Sunday, May 10, 2020

ಕೊರೋನಾ ಗೃಹಬಂಧನದ ಕಥೆ

ಕೊರೋನಾ ಗೃಹಬಂಧನದ ಕಥೆ

ಸುಮಾರು ದಿನಂದ ಮನೆ ಊಟ ಮಾಡಿ ಚೂರು ಬೊಡುದು ಒಬ್ಬ ಭಾವಯ್ಯಂಗೆ ಹೋಟೆಲಿಂಗೆ ಹೋಗಿ ಒಂದು ಮಸಾಲೆ ದೋಸೆ ತಿಂದರೆ ಅಕ್ಕು ಹೇಳಿ ಮನಸ್ಸಿಲ್ಲಿ ಆಶೆ ಆತಡ.  "ಮಸಾಲೆ ದೋಸೆಲಿ ಎಂತ ವಿಶೇಷ ಇದ್ದು? ನಾವು ಯಾವಾಗಳೂ ಮನೆಲಿ ಮಾಡುವ ಉದ್ದಿನ ದೋಸೆಯನ್ನೇ ಅವು ಒಳ ಬಟಾಟೆ ಬಾಜಿ ಹಾಕಿ ಮಡಿಸಿ ಕೊಡುದು. ನಾಳೆ ಉದಿಯಪ್ಪಗ ತಿಂಡಿಗೆ ಅದನ್ನೇ ಮಾಡುವೊ" ಹೇಳಿ ಹೆಂಡತ್ತಿ ಹೇಳಿತ್ತಡ. ಆದರೂ, ಹೋಟೇಲಿನ ತಿಂಡಿಗಳ ರುಚಿಯೇ ಬೇರೆ. ದೊಡ್ಡ ಕಾವಲಿಗೆಗೆ ಬೆಗರು ಅಂಟಿದ ಕೈಲಿ ನೀರು ಚೇಪಿ,  ಹಿಡಿಸೂಡಿಲಿ ಒಂದರಿ ಕಾವಲಿಗೆಯ ಉಡುಗಿ, ದೋಸೆಯ ತೆಳ್ಳಂಗೆ ಎರದು, ಗೋಳಿಬಜೆ ಮಾಡಿ ಒಳುದ ಎಣ್ಣೆಯ ಬಳುದು, ದೋಸೆಯ ಕಂದು ಬಣ್ಣ ಬಪ್ಪಗ ಎಳಕ್ಕಿ ಕರು ಕುರು ಅಪ್ಪ ಹಾಂಗೆ ಮಾಡಿ ಕೊಡುವ ಕಾರಣವೇ ಹೆಚ್ಚು ರುಚಿ ಅಪ್ಪದು‌. ಇದು ತಿಂಬವಕ್ಕೆಲ್ಲಾ ಗೊಂತಿಪ್ಪದೇ ಆದರೂ, ತಿಂಬ ಕೊದಿ ಬಿಡ್ತಿಲ್ಲೆ. ಮನಸ್ಸಿನ ಆಶೆಗೊ ಎಲ್ಲ ಹಾಂಗೆ,  ಕುಂಡೆ- ಬಾಯಿ ಇಲ್ಲೆ.  ಅಂಬಗ ಈಗ ಎಂತ ಕೆಣಿ ಮಾಡುದು ಹೇಳಿ ಭಾವಯ್ಯ ಚೂರು ಆಲೋಚನೆ ಮಾಡಿ "ನಿನಗುದೇ ಮನೆಲಿ ಕೂದು ಕೂದು ಉದಾಸನ ಆದಿಕ್ಕನ್ನೆ, ಈಗ ಜಂಬ್ರಂಗಳೂ ಇಲ್ಲೆ. ಒಂದರಿ ಅಂತೆ ಕೊಡೆಯಾಲಕ್ಕೆ ಹೋಗಿ ದೋಸೆ ತಿಂದಿಕ್ಕಿ ಬಪ್ಪೊ" ಹೇಳಿ ಹೆಂಡತ್ತಿಗೆ ಉಪಕಾರ ಮಾಡುವವನ ಹಾಂಗೆ ಹೇಳಿದಡ.  ಇಡೀ ಜನ್ಮಕ್ಕೆ ಸಾಕಪ್ಪಷ್ಟು  ಪ್ರೀತಿ, ಸಹಾನುಭೂತಿಗಳ  ಸುರಿಮಳೆ ಒಂದೇ ಸರ್ತಿ ಆದ್ದದರಿಂದ ಕರಗಿದ ಹೆಂಡತ್ತಿ "ಅಕ್ಕಂಬಗ ಹೋಪೊ. ಆದರೆ ಮಾರ್ಗಲ್ಲಿ ಪೋಲೀಸಿನವು ಅಲ್ಲಲ್ಲಿ ಚೆಕ್ ಮಾಡ್ತವಡ. ಪಾಸು ಇದ್ದವರ ಮಾಂತ್ರ ಬಿಡುದಡ ಹೇಳಿ ಮೇಲಾಣ ಮನೆ ಸುಶೀಲಕ್ಕ ಹೇಳ್ಯೊಂಡಿತ್ತು, ಎಂತ ಮಾಡುದು" ಹೇಳಿ ಕೇಳಿತ್ತಡ.  ಎಲ್ಲ ತಯಾರಿ ಮಾಡಿ ಮಡುಗಿತ್ತಿದ್ದ ಭಾವಯ್ಯ, "ಆಸ್ಪತ್ರೆಗೆ ಹೋಪವರ  ತಡೆತ್ತವಿಲ್ಲೆ. ನಮ್ಮತ್ರೆ ಇಪ್ಪ ಯಾವುದಾದರೂ ಹಳೆ ರಸೀದಿಯ ತೆಕ್ಕೊಂಬೊ. ಎಲ್ಲಿ ಆದರೂ ನಿಲ್ಲಿಸಿ ಕೇಳಿರೆ ಇದು ಡಾಕ್ಟ್ರ ಬರದು ಕೊಟ್ಟ ಚೀಟಿ, ಮದ್ದು ತಪ್ಪಲೆ ಹೋಪದು ಹೇಳುವೊ. ಪೋಲೀಸುಗೊಕ್ಕೆ ಇಂಗ್ಲೀಷ್ ಬತ್ತೋ, ಅಂತೆ  ನೋಡಿ ಹೋಗಿ ಹೇಳಿ ಬಿಡುಗು" ಹೇಳಿ ಧೈರ್ಯ ತುಂಬಿಸಿದಡ.  ಅರ್ಧ ಘಂಟೆಲಿ ರೆಡಿ ಆಗಿ ಇಬ್ರುದೇ ಹೆರಟವು. ಒಂದೆರಡು ಜಾಗೆಲಿ ನಿಲ್ಲಿಸಿದ ಪೋಲೀಸಿನವರತ್ರೆ ಭಾವಯ್ಯನ ಕೆಣಿ ಫಲಕಾರಿ ಆಗಿ, ಕೊಡೆಯಾಲಕ್ಕೆ ಎತ್ತಿದವು. ಭಾವಯ್ಯಂಗೆ ತಡವಲೆಡಿಯದ್ದ ಖುಷಿ.  ಅಲ್ಲಿ ಹೋಟೆಲಿಂಗೆ ಹೋದರೆ ಎದುರಾಣ ಗೇಟು ಮುಚ್ಚಿತ್ತಿದ್ದವಡ. ಗೇಟಿಲ್ಲಿ "ಕೇಂದ್ರ ಸರ್ಕಾರ lockdown ಘೋಷಣೆ ಮಾಡಿರುವುದರಿಂದ ನಮ್ಮ ಹೋಟೇಲನ್ನು ಎಪ್ರಿಲ್ 14ನೇ ತಾರೀಕಿನ ವರೆಗೆ ಬಂದ್ ಮಾಡಲಾಗಿದೆ. ಗ್ರಾಹಕರಿಗೆ ಆಗುವ ಅನಾನುಕೂಲಕ್ಕಾಗಿ ವಿಷಾದಿಸುತ್ತೇವೆ" ಹೇಳಿ ಬರದ ಚೀಟು ಅಂಟಿಸಿತ್ತಿದ್ದಡ. ಹೇಂಗೂ ಬಂದಾತನ್ನೆ, ಇನ್ನು ಯಾವುದಾದರೂ ಹೋಟೆಲ್ ಇದ್ದೋ ನೋಡುವೊ ಹೇಳಿ ಚೂರು ಹೊತ್ತು ತಿರುಗಿರೆ, ಎಲ್ಲ ಹೋಟೇಲುಗಳಲ್ಲಿಯೂ ಇದೇ ಕಥೆ.  ಹೆಂಡತ್ತಿಗೆ ಒಂದರಿ ಹೆರ ತಿರುಗಿ ಮನಸ್ಸಿಂಗೆ ಖುಷಿ ಆತು. ಆದರೆ ಅಷ್ಟೆಲ್ಲಾ ಪೂರ್ವ ತಯಾರಿ ಮಾಡಿರೂ ಮೂಲ ಉದ್ದೇಶ ಈಡೇರದ್ದ ಕಾರಣ ಭಾವಯ್ಯನ ಚಡಪಡಿಕೆಯ  ಹೇಳ್ಳೆಡಿಯ. ಎಂತ ಆದರೂ ಇದು ತಾನೇ ಎಳದು ಹಾಕ್ಯೊಂಡ ತಾಪತ್ರಯ ಆದ ಕಾರಣ, ಮೋರೆಲಿ ಎಂತ ಬೇಜಾರವನ್ನೂ ತೋರಿಸಿಗೋಳದ್ದೆ ಬಪ್ಪ ದಾರಿಲಿ ರಾಜ್ ಕಪೂರ್ ಸಿನೆಮಾದ "ಜಾನೆ ಕಹಾಂ ಗಯೇ ವೋ ದಿನ್.." ಪದ್ಯ ಕೇಳಿಗೊಂಡು ಸುರಕ್ಷಿತವಾಗಿ ಮನೆ ಸೇರಿದವಡ.  ಸುಮಾರು ತಡವಾದ ಕಾರಣ, ಊಟಕ್ಕೆ ಮುನ್ನಾಣ ದಿನಕ್ಕೆ ಮಾಡಿ ಒಳುದ ಕೊಯಿಶೆಕ್ಕಿ ಹೆಜ್ಜೆಯುದೇ, ಬಸಳೆ ಬೆಂದಿಯುದೇ ! ಕೊಡೆಯಾಲಕ್ಕೆ ಹೋಗಿ ಬಂದು ಬಚ್ಚಿ, ಹಶು ಆಗಿ  ಲೋಕ ಇಲ್ಲದ್ದ ಕಾರಣ ಹೆಂಡತ್ತಿ  ಕೇವಲ 5 ನಿಮಿಷಲ್ಲಿ ಬೆಶಿ ಮಾಡಿ ಕೊಟ್ಟತ್ತಡ. ಭಾವಯ್ಯ ಮಸಾಲೆ ದೋಸೆಯನ್ನೇ ಗ್ರೇಶಿಗೊಂಡು ಗಬಗಬನೆ ಉಂಡು, ಒಂದು ಚೆಂಬು ನೀರು ಕುಡುದು, ರಗ್ಗು ಹೊದದು ಗುಡಿ ಹೆಟ್ಟಿ ಒರಗಿದಡ.. 

- ಬಾಪಿ 
10.5.2020