Thursday, January 13, 2011

ಪ್ರಾರ್ಥನೆ

ಎಂತ ಬೇಡಲಿ ದೇವ ಕಾವು ಶಾಸ್ತಾವು
ಸ್ವಾಭಿಮಾನದ ಬದುಕು ನರಳದ್ದೆ ಸಾವು
ಉದೆಕಾಲ ಏಳುವಗ ಇರಲಿ ಉತ್ಸಾಹ
ಸ್ಪೂರ್ತಿಯಾಗಲಿ ಜನರ ತುಂಬು ಸ್ನೇಹ
 
ಖರ್ಚಿಂದ ಹೆಚ್ಚಿಗೆ ಇರಲಿ ವರಮಾನ
ದೊಡ್ದವರ ಎದುರು ಮಡುಗೆನ್ನ ಸಣ್ಣ
ಮಾಡುವ ಬಲಕ್ಕೆ ಸಾಧಿಸುವ ಛಲವು
ಸಮತೋಲನಲ್ಲಿರಲಿ ಸೋಲು ಗೆಲುವು
 
ನಿನ್ನೆ ನಾಳೆಯ ಮಧ್ಯಲ್ಲಿಪ್ಪದೀ ಸುದಿನ
ಚಕ್ರ ತಿರುಗಿಸಲೆನ್ನ ಅನುಭವದ ಗಾಣ
ಗುರಿಯತ್ತ ಹೋಪಲೆ ಹೆದ್ದಾರಿ ವಿರಳ
ಸರಣಿ ವಿಘ್ನಂಗಳ ಮಾಡೆನಗೆ ಸರಳ
 
ಬತ್ತದ್ದೆ ಬದುಕಿರಲಿ ಜ್ಞಾನದ ಹಸಿವು
ಅನುದಿನದ ಕೆಲಸಕ್ಕೆ ಇಲ್ಲದ್ದೆ ದಣಿವು
ಎಷ್ಟು ಬೇಡಲಿ ನಿನ್ನ ತಳದತ್ತು ಬಳಪ
ಕೈ ಎತ್ತಿ ಹರಸೆನ್ನ ಮದವೂರ ಗಣಪ
 
-ಬಾಪಿ
 
 
 
 
 

ಸ್ವಾತಂತ್ರ್ಯ

ಸ್ವಾತಂತ್ರ್ಯ ಬಂದಾತು ೬೦ ವರುಷ
ಜನಮಾನಸಲ್ಲಿಲ್ಲೇಕೆ ಯಾವ ಹರುಷ
ಸರ್ಕಾರ ಹೇಂಗಾತು ಖಾಲಿ ಖಜಾನೆ
ಮಂತ್ರಿಗೊಕ್ಕೆಂತಕೆ ದೊಡ್ಡ ಅರಮನೆ
 
ಪವಾರಿನ ಮರುಳು ದಿನಾ ಕ್ರಿಕೆಟ್ಟು
ಬೇರೆ ಕೆಲಸಕ್ಕೆ ಎಲ್ಲಿ ಪುರುಸೊತ್ತು 
ಆತು ನೀರುಳ್ಳಿ  ದಿನದಿನ ದುಬಾರಿ
ಪಾಪದವಕ್ಕಿದ್ದು ಅವರವರ ದಾರಿ
 
ಮಾಡೇ ಇಲ್ಲದ್ದ ಶಾಲೆಗಳೇ ಎಲ್ಲ 
ಕಲಿಶುವವು ಆರು ದೇವರೇ ಬಲ್ಲ
ಪಾಸಪ್ಪಲೆ ಸಾಕು ೩೫ ಮಾರ್ಕು
ಆಫೀಸಿಲ್ಲೆಲ್ಲ ಮೀಸಲಾತಿ ಸರಕು
 
ಅಲ್ಪರ ತುಷ್ಟಿಗೆ ಸದಾ ಕಟಿಬದ್ಧ
ಹೇಳಿದವಡ ಹಿಂದು ಉಗ್ರವಾದ 
ಎಲ್ಲೆಂದರಲ್ಲಿ ಹೊಟ್ಟುತ್ತು ಬಾಂಬು
ಬದುಕ್ಕಿ ಒಳುದರೆ ಹರ್ಕಟೆ ದಿಂಬು
 
ಖಂಡಿತ ರಾಹುಲ್ ಇನ್ನು ಪ್ರಧಾನಿ
ಭಾರತ ಆವುತ್ತಯ್ಯ  ಚಿನ್ನದಾ ಗಣಿ
ಎಲ್ಲೋರ ಮನೆಲಿ ಮೊಬೈಲು ಟೀವಿ
ನೀರು ಬಾರದ್ರೆ ಇರಲೊಂದು ಬಾವಿ
 
-ಬಾಪಿ
 
 
 
 
 

Wednesday, January 5, 2011

ಶಾಯರಿ

ಇದೆಂತ ಹಗರಣ ಗೊಂತಿದ್ದಾ -2ಜಿ ?
ಸೋನಿಯಾಜಿ ಮತ್ತೆ  ರಾಹುಲ್  ಜಿ !!
ಕೋಂಗ್ರೇಸಿನವೆಲ್ಲಾ ಸದಾ  ಪರತಂತ್ರ
ಲಂಚ ಭ್ರಷ್ಟಾಚಾರವೇ ಮೂಲ ಮಂತ್ರ
 
ಸಮಾಜವಾದವೇ ಇವರ ಪುರುಷಾರ್ಥ
ನೆಹರೂ ಶಂಖಂದ ಬಂದದೇ ತೀರ್ಥ
ರೋಟಿ ಕಪಡಾದೊಟ್ಟಿಂಗೆ ಮಕಾನು
ಹೇಳುದೊಂದೇ   ಪೊಟ್ಟು ಸ್ಲೋಗನು 
 
ಕೋಟಿಗಟ್ಳೆ ತಿಂದನಡಾ ಕೋತ್ರೋಕಿ 
ಇವ ಸೋನಿಯಾನ ಖಾಸಾ ಪೈಕಿ
ಸ್ವಿಸ್ ಬೇಂಕಿಲ್ಲಿದ್ದು ಇವರದ್ದು ಗೆಂಟು
ಪೈಲೆಟ್ಟಿಂಗಷ್ಟು ಎಲ್ಲಿಂದ ಬಂತು ?

ರಾಹುಲಂಗೇ ಎಂತಕಿವು ಶರಣಾಗತಿ ?
ಕೆಪ್ಪಟೆಯ ಗುಳಿ ಕೂಸುಗೊಕ್ಕೆ ಪ್ರೀತಿ
ಬೆಳಿಚರ್ಮ ಇದ್ದರೆ ಬೇರೆಂತ ಬೇಕು ?
ಭಾರತಮಾತೆಯ ಬೆನ್ನಿಂಗೆ ಚಾಕು    
 
-ಬಾಪಿ
 
 
 
 
 

Sunday, January 2, 2011

ಹೊಸವರುಷ

ಹೊಸವರುಷಲ್ಲಿ ಪ್ರತಿದಿನ
ಇರಲಿ ಸೇಮಿಗೆ ರಸಾಯನ
ಮನೆಗೆ ಬಂದಪ್ಪಗ ನೆಂಟರು
ವಿಶೇಷ ಪಾಯಸ ಸಾಂಬಾರು 
 
ಆಗಲಿ ಬೇಗನೆ ಮನೆ ಒಕ್ಕಲು
ಉಂಬಲೆ ಹೋಳಿಗೆ ಕಾಯಾಲು
ಚಾಯ ಬೇಕಪ್ಪಗ ದಾಸಪ್ರಕಾಶ
ಕಿಸೆಲಿರಲಿ ಸದಾ ಮಾತ್ರೆ ಸಮರಸ
 
 
-ಬಾಪಿ
 
 
 
 
 

Sunday, October 3, 2010

ಕವಲು

ಇಂದ್ರಾಣ ಕಾಲಲ್ಲಿ  ಸಾಹಿತ್ಯ ಕ್ಷೇತ್ರಲ್ಲಿ ಹೆಸರು ಮಾಡ್ಳೆ ಅಥವಾ ಪ್ರಶಸ್ತಿ ಪಡಕ್ಕೊಂಬಲೆ  ಬರವಣಿಗೆಲಿಪ್ಪ ತಿರುಳು ಮತ್ತು ಮೌಲ್ಯಕ್ಕಿಂತ ತಥಾ ಕಥಿತ ಸಾಹಿತಿಗೆ ಇಪ್ಪ ರಾಜಕೀಯ ಸಂಪರ್ಕ ಹೆಚ್ಚು ಮುಖ್ಯ ಹೇಳುದು ಎಲ್ಲೋರಿಂಗೂ ಗೊಂತಿಪ್ಪ ವಿಷಯವೇ.  ಆದರೆ ನಮ್ಮ ಪುಣ್ಯ, ದೇವರು ಎಲ್ಲದರಲ್ಲಿಯೂ ಒಂದು ಸಮತೋಲನವ ಕಾಪಾಡುತ್ತ.   ಗಡ್ಡ ಬಿಟ್ಟು, ಖದ್ದರ್ ಅಂಗಿ ಹಾಕಿ, ಬಂಡಾಯ ಶೈಲಿಯ ಸರಕುಗಳಿಂದಲೇ ಪ್ರಚಾರ ಗಿಟ್ಟಿಸಿಗೊಂಬವು ಒಂದು ಕಡೆ ಇದ್ದರೆ,   ಬಿಡುಗಡೆ ಆದ ಕೆಲವೇ ದಿನದ ಒಳ   ಪುಸ್ತಕದ ಸಾವಿರಗಟ್ಳೆ ಪ್ರತಿಗೊ  ಮಾರಾಟ ಆಗಿ, ತಿರುಗ ತಿರುಗ ಮುದ್ರಣ ಕಾಂಬ ಒಳ್ಳೆ ಸಾಹಿತ್ಯಕೃತಿಗಳ  ರಚನೆ ಮಾಡುವವೂ ಇದ್ದವು.   ಕೃತಿಚೌರ್ಯದ ಆರೋಪ ಹೊತ್ತುಗೊಂಡಿಪ್ಪ   ಒಬ್ಬ ಕನ್ನಡ "ಸಾಹಿತಿ"ಗೂ  ಜ್ಞಾನಪೀಠ ಪ್ರಶಸ್ತಿ  ಬಂದದು ಒಂದು ದುರಂತ ಆದರೆ,   ಅಂತಹ ಪ್ರತಿಷ್ಠೆಯ ಪ್ರಶಸ್ತಿಗೊ ಬಾರದ್ದೆ ಇದ್ದರೂ    ಜನಮನ್ನಣೆಯ ಮಾನದಂಡಲ್ಲಿ ಅತ್ಯಂತ ಎತ್ತರಲ್ಲಿಪ್ಪ  ಭೈರಪ್ಪನ ಹಾಂಗಿಪ್ಪ ಮೇರು ಸಾಹಿತಿಗಳೂ ನಮ್ಮ ಮಧ್ಯೆ ಇಪ್ಪದು ಸುದೈವ.      ಭೈರಪ್ಪನ ಹಾಂಗಿಪ್ಪ ಸಾರಸ್ವತ ಲೋಕದ ಋಷಿಗಳಿಂದಾಗಿ  ಕನ್ನಡ ಸಾಹಿತ್ಯ ಶ್ರೀಮಂತ ಆದ್ದದು ಮಾಂತ್ರ ಅಲ್ಲ, ಇಂದ್ರಾಣ ಗಣಕಯಂತ್ರದ ಯುಗಲ್ಲಿಯೂ ಕನ್ನಡದ ಜನರಲ್ಲಿ ಓದುವ ಹವ್ಯಾಸ ಜೀವಂತವಾಗಿ ಒಳುಕ್ಕೊಂಡಿದು.  
 
ಭೈರಪ್ಪ ಎಂತದೇ ಬರದರೂ ಸಾಮಾಜಿಕ ಚರ್ಚೆಯ ವಿಷಯ ಅಪ್ಪದು ಸಾಮಾನ್ಯ ಸಂಗತಿ.   ವಿಜಯ ಕರ್ನಾಟಕದವು ನಡೆಶಿದ ಮತಾಂತರದ ಬಗ್ಗೆ ನಡೆದ ಲೇಖನ ಸರಣಿಗಳಲ್ಲಿಯೂ,  ಇದೇ ಅನುಭವ ಆತು.  ಅವನ ಕೃತಿಗಳ ಸರಿಯಾದ ಮೌಲ್ಯಮಾಪನ ಮಾಡುದರ  ಬದಲು ಹೆಚ್ಚಿನ ವಿಮರ್ಶಕರು  ಪೂರ್ವಗ್ರಹಂದ ಅವನ ಕೃತಿಗಳಲ್ಲಿ ಬಪ್ಪ ವಿಷಯಂಗಳ ಅವನ ಸೈದ್ಧಾಂತಿಕ ನಿಲುವು ಹೇಳಿ ಆರೋಪಿಸಿ ವೈಯಕ್ತಿಕ ನಿಂದನೆಗೆ ತೊಡಗುದು ಮಾತ್ರ ವಿಷಾದನೀಯ.   ಇತ್ತೀಚೆಗೆ ಭೈರಪ್ಪ ಬರೆದ "ಕವಲು" ಕಾದಂಬರಿಯ ಬಗ್ಗೆ ಇತ್ತ   ವಿಮರ್ಶೆಯ ಕಾರ್ಯಕ್ರಮಕ್ಕೆ ಹೋಗಿಪ್ಪಗ  ಶತಾವಧಾನಿ ಗಣೇಶ್  ಹೇಳಿದ ವಿಷಯ ಇಂದಿನ   ವಿಮರ್ಶಕರ ಒಟ್ಟಾರೆ ದೃಷ್ಟಿಕೋಣ ಮತ್ತು (ಅ)ಪ್ರಬುದ್ಧತೆಗಳ ಎತ್ತಿ ತೋರಿಸುವ ಹಾಂಗಿತ್ತು.  ಹೆಚ್ಚಿನವು ಮಾಡುದು  ಪ್ರಚಾರ  ಮತ್ತು ಮನರಂಜನೆಗಾಗಿಪ್ಪ ಚರ್ಚೆಯೇ ಹೊರತು ವಿಷಯದ ಮೇಲೆ ಇಪ್ಪ ಆಸಕ್ತಿಂದಾಗಿ ಅಲ್ಲ.   
 
ಹಿಂದಾಣ ಕಾಲದ ವಿಷಯಂಗಳ ಬಗ್ಗೆ ಸಂಶೋಧನೆ ಮಾಡಿ ಅಂಬಗಾಣ ಕಾಲಲ್ಲಿ   ಹೀಂಗಿದ್ದತ್ತು ಹೇಳಿ ತಿಳಿಶುವವು  ಚರಿತ್ರೆಕಾರರು. ತಮ್ಮ ಜೀವನಕಾಲಲ್ಲೇ ಆದ, ಅವುತ್ತಾ ಇಪ್ಪ   ಬದಲಾವಣೆಗಳ ದಾಖಲಿಸಿ ಮುಂದಿನ ಪೀಳಿಗೆಯವಕ್ಕೆ ಉಪಕಾರ ಮಾಡುವವು  ಸಮಾಜಶಾಸ್ತ್ರಜ್ಞರು.   ವರ್ತಮಾನದ ಬರವಣಿಗೆಗೊ ಭವಿಷ್ಯಲ್ಲಿ ಚರಿತ್ರೆಯ ಟಿಪ್ಪಣಿಗಳಾಗಿ ಉಪಯೋಗ ಆವುತ್ತು.   ಸಾಹಿತ್ಯ ಮತ್ತು ಪತ್ರಿಕೋದ್ಯಮ - ಈ ಎರಡು ಕ್ಷೇತ್ರಲ್ಲಿಯೂ ಸಮಾಜಕ್ಕೆ  ಇಂತಹ ಒಂದು  ಅಪೂರ್ವ ಕಾಣಿಕೆ ಕೊಡುವ ಅವಕಾಶ ಇದ್ದು.  ಈ ದೃಷ್ಟಿಂದ ನೋಡಿರೆ ಭೈರಪ್ಪ ತನ್ನ ಬರಹಂಗಳ ಮೂಲಕ ಮುಂದಾಣ ಚರಿತ್ರೆಕಾರರ ಕೆಲಸದ ಹೊರೆಯ ಕಮ್ಮಿ ಮಾಡಿದ್ದ ಹೇಳ್ಳಕ್ಕು. 
 
ಭೈರಪ್ಪನ ಕಾದಂಬರಿಯ ಹಿನ್ನೆಲೆಲಿ  ೨೦ನೇ ಶತಮಾನದ ಉತ್ತರಾರ್ಧದ ಜೀವನ ಕಾಲವ ಅವಲೋಕನ ಮಾಡಿರೆ, ಸಮಾಜಲ್ಲಿ ಪುರುಷ-ಮಹಿಳೆಯರ ಸ್ಥಾನಮಾನ  ವಿಪರೀತ  ಬದಲಾವಣೆ ಆದ್ದದು ಕಂಡು ಬತ್ತು.  ಅರ್ಹತೆ ಇದ್ದರೂ ಬಡತನಂದಾಗಿಯೋ, ಸಂಪ್ರದಾಯಂದಾಗಿಯೋ ವಿದ್ಯಾಭ್ಯಾಸ ಮುಂದುವರಿಸದ್ದೆ ಬಾಲ್ಯಲ್ಲಿಯೇ ಮದುವೆ ಆಗಿ ಸಂಸಾರದ  ಹೊರೆ ಹೊತ್ತು, ಪುರುಷ ಪ್ರಾಧಾನ್ಯವ ಪ್ರಶ್ನಿಸದ್ದೆ  ಜೀವನ ಸಾಗಿಸಿದ ಹಳೆ ತಲೆಮಾರಿನ ಹೆಮ್ಮಕ್ಕೊಗೂ   ಮಾಣ್ಯಂಗಳಷ್ಟೇ ಕಲಿವಕೆ ಮಾಡ್ಯೊಂಡು ಗಂಡು-ಹೆಣ್ಣುಗಳ ಸಮಾನತೆಯ  ಪ್ರತಿಪಾದಿಸುವ,  ಭೌದ್ಧಿಕ  ಸ್ವಾಯತ್ತತೆ  ಮತ್ತು ಆರ್ಥಿಕ ಸ್ವಾವಲಂಬನೆಗಳೊಟ್ಟಿಂಗೆ  ಸ್ವಾಭಿಮಾನಂದ ಬದುಕ್ಕುಲೆ  ಇಚ್ಛಿಸುವ ಇಂದಿನ ತಲೆಮಾರಿನ  ಹುಡುಗಿಯರಿಂಗೂ ಅಜಗಜಾಂತರ. ಇಪ್ಪದರನ್ನೇ ಆದಷ್ಟು ಪ್ರೀತಿಂದ ಮಕ್ಕೊಗೆ ಹಂಚಿ ಕೊಟ್ಟು, ಮಕ್ಕಳ ಭವಿಷ್ಯಲ್ಲಿಯೇ ತಮ್ಮ ಜೀವನದ ಪರಿಪೂರ್ಣತೆ ಕಂಡ  ಮೊದಲಾಣವರನ್ನೂ  ಆಧುನಿಕ ಬದುಕಿನ ಓಟಲ್ಲಿ  ಗೆಲ್ಲುವ  ಆಶೆಯೊಟ್ಟಿಂಗೇ  ತಾವು ಬಾಲ್ಯಲ್ಲಿ   ವಂಚಿತರಾದ  ಸುಖ-ಸೌಲಭ್ಯಂಗಳ ಎಲ್ಲಾ   ಮಕ್ಕೊಗೆ ಒದಗಿಸೆಕ್ಕು  ಹೇಳುವ ಹುಮ್ಮಸ್ಸಿನ ಇಂದ್ರಾಣವರನ್ನೂ ಹೋಲಿಕೆ ಮಾಡುದು ಎಷ್ಟು ಸರಿ   ಹೇಳಿ ಗೊಂತಿಲ್ಲೆ.  ಅಷ್ಟಾಗಿ ಕಲಿವಿಕೆಯೂ ಇಲ್ಲದ್ದೆ, ಹೊರ ಪ್ರಪಂಚದ ಜ್ಞಾನವೂ ಇಲ್ಲದ್ದ ಅಬ್ಬೆಪ್ಪಂದ್ರ ನೆರಳಿಲ್ಲಿ ಬೆಳದ್ದರಿಂದಾಗಿ  ಹಳೆ ತಲೆಮಾರಿನ  ಮಕ್ಕೊಗೆ ಮಾರ್ಗದರ್ಶನದ ಕೊರತೆ ಇದ್ದಿಕ್ಕಾದರೂ ಪ್ರತಿಭೆ ಇಪ್ಪವು ಮತ್ತು  ಸ್ವಪ್ರೇರಣೆಂದ ಧುಮುಕಿದವು ಆರೂ ಸಾಮಾನ್ಯವಾಗಿ ಅವಕಾಶಂದ ವಂಚಿತರಾಯಿದವಿಲ್ಲೆ ಹೇಳಿ ಧಾರಾಳ ಹೇಳ್ಳಕ್ಕು.   ಅದೇ, ಸಂವಹನ ಮಾಧ್ಯಮಂಗಳ ಬಾಹುಳ್ಯದ  ಇಂದ್ರಾಣ ಯುಗಲ್ಲಿ  ಎಂತ ಬೇಕಾರೂ ಕೈಮುಷ್ಟಿ ಒಳವೇ ತಯಾರು  ಸಿಕ್ಯೊಂಡಿಪ್ಪಗ  ಮಕ್ಕೊಗೆ  ಅಗತ್ಯಕ್ಕಿಂತ ಹೆಚ್ಚಿನ  ಮಾರ್ಗದರ್ಶನ ಸಿಕ್ಕುತ್ತು ಹೇಳುವ ಪರಿಸ್ಥಿತಿ ಇದ್ದು.  ಆದರೆ, ಸವಲತ್ತು ಮತ್ತು ಅವಕಾಶಂಗೊ ಇಪ್ಪ ಪ್ರಮಾಣಲ್ಲಿ ಇಂದ್ರಾಣ ಮಕ್ಕಳ ಭವಿಷ್ಯ ಹೆಚ್ಚು ಉಜ್ವಲ ಮಾಡ್ಳೆಡಿಗು ಹೇಳ್ಳೆ ಎಡಿಯ.  ಕರ್ತವ್ಯ ನಿರ್ವಹಣೆಲಿ  ಅತಿಮುಖ್ಯವಾದ ನಿಃಸ್ವಾರ್ಥ ತ್ಯಾಗ ಮತ್ತು ಸಮರ್ಪಣಾ ಭಾವಂಗಳೇ  ಹಳೆ ಮತ್ತು ಹೊಸ ತಲೆಮಾರಿನ  ಅಬ್ಬೆಪ್ಪಂದ್ರ ಮಧ್ಯೆ  ಇಪ್ಪ ವ್ಯತ್ಯಾಸದ ಸಾರಾಂಶ ಹೇಳಿ ಎನ್ನ ಅಭಿಪ್ರಾಯ.
 
ಇನ್ನು ಕೊನೆಯದಾಗಿ,  ಉಪಸಂಹಾರ.  ಘೋಷಣೆ ಕೂಗಿ, ಬೊಬ್ಬೆ ಹಾಕಿಯೇ ತಮ್ಮ ಅಸ್ತಿತ್ವವ ಲೋಕಕ್ಕೆ ತೋರಿಸಿಗೊಂಬ  ಸ್ತ್ರೀವಾದಿಗಳ ಮತ್ತು ಸ್ತ್ರೀ-ಪುರುಷ ಸಮಾನತಾ ವಾದಿಗಳ  ಮಧ್ಯೆಯೂ ಸಮಾಜಲ್ಲಿ ಎದ್ದು ಕಾಂಬ ಹಾಂಗಿಪ್ಪ ಕೆಲಸ ಮಾಡಿದ ಕೆಲವು ಮಹಿಳಾಮಣಿಗಳ ಹೆಸರು ಉಲ್ಲೇಖಿಸದ್ರೆ ಅಪಚಾರ ಅಕ್ಕು.  ಧಾರ್ಷ್ಟ್ಯ, ದರ್ಪ, ಅಹಂಕಾರಂಗಳೇ ತಾಂಡವವಾಡುವ ಪುರುಷ ಪ್ರಧಾನ  ಆರಕ್ಷಕ ಇಲಾಖೆಯನ್ನೇ ತನ್ನ ಕಾರ್ಯಕ್ಷೇತ್ರವಾಗಿ ಆರಿಸಿ ಕೆಲಸಲ್ಲಿ ಗಮನಾರ್ಹ ಸಾಧನೆ ಮಾಡಿದ ಕಿರಣ್ ಬೇಡಿ, ವೃತ್ತಿ ಕ್ಷೇತ್ರಲ್ಲಿ ದುಡಿವಗ  ಬೇಕಾದಷ್ಟು ಹೆಸರು ಮಾಡಿ   ಜನಪ್ರಿಯತೆಯ ಉತ್ತುಂಗಲ್ಲಿಪ್ಪಗಳೇ  ನಿವೃತ್ತರಪ್ಪ  ಕಷ್ಟದ ನಿರ್ಧಾರ ತೆಕ್ಕೊಂಡು  ಸಂಸಾರಸ್ಥರಾಗಿ ತಮ್ಮ ಕರ್ತವ್ಯವ ಯಶಸ್ವಿಯಾಗಿ ನಿರ್ವಹಿಸಿದ  ಮಾಧುರಿ  ದೀಕ್ಷಿತ್,  ಶರ್ಮಿಳಾ ಟಾಗೋರ್  ರಂತಹ ಚಲನಚಿತ್ರನಟಿಯರು,  ಸ್ವತಃ ಬೇಕಾದಷ್ಟು ಪ್ರತಿಭೆ ಹೊಂದಿದ್ದರೂ ಗೆಂಡನ  ಕೆಲಸಕ್ಕೆ ಸದಾ ಒತ್ತಾಸೆಯಾಗಿ ನಿಂದು ತೆರೆಮರೆಯ ಪಾತ್ರಲ್ಲಿಯೇ ಧನ್ಯತೆ ಕಂಡ  ಸುಧಾ ಮೂರ್ತಿ - ಇಂತಹ ಕೆಲವು ಅಪರೂಪದ ವ್ಯಕ್ತಿಗೊ.  ಎಷ್ಟು ಜನ ಆಧುನಿಕ ಹುಡುಗಿಯರಿಂಗೆ ಇಂತಹವರ ಬದುಕು ಮತ್ತು  ಸಾಧನೆಗೊ ಅನುಕರಣೀಯವಾಗಿ ಕಾಣ್ತು  ಹೇಳುದರ ಮೇಲೆ ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ನಿರ್ಧಾರ ಅಕ್ಕು.  ಇಂದ್ರಾಣ ಪೀಳಿಗೆಯ ಬಹುತೇಕರಿಂಗೆ  ರಾಖೀ ಸಾವಂತ್ ಅಥವಾ  ಮಲ್ಲಿಕಾ ಶೆರಾವತ್  ನ ಹಾಂಗಿಪ್ಪವು ಆದರ್ಶಪ್ರಾಯರಾಗಿ ಕಂಡರೆ ದೇವರೇ ಗತಿ !
 
-ಬಾಪಿ
 
 
 
 
 

Sunday, September 12, 2010

ತಿಂಗಳ ಚರ್ಚೆ

ಕೆಲವು ಸರ್ತಿ ಬಾಲ್ಯದ ದಿನಂಗೊ ನೆಂಪಪ್ಪಗ  ಅದರ ಸುಮ್ಮನೆ ಮೆಲುಕು ಹಾಕಿಗೊಂಡೇ ಕೂಪೊ ಹೇಳಿ ಕಾಣ್ತು.   "ಆ ದಿನಂಗಳ" ಸವಿನೆನಪಿನ ಜಾಡಿಲ್ಲಿ ಹೋದರೆ ಎಷ್ಟು ಹೊತ್ತಾದರೂ  ಬೊಡಿತ್ತಿಲ್ಲೆ. ಇದೇ ವಿಷಯವ  ವೋ ಕಾಗಝ್  ಕಿ ಕಷ್ಟಿ, ವೋ ಬಾರಿಶ್  ಕಾ ಪಾನಿ  ಹೇಳುವ ಜಗಜೀತ್ ಸಿಂಗ್ ನ ಗಝಲ್ ಲ್ಲಿ, ಸುಶ್ರಾವ್ಯವಾದ ಪದ್ಯರೂಪಲ್ಲಿ  ಅನುಭವಿಸಲಕ್ಕು.
 
ಶಾಲೆಯ ದಿನಂಗಳಲ್ಲಿ ಕ್ಲಾಸಿಲ್ಲಿ ತಿಂಗಳಿಂಗೊಂದು ಚರ್ಚಾಕೂಟ  ನಡಕ್ಕೊಂಡಿತ್ತದು ಹೀಂಗಿಪ್ಪ ಒಂದು ನೆನಪುಗಳಲ್ಲಿ ಒಂದು.  ಹೆಚ್ಚಾಗಿ "ಹಳ್ಳಿ ಮೇಲೋ ಪಟ್ಟಣ ಮೇಲೋ", "ಚಿನ್ನ ಮೇಲೋ ಕಬ್ಬಿಣ ಮೇಲೋ" ಇತ್ಯಾದಿ ವಿದ್ಯಾರ್ಥಿಗಳ ಮಟ್ಟಿಂಗೆ "ಗಹನ" ಹೇಳಿ ಕಾಂಬ ವಿಷಯಂಗಳ ಮೇಲೆ ಚರ್ಚೆ ಮಾಡೆಕ್ಕಾಗಿತ್ತು.   ಕೆಲವು ಮಕ್ಕೊ ಪರ, ಇನ್ನು ಉಳಿದವು ವಿರೋಧವಾಗಿ ಮಾತಾಡೆಕ್ಕಾಗಿತ್ತು.   ವಾದ ಮಾಡ್ಳೆ ಉಶಾರಿಪ್ಪ ಕೆಲವು ಮಕ್ಕೊಗೆ  "ವಕೀಲ"  ಹೇಳುವ ಧರ್ಮದ ಬಿರುದುದೇ ಸಿಕ್ಕಿಗೊಂಡಿತ್ತು!   ಎಲ್ಲಾ  ಮಕ್ಕಳ ಪರ-ವಿರೋಧ ವಾದ ಮಂಡನೆ  ಆದ ಮೇಲೆ ಅಖೇರಿಗೆ ಆ ದಿನದ ಮುಖ್ಯ ಅತಿಥಿ ಆಗಿ ಬಂದ ಮಾಷ್ಟ್ರ ಭಾಷಣ ಮಾಡಿ  ಚರ್ಚೆ ಮುಗುಶುವ ಕ್ರಮ.   ಮಕ್ಕೊಗೆ ಎರಡರಲ್ಲಿ ಯಾವುದಾದರೊಂದರ ಹಿಡುದು ಸಮರ್ಥಿಸುವ ಕೆಲಸ ಆದರೆ, ಮಾಷ್ಟ್ರಂಗೆ  ಎರಡರನ್ನೂ ಸಮರ್ಥಿಸಿ,  "ಸಂದರ್ಭಕ್ಕನುಗುಣವಾಗಿ ಎರಡೂ ಮೇಲು" ಹೇಳಿ ವಿವರಿಸಿ ತೀರ್ಮಾನ ಕೊಡುವ ಸವಾಲಿನ ಕೆಲಸ.  ಅಂಬಗ ವಿದ್ಯಾರ್ಥಿಗಳ ಆಯಾಯ ಗುಂಪಿನವು "ಮಾಷ್ಟ್ರ ಎಂಗಳ ವಿಷಯವ ಹೆಚ್ಚು ಸಮರ್ಥಿಸಿ  ಮಾತಾಡಿದ" ಹೇಳಿ  ತಮ್ಮದೇ ಬೆನ್ನು ತಟ್ಟಿಗೊಂಡ್ರೂ,   ಮುಂದೆ  ಜೀವನದ ಅನುಭವ ಆವುತ್ತಾ ಬಂದ ಹಾಂಗೇ, ನಾವು ಎದುರಿಸುವ  ಯಾವ ವಿಷಯಾಧಾರಿತ ದ್ವಂದ್ವಂಗಳಲ್ಲಿಯೇ ಆದರೂ ಮಧ್ಯ ಮಾರ್ಗವೇ ಸದಾ ಸ್ಥಿರವಾದ್ದು ಹೇಳುವ ಪಾಠವ ಕಲಿತ್ತವು.   ಹೇಳಿರೆ, ಯಾವುದೇ ಎರಡು ವಿಪರೀತ ಧೋರಣೆಗಳ ಮಧ್ಯೆ ಒಂದು ಪಕ್ವವಾದ,   ಎಲ್ಲೋರಿಂಗೂ ಹಿತವಾದ ಮಾರ್ಗ  ಇದ್ದು ಹೇಳುವ ಸಂಗತಿ ಮನವರಿಕೆ ಆವುತ್ತು.  ಇದರೊಟ್ಟಿಂಗೇ,  ಪರಸ್ಪರ ಸಹಕಾರ, ಎಲ್ಲೋರೊಟ್ಟಿಂಗೆ ಅನುಸರಿಸಿಗೊಂಡು ಹೋಯೆಕ್ಕಾದ ಅನಿವಾರ್ಯತೆ ಇತ್ಯಾದಿಗಳ ದರ್ಶನ ಆವುತ್ತು.
 
ಸದ್ಯದ ವಿಷಯಕ್ಕೆ ಪ್ರಸ್ತುತ ಹೇಳಿ ಗ್ರೇಶಿಗೊಂಡು ಒಂದು  ಸಣ್ಣ ಹಾಸ್ಯ ಚಟಾಕಿಯ ಹಂಚಿಗೊಳ್ತೆ.  ಅದು ದೇವರು ತನ್ನ ಕರ್ತವ್ಯದಂತೆ, ಬೇರೆ ಬೇರೆ ಪ್ರಾಣಿಗಳ ಜೀವನಾವಧಿಯ ತೀರ್ಮಾನ ಮಾಡಿ ಆದೇಶ ಹೊರಡಿಸಿದ ಕಾಲ. ಈ ಆದೇಶದ ಪ್ರಕಾರ  ಮನುಷ್ಯರಿಂಗೆ ಕೇವಲ ೨೫ ವರ್ಷ ಆಯುಸ್ಸು  ತೀರ್ಮಾನ ಆಗಿತ್ತಡ. ನಾಯಿಗಳ ಹಾಂಗಿಪ್ಪ ಯಃಕಶ್ಚಿತ್ ಪ್ರಾಣಿಗೊಕ್ಕುದೇ ೫೦ ವರ್ಷದಷ್ಟು ಆಯುಷ್ಯ ದಯಪಾಲಿಸಿತ್ತಿದ್ದಡ.  ಇದಕ್ಕೆ ತಮ್ಮ ಆಕ್ಷೇಪ ವ್ಯಕ್ತಪಡಿಸುಲೆ ಹೇಳಿ  ಮನುಷ್ಯರ  ಕೆಲವು ಪ್ರತಿನಿಧಿಗೊ ದೇವರ ಸನ್ನಿಧಾನಕ್ಕೆ ಹೋದವಡ. ಅವರ ಪ್ರತಿಭಟನೆಯ ವಾದವ ಆಲಿಸಿದ ದೇವರು ಅಖೇರಿಗೆ ಬೇರೆ ಬೇರೆ ಪ್ರಾಣಿಗಳ ಆಯುಷ್ಯವ ಕಮ್ಮಿ ಮಾಡಿ  ಮನುಷ್ಯರಿಂಗೆ ೧೦೦ ವರ್ಷದ ಪೂರ್ಣಯುಷ್ಯವ ಕೊಟ್ಟಾಡ.  "ಇದಾ, ಆನು ಕೊಡುದು ಕೊಟ್ಟಿದೆ, ಇನ್ನು ಇದರ ಫಲವ ಅನುಭವಿಸುದು ನಿಂಗೊಗೆ ಬಿಟ್ಟ ವಿಚಾರ" ಹೇಳಿಯೂ ಒಂದು ಎಚ್ಚರಿಕೆಯ ಮಾತು ಹೇಳಿ ಕಳುಸಿದಡ.   ಹೀಂಗೆ ಪೂರ್ಣಾಯುಷ್ಯದ ವರ ಪಡೆದ  ಮನುಷ್ಯರ ಜೀವನವ ಅವಲೋಕಿಸಿದರೆ ಎಂತ ಕಾಣ್ತು ? ಎಲ್ಲೋರೂ ೨೫ ವರ್ಷ ಕಾಲ ವಿದ್ಯಾಭ್ಯಾಸ ಮಾಡ್ಯೊಂಡು, ಸಿನೆಮಾ ನೋಡ್ಯೊಂಡು, ಸ್ನೇಹಿತರೊಟ್ಟಿಂಗೆ ತಿರಿಗ್ಯೊಂಡು  ಗಮ್ಮತಿಲ್ಲಿ ಇರ್ತವು. ದೇವರು ಸುರುವಿಂಗೆ ಕೊಟ್ಟ ಆಯುಷ್ಯ ಅಲ್ಲಿಗೆ ಮುಗುದಿರ್ತು. ಮತ್ತೆ  ಕೆಲಸಕ್ಕೆ ಸೇರಿ, ವೃತ್ತಿ ಜೀವನ ಸುರು ಆದ ಮೇಲೆ ಮದುವೆ ಆವುತ್ತು.  ಮತ್ತಾಣ ಸುಮಾರು ೨೦ ವರ್ಷ ಕತ್ತೆಯ ಆಯುಷ್ಯವ ಕತ್ತರಿಸಿ ತೆಗೆಶಿಗೊಂಡ ಕಾರಣ ತತ್ಸಮಾನ ಬದುಕು - ಮನೆಗೆ ಬಪ್ಪದು ತಡವಾದರೆ ಬೈಶಿಗೊಂಬದು, ೫೦ ಕಿಲೋ ತೂಕದ ರೇಶನಿನ ಚೀಲವನ್ನೂ ಚಿಮಿಣಿ ಎಣ್ಣೆ ಡಬ್ಬಿಯನ್ನೂ ಹೊತ್ತು  ತಪ್ಪದು, ತೊಟ್ಟಿಕ್ಕುವ ನೀರಿನ ನಲ್ಲಿಯ ರಿಪೇರಿ ಮಾಡ್ಸುದು, ಸರತಿ ಸಾಲಿಲ್ಲಿ ನಿಂದು ಕರೆಂಟಿನ ಬಿಲ್ಲು ಕಟ್ಟುದು ಇತ್ಯಾದಿ..   ಇದಾದ ಮೇಲೆ, ನಿವೃತ್ತಿ ಅಪ್ಪಂದ ಮದಲು ಒಂದು ಭದ್ರತೆ ಇರಲಿ    ಹೇಳಿ ಅಂದಾಜಿ ಮಾಡಿ ಸಾಲ ಗೀಲ ಮಾಡಿ  ಮನೆ ಕಟ್ಸುತ್ತ.  ಅಲ್ಲಿಂದ  ಮತ್ತೆ ಸುಮಾರು ೧೫ ವರ್ಷ ನಾಯಿ ಜೀವನ.  ಅಖೇರಿಗೆ ನಿವೃತ್ತನಾಗಿ ಸಾವನ್ನಾರ ಸರಿಯಾಗಿ ಕಣ್ಣು ಕಾಣದ್ದೆ, ಹಲ್ಲೆಲ್ಲ ಉದುರಿ ಚಕ್ಕುಲಿ ತಿಂಬಲೆಡಿಯದ್ದೆ, ಜಂಬ್ರಕ್ಕೆ ಹೋದರೂ ಸಿಹಿತಿಂಡಿ ತಿಂಬಲೆಡಿಯದ್ದೆ  ನರಕ್ಕ ಬಪ್ಪ ಗೂಬೆಯ ಜೀವನ ಸುರು ಆವುತ್ತು . 
 
ಹಾಂಗಾರೆ, ಆ ಬಾಲ್ಯದ ದಿನಂಗಳ ಎನಗೆ ಹಿಂದಿರುಗಿಸು ಹೇಳಿ ಜಗಜೀತ್ ಸಿಂಗ್  ಬೇಡಿಗೊಂಡದು ಎಂತಕೆ ಹೇಳಿ ಗೊಂತಾತನ್ನೆ ? ದೇವರಿಂಗೇ ಬುದ್ಧಿವಂತಿಕೆ ಹೇಳಿ ಕೊಟ್ರೆ ಇನ್ನೆಂತಕ್ಕು ?
-ಬಾಪಿ
 
 
 
 
 

Friday, September 10, 2010

ಮಾಧ್ಯಮಗಳ ಪ್ರಭಾವ

ಇತ್ತೀಚೆಗೆ ನಮ್ಮ ಸಮಾಜಲ್ಲಿ ಮಾಧ್ಯಮದ ಮಹತ್ವ  ಯಾವಗಂದಲೂ ಹೆಚ್ಚಾವುತ್ತಾ ಇಪ್ಪದರ  ನಾವು ಗಮನಿಸಿಕ್ಕು.  ಸಮಾಜದ ಮೇಲೆ ಮಾಧ್ಯಮಂಗಳ ಪ್ರಭಾವ  ಯಾವಾಗಲೂ ಸಕಾರಾತ್ಮಕವಾಗಿಯೇ ಇರ್ತಿಲ್ಲೆ. ಹಾಂಗಾಗಿ  ಈ ಬಗ್ಗೆ ಒಂದು ಅಭಿಪ್ರಾಯ  ವ್ಯಕ್ತಪಡಿಸುದು ಅಗತ್ಯ ಹೇಳಿ ಕಾಣ್ತು.
 
ಮಾಧ್ಯಮಂಗಳ ಪ್ರಯತ್ನಂದಾಗಿ  ಸುಮಾರು ಸಾಮಾಜಿಕ  ಮಹತ್ವದ ವಿಷಯಂಗೊ ಗಮನಾರ್ಹ ಪ್ರಾಧಾನ್ಯ ಪಡದು ಸುಖಾಂತ ಕಂಡದು ಸಮಾಧಾನಕರ ಬೆಳವಣಿಗೆ.    ಪ್ರಭಾವಿ ವ್ಯಕ್ತಿಗಳ ಕೈವಾಡಂದ ನಡೆದ ಕೆಲವು ಕೊಲೆ ಪ್ರಕರಣಂಗೊ ಮಾಧ್ಯಮಂಗಳ ಒತ್ತಡಂದಾಗಿ ನ್ಯಾಯಾಲಯಂಗಳಲ್ಲಿ ಹೊಸ ತಿರುವು  ಪಡದು ನಿಜವಾದ ಅಪರಾಧಿಗೊಕ್ಕೆ ಶಿಕ್ಷೆ ಆಗಿ ನ್ಯಾಯ ಸಿಕ್ಕುವ ಹಾಂಗೆ ಆದ್ದದೂ ಸಕಾರಾತ್ಮಕ ಪ್ರಭಾವ.   ಇಷ್ಟೆಲ್ಲಾ ಧನಾತ್ಮಕ ಬೆಳವಣಿಗೆಗಳೊಟ್ಟಿಂಗೇ,  ಮಾಧ್ಯಮ ಸಮೂಹದ  ವಾಹಿನಿಗಳ  ಮಧ್ಯೆ  ಮೇಲಾಟದ ಕುಚೇಷ್ಟೆಯನ್ನೂ ನೋಡ್ತಾ  ಇದ್ದು.  ಕೇವಲ ಸಾಧಾರಣ ಸುದ್ದಿಗಳನ್ನೂ  "ಸ್ಪೋಟಕ ವಾರ್ತೆ"ಗಳಾಗಿ ಪ್ರಸಾರ  ಮಾಡಿ ವೀಕ್ಷಕರ ಸಂಖ್ಯೆಯ  ಹೆಚ್ಚುಮಾಡಿಗೊಂಬ  ಹುನ್ನಾರದ  ಬಗ್ಗೆಯೂ ಬೇಕಾದಷ್ಟು ಚರ್ಚೆ ನಡದ್ದು. ಮುಂಬೈಲಿ   ನಡದ ಭಯೋತ್ಪಾದಕರ  ಧಾಳಿಯಂತಹ  ಗಂಭೀರ ಸಂದರ್ಭಲ್ಲಿ  ಘಟನಾ ಸ್ಥಳಂದಲೇ  ನೇರ ಪ್ರಸಾರ ಮಾಡಿ   ರಾಷ್ಟ್ರೀಯ  ಹಿತವ ಕಡೆಗಣಿಸಿದ ವಾಹಿನಿಗಳ ಅಪಚಾರವನ್ನೂ ಸಾರ್ವಜನಿಕರು ಖಂಡಿಸಿದ್ದವು.  ಸರಿಯಾದ ವಾರ್ತೆಯ ಸಮಾಜಕ್ಕೆ ಒದಗಿಸುವ   ಪ್ರಾಥಮಿಕ  ಕರ್ತವ್ಯವ ಬದಿಗೊತ್ತಿ, ಮಾಧ್ಯಮದ ಪ್ರಭಾವವನ್ನೇ  ವ್ಯವಹಾರದ ಭಂಡವಾಳವಾಗಿ ಉಪಯೋಗಿಸುದು  ಸಾಮಾನ್ಯ ಪ್ರಕ್ರಿಯೆ ಆಗಿಬಿಟ್ರೆ,  ಅದು ಸಮಾಜಕ್ಕೆ ಹಾನಿಕಾರಕವೇ ಸರಿ.  ಇಂತ ಸಂದರ್ಭಲ್ಲಿ  ಮಾಧ್ಯಮದ ಪ್ರಾಮಾಣಿಕತೆ ಪ್ರಶ್ನಾರ್ಹ ಆವುತ್ತು.   ಅಮಿತಾಭ್  ಬಚ್ಚನ್  ನಟಿಸಿದ್ದ  ರಣ್ ಚಿತ್ರ ಇದೇ ಸಂದೇಶವ ಒಳಗೊಂಡಿತ್ತು.  ಹಾಂಗಾರೆ ಮಾಧ್ಯಮಂಗೊ ತಮ್ಮ ಪ್ರಭಾವಂದ  ಸಮಾಜದ ಚಿಂತನೆಲಿ ಧನಾತ್ಮಕತೆಯನ್ನೂ ದೇಶಪ್ರೇಮವನ್ನೂ  ಹೆಚ್ಚಿಸುಲೆ ಎಡಿಗೋ ?
 
ಕೊಲೆ, ಸುಲಿಗೆ, ಭಯೋತ್ಪಾದನೆ, ಸಂಸತ್ತು - ವಿಧಾನ ಮಂಡಲಂಗಳಲ್ಲಿ  ಕೋಲಾಹಲ, ಡೆಂಗು, ಅತ್ಯಾಚಾರ, ನಕ್ಷಲ್ ವಾದ ಇತ್ಯಾದಿಗಳೇ ಮುಖಪುಟದ ಸಾಮಾನ್ಯ  ಸುದ್ದಿಗಳಾಗಿಪ್ಪಗ  ಉದಿಯಪ್ಪಗ ಎದ್ದು ಪತ್ರಿಕೆ ಓದುದೇ ಬೇಡ ಹೇಳಿ ಆವುತ್ತಿಲ್ಯೋ ?   ಈ ಸಮಸ್ಯೆ ತಪ್ಪುಸಲೆ  ಹೇಳಿಯೇ  ಪತ್ರಿಕೆಗಳ  ಹಿಂದಾಣ ಪುಟಂದ ಓದುವ ಅಭ್ಯಾಸ ಬೆಳೆಸಿಗೊಂಡ ಎಷ್ಟೋ ಜನ ವಾಚಕರಿರವೋ ?  ಆ  ಪುಟಗಳಲ್ಯಾದರೂ  ಒಬ್ಬ ಕ್ರೀಡಾಪಟುವೋ, ಕೈಗಾರಿಕೋದ್ಯಮಿಯೋ, ಸಂಗೀತಗಾರನೋ  ಮಾಡಿದ ಸಾಧನೆಯ ಸುದ್ದಿಯ ಓದಿ  ಸ್ಪೂರ್ತಿ  ಪಡವ ಅವಕಾಶ ಸಿಕ್ಕಲಿ ಹೇಳಿ ಹಂಬಲಿಸಿದರೆ ಎಂತ ತಪ್ಪು ?  ನಕಾರಾತ್ಮಕ ಪ್ರಭಾವಂಗಳೇ ಹೆಚ್ಚಾಗಿಪ್ಪ ಇಂದ್ರಾಣ  ಸಮಾಜಲ್ಲಿ  ಸ್ಪೂರ್ತಿದಾಯಕ ವಾತಾವರಣದ ಸೃಷ್ಟಿ ಮಾಡುದು ಹೇಂಗೆ ? ಮಾಧ್ಯಮಂಗೊ ಸಾಮೂಹಿಕವಾಗಿ ದೃಢ ಮನಸ್ಸು ಮಾಡಿರೆ ಈ ವಿಷಯಲ್ಲಿ ಖಂಡಿತವಾಗಿ ಅಪಾರ ಕೊಡುಗೆ  ಕೊಡ್ಳೆಡಿಗು.
ದುಷ್ಟ ರಾಜಕಾರಣಿಗೊ, ಭ್ರಷ್ಟ ವ್ಯವಸ್ಥೆ, ಕುಲಗೆಟ್ಟ ಮಾರ್ಗಂಗೊ, ವಾಹನ ದಟ್ಟಣೆ, ಪರಿಸರ ಮಾಲಿನ್ಯ, ವಿದ್ಯುತ್  ಕಡಿತ ಇತ್ಯಾದಿ   ಹೊಲಸುಗಳ ಹೊರತಾಗಿಯೂ   ಸ್ವಂತ ಜೀವನ ಸಂಗ್ರಾಮಲ್ಲಿ   ವಿಜಯಿಗಳಾಗಿ  ಇತರರಿಗೆ ಮಾರ್ಗದರ್ಶಿಗ ಹಾಂಗಿಪ್ಪ    ವ್ಯಕ್ತಿಗೊ    ನಮ್ಮ ಮಧ್ಯೆ ಬೇಕಾದಷ್ಟಿದ್ದವು. ಇಂತ ವ್ಯಕ್ತಿಗಳ ಭಾವಂಚಿತ್ರಂಗೊ ನಮ್ಮ ಪತ್ರಿಕೆಗಳಲ್ಲಿ ರಾರಾಜಿಸುವ  ಹಾಂಗಾಗಲಿ.  ಒಳ್ಳೆ ಕೆಲಸ ಮಾಡುವ ಮಂತ್ರಿಗಳ ಹೆಸರು ಮಾಂತ್ರ ಎದುರಾಣ ಪುಟಲ್ಲಿ ಬರಲಿ.  ಹೀಂಗೆ  ಧನಾತ್ಮಕ ವಾರ್ತೆಗಳ ಮುಖಪುಟಲ್ಲಿ ಓದುವ ಅವಕಾಶ ಹೆಚ್ಚು ಸಿಕ್ಕುವ ಹಾಂಗಾದರೆ, ಕರ್ನಾಟಕದ ಮುಕ್ಕೋಟಿ ಜನರಿಂಗೆ  ಅತ್ಯಗತ್ಯವಾದ  ಹೊಸ ಸುಪ್ರಭಾತ  ಕೇಳಿಸಿದ ಪುಣ್ಯ  ಬಕ್ಕು.  ಮತ್ತೆ, ಕೇವಲ ಮುಖಪುಟಲ್ಲಿ ಶುದ್ದಿ ಮಾಡುದಕ್ಕಾಗಿಯೇ ಬಡಬಡಿಸಿ, ಗುಲ್ಲು ಎಬ್ಬಿಸುವ ರೌಡಿ ರಾಜಕಾರಣಿಗೊಕ್ಕೆ  ಸಂಬಂಧಿಸಿದ ವಾರ್ತೆಗಳ ಹಿಂದಿನ ಪುಟಂಗೊಕ್ಕೆ ವರ್ಗಾವಣೆ ಮಾಡಿರೆ ಅಂತಹವಕ್ಕೆ  ಪಾಠ ಕಲಿಸಿದ ಹಾಂಗಕ್ಕು.
 
ಆದರೆ, ಪುಚ್ಚೆಯ ಕೊರಳಿಂಗೆ ಘಂಟೆ ಕಟ್ಟುವ ಕೆಲಸ ಮಾಡುದು ಆರು ? ಸುದ್ದಿ ಮಾಧ್ಯಮ ವ್ಯವಹಾರದ ಸಂತೆ ಆಗಿಪ್ಪಗ ಎಲ್ಲೋರಿಂಗೂ ಸ್ಪರ್ಧೆಲಿ ಮುಂದೆ ಹೋಪ ಚಾಳಿಯೇ ಹೊರತು, ಸಮಾಜದ  ಚಿಂತೆ ಇಪ್ಪ ಹಾಂಗೆ ಕಾಣ್ತಿಲ್ಲೆ.  ಆದಷ್ಟು ಬೇಗ ಇನ್ನೊಬ್ಬ ರಾಮನಾಥ ಗೋಯೆಂಕ ಹುಟ್ಟಿ ಬರಲಿ.
 
-ಬಾಪಿ