Wednesday, October 28, 2009

ಪರಿವರ್ತನೆಯ ಗಾಳಿ

ನಮ್ಮ ಊರಿಲ್ಲಿ  ಕೆಲವು ಸಮಯಂದ ಕೇಳಿ ಬತ್ತಾ  ಇತ್ತಿದ್ದ  ಸಮಸ್ಯೆ ಹೇಳಿರೆ ಕೃಷಿಕಾರ್ಮಿಕರ ಕೊರತೆ.   ಕೂಲಿ ಆಳುಗಳ ಮಕ್ಕೊ ವಿದ್ಯಾಭ್ಯಾಸ ಪಡಕ್ಕೊಂಡು ಉದ್ಯೋಗ ವಿಕಲ್ಪಂಗಳ  ಹುಡುಕ್ಕಿಗೊಂಡು ಹೋಪಲೆ ಸುರು ಆದ್ದದು  ಹೆಚ್ಚುಕಮ್ಮಿ ಒಂದು ತಲೆಮಾರು ಹಿಂದಾಣ ಪ್ರಕ್ರಿಯೆ.  ಆನು ಶಾಲೆಗೆ ಹೋಪ ಕಾಲಕ್ಕೆ ಬೀಡಿ ಕಟ್ಟುವ ಕೆಲಸ ವ್ಯಾಪಕವಾದ ಗುಡಿ ಕೈಗಾರಿಕೆ ಆದ್ದದು (ಹೆಣ್ಣು)  ಕೃಷಿ ಕಾರ್ಮಿಕರ ಕೊರತೆ ಉಂಟಪ್ಪಲೆ  ದೊಡ್ಡ ಕಾರಣ ಆಗಿತ್ತು.  ಆ ಸಮಯಲ್ಲಿ  ಅಲ್ಪ ಸ್ವಲ್ಪ ಕಲಿವಿಕೆ ಆದ ಗೆಂಡಾಳುಗೊಕ್ಕೆ ಮೀಸಲಾತಿ ಲೆಕ್ಕಲ್ಲಿ ಸರಕಾರೀ ಬ್ಯಾಂಕುಗಳಲ್ಲಿ ಗುಮಾಸ್ತ,  ಪೇದೆಯೇ ಮೊದಲಾದ   ಕೆಲಸ ಸಿಕ್ಕಿಗೊಂಡಿತ್ತು.   ಅಂಬಗ ಕೆಲವರ ಮನೆಗಳಲ್ಲಿ ಮಾತ್ರ ಶಾಲೆಗೆ ಕಳುಸುವ ಅಭ್ಯಾಸ ಇತ್ತದಾದರೆ, ಈಗ ಪ್ರತಿಯೊಂದು ಮನೆಯ ಮಕ್ಕಳೂ ಶಾಲೆಗೆ ಹೋವುತ್ತವು.  ಈ ಬೆಳವಣಿಗೆ ಸರಕಾರದ  ಸಂಪೂರ್ಣ ಸಾಕ್ಷರತಾ ಅಭಿಯಾನವ ಯಶಸ್ವಿ ಮಾಡಿ, ಇನ್ನೊಂದು ಹೊಡೆಂದ ಕೃಷಿ ಕಾರ್ಮಿಕರ ಸಮಸ್ಯೆ ಇನ್ನೂ ಉಲ್ಬಣಿಸುವ ಹಾಂಗೆ ಮಾಡಿದ್ದು.   

ಕಲ್ತ ಮೇಲೆ ಅವರವರ ಯೋಗ್ಯತೆಯ ಮೇಲೆ ಯಾರು ಎಂತ ಬೇಕಾರೂ ಅಪ್ಪಲಕ್ಕನ್ನೆ ? ಅಲ್ಲಿಗೆ, ಜಾತಿ-ವೃತ್ತಿಗಳ ಮಧ್ಯೆ ಇತ್ತ ತಲೆತಲಾಂತರದ ಸಂಬಂಧದ ಕೊಂಡಿ ಹೆಚ್ಚು ಕಮ್ಮಿ ಮುಗುದ ಹಾಂಗೇ ಹೇಳಿ ಕಾಣ್ತು.  ಇನ್ನಾಣ ಕಾಲಲ್ಲಿ   ಭಂಡಾರಿಯ ಮಗ ವೈದ್ಯನೋ, ಕೂಲಿಯವನ ಮಗ ಶಿಕ್ಷಕನೋ ಅಪ್ಪಲಕ್ಕು.  ಹಾಂಗೇ, ಬ್ರಾಹ್ಮಣನ ಮಗ ವಾಹನ ಚಾಲಕನೂ ಅಪ್ಪಲಕ್ಕು.  ಕೆಲಸ ಹೇಳುದು ಜನ್ಮಂದ ಅಥವಾ ಜಾತಿಂದ ನಿರ್ಧಾರ ಅಪ್ಪದರ ಬದಲು ಅವರವರ ಯೋಗ್ಯತೆಯ ಮೇಲೆ ನಿರ್ಧಾರ ಆಯೆಕಾದ್ದದು ನ್ಯಾಯ ಹೇಳಿ ಒಪ್ಪಿಗೊಂಡರೆ,  ವರ್ಣಾಶ್ರಮ ವ್ಯವಸ್ಥೆಯ ಸರಿಯಾದ ವ್ಯಾಖ್ಯಾನ ಮಾಡ್ಳೆ ಎಡಿಗಕ್ಕು.  ಯಾವುದೇ ಸಮಾಜಲ್ಲಿ  ಬ್ರಾಹ್ಮಣ (ಜ್ಞಾನಿಗೊ/ಗುರುಗೊ/ಅರ್ಚಕರು), ಕ್ಷತ್ರಿಯ (ರಾಜರು/ಯೋಧರು),  ವೈಶ್ಯ (ವ್ಯಾಪಾರಿವರ್ಗ/ಕಾರ್ಖಾನೆ ಮಾಲಿಕಂಗೊ),   ಶೂದ್ರ (ಕೂಲಿಯೇ ಮೊದಲಾದ ಸಾಮಾನ್ಯ ಕೆಲಸದವು) -   ಹೀಂಗೆ ನಾಲ್ಕು ಪಂಗಡಂಗೊ ಇರೆಕಾದ್ದದು ಅತಿ ಅವಶ್ಯ.   ಮುಂದುವರಿದ ಸಮಾಜಂಗಳಲ್ಲಿಯೂ ಈ ಪಂಗಡಂಗೊ ಇದ್ದು.  ಆದರೆ, ಅವು ಶೂದ್ರ ವರ್ಗದವಕ್ಕೆ ಅಡ್ಡ ಹಂತಿ ಹಾಕದ್ದೆ ವೃತ್ತಿ ಗೌರವವ ಕಾಪಾಡಿಗೊಂಡು ಬೈಂದವು.   ಅದೇ,  ಎಷ್ಟೆಲ್ಲಾ ಒಳ್ಳೆಯ ಆಂಶಂಗೊ ಇಪ್ಪ ನಮ್ಮ ಪುರಾತನ ಘನ ಸಂಸ್ಕೃತಿಲಿ ಕೆಲವು ಸ್ವಾರ್ಥ ಮತ್ತು  ಸಣ್ಣತನದ ನಡವಳಿಕೆಗೊ  ಸೇರಿಗೊಂಡು ಜನಂಗೊ ಅದನ್ನೇ ತಮ್ಮ ಅನುಕೂಲಕ್ಕೆ ಉಪಯೋಗಿಸಿಗೊಂಬ ಹಾಂಗೆ ಆತು.  ಅಸ್ಪೃಶ್ಯತೆ ಇಂತಹ ಸಣ್ಣತನಕ್ಕೆ ಒಂದು ಉದಾಹರಣೆ.   ಮುಂದಿನ ಸುಶಿಕ್ಷಿತ ಸಮಾಜಲ್ಲಿ ಇಂತಹ ನಡವಳಿಕೆಗೊಕ್ಕೆ ಅವಕಾಶ ಇಲ್ಲದ್ದ ಕಾರಣ ಅದೆಲ್ಲಾ ತನ್ನಷ್ಟಕೇ  ನಿಂದು ಹೋಕು.  ಎಷ್ಟೋ ತಲೆಮಾರಿಂದ ಕೆಳಾಣ ವರ್ಗಲ್ಲಿದ್ದವು ಕಲ್ತು ತಕ್ಷಣ ಮುಂದೆ ಬಂದಪ್ಪಗ  ಅಲ್ಪ ಕಾಲಾವಧಿಲಿ ಗುಣಮಟ್ಟದ ಸಮಸ್ಯೆ ಉಂಟಪ್ಪ ಸಾಧ್ಯತೆ  ಇದ್ದರೂ, ಒಟ್ಟಾರೆ  ಇದೊಂದು ನಮುನೆ ಸಕಾರಾತ್ಮಕವಾದ ಬೆಳವಣಿಗೆ  ಹೇಳಿ ಎನ್ನ ಖಾಸಗಿ ಅಭಿಪ್ರಾಯ.  ಹಾಂಗಾರೆ, ಕೃಷಿಕರ ಸಮಸ್ಯೆಗೆ ಪರಿಹಾರ ಎಂತ ಹೇಳುವ ಪ್ರಶ್ನೆಗೆ ನಿಧಾನಕ್ಕೆ ಸಮಾಧಾನ ಸಿಕ್ಕೆಕ್ಕಷ್ಟೆ ಹೇಳಿ ಕಾಣ್ತು.  ಕೃಷಿಯನ್ನೇ ಇಷ್ಟ ಪಟ್ಟು ಮಾಡುವವು ತಾವೇ ಸ್ವತಃ ಕೆಲಸ ಮಾಡುವ ಸಾಮರ್ಥ್ಯ ಬೆಳೆಶಿಗೊಂಗು. ಅಥವಾ, ಅಡಕ್ಕೆಯಂತಹ ಕಷ್ಟದ ಕೃಷಿ ಬಿಟ್ಟು ಸುಲಭದ ಪರ್ಯಾಯಂಗಳ ಹುಡುಕ್ಕುಗು.  ಇಲ್ಲವೇ, ಸ್ವಂತ ಪ್ರೇರಣೆಂದ ಪರಸ್ಪರ ಸಹಕಾರಕ್ಕಾಗಿ ಕೃಷಿಕರ ಸ್ವ-ಸಹಾಯ ಗುಂಪುಗೊ ಹುಟ್ಟಿಗೊಂಗು.  ಅಂತೂ ಎಲ್ಲವೂ ಸುಖಾಂತ ಅಕ್ಕು ಹೇಳಿ ಗ್ರೇಶಿಗೊಂಬೊ.

ಈಗ ಊರಿಲ್ಲಿ ಆಳುಗಳ ಸಮಸ್ಯೆ ಬಗ್ಗೆ  ಆರೂ ಅಷ್ಟು ಮಾತಾಡ್ತವಿಲ್ಲೆ.  ಸದ್ಯದ ಬಿಸಿ ಸುದ್ದಿ ಹೇಳಿರೆ,  ಜವ್ವನಿಗರಿಂಗೆ ಮದುವೆಗೆ "ಯೋಗ್ಯ"  ಕೂಸುಗೊ ಸಿಕ್ಕದ್ದೆ ಇಪ್ಪದು.  ಅದರಲ್ಲೂ ವಿಶೇಷವಾಗಿ,  ಕೃಷಿಕರ ಮಕ್ಕೊಗೆ.    ಸದ್ಯಕ್ಕೆ ಸಮಾಜಲ್ಲಿ ಮಾಣಿ-ಕೂಸುಗಳ ಸಂಖ್ಯೆಲಿಪ್ಪ ಅಸಮತೋಲನವೇ  ಮೂಲ ಕಾರಣಂಗಳಲ್ಲಿ ಒಂದು ಆಗಿಪ್ಪಲೂ ಸಾಕು.   ಇದರ ದೈವಲೀಲೆ ಹೇಳಿ ಅನುಭವಿಸೆಕ್ಕಷ್ಟೆ.   ಮತ್ತೆ,  ಈಗ ಹೆಚ್ಚು ಹೆಚ್ಚು ಕೂಸುಗೊ ಕಲಿವಿಕೆ ಆಗಿ, ವೃತ್ತಿಜೀವನದ ಸಾಧನೆಗೆ  ಆದ್ಯತೆ ಕೊಟ್ಟುಗೊಂಡು ಆರ್ಥಿಕ ಸ್ವಾವಲಂಬನೆ ಪಡಕ್ಕೊಂಡಿಪ್ಪದುದೇ ಇನ್ನೊಂದು ಪ್ರಬಲ ಕಾರಣ ಹೇಳಿಯೂ ವಿಮರ್ಶೆ ಮಾಡ್ಳಕ್ಕು.   ೧೦ ವರ್ಷದ ಸಣ್ಣ ಪ್ರಾಯಲ್ಲಿ  ಮದುವೆ ಆಗಿ ಗೆಂಡನ ಮನೆಯವರ ಸೇವೆ ಮಾಡ್ಳೆ ಸುರು ಮಾಡಿ, ಹತ್ತತ್ತು ಮಕ್ಕಳ ಹೆತ್ತು ದೊಡ್ದ ಮಾಡಿದ  ಹಿಂದಾಣ ತಲೆಮಾರಿನ  ಎಷ್ಟೋ ಜನರ ಕಥೆ ನವಗೆ ಕೇಳಿ ಅಥವಾ ನೋಡಿ ಗೊಂತಿಕ್ಕು.  ಅದೇ  ಈಗ, ೩೦ ವರ್ಷ ಆದರೂ ಸ್ವ-ಇಚ್ಛೆಂದ ಮದುವೆ ಆಗದ್ದೆ ಇಪ್ಪ ಕೂಸುಗೊ ಎಷ್ಟುದೇ ಇದ್ದವು.   ಆದರೆ, ಕೃಷಿಮಾಡುವ ಮಾಣ್ಯಂಗೊಕ್ಕೆ ಮನೆಲಿ ಅಬ್ಬೆಗೆ ಒಬ್ಬಂಗೇ ಕೆಲಸ ಮಾಡಿಗೊಂಬಲೆ ಪೂರೈಸುತ್ತಿಲ್ಲೆ ಹೇಳಿ  ಮದುವೆ ಅಪ್ಪಲೆ ಅಂಬ್ರೆಪ್ಪು.  ಹೀಂಗೆ ದೃಷ್ಟಿಕೋಣಂಗಳ ಮಧ್ಯೆ ಇಪ್ಪ ಅಂತರಂದಾಗಿ   ಇಂದಿಂಗೆ  ಮದ್ಮಾಳುಗಳ  ತತ್ವಾರ ಕಂಡು ಬತ್ತಾ ಇದ್ದು.   ಮೊದ್ಳಾಣ ಅಜ್ಜಂದ್ರು ಎಲ್ಲಾ ಎರಡೆರಡು ಮದುವೆ ಆಗಿ ಹೆಂಡತ್ತಿಯಕ್ಕಳ ಗಾಣದ ಎತ್ತು (ಎಮ್ಮೆ) ಗಳ ಹಾಂಗೆ ನಡೆಶಿಗೊಂಡ ಪಾಪದ ಫಲವ ಪುಳ್ಯಕ್ಕೊ ಅನುಭವಿಸುತ್ತಾ ಇಪ್ಪದೋ ಏನೋ ?   ಅಂತೂ, ಮಾಣ್ಯಂಗಳ ದೊಡ್ಡಸ್ತಿಕೆಯ "ಸುವರ್ಣ ಯುಗ"  ಮುಗುತ್ತು ಹೇಳ್ಳಕ್ಕು !  ಅದರೊಟ್ಟಿಂಗೇ, ಕೂಸಿನ ಅಬ್ಬೆಪ್ಪಂದ್ರಿಂಗೆ ನಿಜವಾಗಿ ಸಲ್ಲೆಕ್ಕಾದ ಮರ್ಯಾದೆ ಸಿಕ್ಕುವ ಕಾಲವೂ  ಕೂಡಿ ಬಂತು.

ಇದರೊಟ್ಟಿಂಗೆ ಜಾತಿಯ ಬೇಲಿಯೂ ಶಿಥಿಲ ಆಗಿ ಹವ್ಯಕ-ಹವ್ಯಕೇತರರ ಮಧ್ಯೆ ಸಂಬಂಧಂಗೊ ಹೆಚ್ಚು ಸಂಖ್ಯೆಲಿ  ಕಾಂಬಲೆ, ಕೇಳ್ಳೆ  ಸಿಕ್ಕುತ್ತಾ ಇದ್ದು.   ಇಷ್ಟರವರೆಗೆ ನಮ್ಮ ಜೆಂಬ್ರಂಗಳಲ್ಲಿ   ಬರೀ ಕುಂಬ್ಳೆ ಸೀಮೆಯ ಮೇಲಾರ,  ಸುಳ್ಯ ಸೀಮೆಯ ಸೀವು ಇತ್ಯಾದಿಗಳ ವೈವಿಧ್ಯ ಆದರೆ,  ಇನ್ನು ಮುಂದೆ ಕಲ್ಕತ್ತಾದ ರಸಗುಲ್ಲಾ, ಚೆನ್ನೈಯ ಪೊಂಗಲ್, ಮಹಾರಾಷ್ಟ್ರದ ಶ್ರೀಖಂಡ್, ಪಂಜಾಬಿನ  ಜಿಲೇಬಿ ಇತ್ಯಾದಿಗಳನ್ನೂ ಚಪ್ಪರಿಸುವ  ಅವಕಾಶ  ಹೆಚ್ಚು ಹೆಚ್ಚು ಸಿಕ್ಕುಲೂ ಸಾಕು.   ಕೇವಲ  ಮೃಷ್ಟಾನ್ನವ ಅಪೇಕ್ಷೆ ಮಾಡುವ ಇತರರಿಂಗೆ ಇದು ಸುವಾರ್ತೆ  ಆದರೂ, ಆಯಾ ಮಾಣಿ-ಕೂಸುಗಳ ಅಬ್ಬೆಪ್ಪಂದ್ರಿಂಗೆ  ಖಂಡಿತ ಸುಲಭಲ್ಲಿ ಜೀರ್ಣ ಅಪ್ಪ ಸಂಗತಿ ಅಲ್ಲ.  ಸಂಪ್ರದಾಯವನ್ನೇ  ನಂಬಿಗೊಂಡು ಜೀವನ ಮಾಡಿದವಕ್ಕೆ ತಕ್ಷಣ ಯಾರೋ ಇಬ್ರಾಯಿ, ಪಿಂಟೋ, ಸರ್ದಾರ್ಜಿ, ಮೆಹ್ತಾ, ಪಟ್ನಾಯಕ್ ಅಥವಾ ಬ್ಯಾನರ್ಜಿಯ  ಅಳಿಯ ಹೇಳಿ ಸ್ವೀಕಾರ  ಮಾಡ್ಳೆ ಹೇಂಗೆ ಸಾಧ್ಯ ?  ಆದರೆ, ಪರಿವರ್ತನೆಯ ಗಾಳಿ ಪ್ರಬಲವಾಗಿಯೂ, ವ್ಯಾಪಕವಾಗಿಯೂ ಇಪ್ಪಗ  ಹವ್ಯಕ ಸಮಾಜಕ್ಕೆ ಮಾತ್ರ ತಟ್ಟದ್ದೆ ಇಪ್ಪದಾದರೂ ಹೇಂಗೆ ?

ಪರಿವರ್ತನಾಶೀಲವಾಗಿಪ್ಪದು ಸಮಾಜದ ಸಹಜ ಪ್ರವೃತ್ತಿ ಹೇಳಿ ಆದರೆ, ಅದರ ಒಪ್ಪಿಗೊಂಬದೇ ಸುಖವೋ ಏನೋ ?

- ಬಾಪಿ / ಬುಧವಾರ, ೨೮ ಅಕ್ಟೋಬರ ೨೦೦೯

Saturday, October 24, 2009

ಚೌ ಚೌ - ೦೧

ನೋಬೆಲ್ ಪ್ರಶಸ್ತಿ : ಒಬಾಮಂಗೆ ನೋಬೆಲ್ ಶಾಂತಿ ಪ್ರಶಸ್ತಿ ಬಂದ ಬಗ್ಗೆ ಬೇಕಾದಷ್ಟು ಊಹಾಪೋಹಂಗೊ ಚಲಾವಣೆಲಿ ಇದ್ದು. ಎಡಪಂಥವಾದಿಗಳೇ ಬಹುಮತಲ್ಲಿಪ್ಪ ಪ್ರಶಸ್ತಿಯ ಆಯ್ಕೆ ಸಮಿತಿಯವು ಇರಾನ್, ಉತ್ತರ ಕೊರಿಯಾ ಇತ್ಯಾದಿ ದೇಶಂಗಳ ಕುರಿತಾದ ಅಮೇರಿಕಾದ ವಿದೇಶಾಂಗ ನೀತಿಯ ತತ್ಕಾಲೀನ ಧೋರಣೆಯ ಇಕ್ಕಟ್ಟಿಲ್ಲಿ ಸಿಲುಕಿಸಲೆ ಈ ತಂತ್ರ ಹೂಡಿದ್ದದು ಹೇಳಿ ಗುಸುಗುಸು ಶುದ್ದಿ. ಅಂತೂ, ಎನ್ನ ಪ್ರಕಾರ ಇದು ಕ್ಲಾಸಿನ ಅತ್ಯಂತ ಪೋಕರಿ ಮಾಣಿಯ ಲೀಡರು ಮಾಡಿದ ಹಾಂಗಿಪ್ಪ ಕಥೆ. ಒಬಾಮಾ ಅಧಿಕಾರಕ್ಕೆ ಬಂದ ಮೇಲಾಣ ೬ ತಿಂಗಳಿಲ್ಲಿ ಸಾಧನೆ ಮಾಡಿದ್ದದು ಎಂತದೂ ಇಲ್ಲೆ ಹೇಳುದು ಎಲ್ಲೋರಿಂಗೂ ಗೊಂತಿಪ್ಪ ವಿಷಯ. ಬರೀ ಆಶ್ವಾಸನೆಯ ಮೇಲೆ ಪ್ರಶಸ್ತಿ ಕೊಡ್ತರೆ, ನಮ್ಮ ವಾಟಾಳ್ ನಾಗರಾಜಂಗೆ ಪ್ರಪಂಚದ ಎಲ್ಲಾ ಪುರಸ್ಕಾರಂಗಳೂ ಸಿಕ್ಕೆಕ್ಕಿತ್ತು. ಚರಿತ್ರೆಲಿ ಇಷ್ಟರವರೆಗೆ ನಡೆದ ಯುದ್ಧಂಗಳಲ್ಲಿ ಅಣ್ವಸ್ತ್ರ ಪ್ರಯೋಗ ಮಾಡಿದ ಒಂದೇ ಒಂದು ದೇಶವಾದ ಅಮೇರಿಕಾ, ಈಗ ಪ್ರಪಂಚದ ಬೇರೆ ಎಲ್ಲಾ ದೇಶಂಗೊಕ್ಕೆ ಪರಮಾಣು ನೀತಿಯ ಬೋಧನೆ ಮಾಡುವ ಗುರಿಕ್ಕಾರ್ತಿಗೆ ವಹಿಸಿಗೊಂಡಿಪ್ಪದು ದೊಡ್ಡ ವಿಪರ್ಯಾಸ ! ಈ ಅಧಿಕಪ್ರಸಂಗಿಗಳ ಸ್ವಂತ ಚರಿತ್ರೆಯ ಹುಳುಕಿನ ಬೊಟ್ಟು ಮಾಡಿ ತೋರುಸುವ ಧೈರ್ಯ ಯಾರಿಂಗೂ ಇಲ್ಲೆನ್ನೆ ಹೇಳುದು ಭಾರೀ ಬೇಜಾರದ ವಿಷಯ.

ಬೋಫೋರ್ಸ್ : ಕೋತ್ರೋಕಿ ಹೇಳುವ ಮಹಾಶಯನ ಬೋಫೋರ್ಸ್ ಹಗರಣಲ್ಲಿ ದೋಷಮುಕ್ತಿಗೊಳಿಸಿ ಕೇಸಿನ ಬರ್ಖಾಸ್ತು ಮಾಡೆಕ್ಕು ಹೇಳುವ ಅರ್ಜಿಯ CBIಯವು ಉಚ್ಛನ್ಯಾಯಾಲಯಲ್ಲಿ ಸಲ್ಲಿಸಿದ್ದವಡ. ಇದು ಅವಂಗೆ (ಅಕ್ರಮವಾಗಿ) ಸಲ್ಲೆಕ್ಕಾದ ಬಾಕಿ ೨೯ ಮಿಲಿಯ ಡಾಲರುಗಳ ವಿಲೇವಾರಿಯ ವ್ಯವಸ್ಥೆಯ ಸುಗಮ ಮಾಡಿಕೊಡುವ ಹೊಸ ಕಾರ್ಯತಂತ್ರ. ವಾಜಪೇಯಿಯ ಸರಕಾರದ ಅವಧಿಲಿ ಈ ಕೇಸಿನ ಬಗ್ಗೆ ಎಂತಾರು ಇತ್ಯರ್ಥ ಅಕ್ಕು ಹೇಳುವ ಆಶೆ ಎಲ್ಲೋರಿಂಗೂ ಇತ್ತು. ಆದರೆ ನಿಜ ಹೇಳ್ತರೆ, ಆ ಸರಕಾರಂದಲೂ ಹೆಚ್ಚು ಬೋಫೋರ್ಸ್ ಕೇಸಿನ ಮುಂದುವರಿಸಿದ ಹೆಗ್ಗಳಿಕೆ ನರಸಿಂಹ ರಾಯನ ಸರಕಾರಕ್ಕೆ ಸೇರೆಕ್ಕು. ಕೋತ್ರೋಕಿಯ ಹೆಸರಿನ ಅಂಬಗಂಬಗ ಹೇಳಿ ಸೋನಿಯಾ ಗಾಂಧಿಯ ಹೆದರಿಸಿ ಕೂರಿಸಿಗೊಂಡೇ ಅವ ತನ್ನ ೫ ವರ್ಷದ ರಾಜ್ಯಭಾರವ "ಯಶಸ್ವಿಯಾಗಿ" ಪೂರೈಸಿದ. ಮಹಾ ಬುದ್ಧಿವಂತ ! ಎಷ್ಟಾದರೂ ಆಂಧ್ರದ ಖಾರ ಮೆಣಸಿನ ಕಾಯಿ ತಿಂದು ಬೆಳೆದ ಜೀವ ಅಲ್ಲದಾ ?

ನಕ್ಸಲೀಯರು : ಇತ್ತೀಚೆಗೆ ನಮ್ಮ ದೇಶಲ್ಲಿ ಮಾವೋವಾದಿಗಳ ಕಾರುಬಾರು ರಜ ಜೋರು ಆಯಿದು. ನೇಪಾಳಲ್ಲಿ ಅಧಿಕಾರದ ರುಚಿ ಕಂಡ ಮೇಲೆ, ಅವರದ್ದು ಈಗ ಭಾರತದ ಮೇಲೆ ಕಣ್ಣು. ನಮ್ಮ ದೇಶದ ಮಧ್ಯ- ಉತ್ತರ -ಪೂರ್ವ ರಾಜ್ಯಂಗಳಲ್ಲಿಪ್ಪ ಹೇರಳ ಕಾಡುಪ್ರದೇಶಂಗಳ ನೆಲೆಯಾಗಿ ಮಾಡಿಗೊಂಡು, ಹೆಚ್ಚಾಗಿ ಕಾಡಿನ ಹತ್ತರಾಣ ಹಳ್ಳಿಗಳ ಮುಗ್ಧ ಜನಂಗಳ ಅಥವಾ ಪೋಲೀಸರ ಕೊಂದು ತಮ್ಮ ಸಂಸ್ಥೆಯ ಹೆಸರು ಸದಾ ಪತ್ರಿಕೆಗಳಲ್ಲಿ ಚಲಾವಣೆಲಿ ಇಪ್ಪ ಹಾಂಗೆ ನೋಡಿಗೊಳ್ತಾ ಇದ್ದವು. ಇವರ ದುಷ್ಕೃತ್ಯಂಗೊಕ್ಕೆ ಎಡಪಕ್ಷಂಗಳ ಸಹಾನುಭೂತಿ ಇಪ್ಪದಲ್ಲದ್ದೆ, ಅನೇಕ ಬುದ್ಧಿಜೀವಿಗಳದ್ದೂ ಬೆಂಬಲ ಇದ್ದು. ಇದೆಂತ ಆಶ್ಚರ್ಯದ ವಿಷಯ ಅಲ್ಲ. ಏಕೆ ಹೇಳಿರೆ, ಕೈಲಿ ಬೆಡಿ ಹಿಡುಕ್ಕೊಂಡಿಪ್ಪ ವಿಕೃತ ಮನಸ್ಸಿನ ಬುದ್ಧಿಜೀವಿಗಳೇ ನಕ್ಸಲೀಯರು ಅಲ್ಲದಾ ? ಇದೇ ಬುದ್ಧಿಜೀವಿಗೊ, ನಮ್ಮ ದೇಶದ ಸಂಸ್ಕೃತಿಗೆ ಸಂಬಂಧಿಸಿದ ವಿಷಯಲ್ಲಿ ವಿಶ್ವ ಹಿಂದೂ ಪರಿಷತ್ತು ಅಥವಾ ಭಜರಂಗ ದಳದವು ಎಂತಾರೂ ಗಲಾಟೆ ಮಾಡಿರೆ ಅದಕ್ಕೆ ಕೂಡ್ಳೇ ತಕರಾರು ಮಾಡ್ತವು ! ವಿತಂಡವಾದವೇ ಬುದ್ಧಿವಂತಿಕೆಯ ಮಾನದಂಡ ಆಗಿಪ್ಪಗ, ಒಳ್ಳೆಯ ತರ್ಕಕ್ಕೆ ಅವಕಾಶ ಎಲ್ಲಿದ್ದು ?

ಗುರುತು ಚೀಟಿ : ವಿಶಿಷ್ಠ ಗುರುತುಚೀಟಿ ಪ್ರಾಧಿಕಾರ ಹೇಳುವ ಹೊಸ ಸಂಸ್ಥೆಯ ಸುರುಮಾಡಿ, ನಂದನ್ ನೀಲಕೇಣಿಯ ಅದಕ್ಕೆ ಮುಖ್ಯಸ್ಥನಾಗಿ ಮಾಡಿದ ಮನಮೋಹನ ಸಿಂಗನ ಸರಕಾರದ ನಿರ್ಧಾರವ ಸ್ವಾಗತಿಸಿ ಚಪ್ಪಾಳೆ ತಟ್ಟಿದವರಲ್ಲಿ ಆನೂ ಒಬ್ಬ. ಆದರೆ, ಈ ಪ್ರಕ್ರಿಯೆ ಮುಗಿಶುಲೆ ೫ ವರ್ಷ ಬೇಕಕ್ಕು ಹೇಳಿಯೂ, ಈ ಗುರುತು ಚೀಟಿ ಭಾರತ ದೇಶದ ಪೌರತ್ವದ ದೃಢೀಕರಣ ಅಲ್ಲ ಹೇಳಿಯೂ ತಿಳಿಶುವ ಹೊಸ ನಿರಾಶಾದಯಕ ಸುದ್ದಿ ಇತ್ತೀಚೆಗೆ ಕೇಳಿ ಬೈಂದು. ಸದ್ಯಕ್ಕೆ ಲಂಚ ಕೊಡದ್ದೆ, ಧರ್ಮಕ್ಕೆ ಕಿಸೆಲಿ ಮಡಿಕ್ಕೊಂಬಲೆ ಒಂದು ಹೊಸ ಗುರುತು ಚೀಟಿ ಸಿಕ್ಕುಗು ಹೇಳುದಷ್ಟೇ ಭಾರತೀಯರ ಸೌಭಾಗ್ಯ. ದಾರಿಲಿ ಹೋಪವರ ಎಲ್ಲಾ ಹಿಡುದು ನಿಲ್ಲಿಸಿ ಗುರುತು ಚೀಟಿಯ ಹಂಚುವ ಅಭಿಯಾನ ಈಗಾಗಲೇ ಸುರು ಆಗಿರೆಕು. ಹಾಂಗಾರೆ, ಈ ಗುರುತಿನ ಚೀಟಿಯ ಉಪಯೋಗಿಸಿಗೊಂಡು ಬಾಂಗ್ಲಾದೇಶಂದ ಬಂದ ಕೋಟಿಗಟ್ಳೆ ಬ್ಯಾರಿಗೊ ನಿಧಾನಕ್ಕೆ ಭಾರತದ ಪೌರರಪ್ಪಲಕ್ಕು. ಅಲ್ಪ ಸಂಖ್ಯಾತರ ಸಂಖ್ಯೆಯ ಅಧಿಕೃತವಾಗಿ ಹೆಚ್ಚು ಮಾಡ್ಳೆ ಇಪ್ಪ ಸಾವಿರಾರು ಕೋಟಿಯ ಯೋಜನೆ ! ಹೇಂಗಿದ್ದು ?

ಪ್ರಳಯ : ೨೦೧೨ನೇ ಇಸವಿಲಿ ಪ್ರಳಯ ಆವುತ್ತು ಹೇಳಿ ಇತ್ತಿಚೆಗೆ ಒಂದು ಪತ್ರಿಕೆಲಿ ಸುದ್ದಿ ಬಂತು. ಇದರ ಕೇಳಿ ಜನ ಎಂತ ಭಯಂಕರ ತಲೆಬೆಶಿ ಮಾಡಿಗೊಂಡ ಹಾಂಗೆ ಕಾಣ್ತಿಲ್ಲೆ. ಅತ್ಯಂತ ಹೆಚ್ಚು ತಲೆಬೆಶಿ ಮಾಡಿಗೊಳೆಕ್ಕಾದ ಕರಾವಳಿ ಪ್ರದೇಶದ ಜನರಲ್ಲಿ ಹೆಚ್ಚಿನವು ಈಗಾಗಲೇ ಬೆಂಗ್ಳೂರಿಲ್ಯೋ, ಅಮೇರಿಕಲ್ಯೋ ಇಪ್ಪ ಮಕ್ಕಳ ಒಟ್ಟಿಂಗೆ ಬೇಕಾದ ವ್ಯವಸ್ಥೆ ಮಾಡ್ಯೊಂಡಿಕ್ಕು. ಅಂತೂ, ಇದರಿಂದಾಗಿ ಘಟ್ಟದ ಮೇಲೆ ನಿವೇಶನದ ಕ್ರಯ ಏರುದು ಖಂಡಿತ. ಇನ್ನೂ ಹೆಚ್ಚು ಸುರಕ್ಷಿತ ಜೀವನವ ಅಪೇಕ್ಷೆ ಮಾಡುವವು ನಂದಿ ಬೆಟ್ಟದ ಮೇಲೆ ಬಹುಮಹಡಿಯ ಕಟ್ಟೋಣ ಕಟ್ಟಿ, ಅತ್ಯಂತ ಮೇಲಾಣ ಮಾಳಿಗೆಲಿ ವಾಸ ಮಾಡುವ ಕೆಣಿ ಮಾಡ್ಳೂ ಸಾಕು. ಅಂತೂ ಮನುಷ್ಯಂಗೆ ಜೀವಭಯ ಹೇಳುದು ಭಯಂಕರ ದೊಡ್ಡ ಸಂಗತಿ ಅಲ್ಲದಾ ? ಒಟ್ಟಾರೆ, ಇನ್ನು ಮೂರೇ ವರ್ಷ ಇಪ್ಪದು. ಗಮ್ಮತು ಮಾಡುವಷ್ಟು ಮಾಡಿಗೊಂಬಲಕ್ಕು.

- ಬಾಪಿ / ಶನಿವಾರ, ೨೪ ಅಕ್ಟೋಬರ ೨೦೦೯

Saturday, October 10, 2009

ಸ್ವಸ್ಥ ಸಮಾಜ

ಸುಖ ಸಂಸಾರ ನಡೆಶುಲೆ ಸಹಾಯ ಅಪ್ಪ ಹಾಂಗಿಪ್ಪ ೧೨ ಸೂತ್ರಂಗಳ ಯಾರೋ ಪುಣ್ಯಾತ್ಮರು ಬೋಧನೆ ಮಾಡಿದ ವಿಷಯವ ನವಗೆಲ್ಲಾ ಕೇಳಿ ಗೊಂತಿಕ್ಕು.    ಹೀಂಗಿಪ್ಪ ಸಿದ್ಧ ಕೈಪಿಡಿಗಳ  ದಾರಿದೀಪವಾಗಿ ಉಪಯೋಗಿಸಿರೆ,  ಎಷ್ಟೋ ಸರ್ತಿ ನಾವು ಜೀವನಲ್ಲಿ ಸ್ವಂತ ಅನುಭವ ಅಪ್ಪ ವರೆಗೆ ಕಾಯುವ ಅಗತ್ಯ ಇರ್ತಿಲ್ಲೆ.   ಹೀಂಗೆ ಅಲ್ಲಿಲ್ಲಿ  ನೋಡಿ, ಬೇರೆಯವರಿಂದ ಕೇಳಿ ತಿಳುದು ಬುದ್ಧಿವಂತರಪ್ಪ ಅವಕಾಶಂಗೊ ಧಾರಾಳ ಇರ್ತು.  ಇದಕ್ಕೆ ರಜ ವ್ಯಾವಹಾರಿಕ ಜಾಣ್ಮೆ ಬೇಕಪ್ಪದಷ್ಟೆ.  

ಇಪ್ಪದರನ್ನೇ ಅನುಭವಿಸಿಗೊಂಡು  ಸದಾ ಸಂತೋಷಲಿಪ್ಪ ಜನ,  ಜಗತ್ತಿನ ಬೇರೆಲ್ಲಾ ದೇಶಂಗಳಿಂದೆಲ್ಲಾ ಹೆಚ್ಚಿನ ಸುಖೀ ಕುಟುಂಬ ವ್ಯವಸ್ಥೆ ಹೊಂದಿಪ್ಪ ಸಮಾಜ ಇದ್ದರೂ ನಮ್ಮ ದೇಶ ಇಷ್ಟು ಶೋಚನೀಯ ಪರಿಸ್ಥಿತಿಲಿಪ್ಪಲೆ ಎಂತ ಕಾರಣ ಹೇಳುವ  ಚೋದ್ಯಕ್ಕೆ ಸಮಾಧಾನ ಹುಡುಕ್ಕುವ ಕೆಲಸ ಮನಸ್ಸಿನ ತೆರೆಯ ಮರೆಲಿ  ಸದಾ ನಡೆತ್ತಲೇ  ಇರ್ತು.  ಎಂತಾರು ಸಮಸ್ಯೆಯ ಜಾಡು ಹಿಡುಕ್ಕೊಂಡು ಹೋಗಿ, ಅದರ ಉದ್ದ ಅಗಲಂಗಳ ಮಾಪನ ಮಾಡಿ ಅಪ್ಪಗ, ಜನಿವಾರದ ಗೆಂಟು ಬಿಡಿಸಿದಷ್ಟೇ  ಸಮಾಧಾನ ಆವುತ್ತು.    ಹೀಂಗೆ ಈ ವಿಷಯಲ್ಲಿಯೂ  ಕೆಲವು ವಿಚಾರಂಗೊ ಮೂಡಿ ಬಂತು.   ನಿಜವಾದ ಅರ್ಥಲ್ಲಿ  ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಎಂತ ಸೂತ್ರಂಗಳ ಪಾಲಿಸೆಕ್ಕು ?  ಭೂತ ಮತ್ತು ಭವಿಷ್ಯದ ಸರಿಯಾದ ಸಮತೋಲನ ಇದ್ದರೆ,  ಯಾವಾಗಲೂ ವರ್ತಮಾನವ  ಒಳ್ಳೆಯ ರೀತಿಲಿ  ಅನುಭವಿಸಲೆ ಎಡಿಗಾವುತ್ತು ಹೇಳುದು ಜ್ಞಾನಿಗೊ ಹೇಳಿದ ಮಾತು.   ವೈಯಕ್ತಿಕ ನೆಲೆಲಿ ನೋಡಿರೆ, ಗತಜೀವನದ ಕೃತ್ಯಂಗಳ ಪಾಪಭೀತಿಯ ಕರಾಳಛಾಯೆ ಇಲ್ಲದ್ದೆ, ಬಪ್ಪಲಿಪ್ಪ ದಿನಂಗಳ ಅನಿಶ್ಚಿತತೆಯ  ಆತಂಕವೂ ಇಲ್ಲದ್ದೆ ಕಳವ ಇಂದಿನ ದಿನ ಅತ್ಯಂತ ಸುಖಕರವಾಗಿರ್ತಲ್ಲದಾ ? ಹಾಂಗೇ, ಭವ್ಯ ಚರಿತ್ರೆಂದ ಸ್ಪೂರ್ತಿ ಪಡಕ್ಕೊಂಡು,  ಉಜ್ವಲ ಭವಿಷ್ಯದ  ಕನಸಿನ ಹೊತ್ತುಗೊಂಡಿಪ್ಪ ಯುವಪೀಳಿಗೆಯ ಸೃಷ್ಟಿ ಮಾಡ್ಳೆಡಿಗಪ್ಪ ಒಂದು ಸಮಾಜ ಸದಾ  ಸ್ವಸ್ಥವಾಗಿಪ್ಪಲೆ ಸಾಧ್ಯ ಹೇಳಿ  ಎನಗೆ ಕಾಣ್ತು.  

ಈ ದೃಷ್ಟಿಂದ ನೋಡಿರೆ, ಒಂದು  ಸ್ವಸ್ಥ ಸಮಾಜಲ್ಲ್ಲಿ ೩ ವೃತ್ತಿಯವಕ್ಕೆ ಅತ್ಯಂತ ಹೆಚ್ಚಿನ ಪ್ರಾಧಾನ್ಯ ಸಿಕ್ಕೆಕ್ಕಾವುತ್ತು ಹೇಳುವ ಎನ್ನ ಅಭಿಪ್ರಾಯವ ಇಲ್ಲಿ ಮಂಡಿಸುತ್ತೆ.  ಈ ೩ ವೃತ್ತಿಲಿಪ್ಪವು  ಅತ್ಯಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿದವಾಗಿದ್ದುಗೊಂಡು  ಸಮಾಜದ ಗೌರವಕ್ಕೆ ಪಾತ್ರರಾಗಿಪ್ಪ ಯೋಗ್ಯತಾವಂತರಾಗಿರೆಕಾವುತ್ತು.  ಸಮಾಜದ  ಈ ವಿಶೇಷತ್ರಯರು  ಯಾರು ಹೇಳಿರೆ - ವೈದ್ಯರು, ಶಿಕ್ಷಕರು  ಮತ್ತೆ  ರಾಜಕಾರಣಿಗೊ. ಈಗ  ನಮ್ಮ ದೇಶಲ್ಲಿ ಈ ಮೂರು ಅತಿ ಮುಖ್ಯ ವೃತ್ತಿಯವರ ಅವಸ್ಥೆ ಎಂತದು ಹೇಳಿ ರಜ ವಿಮರ್ಶೆ ಮಾಡುವೊ.   

ವೈದ್ಯರು  :  ಸಮಾಜದ ಜನರ ದೈಹಿಕ ಸ್ವಾಸ್ಥ್ಯ ಕಾಪಾಡುವ ಮಹತ್ವದ ಜವಾಬ್ದಾರಿ ಹೊತ್ತುಗೊಂಡಿಪ್ಪ ಈ ವೃತ್ತಿಕ್ಷೇತ್ರಕ್ಕೆ  ಸೇವಾ ಮನೋಭಾವ ಇಪ್ಪವು ಮಾತ್ರ  ಹೋದರೆ ಎಲ್ಲೋರಿಂಗೂ ಕ್ಷೇಮ.  ಹೊತ್ತೋಪಗ ಪೈಸೆಯ ಪೆಟ್ಟಿಗೆ ಎಷ್ಟು ತುಂಬಿತ್ತು ಹೇಳಿ ಮಾತ್ರ ನೋಡುವವು ಅಥವಾ  ಮೀಸಲಾತಿಯ ಲಾಭ ಪಡಕ್ಕೊಂಡು ವೈದ್ಯರಾದವರಿಂದ ಎಂತ ಸೇವೆಯ ಅಪೇಕ್ಷೆ ಮಾಡ್ಳೆಡಿಗು ? ದೊಡ್ಡ ಆಸ್ಪತ್ರೆಗಳಲ್ಲಿಯೂ ವೈದ್ಯಕೀಯ ವೃತ್ತಿ ಹೇಳುದು ಸೇವೆಯ  ಮಟ್ಟಂದ  ವ್ಯವಹಾರದ ಮಟ್ಟಕ್ಕೆ ಇಳುದು ಎಷ್ಟೋ ಸಮಯವೇ ಆತು.  ಹೆರಿಗೆಗೆ ಹೋದರೂ,  ವಿಮಾಕವಚದ ಮೊತ್ತ ಎಷ್ಟಿದ್ದು ಹೇಳಿ ಕೇಳಿಯೇ  ಕೆಲಸ ಸುರು ಮಾಡುವ ಕ್ರಮ ಈಗ ಮಾಮೂಲು.  ರಸ್ತೆ ಅಪಘಾತಲ್ಲಿ ಜಖಂ ಆಗಿ ಆಸ್ಪತ್ರೆಗೆ ಬಪ್ಪಗಳೇ ಸತ್ತು ಹೋದ ವ್ಯಕ್ತಿಯ ಸರ್ಜರಿ ಮಾಡ್ಳೆ ಹೆರಟು ಅಸಲು ಭಂಡವಾಳ ಬಯಲು ಮಾಡಿಸಿಗೊಂಡ  ಬೆಂಗ್ಳೂರಿನ ಒಂದು ಹೆಸರಾಂತ ಆಸ್ಪತ್ರೆಯ ಹೆಸರು ಹೇಳ್ಳುದೇ ಅಸಹ್ಯ ಆವುತ್ತು.  ಖಾಸಗಿ ವೈದ್ಯಂಗೊ ಆಂತೂ ಸಣ್ಣ ಸೆಮ್ಮ ಇದ್ದರೂ ಬಲವಂತಲ್ಲಿ ಹತ್ತಾರು ನಮುನೆ ಪರೀಕ್ಷೆ ಮಾಡಿಸಿ ರೋಗಿಗೊಕ್ಕೆ ಇಲ್ಲದ್ದ ಗಾಬರಿ ಹುಟ್ಟಿಸುವ ಪ್ರಯತ್ನವ ನಿರಂತರವಾಗಿ ಮಾಡಿಗೊಂಡೇ ಇದ್ದವು.    ವೈದ್ಯರ ತಯಾರು ಮಾಡುವ ಮಹಾವಿದ್ಯಾಲಯಂಗಳ ವಂತಿಗೆ, ವಿದ್ಯಾರ್ಥಿ ಶುಲ್ಕ, ಮತ್ತಿತರ ಖರ್ಚು-ವೆಚ್ಚಂಗಳಿಂದಲೇ ವೃತ್ತಿ ವ್ಯವಹಾರದ ಲೆಕ್ಕಾಚಾರ ಸುರು ಅಪ್ಪದು.  ಇನ್ನು, ವಿವಿಧ ನಮುನೆಯ ಆದ್ಯತೆಗಳ ಆಧಾರದ ಮೇಲೆ ಸುರು ಅಪ್ಪ ಹೆಚ್ಚಿನ  ವೈದ್ಯಕೀಯ ಕೋಲೇಜುಗಳಲ್ಲಿ  ಸುಸಜ್ಜಿತ ವ್ಯವಸ್ಥೆ ಆಗಲೀ, ಕಲಿಶುವ ಗುಣಮಟ್ಟ  ಆಗಲೀ ಇರ್ತಿಲ್ಲೆ.  ಇವುಗಳ ಎಲ್ಲ ಕಾನೂನುಪ್ರಕಾರ ನಿಯಂತ್ರಣ ಮಾಡುವ ಅವಕಾಶ  ಇದ್ದರೂ ಯಾವುದೂ ವ್ಯವಸ್ಥಿತವಾಗಿ ಇಲ್ಲೆ. 

ಶಿಕ್ಷಕರು :   ಕೇವಲ ಒಂದು ತಲೆಮಾರು ಮೊದಲು ಇತ್ತ ಶಿಕ್ಷಕರಿಂಗೂ ಈಗಾಣವಕ್ಕೂ ಇಪ್ಪ ವ್ಯತ್ಯಾಸ ನೋಡಿರೆ, ಈ ಅವಧಿಲಿ ನಮ್ಮ ಶಿಕ್ಷಣದ  ಅಧಃಪತನ ಎಷ್ಟಾಯಿದು ಹೇಳಿ ಗೊಂತಾವುತ್ತು.   ತಮಿಳುನಾಡಿನ ಹಳ್ಳಿಯ ಶಾಲೆಲಿ ಕಲ್ತದು ಹೇಳುವ  ಕಾರಣಂದ ವೆಂಕಟರಾಮನ್  ಹೇಳುವ ವ್ಯಕ್ತಿಲಿತ್ತ  ಪ್ರತಿಭೆಯ ಪೋಷಣೆಗೆ ಎಂತ ಕುಂದು ಬೈಂದಿಲ್ಲೆ.  ನೋಬೆಲ್  ಪ್ರಶಸ್ತಿಯೇ ಅವನ ಹುಡುಕ್ಯೊಂಡು  ಬಂತು.  ಈಗಾಣ ಕಲ್ಲಿನ ಗೋಡೆಯ,  ಅತಿ ನವೀನ, ಸಂಪೂರ್ಣ ಗಣಕೀಕೃತ, ಆಂಗ್ಲ ಮಾಧ್ಯಮದ ಮಹಾ ಬೋರ್ಡಿಂಗ್  ಶಾಲೆಗೊಕ್ಕೆ ಎಷ್ಟು ಜನ ನೋಬೆಲ್ ವಿಜ್ಞಾನಿಗಳ ತಯಾರಿಸುವ ಸಾಮರ್ಥ್ಯ ಇದ್ದು ? ಮೊದಲಾಣ ತಲೆಮಾರಿನವು ಮಹಾ ಬುದ್ಧಿವಂತರು,  ಈಗಾಣ ಮಕ್ಕೊ ಬರೀ ಬೋದಾಳಂಗೊ ಹೇಳಿ  ಎಂತ ಅಲ್ಲನ್ನೆ ?  ಹಾಂಗಾರೆ, ಮಕ್ಕೊ ಬೆಳವ ವಾತಾವರಣ ಸಂಪೂರ್ಣ ಬದಲಾಯಿದು, ಮಕ್ಕಳಲ್ಲಿ ಜ್ಞಾನದ ಹಸಿವು ಕಮ್ಮಿ ಆಯಿದು,   ಮಕ್ಕಳ ಧ್ಯಾನ ಅನಗತ್ಯವಾಗಿ ಬೇರೆ ಬೇರೆ  ದಿಕ್ಕುಗಳಲ್ಲಿ ಹೋವುತ್ತಾ ಇದ್ದು ಇತ್ಯಾದಿಯಾದ ಕಾರಣಂಗಳ ಹುಡುಕ್ಕಲಕ್ಕು.   ಎಲ್ಲದಕ್ಕಿಂತ ಹೆಚ್ಚಾಗಿ,   ಕಲಿಶುವ  ಜವಾಬ್ದಾರಿ ವಹಿಸಿಗೊಂಡವರ ಪೈಕಿ   ಮೀಸಲಾತಿಲಿ ಬಂದ  "ಆಸನ-ಹರಸೀಕೆರೆ" ಪಂಡಿತಂಗಳ ಸಂಖ್ಯೆ ಜಾಸ್ತಿ ಇದ್ದು.  ನಮ್ಮ ಸಮಾಜಕ್ಕೆ  ಶಿಕ್ಷೆ ಕೊಡುವ ಶಿಕ್ಷಕರ ಬದಲು, ಶಿಕ್ಷಣ ಕೊಡುವ ಶಿಕ್ಷಕರು ಬೇಕು.

ರಾಜಕಾರಣಿಗೊ :  ಬೇರೆ ಎಂತಕೂ ಆಗದ್ದವು ಮೊದಲು ರೌಡಿಗೊ ಅಪ್ಪದು. ಮತ್ತೆ,  ಖದ್ದರು ಆಂಗಿ ಹಾಕಿ ರಾಜಕಾರಣಿ ಆಗಿ ವೇಶ ಬದಲಾವಣೆ  ಮಾಡಿಗೊಂಬದು.  ಇದು ನಮ್ಮ ದೇಶದ ಪ್ರಜಾಪ್ರಭುತ್ವದ ಅತ್ಯಂತ ಕಠೋರ ಸತ್ಯ. ಪ್ರಜಾಪ್ರಭುತ್ವ ವ್ಯವಸ್ಥೆಲಿದ್ದುಗೊಂಡು ವಂಶ ಪಾರಂಪರ್ಯದ ಆಢಳಿತಕ್ಕೆ ಸಂಪೂರ್ಣ ಒಗ್ಗಿ ಹೋಗಿಪ್ಪ ಒಂದು ದೊಡ್ಡ ರಾಷ್ಟ್ರೀಯ ಪಕ್ಷವೇ ನಮ್ಮ  ದೇಶಲ್ಲಿದ್ದು.  ಆ ಒಂದು ವಂಶದವು ಹೇಂಗಿಪ್ಪ ಬೋಸ (ಬೋಸಿ)ಗೊ ಆದರೂ, ಅವೇ ಆ ಪಕ್ಷಕ್ಕೆ ನಾಯಕರು.   ನಾಯಕತ್ವ,  ದೂರದರ್ಶಿತ್ವ, ರಾಜಕೀಯ ಪರಿಪಕ್ವತೆ ಇತ್ಯಾದಿ ಸದ್ಗುಣಂಗೊ ಇರೆಕಾದ ರಾಜಕಾರಣಿಗಳಲ್ಲಿ ಸದ್ಯಕ್ಕೆ ನಿಜವಾಗಿ ಇಪ್ಪದು ಪೈಸೆಯ, ತೋಳಿನ (ರೌಡಿಗಳ) ಬಲ ಮಾಂತ್ರ.  ಹಾಂಗಾಗಿ ಯಾವುದೇ ಸಮಸ್ಯೆಗಾದರುದೇ ಮುಂದಾಲೋಚನೆಂದ ಪರಿಹಾರ ಕಂಡುಗೊಂಡ ಇಷ್ಟರವರೆಗಿನ ಉದಾಹರಣೆಗೊ ದೇವರದಯಂದ ಯಾವುದೂ  ನೆಂಪಾವುತ್ತಿಲ್ಲೆ.  ಸಮಸ್ಯೆ ದೊಡ್ಡ ಆಗಿ, ಇನ್ನು ತಡವಲೆಡಿಯ ಹೇಳುವಷ್ಟು ಬೆಳೆದ ಮೇಲೆಯೇ ಅದರ ಬಗ್ಗೆ ಎಂತಾರೂ ತಲೆಕೆಡಿಸಿಗೊಂಬ  ಕೆಲಸ ಸುರು ಅಪ್ಪದು.   ನಮ್ಮ ದೇಶಲ್ಲಿ ಅತ್ಯಂತ ಹೆಚ್ಚಿನ ಅಧಿಕಾರದ ಸವಲತ್ತುಗಳ ಅನುಭವಿಸಿಗೊಂಡಿದ್ದರೂ ಯಾವುದೇ ರೀತಿಯ ಉತ್ತರದಾಯಿತ್ವ ಇಲ್ಲದ್ದ ವೃತ್ತಿ ಹೇಳಿರೆ ರಾಜಕಾರಣಿಗಳದ್ದು.  ಭಾರತಮಾತೆ ಇಷ್ಟು ಬಂಜೆ ಏಕೆ ಆಗಿ ಹೋತು ? ಸಾಮರ್ಥಿಗೆ ಇಪ್ಪ ಒಬ್ಬನೇ ಒಬ್ಬ ಮುತ್ಸದ್ದಿ ಏಕೆ ಹುಟ್ಟಿ ಬತ್ತ ಇಲ್ಲೆ ?

ಇದೊಂದು ವಸ್ತು ಸ್ಥಿತಿಯ ಅವಲೋಕನದ ಪ್ರಯತ್ನ. ಹಾಂಗಾಗಿ ಋಣಾತ್ಮಕ ಆಂಶಂಗೊ ಧಾರಾಳ ಕಾಂಗು.  ಉದ್ಧಾರ ಅಪ್ಪಲೆ ಇದೊಂದೇ ದಾರಿ.  ಸಣ್ಣ ಸಣ್ಣ ನೀರಿನ ಹನಿಗೊ ಸೇರಿ ದೊಡ್ಡ ಹೊಳೆಯೇ ಅಪ್ಪ ಹಾಂಗೆ, ಸಮಾಜದ ಪ್ರತಿಯೊಬ್ಬನ  ಬಯಕೆಗಳೂ ಒಂದೇ ಆಗಿದ್ದರೆ, ಅದರಲ್ಲಿ ದಿವ್ಯ ಚೈತನ್ಯ ಇರ್ತು.  ಸಂವಹನಂದ ಸಂಚಲನ  ಉಂಟಾಗಲಿ ಹೇಳುವ ಸದಾಶಯದೊಂದಿಗೆ ಸದ್ಯಕ್ಕೆ ಅಲ್ಪ ವಿರಾಮ.

- ಬಾಪಿ / ೧೦.೧೦.೨೦೦೯