Wednesday, September 23, 2009

ಕಲ್ಪವೃಕ್ಷ

ಮನೆ ಕಟ್ಟುವ ಆಲೋಚನೆ ತಲೆಗೆ ಹೋದ ಮೇಲೆ, ಪುರುಸೊತ್ತು ಇಪ್ಪಗ ಎಲ್ಲಾ ನಮ್ಮ ಸುತ್ತ ಮುತ್ತ ಇಪ್ಪ ಮನೆಗಳ ಹೊರನೋಟ, ಒಳಾಣ ವಿನ್ಯಾಸ, ಕೋಣೆಗಳ ಗಾತ್ರ, ಗೋಡೆಯ ಬಣ್ಣ ಇತ್ಯಾದಿಗಳ ಗಮನಿಸುವ ಪ್ರಕ್ರಿಯೆ ಅನೈಚ್ಛಿಕವಾಗಿ ಸುರು ಆವುತ್ತು ಹೇಳುದು ಎನ್ನ ಸ್ವಂತ ಅನುಭವ.  ಯಾರಾದರೂ ಮಾರ್ಗಲ್ಲಿ ಹೋಪವು ಯಾವುದಾದರೂ ಮನೆಯ ತಿರುಗಿ ತಿರುಗಿ ನೋಡಿರೆ, ಅವು ಸ್ವಂತ ಮನೆ ಕಟ್ಟುಸುತ್ತಾ ಇದ್ದವು ಹೇಳಿಯೇ ಲೆಕ್ಕ ! ಹೀಂಗೆ ನೋಡಿ ಸಂಗ್ರಹಿಸಿದ, ಓದಿ ತಿಳಿದ ವಿಷಯಂಗಳ ಎಲ್ಲಾ ಕ್ರೋಢೀಕರಿಸಿದ  ಕನಸಿನ ಮನೆಯ ಒಂದು ನೀಲಿನಕ್ಷೆಯ ಕೊನೆಗೂ ನೋಡುವ ಹಾಂಗೆ ಅಪ್ಪಗ ಒಂದು ಸುದೀರ್ಘ ನಿಟ್ಟಿಸುರು ಬಿಡುವಷ್ಟು ಸುಸ್ತು ಆಗಿರುತ್ತು.   ಅಂತೂ,  "ಮನೆ ಕಟ್ಟಿ ನೋಡು" ಹೇಳುವ ಗಾದೆಯ ಅರ್ಥದ ಸರಿಯಾದ ಪರಿಚಯ ಅಪ್ಪದು ಅಂಬಗಳೇ. ಮನೆ ಕಟ್ಟುಸುಲೆ ಹೆರಟ ಗೆಂಡ-ಹೆಂಡತಿ ಆದರ್ಶ ದಂಪತಿ ಅಪ್ಪೋ ಅಲ್ಲದೋ ಹೇಳುವ ವಿಷಯದ ನಿಜವಾದ ಪರೀಕ್ಷೆ ಅಪ್ಪದೂ ಅಂಬಗಳೇ !  ಹೊಸ ಮನೆಗೆ ಸಂಬಂಧಿಸಿದ   ಇಂಚಿಂಚು ವಿವರಂಗಳನ್ನೂ ಕೂಲಂಕುಶ ವಿಮರ್ಶೆ ಮಾಡಿ, ತನ್ಮೂಲಕ  ಉದ್ಭವಿಸುವ ಎಲ್ಲಾ ಚರ್ಚೆ, ಜಗಳ, ಜಟಾಪಟಿ, ವೈಮನಸ್ಯಂಗಳನ್ನೂ ಮೀರಿ ಯಾವ  ದಂಪತಿ ಮುಂದೆ ಸಾಗುತ್ತವೋ, ಅಂಥವರ ಗಾಢವಾದ ಹೊಂದಾಣಿಕೆಗೆ ಮೆಚ್ಚುಗೆ ವ್ಯಕ್ತ ಪಡಿಸಲೇ ಬೇಕು.   

ಹೀಂಗೆ ಮನೆ ಬಗ್ಗೆ ಕಲೆಹಾಕಿದ ಮಾಹಿತಿಗಳ ಪೈಕಿ ಅತ್ಯಂತ ರೋಚಕವಾದ್ದು ಹೇಳಿರೆ, ಪೇಟೆಯ ಮನೆಗಳಲ್ಲಿ ಕಾಂಬಲೆ ಸಿಕ್ಕುವ  ತೆಂಗಿನ ಮರಂಗಳ ಕಥೆ.  ಎಷ್ಟು ಸಣ್ಣ ನಿವೇಶನ ಆದರೂ ತೆಂಗಿನ ಸೆಸಿಗೆ ಜಾಗೆ ಬಿಟ್ಟೇ ಹೆಚ್ಚಿನವು ಮನೆ ಕಟ್ಟುತ್ತವು. ಹಾಂಗೂ ಜಾಗೆ ಸಾಲದ್ದೆ ಬಂದರೆ, ಮನೆಂದ ಹೆರ ಮಾರ್ಗದ ಕರೆಲಿ ನೆರಳಿಂಗೆ ಹೇಳಿ ಸೆಸಿ ನೆಡುವ ಬದಲು ತೆಂಗಿನ ಸೆಸಿಯನ್ನೇ ನೆಡುವ ಪುಣ್ಯಾತ್ಮಂಗಳೂ ಇದ್ದವು.  ಮತ್ತೆ ಬೇರೆಯವರಿಂದ ಖಾಲಿ ನಿವೇಶನವ ಖರೀದಿಸಿದ ಅಸಾಮಿಗೊ  ಅಲ್ಲಿ ಮೊದಲೇ ಅಡ್ಡಾದಿಡ್ಡಿ ಬೆಳೆದ ತೆಂಗಿನ ಮರ ಏನಾರೂ ಇದ್ದರೆ, ಅದಕ್ಕೆ ಬೇಕಾಗಿ ಮನೆಯ ವಿನ್ಯಾಸಲ್ಲಿ ವಿಶೇಷ ಹೊಂದಾಣಿಕೆ ಮಾಡಿಗೊಂಬಲೂ ಹಿಂಜರಿತ್ತವಿಲ್ಲೆ    ಕೆಲವು ಕಡೆ,  ತೆಂಗಿನ ಮರ ಮೇಲೆ ಹೋಪಲೆ ಮನೆಯ ಚಾವಣಿಯ ಒಟ್ಟೆ ಮಾಡಿ ವ್ಯವಸ್ಥೆ ಮಾಡಿಕೊಟ್ಟ ಸೃಜನಶೀಲ ಶಿಖಾಮಣಿಗಳೂ ಇದ್ದವು.  ತೆಂಗಿನ ಸೆಸಿ ಬೆಳದು ಮರ  ಅಪ್ಪಗ ಅದರ ಬೇರುಗೊ ಹೊಕ್ಕು ಮನೆಯ ಕಾಂಪೌಂಡು  ಒಡದು ಹೋದ ದಾರುಣ ದೃಶ್ಯ ಸರ್ವೇಸಾಮಾನ್ಯ. ಮತ್ತೆ ಮರಂಗೊಕ್ಕೆ ಬೆಳಕು ಇಪ್ಪ ಹೊಡೆಂಗೆ  ಬೆಳವ ದುರ್ಬುದ್ಧಿ  ಇಪ್ಪ ಕಾರಣ, ಪೇಟೆಯ ಮರಂಗೊ ಸರ್ತ ಬೆಳವದು ಭಾರೀ  ಅಪರೂಪ.  ಹೆಚ್ಚಾಗಿ ಮರಂಗೊ ಅಕ್ಕ ಪಕ್ಕದ ಮನೆಗೊಕ್ಕೋ ಅಥವಾ ಮಾರ್ಗಕ್ಕೋ ಮಾಲಿಗೊಂಡೇ ಇಪ್ಪದು.

ತೆಂಗಿನ ಮರದ ಬಗ್ಗೆ ಇಷ್ಟು ಭ್ರಮೆ ಇಪ್ಪಲೆ ಎಂತ ಕಾರಣ ಆಗಿಕ್ಕು ಹೇಳುವ ಚೋದ್ಯ ಮನಸ್ಸಿನ ಕಾಡುತ್ತಲೇ ಇದ್ದು.  ಭೂಲೋಕಲ್ಲಿಪ್ಪಗ ಕಲ್ಪವೃಕ್ಷವ ಸಾಂಕಿದ ಪುಣ್ಯದ ಫಲಂದ ಸ್ವರ್ಗಕ್ಕೆ ಆದ್ಯತೆಯ  ಟಿಕೇಟು ಸಿಕ್ಕುಗು ಹೇಳುವ ಆಶೆ ಆಗಿಕ್ಕೋ ?  ಹಾಂಗಾರೆ, ಇಷ್ಟು ಧರ್ಮಿಷ್ಠರಾಗಿಪ್ಪವಕ್ಕೆ ತಾವು ನೆಟ್ಟ  ತೆಂಗಿನಮರಂಗಳಿಂದ  ಕಾಲಕಾಲಕ್ಕೆ ಕಸವು ಕೀಳುವ, ಒಣಕ್ಕಟೆ ಮಡಲು/ಕಾಯಿಗಳ   ತೆಗೆಶುವ ವ್ಯವಸ್ಥೆ ಮಾಡೆಕ್ಕು ಹೇಳುವ ಕನಿಷ್ಟ ಪರಿಜ್ಞಾನವೂ ಏಕೆ ಇರ್ತಿಲ್ಯೋ ?  ತೆಂಗಿನ ಕಾಯಿ ತಲಗೆ ಬಿದ್ದು ಸತ್ತರೆ ಸೀದಾ ಸ್ವರ್ಗಕ್ಕೆ ಹೋವುತ್ತು ಹೇಳುವ ಯಾವುದಾದರೂ ಪುರಾಣದ ದೃಷ್ಟಾಂತದ ಮೇಲಾಣ ಕುರುಡು ನಂಬಿಕೆಯೋ ಏನೋ ?  ಹಾಂಗೆ ಹೇಳಿ ಆದರೆ,   ನಡಕ್ಕೊಂದು ಹೋಪಗ ಎರಡು ಸರ್ತಿ  ಕೊಟ್ಟುಕಾಯಿ ತಲೆಯ ಮೇಲೆ ಬೀಳುದು ಸೆಕೆಂಡಿನ ಅಂತರಲ್ಲಿ ತಪ್ಪಿದ್ದದು ಎನ್ನ  ಪುಣ್ಯವೋ  ಅಥವಾ ಗ್ರಹಚಾರವೋ ಹೇಳುದು ಈಗ ದೊಡ್ಡ ಜಿಜ್ಞಾಸೆಯ ವಿಷಯವೇ ಆವುತ್ತು.   ಮತ್ತೆ, ತೆಂಗಿನ ಮರದ ಅಡಿಲಿ ನಿಲ್ಲಿಸಿದ ಎನ್ನ ಹಳತ್ತು ಕಾರಿನ ಗಾಜು ಹೊಡಿ ಆದ ಶುದ್ದಿಯ ಅನಗತ್ಯ ವಿವರಂಗಳ ಹೇಳಿ ಸುಮ್ಮನೆ  ಮರ್ಯಾದೆ ಕಳಕ್ಕೊಂಬ  ದುಃಸಾಹಸಕ್ಕೆ ಆನು ಖಂಡಿತ ಕೈಹಾಕುತ್ತಿಲ್ಲೆ.

ಈ ಸಂದರ್ಭಲ್ಲಿ ಎನ್ನ ಒಬ್ಬ ಗೆಳೆಯ ಬಾಲ್ಯಲ್ಲಿ ತೆಂಗಿನ ಮರದ ಬಗ್ಗೆ ಬರೆದ ಒಂದು ಪ್ರಬಂಧ ನೆಂಪು ಆವುತ್ತಾ ಇದ್ದು.  ಅದರಲ್ಲಿ ಅವ ತನಗಿಪ್ಪ ಸಮಸ್ತ ಜ್ಹಾನವನ್ನೂ ಧಾರೆ ಎರದು  ತೆಂಗಿನಮರದ ಸರ್ವ ಉಪಯೋಗಂಗಳನ್ನೂ ಎಳೆಎಳೆಯಾಗಿ ಬಿಡಿಸಿ ಬರದಿತ್ತಿದ್ದ. ಮಳೆಗಾಲಲ್ಲಿ ಕಾಲುನೀಡಿ ಕೂದುಗೊಂಡು ಸುಟ್ಟು ಹಾಕಿದ ಹಲಸಿನ ಹಪ್ಪಳಕ್ಕೆ ತೆಂಗಿನೆಣ್ಣೆ ಸವರಿ, ಕಾಯಿತುಂಡು ಸೇರಿಸಿ ತಿಂಬ ರುಚಿವಿಶೇಷ,  ಮನೆ ಜೆಂಬ್ರಲ್ಲಿ ತೆಂಗಿನ ಮಡಲು ಹಾಕಿದ ಜಾಲಿನ ಚಪ್ಪರದ ಒಳ ಕಂಬಾಟ ಆಡುವ ವಿಷಯ ಎಲ್ಲಾ ಸೇರಿದ ಅವನ ಬರವಣಿಗೆಯ ಶೈಲಿಗೆ ಮನಸೋತ ಶಾಲೆಯ  ಮಾಷ್ಟ್ರಂಗೆ ಕೆಲವು ಕ್ಷಣಕ್ಕಾದರೂ ತನ್ನ ಸ್ವಂತ ಬಾಲ್ಯಕ್ಕೆ ಮರಳಿದ ಮಧುರ ಅನುಭವ ಆಗಿಪ್ಪಲೇ ಬೇಕು.   ಆದರೆ ಎಷ್ಟೇ ಬರದರೂ ಮಾಷ್ಟ್ರ ಬರಕ್ಕೊಂಡು ಬಪ್ಪಲೆ ಹೇಳಿದ ಒಂದು ಪುಟ  ಭರ್ತಿ ಆಗದ್ದ ಕಾರಣ, ಈ ಮಾಣಿ ಇನ್ನೂ ರಜ ಬುದ್ಧಿವಂತಿಕೆ ಉಪಯೋಗಿಸಿದ.  ಒಳುದ ಅರ್ಧ ಪುಟಲ್ಲಿ ತೆಂಗಿನ ಮರದ ಬುಡಲ್ಲಿ ತಾಡುವ ದನಂಗಳ ಕಟ್ಟಿ ಹಾಕುವ ವಿಷಯ ನೆಂಪಾಗಿ ಅದರ ಬಗ್ಗೆ  (ದನದ ಕೊಂಬಿನ ವರ್ಣನೆಯೂ ಸೇರಿ) ಸುಮಾರು ವಿವರಂಗಳ ಸೇರಿಸಿದ.  ಹಾಂಗೇ ಮುಂದುವರುದು, ದನದ ಹಾಲು ಮತ್ತದರ ವಿವಿಧ ಉತ್ಪನ್ನಂಗೊ,  ಗೊಬ್ಬರ ಮತ್ತು ಸಾವಯವ ಕೃಷಿ ಇತ್ಯಾದಿ ಸಕಲ ವಿಷಯಂಗಳನ್ನೂ ಒಳಗೊಂಡ  ಮಹಾಪ್ರಬಂಧವನ್ನೇ ಮಂಡಿಸಿಬಿಟ್ಟ.  ಕೊನೆಗೂ ಅದರ ಓದಿ ಮುಗಿಶಿ ಅಪ್ಪಗ  ಅರ್ಜುನಂಗೆ ಆದ ವಿಶ್ವ ರೂಪ ದರ್ಶನದ ಅನುಭವವೇ ಎನಗುದೇ ಆತು.   ಎನಗೆ ಕನ್ನಡ ಸಾಹಿತ್ಯ ಪ್ರಪಂಚದ ಮೊತ್ತ ಮೊದಲ ಪರಿಚಯ ಆದ್ದದು ಈ ಪ್ರಬಂಧದ ಮೂಲಕವೇ ಹೇಳಿ ನಿಸ್ಸಂಕೋಚವಾಗಿ ಹೇಳ್ಳಕ್ಕು.

- ಬಾಪಿ / ೨೩.೦೯.೨೦೦೯

No comments: