Monday, September 21, 2009

ಶ್ವಾನಪ್ರಿಯರು

ಒಂದರಿ ಒಂದು ನಾಯಿ ಉಸುಲು ಕಟ್ಟಿ, ಜೀವ ಬಿಟ್ಟು ಓಡಿಗೊಂಡಿತ್ತಡ.  ಅದರ ಕಂಡು ಇನ್ನೊಂದು ನಾಯಿ, "ಎಂತ ಸಂಗತಿ ? ಎಂತಕೆ ಮರ್ಲು ನಾಯಿ ಕಚ್ಚಿದವರ  ಹಾಂಗೆ ಓಡುತ್ತಾ ಇದ್ದೆ ?" ಹೇಳಿ ಕೇಳಿತ್ತಾಡ. ಅಂಬಗ ಈ ನಾಯಿ, "ಸಂಗತಿ ಎಂತ ಹೇಳಿರೆ, ಹತ್ರಾಣ ಮಾರ್ಗಲ್ಲಿ ಒಂದು ಹೊಸ ಕರೆಂಟಿನ ಕಂಬ ನೆಟ್ಟಿದವಡ. ಅದರ ಉದ್ಘಾಟನೆ ಮಾಡುವೊ ಹೇಳಿ ಹೋವುತ್ತಾ ಇದ್ದೆ.   ಸುಮ್ಮನೆ ಕೊರಪ್ಪಿ, ಗೌಜಿ ಮಾಡಿ ಎಲ್ಲಾ ನಾಯಿಗೊಕ್ಕೂ ಗೊಂತಪ್ಪ ಹಾಂಗೆ ಮಾಡೆಡ, ನೀನು ಬೇಕಾರೆ ಎನ್ನೊಟ್ಟಿಂಗೆ ಬಾ"  ಹೇಳಿತ್ತಾಡ.  

ಇತ್ತೀಚೆಗೆ ಬೆಂಗ್ಳೂರು ಮಹಾನಗರಲ್ಲಿ ಕಾಟು ನಾಯಿಗಳ ಹಾವಳಿ ತಡವಲೆಡಿಯದ್ದೆ ಸಾರ್ವಜನಕರಿಂಗೆ ತೊಂದರೆ ಆಗಿಪ್ಪಗ ಸರಕಾರದವು ನಾಯಿಗಳ ಹಿಡಿವ ಕೆಲಸಲ್ಲಿ ವಿಶೇಷ ತರಬೇತಿ ಇಪ್ಪವರ  ಕೇರಳಂದ  ಬಪ್ಪಲೆ ಮಾಡಿ   ಉಪದ್ರ ಕೊಡುವ ನಾಯಿಗಳ ಹಿಡಿದು ಗೂಡುಗಳಲ್ಲಿ ತುಂಬಿಸಿ ತೆಕ್ಕೊಂಡು ಹೋಪ ವ್ಯವಸ್ಥೆ ಮಾಡಿತ್ತಿದ್ದವು.   "ಕಚ್ಚುದು ನಾಯಿಗಳ ಹುಟ್ಟುಗುಣ" ಹೇಳುವ ಸಾಮಾನ್ಯಜ್ಞಾನವುದೇ ಇಲ್ಲದ್ದೆ ತಮ್ಮ ಮೇಲೆ ದೌರ್ಜನ್ಯ ಎಸಗುತ್ತಾ ಇಪ್ಪ ಸರಕಾರದ ವರ್ತನೆಯ ಖಂಡಿಸಿ ಠರಾವು ಮಂಡನೆ ಮಾಡುದರ ಮೂಲಕ ಅಸಮಾಧಾನ ವ್ಯಕ್ತಪಡಿಸುಲೆ ಹೇಳಿ ಅಖಿಲ ಭಾರತ ಶ್ವಾನ ಹಿತರಕ್ಷಣಾ ಸಮಿತಿ (ನೋಂ) - ಇವು  ಬೆಂಗ್ಳೂರಿಲ್ಲ್ಲಿಒಂದು ಮಹಾಸಭೆಯ  ಏರ್ಪಡಿಸಿದವಡ.  ಸಮ್ಮೇಳನದ ಶುಭದಿನದಂದು ಭಾರತದ ಎಲ್ಲಾ ಪ್ರದೇಶಂಗಳಿಂದ ವಿವಿಧ ರೀತಿಲಿ ಕೊರಪ್ಪುವ, ಬೇರೆ ಬೇರೆ ಬಣ್ಣ, ಗಾತ್ರದ ನಾಯಿಗೊ ಬಂದು ಸೇರಿದವಡ.  ಇಷ್ಟೆಲ್ಲಾ ವಿಭಿನ್ನತೆ ಇದ್ದರೂ ಸೇರಿದ ನಾಯಿಗೊ ಎಲ್ಲಾ ತಮ್ಮ ಸಂಪ್ರದಾಯದ ರೀತಿಲಿ ಬೀಲ ಆಡಿಸಿ ಉಭಯ ಕುಶಲೋಪರಿ ವಿಚಾರಿಸಿಗೊಂಡಿತ್ತಿದವಡ.  ಆದರೆ, ಕೆಲವು ನಾಯಿಗೊ ಮಾತ್ರ ಸಂಪ್ರದಾಯಕ್ಕೆ ಅಪಚಾರ ಹೇಳಿ ಕಾಂಬ ಹಾಂಗೆ ಬೀಲವ ಮೇಲಂದ ಕೆಳಂಗೆ ಆಡಿಸಿಗೊಂಡಿತ್ತಿದ್ದವಡ.  ಇದರ ಕಂಡು ಸಮ್ಮೇಳನದ ಸ್ವಾಗತ ಸಮಿತಿಯವಕ್ಕೆ ಇವು ಬ್ಯಾರಿಗಳ ದೇಶಂದ ಬೇಲಿನುಗ್ಗಿ ಬಂದ  ಗೂಢಚಾರಿಗೊ ಆಗಿಕ್ಕೋ ಹೇಳಿ ರಜ ಅನುಮಾನ ಬಂದು, ಆ ನಾಯಿಗಳ ಸಮ್ಮೇಳನದ ಚಪ್ಪರಂದ ಅತ್ಲಾಗಿ ಕರಕ್ಕೊಂಡು ಹೋಗಿ, "ನಿಂಗೊ ಯಾವ ಸೀಮೆಯವು ? ನಿಂಗಳ ಬೀಲ ಆಡಿಸುವ ಕ್ರಮ ತುಂಬಾ ವಿಚಿತ್ರ ಕಾಣ್ತನ್ನೆ  ?" ಹೇಳಿ ಜೋರಿಲ್ಲಿ ಕೊರಪ್ಪಿ ಕೇಳಿದವಡ. ಅಷ್ಟಪ್ಪಗ ಅವು, "ಎಂಗೊ ಬೊಂಬಾಯಿಂದ ಬಂದವು. ಎಂಗಳದ್ದುದೇ ಮೂಲಲ್ಲಿ ನಿಂಗಳ ಸಂಪ್ರದಾಯದವೇ. ಆದರೆ, ಬೊಂಬಾಯಿಲಿ ಎಂಗೊಗೆ ಜನಸಾಂದ್ರತೆಂದಾಗಿ ಅಡ್ಡಡ್ಡ ಬೀಲ ಆಡಿಸುಲೆ ಜಾಗೆ ಸಾಕವುತ್ತಿಲ್ಲೆ. ಹಾಂಗಾಗಿ ಮೇಲಂದ ಕೆಳಂಗೆ   ಆಡಿಸುತ್ತೆಯೊ. ಎಷ್ಟೋ ತಲೆಮಾರಿಂದ ಅಲ್ಲಿಯೇ ಇಪ್ಪ ಕಾರಣ ಈಗ ಇದುವೇ ಅಭ್ಯಾಸ ಆಗಿ ಹೋಯಿದು.  ಕ್ಷಮಿ ಸೆಕ್ಕು"  ಹೇಳಿದವಡ.

ಈ ಶ್ವಾನ ಕಥಾಪಠನ ಎಂತಕೆ ಮಾಡಿದ್ದದು ಹೇಳಿರೆ, ದಿನಾ ಮಾಡುವ ಕಾಲ್ನಡಿಗೆಯ ವ್ರತಾಚರಣೆಯ ಸಂದರ್ಭಲ್ಲಿ ಸುಮಾರು ಶ್ವಾನಪ್ರಿಯರು ಕಾಂಬಲೆ ಸಿಕ್ಕುತ್ತವು.  ಇವರ ಒಟ್ಟಿಂಗೆ ಇಪ್ಪ ಭಯಂಕರ ಗಾತ್ರದ ನಾಯಿಗೊ ದೊಡ್ಡ ಹೊಟ್ಟೆಯ ತಮ್ಮ ಯಜಮಾನಂಗಳನ್ನೇ ಎಳಕ್ಕೊಂಡು ಹೋವುತ್ತಾ ಇಪ್ಪ ದೃಶ್ಯ ನೋಡ್ಳೆ ಭಾರೀ ಗಮ್ಮತಿರ್ತು.  ಕೆಲವು  ನಾಯಿಗೊಕ್ಕೆ ಸಂಕೋಲೆಯುದೇ ಇರ್ತಿಲ್ಲೆ. ಯಜಮಾನಂಗೊಕ್ಕೆ ತಮ್ಮ ನಾಯಿಗಳ ಮೇಲೆ ಅಷ್ಟುದೇ ಭರವಸೆ ! ಹೀಂಗೆ ಸಂಕೋಲೆ ಇಲ್ಲದ್ದ ನಾಯಿಗೊ ಎದುರು ಸಿಕ್ಕಿದರೆ, ನಿಜವಾಗಿ ವ್ಯಾಯಾಮಕ್ಕೋಸ್ಕರ ಕಾಲ್ನಡಿಗೆ ಮಾಡುವ ಎನ್ನ ಹಾಂಗಿಪ್ಪ ಪಾಪದವಕ್ಕೆ ಪ್ರಾಣಭಯಂದ ಎದೆಬಡಿತ ಜಾಸ್ತಿ ಆವುತ್ತು.  ನಾಯಿಗೊಕ್ಕೆ  ಸ್ವಾಮಿಭಕ್ತಿ ಇಪ್ಪದು ಅಶನ ಹಾಕುವವರ  ಮೇಲೆ ಮಾಂತ್ರ, ದಾರಿಲಿ ಹೋಪವರ ಮೇಲೆ ಎಲ್ಲ ಎಂತ ಪ್ರೀತಿ ಇರ್ತಿಲ್ಲೆ ಹೇಳುವ ಸಾಮಾನ್ಯಜ್ಞಾನ ಇಲ್ಲದ್ದ ಶ್ವಾನಪ್ರಿಯ ಯಜಮಾನಂಗಳ ಮೇಲೆ ವಿಪರೀತ ಕೋಪ ಬತ್ತು. 

ಇನ್ನು, ನಾಯಿಗಳ ಹೆರ ಕರಕ್ಕೊಂಡು ಹೋಗಿ ತಿರುಗುಸುವ ಮೂಲ ಉದ್ದೇಶ ವ್ಯಾಯಾಮ ಅಥವಾ ಸ್ವಚ್ಚ ಹವಾಸೇವನೆ ಆಂತೂ ಖಂಡಿತ ಅಲ್ಲ ಹೇಳುದು ಗುಟ್ಟಿನ ಸಂಗತಿ ಎಂತ ಅಲ್ಲ.  ಈ ನಾಯಿಗೊಕ್ಕೆ  ಎಂತಲ್ಲ ತಿಂಬಲೆ ಕೊಡುತ್ತವು ಹೇಳಿ ಗೊಂತಿಲ್ಲೆ.  ಅವು ಒಂದೊಂದು ಹೆಡಗೆ ಹೇಸಿಗೆ ಮಾಡಿ ಮಡುಗುತ್ತವು. ಇದರ ಮನೆಲಿ ಒತ್ತರೆ ಮಾಡ್ಲೆ ಪುರುಸೊತ್ತು ಆಗದ್ದ ಕಾರಣ, ಮಾರ್ಗದ ಕರೆಲಿ ಗಲೀಜು  ಮಾಡಿಸಿ  ತಮ್ಮ ಕೆಲಸ ಸುಲಭ ಮಾಡಿಗೊಂಬ ಬೇಜವಾಬ್ದಾರಿ ವ್ಯಕ್ತಿಗಳೇ ಇಂತಹ ಯಜಮಾನಂಗೊ.  ಬೇರೆಯವರ ಮನೆಯ ಗೇಟಿನ ಬುಡಲ್ಲಿ, ಅವು ಹಾಕಿದ ರಂಗೋಲಿಯ ಮೇಲೆಯೇ  ತಮ್ಮ ನಾಯಿಗೊ  ಹೇಸಿಗೆ ಮಾಡುದರ ನೋಡಿ ಖುಷಿ ಪಡುವ ವಿಘ್ನ ಸಂತೋಷಿಗಳೂ ಧಾರಾಳ ಇದ್ದವು.   ಎನ್ನ ವಾಹನವ ಮಾರ್ಗದ ಕರೆಲಿ ನಿಲ್ಲಿಸಿಪ್ಪಗ  ಅದರ  ಗಾಲಿಯ ಮೇಲೆ ಶ್ವಾನಮೂತ್ರಸಿಂಚನ ಆಗದ್ದ ದಿನ ಅಪರೂಪ  ಹೇಳ್ಳಕ್ಕು.   ಹೀಂಗಿಪ್ಪ ಮೂರ್ಖ, ಸಮಾಜದ್ರೋಹಿ ಶ್ವಾನಪ್ರಿಯರ  ನಡವಳಿಕೆ ನೋಡಿರೆ, ತಮ್ಮ ಮುಂದಿನ ಜನ್ಮಲ್ಲಿ ನಾಯಿ ಆಗಿ ಹುಟ್ಟುಲೆ ಈಗಲೇ ತಾಲೀಮು ನಡೆಸುತ್ತಾ ಇಪ್ಪ ಹಾಂಗೆ ಕಾಣ್ತು.

ಈ ವಿಷಯಕ್ಕೆ ಸಂಬಂಧ ಪಟ್ಟ ಹಾಂಗೆ, ಅಮೆರಿಕಾಕ್ಕೆ ಹೋಗಿಪ್ಪಗಾಣ ಒಂದು ಅನುಭವವ ಹೇಳಲೇ ಬೇಕು. ಎನ್ನ ನಯಾಗರಾಕ್ಕೆ ಕರಕ್ಕೊಂಡು ಹೋದ ಸಹೋದ್ಯೋಗಿ ಮಿತ್ರ ಒಬ್ಬ ಪರಸ್ಪರರ ಸ್ವಂತ ಜೀವನದ ವಿಷಯ ಪ್ರಸ್ತಾಪ ಮಾಡಿಗೊಂಡಿಪ್ಪಗ, ತನ್ನ ಒಂಟಿ ಜೀವನದ ಸಂಗಾತಿಯಾದ ೧೨ ವರ್ಷದ ನಾಯಿಯ ವಿಷಯವ ಅರ್ಧ ಘಂಟೆಯಷ್ಟು ದೀರ್ಘ ಕಾಲ ಅತ್ಯಂತ ಹೆಮ್ಮೆಂದ ವಿವರಿಸಿದ. ನಾವು ಮನೆಯ ಮಕ್ಕಳ ವಿಷಯಲ್ಲಿ  ವಹಿಸುವಷ್ಟೇ ಕಾಳಜಿ ಅವನ ನಾಯಿಯ ಕುರಿತಾದ ವಿವರಣೆಲಿಯೂ ಕಂಡತ್ತು.    ಆ ನಾಯಿ  ಹೇಂಗೆ ಅವನ ಜೀವನದ ಒಂದು  ಅವಿಭಾಜ್ಯ  ಅಂಗವೇ  ಆಗಿ ಹೋಯಿದು ಹೇಳುದು ಅವನ ಕಥೆಯ ಸಾರಾಂಶ.   ಎಲ್ಲಾ ಶ್ವಾನ ಪ್ರಿಯರಿಂಗೂ ತಮ್ಮ ಸಾಕುಪ್ರಾಣಿಗಳ ಮೇಲೆ ಇಷ್ಟೇ ನೈಜವಾದ ಪ್ರೀತಿ ಇಕ್ಕು.   ಆದರೆ, ಆ ಪ್ರೀತಿಯ ಸಮಾಜಲ್ಲಿಪ್ಪ ಬೇರೆಯವಕ್ಕೆ ತೊಂದರೆ ಆಗದ್ದ ಹಾಂಗೆ ನಿಭಾಯಿಸುವ ಅಭ್ಯಾಸ ಮಾಡೆಕ್ಕು ಹೇಳಿ ಏಕೆ ಗೊಂತಾವುತ್ತಿಲ್ಲೆ ?      

ಶ್ವಾನಂಗಳ ಸ್ವಾಮಿನಿಷ್ಠೆಯನ್ನೇ ತಮ್ಮ ಸಂಸ್ಥೆಯ ಲಾಂಛನವಾಗಿ ಮಾಡಿಗೊಂಡ ಸಿಂಡಿಕೇಟ್ ಬ್ಯಾಂಕಿನ  ಆಢಳಿತವರ್ಗಕ್ಕೆ ಅಭಿನಂದನೆ ಹೇಳಲೇ ಬೇಕು.   ಆದರೆ,  ಸದರಿ ಬ್ಯಾಂಕಿನ ನೌಕರರು ಬ್ಯಾಂಕಿಂಗೆ ಬಂದ ಗ್ರಾಹಕರ ಕಂಡು  ನಾಯಿಗಳ ಹಾಂಗೆ ಕೊರಪ್ಪುತ್ತಾ ಇಪ್ಪದರ ನೋಡಿರೆ, ಇವು ತಮ್ಮ ಬ್ಯಾಂಕಿನ ಲಾಂಛನದ ಮೂಲ ಕಲ್ಪನೆಯ ತಪ್ಪು ಗ್ರಹಿಕೆ ಮಾಡಿಗೊಂಡಿಪ್ಪದು ಸ್ಪಷ್ಟ ಆಪ್ಪದಲ್ಲದ್ದೆ, ಅವರ  ಮುಗ್ಧತೆ ಬಗ್ಗೆ ಕನಿಕರ ಹುಟ್ಟುತ್ತು.  ಕೊನೆಯದಾಗಿ,  ಮೂಕಪ್ರಾಣಿಯಾದ ಶ್ವಾನದ ಪರವಾಗಿ ಒಂದು ಮನವಿ  :  ವಿಶ್ವಾಮಿತ್ರ ನಾಯಿ ಮಾಂಸ ತಿಂದ  ಪುರಾಣದ ಕಥೆಯ ಸತ್ಯಾಸತ್ಯತೆ ಬಗ್ಗೆ  ಒಂದು ನಿಷ್ಪಕ್ಷವಾದ ತನಿಖೆ ಆಯೆಕ್ಕು ಹೇಳಿ ಇತಿಹಾಸಕಾರರ ಆನು ಆಗ್ರಹ ಪೂರ್ವಕವಾಗಿ ಕೇಳಿಗೊಳ್ತೆ.   ಇದರ ಒಟ್ಟಿಂಗೇ, ಶ್ವಾನ ಮಾಂಸ ಭಕ್ಷಣೆಯ ನಂತರ ವಿಶ್ವಾಮಿತ್ರನ ವರ್ತನೆಲಿ ಎಂತಾರೂ ವ್ಯತ್ಯಾಸ ಕಂಡು ಬಂದಿತ್ತೋ, ಶ್ವಾನ ಜ್ವರದ ಬಾಧೆ  ಎಂತಾರೂ ಬಂದಿತ್ತೋ ಹೇಳುವ ವಿಷಯದ ಬಗ್ಗೆಯೂ  ವಿವರಂಗಳ ಬಹಿರಂಗ  ಪಡಿಸೆಕ್ಕು ಹೇಳಿ ವಿನಂತಿ ಮಾಡಿಗೊಳ್ತೆ .

- ಬಾಪಿ / ೨೧.೦೯.೨೦೦೯

No comments: