Saturday, October 10, 2009

ಸ್ವಸ್ಥ ಸಮಾಜ

ಸುಖ ಸಂಸಾರ ನಡೆಶುಲೆ ಸಹಾಯ ಅಪ್ಪ ಹಾಂಗಿಪ್ಪ ೧೨ ಸೂತ್ರಂಗಳ ಯಾರೋ ಪುಣ್ಯಾತ್ಮರು ಬೋಧನೆ ಮಾಡಿದ ವಿಷಯವ ನವಗೆಲ್ಲಾ ಕೇಳಿ ಗೊಂತಿಕ್ಕು.    ಹೀಂಗಿಪ್ಪ ಸಿದ್ಧ ಕೈಪಿಡಿಗಳ  ದಾರಿದೀಪವಾಗಿ ಉಪಯೋಗಿಸಿರೆ,  ಎಷ್ಟೋ ಸರ್ತಿ ನಾವು ಜೀವನಲ್ಲಿ ಸ್ವಂತ ಅನುಭವ ಅಪ್ಪ ವರೆಗೆ ಕಾಯುವ ಅಗತ್ಯ ಇರ್ತಿಲ್ಲೆ.   ಹೀಂಗೆ ಅಲ್ಲಿಲ್ಲಿ  ನೋಡಿ, ಬೇರೆಯವರಿಂದ ಕೇಳಿ ತಿಳುದು ಬುದ್ಧಿವಂತರಪ್ಪ ಅವಕಾಶಂಗೊ ಧಾರಾಳ ಇರ್ತು.  ಇದಕ್ಕೆ ರಜ ವ್ಯಾವಹಾರಿಕ ಜಾಣ್ಮೆ ಬೇಕಪ್ಪದಷ್ಟೆ.  

ಇಪ್ಪದರನ್ನೇ ಅನುಭವಿಸಿಗೊಂಡು  ಸದಾ ಸಂತೋಷಲಿಪ್ಪ ಜನ,  ಜಗತ್ತಿನ ಬೇರೆಲ್ಲಾ ದೇಶಂಗಳಿಂದೆಲ್ಲಾ ಹೆಚ್ಚಿನ ಸುಖೀ ಕುಟುಂಬ ವ್ಯವಸ್ಥೆ ಹೊಂದಿಪ್ಪ ಸಮಾಜ ಇದ್ದರೂ ನಮ್ಮ ದೇಶ ಇಷ್ಟು ಶೋಚನೀಯ ಪರಿಸ್ಥಿತಿಲಿಪ್ಪಲೆ ಎಂತ ಕಾರಣ ಹೇಳುವ  ಚೋದ್ಯಕ್ಕೆ ಸಮಾಧಾನ ಹುಡುಕ್ಕುವ ಕೆಲಸ ಮನಸ್ಸಿನ ತೆರೆಯ ಮರೆಲಿ  ಸದಾ ನಡೆತ್ತಲೇ  ಇರ್ತು.  ಎಂತಾರು ಸಮಸ್ಯೆಯ ಜಾಡು ಹಿಡುಕ್ಕೊಂಡು ಹೋಗಿ, ಅದರ ಉದ್ದ ಅಗಲಂಗಳ ಮಾಪನ ಮಾಡಿ ಅಪ್ಪಗ, ಜನಿವಾರದ ಗೆಂಟು ಬಿಡಿಸಿದಷ್ಟೇ  ಸಮಾಧಾನ ಆವುತ್ತು.    ಹೀಂಗೆ ಈ ವಿಷಯಲ್ಲಿಯೂ  ಕೆಲವು ವಿಚಾರಂಗೊ ಮೂಡಿ ಬಂತು.   ನಿಜವಾದ ಅರ್ಥಲ್ಲಿ  ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಎಂತ ಸೂತ್ರಂಗಳ ಪಾಲಿಸೆಕ್ಕು ?  ಭೂತ ಮತ್ತು ಭವಿಷ್ಯದ ಸರಿಯಾದ ಸಮತೋಲನ ಇದ್ದರೆ,  ಯಾವಾಗಲೂ ವರ್ತಮಾನವ  ಒಳ್ಳೆಯ ರೀತಿಲಿ  ಅನುಭವಿಸಲೆ ಎಡಿಗಾವುತ್ತು ಹೇಳುದು ಜ್ಞಾನಿಗೊ ಹೇಳಿದ ಮಾತು.   ವೈಯಕ್ತಿಕ ನೆಲೆಲಿ ನೋಡಿರೆ, ಗತಜೀವನದ ಕೃತ್ಯಂಗಳ ಪಾಪಭೀತಿಯ ಕರಾಳಛಾಯೆ ಇಲ್ಲದ್ದೆ, ಬಪ್ಪಲಿಪ್ಪ ದಿನಂಗಳ ಅನಿಶ್ಚಿತತೆಯ  ಆತಂಕವೂ ಇಲ್ಲದ್ದೆ ಕಳವ ಇಂದಿನ ದಿನ ಅತ್ಯಂತ ಸುಖಕರವಾಗಿರ್ತಲ್ಲದಾ ? ಹಾಂಗೇ, ಭವ್ಯ ಚರಿತ್ರೆಂದ ಸ್ಪೂರ್ತಿ ಪಡಕ್ಕೊಂಡು,  ಉಜ್ವಲ ಭವಿಷ್ಯದ  ಕನಸಿನ ಹೊತ್ತುಗೊಂಡಿಪ್ಪ ಯುವಪೀಳಿಗೆಯ ಸೃಷ್ಟಿ ಮಾಡ್ಳೆಡಿಗಪ್ಪ ಒಂದು ಸಮಾಜ ಸದಾ  ಸ್ವಸ್ಥವಾಗಿಪ್ಪಲೆ ಸಾಧ್ಯ ಹೇಳಿ  ಎನಗೆ ಕಾಣ್ತು.  

ಈ ದೃಷ್ಟಿಂದ ನೋಡಿರೆ, ಒಂದು  ಸ್ವಸ್ಥ ಸಮಾಜಲ್ಲ್ಲಿ ೩ ವೃತ್ತಿಯವಕ್ಕೆ ಅತ್ಯಂತ ಹೆಚ್ಚಿನ ಪ್ರಾಧಾನ್ಯ ಸಿಕ್ಕೆಕ್ಕಾವುತ್ತು ಹೇಳುವ ಎನ್ನ ಅಭಿಪ್ರಾಯವ ಇಲ್ಲಿ ಮಂಡಿಸುತ್ತೆ.  ಈ ೩ ವೃತ್ತಿಲಿಪ್ಪವು  ಅತ್ಯಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿದವಾಗಿದ್ದುಗೊಂಡು  ಸಮಾಜದ ಗೌರವಕ್ಕೆ ಪಾತ್ರರಾಗಿಪ್ಪ ಯೋಗ್ಯತಾವಂತರಾಗಿರೆಕಾವುತ್ತು.  ಸಮಾಜದ  ಈ ವಿಶೇಷತ್ರಯರು  ಯಾರು ಹೇಳಿರೆ - ವೈದ್ಯರು, ಶಿಕ್ಷಕರು  ಮತ್ತೆ  ರಾಜಕಾರಣಿಗೊ. ಈಗ  ನಮ್ಮ ದೇಶಲ್ಲಿ ಈ ಮೂರು ಅತಿ ಮುಖ್ಯ ವೃತ್ತಿಯವರ ಅವಸ್ಥೆ ಎಂತದು ಹೇಳಿ ರಜ ವಿಮರ್ಶೆ ಮಾಡುವೊ.   

ವೈದ್ಯರು  :  ಸಮಾಜದ ಜನರ ದೈಹಿಕ ಸ್ವಾಸ್ಥ್ಯ ಕಾಪಾಡುವ ಮಹತ್ವದ ಜವಾಬ್ದಾರಿ ಹೊತ್ತುಗೊಂಡಿಪ್ಪ ಈ ವೃತ್ತಿಕ್ಷೇತ್ರಕ್ಕೆ  ಸೇವಾ ಮನೋಭಾವ ಇಪ್ಪವು ಮಾತ್ರ  ಹೋದರೆ ಎಲ್ಲೋರಿಂಗೂ ಕ್ಷೇಮ.  ಹೊತ್ತೋಪಗ ಪೈಸೆಯ ಪೆಟ್ಟಿಗೆ ಎಷ್ಟು ತುಂಬಿತ್ತು ಹೇಳಿ ಮಾತ್ರ ನೋಡುವವು ಅಥವಾ  ಮೀಸಲಾತಿಯ ಲಾಭ ಪಡಕ್ಕೊಂಡು ವೈದ್ಯರಾದವರಿಂದ ಎಂತ ಸೇವೆಯ ಅಪೇಕ್ಷೆ ಮಾಡ್ಳೆಡಿಗು ? ದೊಡ್ಡ ಆಸ್ಪತ್ರೆಗಳಲ್ಲಿಯೂ ವೈದ್ಯಕೀಯ ವೃತ್ತಿ ಹೇಳುದು ಸೇವೆಯ  ಮಟ್ಟಂದ  ವ್ಯವಹಾರದ ಮಟ್ಟಕ್ಕೆ ಇಳುದು ಎಷ್ಟೋ ಸಮಯವೇ ಆತು.  ಹೆರಿಗೆಗೆ ಹೋದರೂ,  ವಿಮಾಕವಚದ ಮೊತ್ತ ಎಷ್ಟಿದ್ದು ಹೇಳಿ ಕೇಳಿಯೇ  ಕೆಲಸ ಸುರು ಮಾಡುವ ಕ್ರಮ ಈಗ ಮಾಮೂಲು.  ರಸ್ತೆ ಅಪಘಾತಲ್ಲಿ ಜಖಂ ಆಗಿ ಆಸ್ಪತ್ರೆಗೆ ಬಪ್ಪಗಳೇ ಸತ್ತು ಹೋದ ವ್ಯಕ್ತಿಯ ಸರ್ಜರಿ ಮಾಡ್ಳೆ ಹೆರಟು ಅಸಲು ಭಂಡವಾಳ ಬಯಲು ಮಾಡಿಸಿಗೊಂಡ  ಬೆಂಗ್ಳೂರಿನ ಒಂದು ಹೆಸರಾಂತ ಆಸ್ಪತ್ರೆಯ ಹೆಸರು ಹೇಳ್ಳುದೇ ಅಸಹ್ಯ ಆವುತ್ತು.  ಖಾಸಗಿ ವೈದ್ಯಂಗೊ ಆಂತೂ ಸಣ್ಣ ಸೆಮ್ಮ ಇದ್ದರೂ ಬಲವಂತಲ್ಲಿ ಹತ್ತಾರು ನಮುನೆ ಪರೀಕ್ಷೆ ಮಾಡಿಸಿ ರೋಗಿಗೊಕ್ಕೆ ಇಲ್ಲದ್ದ ಗಾಬರಿ ಹುಟ್ಟಿಸುವ ಪ್ರಯತ್ನವ ನಿರಂತರವಾಗಿ ಮಾಡಿಗೊಂಡೇ ಇದ್ದವು.    ವೈದ್ಯರ ತಯಾರು ಮಾಡುವ ಮಹಾವಿದ್ಯಾಲಯಂಗಳ ವಂತಿಗೆ, ವಿದ್ಯಾರ್ಥಿ ಶುಲ್ಕ, ಮತ್ತಿತರ ಖರ್ಚು-ವೆಚ್ಚಂಗಳಿಂದಲೇ ವೃತ್ತಿ ವ್ಯವಹಾರದ ಲೆಕ್ಕಾಚಾರ ಸುರು ಅಪ್ಪದು.  ಇನ್ನು, ವಿವಿಧ ನಮುನೆಯ ಆದ್ಯತೆಗಳ ಆಧಾರದ ಮೇಲೆ ಸುರು ಅಪ್ಪ ಹೆಚ್ಚಿನ  ವೈದ್ಯಕೀಯ ಕೋಲೇಜುಗಳಲ್ಲಿ  ಸುಸಜ್ಜಿತ ವ್ಯವಸ್ಥೆ ಆಗಲೀ, ಕಲಿಶುವ ಗುಣಮಟ್ಟ  ಆಗಲೀ ಇರ್ತಿಲ್ಲೆ.  ಇವುಗಳ ಎಲ್ಲ ಕಾನೂನುಪ್ರಕಾರ ನಿಯಂತ್ರಣ ಮಾಡುವ ಅವಕಾಶ  ಇದ್ದರೂ ಯಾವುದೂ ವ್ಯವಸ್ಥಿತವಾಗಿ ಇಲ್ಲೆ. 

ಶಿಕ್ಷಕರು :   ಕೇವಲ ಒಂದು ತಲೆಮಾರು ಮೊದಲು ಇತ್ತ ಶಿಕ್ಷಕರಿಂಗೂ ಈಗಾಣವಕ್ಕೂ ಇಪ್ಪ ವ್ಯತ್ಯಾಸ ನೋಡಿರೆ, ಈ ಅವಧಿಲಿ ನಮ್ಮ ಶಿಕ್ಷಣದ  ಅಧಃಪತನ ಎಷ್ಟಾಯಿದು ಹೇಳಿ ಗೊಂತಾವುತ್ತು.   ತಮಿಳುನಾಡಿನ ಹಳ್ಳಿಯ ಶಾಲೆಲಿ ಕಲ್ತದು ಹೇಳುವ  ಕಾರಣಂದ ವೆಂಕಟರಾಮನ್  ಹೇಳುವ ವ್ಯಕ್ತಿಲಿತ್ತ  ಪ್ರತಿಭೆಯ ಪೋಷಣೆಗೆ ಎಂತ ಕುಂದು ಬೈಂದಿಲ್ಲೆ.  ನೋಬೆಲ್  ಪ್ರಶಸ್ತಿಯೇ ಅವನ ಹುಡುಕ್ಯೊಂಡು  ಬಂತು.  ಈಗಾಣ ಕಲ್ಲಿನ ಗೋಡೆಯ,  ಅತಿ ನವೀನ, ಸಂಪೂರ್ಣ ಗಣಕೀಕೃತ, ಆಂಗ್ಲ ಮಾಧ್ಯಮದ ಮಹಾ ಬೋರ್ಡಿಂಗ್  ಶಾಲೆಗೊಕ್ಕೆ ಎಷ್ಟು ಜನ ನೋಬೆಲ್ ವಿಜ್ಞಾನಿಗಳ ತಯಾರಿಸುವ ಸಾಮರ್ಥ್ಯ ಇದ್ದು ? ಮೊದಲಾಣ ತಲೆಮಾರಿನವು ಮಹಾ ಬುದ್ಧಿವಂತರು,  ಈಗಾಣ ಮಕ್ಕೊ ಬರೀ ಬೋದಾಳಂಗೊ ಹೇಳಿ  ಎಂತ ಅಲ್ಲನ್ನೆ ?  ಹಾಂಗಾರೆ, ಮಕ್ಕೊ ಬೆಳವ ವಾತಾವರಣ ಸಂಪೂರ್ಣ ಬದಲಾಯಿದು, ಮಕ್ಕಳಲ್ಲಿ ಜ್ಞಾನದ ಹಸಿವು ಕಮ್ಮಿ ಆಯಿದು,   ಮಕ್ಕಳ ಧ್ಯಾನ ಅನಗತ್ಯವಾಗಿ ಬೇರೆ ಬೇರೆ  ದಿಕ್ಕುಗಳಲ್ಲಿ ಹೋವುತ್ತಾ ಇದ್ದು ಇತ್ಯಾದಿಯಾದ ಕಾರಣಂಗಳ ಹುಡುಕ್ಕಲಕ್ಕು.   ಎಲ್ಲದಕ್ಕಿಂತ ಹೆಚ್ಚಾಗಿ,   ಕಲಿಶುವ  ಜವಾಬ್ದಾರಿ ವಹಿಸಿಗೊಂಡವರ ಪೈಕಿ   ಮೀಸಲಾತಿಲಿ ಬಂದ  "ಆಸನ-ಹರಸೀಕೆರೆ" ಪಂಡಿತಂಗಳ ಸಂಖ್ಯೆ ಜಾಸ್ತಿ ಇದ್ದು.  ನಮ್ಮ ಸಮಾಜಕ್ಕೆ  ಶಿಕ್ಷೆ ಕೊಡುವ ಶಿಕ್ಷಕರ ಬದಲು, ಶಿಕ್ಷಣ ಕೊಡುವ ಶಿಕ್ಷಕರು ಬೇಕು.

ರಾಜಕಾರಣಿಗೊ :  ಬೇರೆ ಎಂತಕೂ ಆಗದ್ದವು ಮೊದಲು ರೌಡಿಗೊ ಅಪ್ಪದು. ಮತ್ತೆ,  ಖದ್ದರು ಆಂಗಿ ಹಾಕಿ ರಾಜಕಾರಣಿ ಆಗಿ ವೇಶ ಬದಲಾವಣೆ  ಮಾಡಿಗೊಂಬದು.  ಇದು ನಮ್ಮ ದೇಶದ ಪ್ರಜಾಪ್ರಭುತ್ವದ ಅತ್ಯಂತ ಕಠೋರ ಸತ್ಯ. ಪ್ರಜಾಪ್ರಭುತ್ವ ವ್ಯವಸ್ಥೆಲಿದ್ದುಗೊಂಡು ವಂಶ ಪಾರಂಪರ್ಯದ ಆಢಳಿತಕ್ಕೆ ಸಂಪೂರ್ಣ ಒಗ್ಗಿ ಹೋಗಿಪ್ಪ ಒಂದು ದೊಡ್ಡ ರಾಷ್ಟ್ರೀಯ ಪಕ್ಷವೇ ನಮ್ಮ  ದೇಶಲ್ಲಿದ್ದು.  ಆ ಒಂದು ವಂಶದವು ಹೇಂಗಿಪ್ಪ ಬೋಸ (ಬೋಸಿ)ಗೊ ಆದರೂ, ಅವೇ ಆ ಪಕ್ಷಕ್ಕೆ ನಾಯಕರು.   ನಾಯಕತ್ವ,  ದೂರದರ್ಶಿತ್ವ, ರಾಜಕೀಯ ಪರಿಪಕ್ವತೆ ಇತ್ಯಾದಿ ಸದ್ಗುಣಂಗೊ ಇರೆಕಾದ ರಾಜಕಾರಣಿಗಳಲ್ಲಿ ಸದ್ಯಕ್ಕೆ ನಿಜವಾಗಿ ಇಪ್ಪದು ಪೈಸೆಯ, ತೋಳಿನ (ರೌಡಿಗಳ) ಬಲ ಮಾಂತ್ರ.  ಹಾಂಗಾಗಿ ಯಾವುದೇ ಸಮಸ್ಯೆಗಾದರುದೇ ಮುಂದಾಲೋಚನೆಂದ ಪರಿಹಾರ ಕಂಡುಗೊಂಡ ಇಷ್ಟರವರೆಗಿನ ಉದಾಹರಣೆಗೊ ದೇವರದಯಂದ ಯಾವುದೂ  ನೆಂಪಾವುತ್ತಿಲ್ಲೆ.  ಸಮಸ್ಯೆ ದೊಡ್ಡ ಆಗಿ, ಇನ್ನು ತಡವಲೆಡಿಯ ಹೇಳುವಷ್ಟು ಬೆಳೆದ ಮೇಲೆಯೇ ಅದರ ಬಗ್ಗೆ ಎಂತಾರೂ ತಲೆಕೆಡಿಸಿಗೊಂಬ  ಕೆಲಸ ಸುರು ಅಪ್ಪದು.   ನಮ್ಮ ದೇಶಲ್ಲಿ ಅತ್ಯಂತ ಹೆಚ್ಚಿನ ಅಧಿಕಾರದ ಸವಲತ್ತುಗಳ ಅನುಭವಿಸಿಗೊಂಡಿದ್ದರೂ ಯಾವುದೇ ರೀತಿಯ ಉತ್ತರದಾಯಿತ್ವ ಇಲ್ಲದ್ದ ವೃತ್ತಿ ಹೇಳಿರೆ ರಾಜಕಾರಣಿಗಳದ್ದು.  ಭಾರತಮಾತೆ ಇಷ್ಟು ಬಂಜೆ ಏಕೆ ಆಗಿ ಹೋತು ? ಸಾಮರ್ಥಿಗೆ ಇಪ್ಪ ಒಬ್ಬನೇ ಒಬ್ಬ ಮುತ್ಸದ್ದಿ ಏಕೆ ಹುಟ್ಟಿ ಬತ್ತ ಇಲ್ಲೆ ?

ಇದೊಂದು ವಸ್ತು ಸ್ಥಿತಿಯ ಅವಲೋಕನದ ಪ್ರಯತ್ನ. ಹಾಂಗಾಗಿ ಋಣಾತ್ಮಕ ಆಂಶಂಗೊ ಧಾರಾಳ ಕಾಂಗು.  ಉದ್ಧಾರ ಅಪ್ಪಲೆ ಇದೊಂದೇ ದಾರಿ.  ಸಣ್ಣ ಸಣ್ಣ ನೀರಿನ ಹನಿಗೊ ಸೇರಿ ದೊಡ್ಡ ಹೊಳೆಯೇ ಅಪ್ಪ ಹಾಂಗೆ, ಸಮಾಜದ ಪ್ರತಿಯೊಬ್ಬನ  ಬಯಕೆಗಳೂ ಒಂದೇ ಆಗಿದ್ದರೆ, ಅದರಲ್ಲಿ ದಿವ್ಯ ಚೈತನ್ಯ ಇರ್ತು.  ಸಂವಹನಂದ ಸಂಚಲನ  ಉಂಟಾಗಲಿ ಹೇಳುವ ಸದಾಶಯದೊಂದಿಗೆ ಸದ್ಯಕ್ಕೆ ಅಲ್ಪ ವಿರಾಮ.

- ಬಾಪಿ / ೧೦.೧೦.೨೦೦೯

No comments: