌತಿಯ ಕಡುಬು, ಚಕ್ಕುಲಿ, ಪಂಚಕಜ್ಜಾಯ ಇತ್ಯಾದಿ ಭಕ್ಷ್ಯಂಗಳ ಯಥೇಚ್ಛ  ಸೇವಿಸಿ, ಕರಗಿಸಿಗೊಂಡು ಸೌಖ್ಯಲ್ಲಿ ಇದ್ದವು ಹೇಳಿ ಗ್ರೇಶಿಗೊಂಡು, ಎಲ್ಲೋರಿಂಗೂ ಒಳ್ಳೆ ಬುದ್ಧಿ,  ಆಯುರಾರೋಗ್ಯ ಕೊಡು ಹೇಳಿ ಗಣಪತಿಯ ಪ್ರಾರ್ಥನೆ  ಮಾಡ್ತೆ.    
ಗಣಪತಿಯ ದೇಹದ ಅಂಗಂಗಳ ಅನುಪಾತ ವಿಚಿತ್ರವಾಗಿ ಕಂಡರೂ, ಅವನಷ್ಟು ಚಂದದ ದೇವರು ಬೇರೆ ಇಲ್ಲೆ ಹೇಳಿರೆ ತಪ್ಪಾಗ.   ಇಪ್ಪದು ಆನೆಯ ತಲೆ ಆದರೂ  ಹಾಸ್ಯ, ಸಂಗೀತವೇ ಮೊದಲಾದ ವಾಙ್ಮಯ ವಿಷಯಂಗಳಲ್ಲಿ   ವಿಶೇಷ ಆಸಕ್ತಿ ಮತ್ತು ಪ್ರತಿಭೆ ಇಪ್ಪ ದೇವರು ಹೇಳಿಯೇ ಇವ ಹೆಸರುವಾಸಿ.   ವ್ಯಂಗ್ಯಚಿತ್ರಕಾರರಿಂಗಂತೂ  ಇವನ ಕಂಡರೆ ಭಾರಿ ಪ್ರೀತಿ.  ಹಾಂಗಾರೆ, ಚೌತಿಯ ಈ ಶುಭ ಸಂದರ್ಭಲ್ಲಿ ಗಣಪತಿಯ ಮಹಿಮೆಯ ತಿಳ್ಕೊಂಡು, ಅವನ ದೇಹದ  ಅಂಗಂಗಳಿಂದ ಸಿಕ್ಕುವ ಸಂದೇಶಂಗಳಿಂದ  ಸ್ಪೂರ್ತಿ  ಪಡವ ಪ್ರಯತ್ನ ಮಾಡುವೊ.    ಇದಕ್ಕೆ ಅನುಕೂಲ ಅಪ್ಪ ಹಾಂಗಿಪ್ಪ  ಚಿತ್ರ ಒಂದರ  ಇದರೊಟ್ಟಿಂಗೆ ಲಗತ್ತಿಸಿದ್ದೆ. 
- ಬಾಪಿ

Saturday, August 15, 2009

ಶುಭಾಶಯ

ಭೋಜನಕಾಲೇ ಅಂಕಣದ ಸರ್ವ ಸದಸ್ಯರಿಂಗೂ ೬೩ನೇ ಸ್ವಾತಂತ್ರ್ಯೋತ್ಸವದ ಶುಭಾಶಯಂಗೊ.

ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದ ಯಾರಿಂಗೂ ನಮ್ಮ ಹಿರಿಯರು ಇದಕ್ಕಾಗಿ ಎಷ್ಟು ಕಷ್ಟ ಪಟ್ಟಿದವು ಹೇಳುದರ ಸರಿಯಾದ ಕಲ್ಪನೆ ಇಪ್ಪಲೆ ಸಾಧ್ಯ ಇಲ್ಲೆ.  ಸ್ವಾತಂತ್ರ್ಯ ಇದ್ದರೂ ಪ್ರಜಾಪ್ರಭುತ್ವ ಅಲ್ಲದ್ದ ದೇಶಂಗಳ ನೋಡಿರೆ, ಭಾರತ ದೇಶದ ಪ್ರಜೆಗಳಾಗಿಪ್ಪಲೆ ನಾವು ಎಷ್ಟು ಪುಣ್ಯ  ಮಾಡಿದ್ದು ಹೇಳಿ ತಿಳ್ಕೊಂಬಲಕ್ಕು.
ಭಾರತಲ್ಲಿ ಇಷ್ಟರ ವರೆಗೆ ಇಪ್ಪದು ರಾಜಕೀಯ ಸ್ವಾತಂತ್ರ್ಯ ಅಷ್ಟೆ.  ಹಸಿವು, ಬಡತನ, ಅನಕ್ಷರತೆ, ಭ್ರಷ್ಟಾಚಾರ, ಉಗ್ರಗಾಮಿಗಳ ಸಮಸ್ಯೆ, ನಕ್ಸಲುವಾದ ಇತ್ಯಾದಿಗಳಿಂದ ಸ್ವಾತಂತ್ರ್ಯ ಸಿಕ್ಕೆಕ್ಕಷ್ಟೆ. ಇದೆಲ್ಲರಿಂದ  ಮುಕ್ತಿ ಸಿಕ್ಕುಲೆ ಇನ್ನೂ   ೬೩ ವರ್ಷ ಕಾವ ಹಾಂಗೆ ಆಗದ್ದಿರಲಿ !

ವಂದೇ ಮಾತರಂ !
- ಬಾಪಿ

Friday, August 14, 2009

ನಮ್ಮ ಸಮಸ್ಯೆಗೊ-೩

(...ಮುಂದುವರುದ್ದು).. 

ಅನಾಗರಿಕ ನಡವಳಿಕೆ : ನಾವು ಬೇರೆ ದೇಶದವರ ಅಪಹಾಸ್ಯಕ್ಕೆ ಗುರಿ ಅಪ್ಪ ಹಾಂಗಿಪ್ಪ ಸುಮಾರು ನಡವಳಿಕೆಗೊ  ನಮ್ಮಲ್ಲಿ ಇದ್ದು.   ಎಷ್ಟೋ ವಿಷಯಲ್ಲಿ ಭಾರತ ಹೇಳಿರೆ ಹೀಂಗೇ  ಹೇಳುವ ಹಣೆಪಟ್ಟಿ ಬಪ್ಪಷ್ಟು ಹದಗೆಟ್ಟ ಅಭ್ಯಾಸಂಗಳ ನಾವು ರೂಢಿಸಿಗೊಂಡಿದು.  ಇವೆಲ್ಲಾ ನಮ್ಮ ಮನೋಧರ್ಮಕ್ಕೆ ಸಂಬಂಧಪಟ್ಟ ವಿಷಯಂಗೊ ಆದ ಕಾರಣ, ಒಂದೊಂದನ್ನೂ ಪ್ರತ್ಯೇಕ ವಿವರಿಸೆಕ್ಕಾದ ಅವಶ್ಯಕತೆ ಇಲ್ಲೆ.  ಎಲ್ಲವನ್ನೂ ಸೇರಿಸಿ ಒಟ್ಟಿಂಗೆ ಬರವದೇ ಸುಲಭ.  ಮತ್ತೆ  ಓದ್ಲುದೇ ಚೆಂದ !   ಇಂತಹ ನಡವಳಿಕೆಗಳ ಎನಗೆ ಕಂಡ ಮಟ್ಟಿಂಗೆ ಪಟ್ಟಿ ಮಾಡ್ತೆ.

ಸಿಕ್ಕಿದಲ್ಲಿ ಪೂರಾ ಕಸವು ಇಡುಕ್ಕಿ ಗಲೀಜು  ಮಾಡುದು, ಸಾರ್ವಜನಿಕ ಜಾಗೆಗಳಲ್ಲಿ ಮೂತ್ರ ವಿಸರ್ಜನೆ, ತುಪ್ಪೊದು (ಕೆಲವು ಜನಕ್ಕೆ ಬರೀ ತುಪ್ಪಿದರೆ ತೃಪ್ತಿ ಆವುತ್ತಿಲ್ಲೆ, ಕ್ಯಾಕರಿಸಿ ತುಪ್ಪಿದರೇ ಸಮಾಧಾನ), ಸಮಯ ಪಾಲನೆ ಮಾಡದ್ದಿಪ್ಪದು, ವಾಹನ ಬಿಡುವಗ ಅನವಶ್ಯಕ ಹಾರ್ನ್ ಹಾಕಿ ಹರಟೆ ಮಾಡುದು ಇತ್ಯಾದಿಗೊ ಈ ಪಟ್ಟಿಲಿ ಸೇರಲೇ ಬೇಕಾದ ಸಂಗತಿಗೊ. ಇನ್ನೂ ಯಾವುದಾದರೂ ಮುಖ್ಯದ್ದು ಬಿಟ್ಟು ಹೋಗಿದ್ದರೆ, ಸೇರಿಸಿಗೊಳೆಕ್ಕಾಗಿ ವಿನಂತಿ.   ಈ ವಿಷಯಂಗಳ ಕೂಲಂಕುಶ ವಿಮರ್ಶೆ ಮಾಡ್ಳೆ ಹೋದರೆ, ಸುಮಾರು ಸಂಗತಿಗೊ ಹೆರ ಬತ್ತು.  ಈ ಯಾವ ನಡವಳಿಕೆಗಳನ್ನೂ ಸಮರ್ಥಿಸಿಗೊಂಬಲೆ ಎಡಿಯದ್ದರೂ, ಯಾವುದರ ತೆಕ್ಕೊಂಡರೂ ಎರಡೂ ನಮುನೆ ವಾದ ಮಾಡ್ಳಕ್ಕು. ಉದಾಹರಣೆಗೆ, ಕಸವು ಇಡುಕ್ಕುವ ಅಭ್ಯಾಸವ ನೋಡುವೊ.  ನಮ್ಮಲ್ಲಿ  ತ್ಯಾಜ್ಯ ವಸ್ತುಗಳ ವಿಲೆವಾರು ಮಾಡ್ಳೆ ಸರಿಯಾದ  ವ್ಯವಸ್ಥೆ ಇಲ್ಲದ್ದಿಪ್ಪದು ಸರಕಾರದ ಬೇಜವಾಬ್ದಾರಿ.  ಹಾಂಗೆ ಹೇಳಿ ಇಪ್ಪ ಕಸವಿಂಗೆ ಇನ್ನೂ ಹೆಚ್ಚು ಕಸವಿನ ಸೇರುಸುದಕ್ಕೆ ನಮ್ಮ ಜನರ ಹಾಂಕಾರವೇ ಕಾರಣ.  ಹೀಂಗಿಪ್ಪ ಎಷ್ಟೊಂದು ಕೆಟ್ಟ ಚಾಳಿಗೊ ನಮ್ಮವಕ್ಕೆ ಜೀವನಕ್ರಮವೇ  ಆಗಿ ಹೋಯಿದು ಹೇಳುದು ದೇಶದ ದುರಂತ.  ಹಿಂದಂದ ಬಂದು ಎಡೆಬಿಡದ್ದೆ  ಹಾರ್ನ್ ಹಾಕುವ ವಾಹನದ ಚಾಲಕರ ಆನು ಎಷ್ಟೋ ಸರ್ತಿ ಗುರಾಯಿಸಿ ನೋಡಿದ್ದದಿದ್ದು.  ಆದರೆ, ಅವಕ್ಕೆ ಎನ್ನ ವರ್ತನೆಯೇ ವಿಚಿತ್ರ ಕಂಡದರ ಸುಮಾರು ಸರ್ತಿ ನೋಡಿ ಅನುಭವಿಸಿದ ಮೇಲೆ ಈ ಪ್ರಾಣಿಗೊ ಜನ್ಮಲ್ಲಿ ಉದ್ಧಾರ ಅಪ್ಪಲಿಲ್ಲೆ ಹೇಳಿ ಈ ವಿಷಯಲ್ಲಿ ಈಗ ತಲೆಕೆಡಿಸಿಗೊಂಬದರ ಸಂಪೂರ್ಣ ಬಿಟ್ಟಿದೆ.  ಒಟ್ಟಾರೆ ಹೇಳ್ತರೆ, ಹೆಚ್ಚಿನವಕ್ಕೆ ಇದೊಂದು ಅನೈಚ್ಛಿಕ  ಕಾರ್ಯ ಹೇಳುದರ ತಿಳ್ಕೊಂಬಲಕ್ಕು.

ಹಾಂಗಾರೆ, ಹೀಂಗಿಪ್ಪ ವಿಷಯಂಗಳಲ್ಲಿ ಬದಲಾವಣೆ ಆಯೆಕ್ಕಾದರೆ, ಮಕ್ಕೊ ಆಗಿಪ್ಪಗಳೇ ತಿಳಿಶಿ ಹೇಳೆಕ್ಕಷ್ಟೆ.  ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಂದ ಇಂತಹ ವಿಷಯಂಗಳಲ್ಲಿ ಬದಲಾವಣೆ ಅವಶ್ಯ ಹೇಳಿ ಸರಕಾರದವಕ್ಕೂ ಕಾಣೆಕ್ಕು. ನಮ್ಮ ಶಾಲೆಗಳ ಪಾಠಪುಸ್ತಕಂಗಳಲ್ಲಿ  civics  ಹೇಳುವ ವಿಷಯಕ್ಕೆ ಅತ್ಯಂತ ಹೆಚ್ಚು ಪ್ರಾಶಸ್ತ್ಯ ಕೊಟ್ಟು  ಕಲಿಶಿದರೆ ಒಳ್ಳೆದು.  ಈ ಪಾಠ ಮಾಡ್ಳೆ  ಸಮರ್ಪಕ ಅಧ್ಯಾಪಕರನ್ನೂ ನೇಮಿಸುದು ಅಷ್ಟೇ ಅವಶ್ಯ (ಮೀಸಲಾತಿಯ ಗೌಜಿಲಿ ಮಾಷ್ಟ್ರ ಅಪ್ಪಲೆ  ಪದವಿ ಪರೀಕ್ಷೆಲಿ ಕನಿಷ್ಟ ಅಂಕ ತೆಕ್ಕೊಂಡು ತೇರ್ಗಡೆ ಆದರೂ ಸಾಕಕ್ಕು.  ಆದರೆ, ಕನಿಷ್ಟ ಪಕ್ಷ ದಿನಾಗಳೂ ಮೀವ ಅಭ್ಯಾಸ ಆದರೂ ಇಪ್ಪವರ ಆಯ್ಕೆ ಮಾಡಿದರೆ ನಮ್ಮ ಮುಂದಿನ ಪೀಳಿಗೆಗೆ ಒಳ್ಳೆ ಮಾರ್ಗದರ್ಶನ ಮಾಡಿದ ಹಾಂಗಕ್ಕು).  ಇದಕ್ಕೆ ಬೇಕಾಗಿ ಒಂದು ಪ್ರತ್ಯೇಕ ನಾಗರಿಕ ನಡವಳಿಕೆಗಳ ಉತ್ತೇಜನ ಮಂತ್ರಾಲಯವನ್ನೇ ಹೊಸತ್ತಾಗಿ  ಸುರು ಮಾಡಿರೆ ಇನ್ನೂ ಒಳ್ಳೆದೇ !  

- ಬಾಪಿ  / ೧೪.೦೮.೨೦೦೯

Thursday, August 13, 2009

ನಮ್ಮ ಸಮಸ್ಯೆಗೊ-೨

 (...ಮುಂದುವರುದ್ದು)..

ಕಾಶ್ಮೀರ :  ಈ ಸಮಸ್ಯೆಯುದೇ  ನವಗೆ ಬ್ರಿಟಿಷರು ಕೊಟ್ಟ ಬಳುವಳಿ.   ಸ್ವಾತಂತ್ರ್ಯದ ಆಮಿಷಲ್ಲಿ  ಭಾರತ-ಪಾಕಿಸ್ತಾನಂಗಳ ಸೃಷ್ಟಿ ಮಾಡಿ ಇಬ್ಬರ ಮಧ್ಯೆ ಒಂದು ಎಡೆಬಿಡಂಗಿ ಕಾಶ್ಮೀರವನ್ನೂ ಮಡುಗಿದವು.  ಈ ವಿಷಯಕ್ಕೆ ಬೇಕಾಗಿ ಈಗಾಗಲೇ ೨ ಸರ್ತಿ ಭಾರತಕ್ಕೂ ಪಾಕಿಸ್ತಾನಕ್ಕೂ ಯುದ್ಧವೂ ಆಯಿದು.  ಯುದ್ಧಂಗಳಲ್ಲಿ ಭಾರತಕ್ಕೆ ಜಯ ಸಿಕ್ಕಿದರೂ ಸಮಸ್ಯೆ ಮಾಂತ್ರ ಬಗೆಹರಿದ್ದಿಲ್ಲೆ.  ಬದಲಾಗಿ, ಇನ್ನೂ ಜಟಿಲ ಆವುತ್ತಾ ಇದ್ದು.   ಎರಡೂ ದೇಶಂಗಳಲ್ಲಿ ರಾಜಕೀಯ ಪ್ರಬುದ್ಧತೆ  ಇಲ್ಲದ್ದದೇ ಇದು ಇಷ್ಟು ಮುಂದುವರಿವಲೆ ಕಾರಣ.  ಎರಡು ಕಡೆಯವುದೇ ರಜ ಹೊಸ ದೃಷ್ಟಿಕೋಣಂದ ಯೋಚನೆ ಮಾಡಿರೆ,  "ನಿಂಗೊ ಇಬ್ರೂ  ಯಾವಾಗಳೂ ಕಚ್ಚಾಡಿಗೊಂಡು ಇರೆಕು, ಉದ್ಧಾರ ಆಪ್ಪಲಾಗ"  ಹೇಳುವ ಬ್ರಿಟಿಶರ ಕನಸಿನ ಭಗ್ನ ಮಾಡ್ಳೆ  ಕಷ್ಟ ಇಲ್ಲೆ. 

ಯಾರೋ ಸ್ವಾಭಿಮಾನ ಹೀನರು  ಕಾಶ್ಮೀರಕ್ಕೆ ಭಾರತದ ಸ್ವಿಝರ್ಲ್ಯಾಂಡ್ ಹೇಳುವ ಹೆಸರಿನ ಒಪ್ಪಿಗೊಂಡಿದವು.   ಉತ್ಕಟ ದೇಶಾಭಿಮಾನ ಇಪ್ಪ ನಮ್ಮ ಹಾಂಗಿಪ್ಪವು ಇದರ ಪ್ರತಿಭಟಿಸಿ,  ಸ್ವಿಝರ್ಲ್ಯಾಂಡಿಂಗೆ ಯುರೋಪಿನ ಕಾಶ್ಮೀರ ಹೇಳಿ ಹೆಸರು ಮಡಿಗಿ ಸೇಡು ತೀರಿಸಿಗೊಂಬಲಕ್ಕು.    ಮೇಲ್ನೋಟಕ್ಕೆ, ಇದು ನಾ ಮೇಲು ತಾ ಮೇಲು ಹೇಳುವ ಮಕ್ಕಳಾಟಿಕೆಯ ವಾದದ ಹಾಂಗೆ ಕಂಡರೂ ಇದಲ್ಲಿ ಒಂದು ಬಹು ಮುಖ್ಯವಾದ ತತ್ವ ಇದ್ದು.    ಸ್ವಿಝರ್ಲ್ಯಾಂಡಿನ ಹಾಂಗಿಪ್ಪ ಸಣ್ಣ ದೇಶದ ಪೂರ್ತಿ ಅರ್ಥವ್ಯವಸ್ಥೆಯೇ ಹೊರದೇಶದ ಪ್ರವಾಸಿಗಳ ಮೇಲೆ ಆಧರಿಸಿಪ್ಪದು.  ಹೇಳಿರೆ, ಕಾಶ್ಮೀರಕ್ಕುದೇ ಈ ದಿಕ್ಕಿಲ್ಲಿ ಬೆಳವಲೆ ಅಷ್ಟೇ ಅವಕಾಶ ಇದ್ದು ಹೇಳುವ ತಾತ್ಪರ್ಯ.   ಇದಕ್ಕಿಪ್ಪ ಸದ್ಯದ ಮೊದಲನೇ ತೊಡಕು ಹೇಳಿರೆ,  ಭಯೋತ್ಪಾದಕರ  ಉಪದ್ರ.

ಜಗತ್ತಿಲ್ಲಿ ಎಲ್ಲಿಯೇ ನೋಡಿದರೂ ಶಾಂತಿ, ನೆಮ್ಮದಿಯ ಲಗಾಡಿ ಕೊಡ್ಳೆ ನೋಡುವ ಜನಂಗಳ ಸಂಖ್ಯೆ ಯಾವಾಗಳೂ ಭಾರೀ ಸಣ್ಣ ಪ್ರಮಾಣದ್ದು.   ಸಣ್ಣ ಸಂಖ್ಯೆಲಿಪ್ಪ ಈ ಜನಂಗೊ  ಬೇರೆಯವರ ಕೊಂದೋ, ಹೆದರಿಸಿಯೋ ತಮ್ಮ ದಾರಿಯ ಸುಗಮ ಮಾಡಿಗೊಂಬದು. ಅಂಬಗ, ಬಹುಸಂಖ್ಯಾತ ಶಾಂತಿಪ್ರಿಯರ  ಇಚ್ಚಾಶಕ್ತಿಯ ಕ್ರೋಢೀಕರಿಸಿದರೆ, ಅವರಲ್ಲಿ ಆಶಾವಾದದ ಹುರುಪು ತುಂಬಿದರೆ, ಅಲ್ಪ ಸಂಖ್ಯೆಲಿಪ್ಪ ಶಾಂತಿಭಂಗ ಮಾಡುವವರ  ಬಗ್ಗು ಬಡಿವಲೆ ಕಷ್ಟ ಇಲ್ಲೆ.  ಇವರೊಟ್ಟಿಂಗೆ, ಸಮಾಜಲ್ಲಿ ಮಟ್ಟ ಹಾಕೆಕ್ಕಾದ ಇನ್ನೊಂದು ವರ್ಗವೂ  ಇದ್ದು -  ಅವು ಆರು  ಹೇಳಿರೆ, ಸ್ವತಃ  ಉಗ್ರವಾದದ ದಾರಿ ಹಿಡಿಯದ್ದರುದೇ  ಆ ಕೆಲಸ ಮಾಡುವವರ ಬಗ್ಗೆ ಅನುಕಂಪ ಇದ್ದುಗೊಂಡು ಅವರ ಸಾಂಕುವವು.  ಇತ್ತೀಚೆಗೆ ಉಪ್ಪಳಲ್ಲಿ ಹುಗ್ಗಿ ಕೂದುಗೊಂಡಿತ್ತ ಉಗ್ರವಾದಿಯ ಪೋಲೀಸಿನವು ಹಿಡಿದು ತಪ್ಪಗ, ಆ ಊರಿನ ಅದೇ ಕೋಮಿನ ಕೆಲವು ಜನ ಆದಷ್ಟು ಉಪದ್ರ ಕೊಟ್ಟು ಆ ವ್ಯಕ್ತಿ ತಪ್ಪಿಸಿಗೊಂಡು ಹೋಪಲೆ ಸಹಾಯ ಅಪ್ಪ ಹಾಂಗೆ ವಿಫಲ ಪ್ರಯತ್ನ ಮಾಡಿದ್ದದು ನವಗೆ ನೆಂಪಿಕ್ಕು.   ಇದುದೇ ಕೇವಲ ಸಣ್ಣ ವಿಷಯ ಅಲ್ಲ.   ಹಾಂಗಾಗಿ, ಇವರನ್ನೂ ಉಪೇಕ್ಷೆ  ಮಾಡ್ಳೆ ಸಾಧ್ಯ ಇಲ್ಲೆ      

ಕಾಶ್ಮೀರದ ಸಮಗ್ರ ಬೆಳವಣಿಗೆಯೇ ಅಲ್ಯಾಣ ಸಮಸ್ಯೆಗೆ ಪರಿಹಾರ ಹೇಳಿ ಎನಗೆ ಕಾಣ್ತು. ಸಮಾಜದ ಬೆಳವಣಿಗೆ ಆಗಿ, ಉದ್ಯೋಗಂಗೊ ಸೃಷ್ಟಿ ಆಗಿ ಅರ್ಥ ವ್ಯವಸ್ಥೆ ಸುಧಾರಣೆ ಆದರೆ,  ಭಯೋತ್ಪಾದಕರು ಮೂಲೆಗುಂಪಾವುತ್ತವು.  ಅಂಬಗ ಮುಖ್ಯವಾಹಿನಿಲಿಪ್ಪವು ಸಮಾಜಲ್ಲಿ ಶಾಂತಿ ಕದಡುವ, ತಮ್ಮ ಸುಭದ್ರ ಜೀವನಕ್ಕೆ ಕಲ್ಲು ಹಾಕುವ ಯಾವ  ಪ್ರಯತ್ನಕ್ಕೂ ಸೊಪ್ಪು ಹಾಕುತ್ತವಿಲ್ಲೆ.  ಅದೇ, ಸಮಾಜಲ್ಲಿ ಕಡುಬಡತನ ಇದ್ದು ಯಾವುದೇ ಸೌಲಭ್ಯ ಇಲ್ಲದ್ದ ಪರಿಸ್ಥಿತಿ ಇದ್ದರೆ, ಸರಕಾರದ ವಿರುದ್ಧ ಜನರಲ್ಲಿ ಇಪ್ಪ ಅಸಮಾಧಾನವ ದುರುಪಯೋಗ ಪಡಿಸಿಗೊಂಬಲೆ ಉಗ್ರವಾದಿಗೊಕ್ಕೆ ಸುಲಭ ಆವುತ್ತು ಹೇಳಿ ಎನ್ನ ಅಭಿಪ್ರಾಯ.

ಭಾರತ ದೇಶದ ಈ ವರ್ಷದ ರಕ್ಷಣಾ ಇಲಾಖೆಯ ಖರ್ಚಿಂಗೆ  ಅನುದಾನ ೧೪೦೦೦೦ ಕೋಟಿ ರುಪಾಯಿ ! ಪಾಕಿಸ್ತಾನಲ್ಲಿ ತಿಂಬಲೆ ಗೆತಿ ಇಲ್ಲದ್ರೂ, ಇದರ ಅರ್ಧದಷ್ಟದರೂ ರಕ್ಷಣಾ ಸಾಮಾಗ್ರಿಗಳ ಖರೀದಿಗೆ ಖರ್ಚು ಮಾಡುಗು.  ಹೇಳಿರೆ, ಎರಡೂ ದೇಶದವು ಸೇರಿ ಯಾವಾಗಳೋ ೫೦ ವರ್ಷಕ್ಕೊಂದರಿ ಮಾಡುವ ಸಾಧ್ಯತೆ ಇಪ್ಪ ಯುದ್ಧಕ್ಕಾಗಿ  ಸುಮಾರು ೨೦೦೦೦೦ ಕೋಟಿ ರುಪಾಯಿ  ನಿರಂತರ ಖರ್ಚು ಮಾಡ್ತಾ ಇದ್ದವು.   ಅಲ್ಲಿಗೆ, ಭಾರತ-ಪಾಕಿಸ್ತಾನ ಸೇರಿ  ಸುಮಾರು ೪೦ ಬಿಲಿಯ ಡಾಲರಿನಷ್ಟು ನಮ್ಮ ಅಮೂಲ್ಯ ಸಂಪತ್ತಿನ  ಪಾಶ್ಚಾತ್ಯರಿಂಗೆ ವರ್ಷಂಪ್ರತಿ ದಾನ ಮಾಡಿದ ಹಾಂಗಾತು.  ಭಾರತ-ಪಾಕಿಸ್ತಾನಂಗಳ  ವಿಭಜಿಸಿದ ಕುತಂತ್ರದ ಮೂಲ ಉದ್ದೇಶ ಇದೇ.  ಇದರ ಅರ್ಥ ಮಾಡಿಗೊಂಬಲೆ ಪ್ರಬುದ್ಧತೆ ಬೇಕು.  ಕೌರವ-ಪಾಂಡವರ ಹಾಂಗಿಪ್ಪ ಬದ್ಧ ವೈರಿಗಳೂ ಈ ವಿಷಯವ ಅರ್ಥ ಮಾಡಿಗೊಂಡಿತ್ತಿದ್ದವು ಹೇಳುದು ಗಮನಿಸೆಕ್ಕಾದ ಸಂಗತಿ. ನಮ್ಮ ನಮ್ಮೊಳವೇ ಆದರೆ, ಎಂಗೊ ೧೦೦ ಜನ, ನಿಂಗೊ ೫  ಜನ.  ಆದರೆ ಹೆರಾಣವು ಬಂದರೆ, ನಾವು ೧೦೫ ಜನ ಹೇಳುವ ಸಾಂಘಿಕ ಸ್ಪೂರ್ತಿ ಅವರತ್ರೆ ಇತ್ತದು ಪುರಾಣದ ಕಥೆಲಿ ಓದಿದ ನೆಂಪು.

ಭಾರತದ ಆರ್ಥಿಕ ಪ್ರಗತಿಯ ನೋಡಿ  ಪಾಕಿಸ್ತಾನದವಕ್ಕೆ ಅಸೂಯೆ ಆವುತ್ತಾ ಇಕ್ಕು.  ಅಲ್ಲಿ  ಮುಖ್ಯ ವಾಹಿನಿಲಿಪ್ಪವಕ್ಕೆ ತಮ್ಮ ಗಡಿಂದ ಇತ್ಲಾಗಿ  ಇಪ್ಪ ಸಂಬಂಧಿಕರ ಕಾಂಬಲೆ ಅತಿಯಾದ ಕಾತರತೆ ಇಕ್ಕು. ನೆರೆಕರೆಯ ಸಂಬಂಧ ಒಳ್ಳೆದಿರೆಕು ಹೇಳುವ ತೀವ್ರ ಆಶೆ ಇಕ್ಕು.   ಸಂಬಂಧ ಸುಧಾರಿಸಿದರೆ ತಮ್ಮ ಉದ್ದೇಶ ಹಾಳಪ್ಪ ಕಾರಣ, ಭಾರತ-ಪಾಕಿಸ್ತಾನಂಗೊ ಹೇಂಗಾರು ಯುದ್ಧದ ಹಾದಿ ಹಿಡಿವ ಹಾಂಗೆ ಮಾಡಿ, ಯುದ್ಧಾನಂತರದ ಕುರುಕ್ಷೇತ್ರಲ್ಲಿ ತಮ್ಮ ಕಾರುಬಾರು ಮಾಡುವ ಉಗ್ರಗಾಮಿ ಗುಂಪುಗಳ ಯೋಜನೆ ಸಫಲ ಆಗದ್ದ ಹಾಂಗೆ ನೋಡಿಗೊಳೆಕ್ಕಾದ್ದು ಅತಿ ಮುಖ್ಯ.  ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ದೃಷ್ಟಿಕೋಣಂಗಳಲ್ಲಿ ಅಷ್ಟು ವ್ಯತ್ಯಾಸದ ಧೋರಣೆ ಮಡಿಕ್ಕೊಂಡಿತ್ತ ಪಶ್ಚಿಮ-ಪೂರ್ವ ಜರ್ಮನಿಗೊ ಒಂದಪ್ಪಲೆ ಎಡಿಗಾದರೆ, ಭಾರತ-ಪಾಕಿಸ್ತಾನ ಒಂದಪ್ಪಲೆ ಏಕೆ ಸಾಧ್ಯ ಇಲ್ಲೆ ?  ಹೀಂಗಾದರೆ, ನಮ್ಮ ಮಧ್ಯೆ  ಮೂಗು ತೂರಿಸಿ ಬೇಳೆ ಬೇಯಿಸಿಗೊಂಬ ಚೀನಾದ  ಸೀಂತ್ರಿ ಬುದ್ಧಿಗುದೇ ಕಡಿವಾಣ ಹಾಕ್ಲೆಡಿಗು. ಏನಿದ್ದರೂ ನಮ್ಮದು ರಕ್ತ ಸಂಬಂಧ, ಚೀನಾ ಮತ್ತು ಪಾಶ್ಚಾತ್ಯರು ನವಗೆ ಪರಕೀಯರು ಹೇಳುವ ಸತ್ಯವ ಎರಡೂ ದೇಶದ ಜನರಿಂಗೆ ಅರ್ಥ ಮಾಡಿಸುವ ರಾಜಕೀಯ ಮುತ್ಸದ್ದಿತನ ಬೇಕಪ್ಪದು.  ಭಾರತ-ಪಾಕಿಸ್ತಾನ ವಿಲೀನ ಆಗಿ, ಇಂದಿಸ್ತಾನದ ಉದಯ ಆದರೆ, ನಾವು ಜಗತ್ತಿನ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಿ ಮುಂದೆ ಬಪ್ಪಲೆ ಹೆಚ್ಚು ಸಮಯ ಬೇಡ.

(ಇನ್ನೂ ಇದ್ದು...)

- ಬಾಪಿ / ೧೩.೦೮.೨೦೦೯