Monday, August 24, 2009

ಗಣೇಶ ಮಹಿಮೆ

ಎಲ್ಲೋರೂ ಚೌತಿಯ ಕಡುಬು, ಚಕ್ಕುಲಿ, ಪಂಚಕಜ್ಜಾಯ ಇತ್ಯಾದಿ ಭಕ್ಷ್ಯಂಗಳ ಯಥೇಚ್ಛ  ಸೇವಿಸಿ, ಕರಗಿಸಿಗೊಂಡು ಸೌಖ್ಯಲ್ಲಿ ಇದ್ದವು ಹೇಳಿ ಗ್ರೇಶಿಗೊಂಡು, ಎಲ್ಲೋರಿಂಗೂ ಒಳ್ಳೆ ಬುದ್ಧಿ,  ಆಯುರಾರೋಗ್ಯ ಕೊಡು ಹೇಳಿ ಗಣಪತಿಯ ಪ್ರಾರ್ಥನೆ  ಮಾಡ್ತೆ.    
ಗಣಪತಿಯ ದೇಹದ ಅಂಗಂಗಳ ಅನುಪಾತ ವಿಚಿತ್ರವಾಗಿ ಕಂಡರೂ, ಅವನಷ್ಟು ಚಂದದ ದೇವರು ಬೇರೆ ಇಲ್ಲೆ ಹೇಳಿರೆ ತಪ್ಪಾಗ.   ಇಪ್ಪದು ಆನೆಯ ತಲೆ ಆದರೂ  ಹಾಸ್ಯ, ಸಂಗೀತವೇ ಮೊದಲಾದ ವಾಙ್ಮಯ ವಿಷಯಂಗಳಲ್ಲಿ   ವಿಶೇಷ ಆಸಕ್ತಿ ಮತ್ತು ಪ್ರತಿಭೆ ಇಪ್ಪ ದೇವರು ಹೇಳಿಯೇ ಇವ ಹೆಸರುವಾಸಿ.   ವ್ಯಂಗ್ಯಚಿತ್ರಕಾರರಿಂಗಂತೂ  ಇವನ ಕಂಡರೆ ಭಾರಿ ಪ್ರೀತಿ.  ಹಾಂಗಾರೆ, ಚೌತಿಯ ಈ ಶುಭ ಸಂದರ್ಭಲ್ಲಿ ಗಣಪತಿಯ ಮಹಿಮೆಯ ತಿಳ್ಕೊಂಡು, ಅವನ ದೇಹದ  ಅಂಗಂಗಳಿಂದ ಸಿಕ್ಕುವ ಸಂದೇಶಂಗಳಿಂದ  ಸ್ಪೂರ್ತಿ  ಪಡವ ಪ್ರಯತ್ನ ಮಾಡುವೊ.    ಇದಕ್ಕೆ ಅನುಕೂಲ ಅಪ್ಪ ಹಾಂಗಿಪ್ಪ  ಚಿತ್ರ ಒಂದರ  ಇದರೊಟ್ಟಿಂಗೆ ಲಗತ್ತಿಸಿದ್ದೆ. 
- ಬಾಪಿ

Saturday, August 15, 2009

ಶುಭಾಶಯ

ಭೋಜನಕಾಲೇ ಅಂಕಣದ ಸರ್ವ ಸದಸ್ಯರಿಂಗೂ ೬೩ನೇ ಸ್ವಾತಂತ್ರ್ಯೋತ್ಸವದ ಶುಭಾಶಯಂಗೊ.

ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದ ಯಾರಿಂಗೂ ನಮ್ಮ ಹಿರಿಯರು ಇದಕ್ಕಾಗಿ ಎಷ್ಟು ಕಷ್ಟ ಪಟ್ಟಿದವು ಹೇಳುದರ ಸರಿಯಾದ ಕಲ್ಪನೆ ಇಪ್ಪಲೆ ಸಾಧ್ಯ ಇಲ್ಲೆ.  ಸ್ವಾತಂತ್ರ್ಯ ಇದ್ದರೂ ಪ್ರಜಾಪ್ರಭುತ್ವ ಅಲ್ಲದ್ದ ದೇಶಂಗಳ ನೋಡಿರೆ, ಭಾರತ ದೇಶದ ಪ್ರಜೆಗಳಾಗಿಪ್ಪಲೆ ನಾವು ಎಷ್ಟು ಪುಣ್ಯ  ಮಾಡಿದ್ದು ಹೇಳಿ ತಿಳ್ಕೊಂಬಲಕ್ಕು.
ಭಾರತಲ್ಲಿ ಇಷ್ಟರ ವರೆಗೆ ಇಪ್ಪದು ರಾಜಕೀಯ ಸ್ವಾತಂತ್ರ್ಯ ಅಷ್ಟೆ.  ಹಸಿವು, ಬಡತನ, ಅನಕ್ಷರತೆ, ಭ್ರಷ್ಟಾಚಾರ, ಉಗ್ರಗಾಮಿಗಳ ಸಮಸ್ಯೆ, ನಕ್ಸಲುವಾದ ಇತ್ಯಾದಿಗಳಿಂದ ಸ್ವಾತಂತ್ರ್ಯ ಸಿಕ್ಕೆಕ್ಕಷ್ಟೆ. ಇದೆಲ್ಲರಿಂದ  ಮುಕ್ತಿ ಸಿಕ್ಕುಲೆ ಇನ್ನೂ   ೬೩ ವರ್ಷ ಕಾವ ಹಾಂಗೆ ಆಗದ್ದಿರಲಿ !

ವಂದೇ ಮಾತರಂ !
- ಬಾಪಿ

Friday, August 14, 2009

ನಮ್ಮ ಸಮಸ್ಯೆಗೊ-೩

(...ಮುಂದುವರುದ್ದು).. 

ಅನಾಗರಿಕ ನಡವಳಿಕೆ : ನಾವು ಬೇರೆ ದೇಶದವರ ಅಪಹಾಸ್ಯಕ್ಕೆ ಗುರಿ ಅಪ್ಪ ಹಾಂಗಿಪ್ಪ ಸುಮಾರು ನಡವಳಿಕೆಗೊ  ನಮ್ಮಲ್ಲಿ ಇದ್ದು.   ಎಷ್ಟೋ ವಿಷಯಲ್ಲಿ ಭಾರತ ಹೇಳಿರೆ ಹೀಂಗೇ  ಹೇಳುವ ಹಣೆಪಟ್ಟಿ ಬಪ್ಪಷ್ಟು ಹದಗೆಟ್ಟ ಅಭ್ಯಾಸಂಗಳ ನಾವು ರೂಢಿಸಿಗೊಂಡಿದು.  ಇವೆಲ್ಲಾ ನಮ್ಮ ಮನೋಧರ್ಮಕ್ಕೆ ಸಂಬಂಧಪಟ್ಟ ವಿಷಯಂಗೊ ಆದ ಕಾರಣ, ಒಂದೊಂದನ್ನೂ ಪ್ರತ್ಯೇಕ ವಿವರಿಸೆಕ್ಕಾದ ಅವಶ್ಯಕತೆ ಇಲ್ಲೆ.  ಎಲ್ಲವನ್ನೂ ಸೇರಿಸಿ ಒಟ್ಟಿಂಗೆ ಬರವದೇ ಸುಲಭ.  ಮತ್ತೆ  ಓದ್ಲುದೇ ಚೆಂದ !   ಇಂತಹ ನಡವಳಿಕೆಗಳ ಎನಗೆ ಕಂಡ ಮಟ್ಟಿಂಗೆ ಪಟ್ಟಿ ಮಾಡ್ತೆ.

ಸಿಕ್ಕಿದಲ್ಲಿ ಪೂರಾ ಕಸವು ಇಡುಕ್ಕಿ ಗಲೀಜು  ಮಾಡುದು, ಸಾರ್ವಜನಿಕ ಜಾಗೆಗಳಲ್ಲಿ ಮೂತ್ರ ವಿಸರ್ಜನೆ, ತುಪ್ಪೊದು (ಕೆಲವು ಜನಕ್ಕೆ ಬರೀ ತುಪ್ಪಿದರೆ ತೃಪ್ತಿ ಆವುತ್ತಿಲ್ಲೆ, ಕ್ಯಾಕರಿಸಿ ತುಪ್ಪಿದರೇ ಸಮಾಧಾನ), ಸಮಯ ಪಾಲನೆ ಮಾಡದ್ದಿಪ್ಪದು, ವಾಹನ ಬಿಡುವಗ ಅನವಶ್ಯಕ ಹಾರ್ನ್ ಹಾಕಿ ಹರಟೆ ಮಾಡುದು ಇತ್ಯಾದಿಗೊ ಈ ಪಟ್ಟಿಲಿ ಸೇರಲೇ ಬೇಕಾದ ಸಂಗತಿಗೊ. ಇನ್ನೂ ಯಾವುದಾದರೂ ಮುಖ್ಯದ್ದು ಬಿಟ್ಟು ಹೋಗಿದ್ದರೆ, ಸೇರಿಸಿಗೊಳೆಕ್ಕಾಗಿ ವಿನಂತಿ.   ಈ ವಿಷಯಂಗಳ ಕೂಲಂಕುಶ ವಿಮರ್ಶೆ ಮಾಡ್ಳೆ ಹೋದರೆ, ಸುಮಾರು ಸಂಗತಿಗೊ ಹೆರ ಬತ್ತು.  ಈ ಯಾವ ನಡವಳಿಕೆಗಳನ್ನೂ ಸಮರ್ಥಿಸಿಗೊಂಬಲೆ ಎಡಿಯದ್ದರೂ, ಯಾವುದರ ತೆಕ್ಕೊಂಡರೂ ಎರಡೂ ನಮುನೆ ವಾದ ಮಾಡ್ಳಕ್ಕು. ಉದಾಹರಣೆಗೆ, ಕಸವು ಇಡುಕ್ಕುವ ಅಭ್ಯಾಸವ ನೋಡುವೊ.  ನಮ್ಮಲ್ಲಿ  ತ್ಯಾಜ್ಯ ವಸ್ತುಗಳ ವಿಲೆವಾರು ಮಾಡ್ಳೆ ಸರಿಯಾದ  ವ್ಯವಸ್ಥೆ ಇಲ್ಲದ್ದಿಪ್ಪದು ಸರಕಾರದ ಬೇಜವಾಬ್ದಾರಿ.  ಹಾಂಗೆ ಹೇಳಿ ಇಪ್ಪ ಕಸವಿಂಗೆ ಇನ್ನೂ ಹೆಚ್ಚು ಕಸವಿನ ಸೇರುಸುದಕ್ಕೆ ನಮ್ಮ ಜನರ ಹಾಂಕಾರವೇ ಕಾರಣ.  ಹೀಂಗಿಪ್ಪ ಎಷ್ಟೊಂದು ಕೆಟ್ಟ ಚಾಳಿಗೊ ನಮ್ಮವಕ್ಕೆ ಜೀವನಕ್ರಮವೇ  ಆಗಿ ಹೋಯಿದು ಹೇಳುದು ದೇಶದ ದುರಂತ.  ಹಿಂದಂದ ಬಂದು ಎಡೆಬಿಡದ್ದೆ  ಹಾರ್ನ್ ಹಾಕುವ ವಾಹನದ ಚಾಲಕರ ಆನು ಎಷ್ಟೋ ಸರ್ತಿ ಗುರಾಯಿಸಿ ನೋಡಿದ್ದದಿದ್ದು.  ಆದರೆ, ಅವಕ್ಕೆ ಎನ್ನ ವರ್ತನೆಯೇ ವಿಚಿತ್ರ ಕಂಡದರ ಸುಮಾರು ಸರ್ತಿ ನೋಡಿ ಅನುಭವಿಸಿದ ಮೇಲೆ ಈ ಪ್ರಾಣಿಗೊ ಜನ್ಮಲ್ಲಿ ಉದ್ಧಾರ ಅಪ್ಪಲಿಲ್ಲೆ ಹೇಳಿ ಈ ವಿಷಯಲ್ಲಿ ಈಗ ತಲೆಕೆಡಿಸಿಗೊಂಬದರ ಸಂಪೂರ್ಣ ಬಿಟ್ಟಿದೆ.  ಒಟ್ಟಾರೆ ಹೇಳ್ತರೆ, ಹೆಚ್ಚಿನವಕ್ಕೆ ಇದೊಂದು ಅನೈಚ್ಛಿಕ  ಕಾರ್ಯ ಹೇಳುದರ ತಿಳ್ಕೊಂಬಲಕ್ಕು.

ಹಾಂಗಾರೆ, ಹೀಂಗಿಪ್ಪ ವಿಷಯಂಗಳಲ್ಲಿ ಬದಲಾವಣೆ ಆಯೆಕ್ಕಾದರೆ, ಮಕ್ಕೊ ಆಗಿಪ್ಪಗಳೇ ತಿಳಿಶಿ ಹೇಳೆಕ್ಕಷ್ಟೆ.  ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಂದ ಇಂತಹ ವಿಷಯಂಗಳಲ್ಲಿ ಬದಲಾವಣೆ ಅವಶ್ಯ ಹೇಳಿ ಸರಕಾರದವಕ್ಕೂ ಕಾಣೆಕ್ಕು. ನಮ್ಮ ಶಾಲೆಗಳ ಪಾಠಪುಸ್ತಕಂಗಳಲ್ಲಿ  civics  ಹೇಳುವ ವಿಷಯಕ್ಕೆ ಅತ್ಯಂತ ಹೆಚ್ಚು ಪ್ರಾಶಸ್ತ್ಯ ಕೊಟ್ಟು  ಕಲಿಶಿದರೆ ಒಳ್ಳೆದು.  ಈ ಪಾಠ ಮಾಡ್ಳೆ  ಸಮರ್ಪಕ ಅಧ್ಯಾಪಕರನ್ನೂ ನೇಮಿಸುದು ಅಷ್ಟೇ ಅವಶ್ಯ (ಮೀಸಲಾತಿಯ ಗೌಜಿಲಿ ಮಾಷ್ಟ್ರ ಅಪ್ಪಲೆ  ಪದವಿ ಪರೀಕ್ಷೆಲಿ ಕನಿಷ್ಟ ಅಂಕ ತೆಕ್ಕೊಂಡು ತೇರ್ಗಡೆ ಆದರೂ ಸಾಕಕ್ಕು.  ಆದರೆ, ಕನಿಷ್ಟ ಪಕ್ಷ ದಿನಾಗಳೂ ಮೀವ ಅಭ್ಯಾಸ ಆದರೂ ಇಪ್ಪವರ ಆಯ್ಕೆ ಮಾಡಿದರೆ ನಮ್ಮ ಮುಂದಿನ ಪೀಳಿಗೆಗೆ ಒಳ್ಳೆ ಮಾರ್ಗದರ್ಶನ ಮಾಡಿದ ಹಾಂಗಕ್ಕು).  ಇದಕ್ಕೆ ಬೇಕಾಗಿ ಒಂದು ಪ್ರತ್ಯೇಕ ನಾಗರಿಕ ನಡವಳಿಕೆಗಳ ಉತ್ತೇಜನ ಮಂತ್ರಾಲಯವನ್ನೇ ಹೊಸತ್ತಾಗಿ  ಸುರು ಮಾಡಿರೆ ಇನ್ನೂ ಒಳ್ಳೆದೇ !  

- ಬಾಪಿ  / ೧೪.೦೮.೨೦೦೯

Thursday, August 13, 2009

ನಮ್ಮ ಸಮಸ್ಯೆಗೊ-೨

 (...ಮುಂದುವರುದ್ದು)..

ಕಾಶ್ಮೀರ :  ಈ ಸಮಸ್ಯೆಯುದೇ  ನವಗೆ ಬ್ರಿಟಿಷರು ಕೊಟ್ಟ ಬಳುವಳಿ.   ಸ್ವಾತಂತ್ರ್ಯದ ಆಮಿಷಲ್ಲಿ  ಭಾರತ-ಪಾಕಿಸ್ತಾನಂಗಳ ಸೃಷ್ಟಿ ಮಾಡಿ ಇಬ್ಬರ ಮಧ್ಯೆ ಒಂದು ಎಡೆಬಿಡಂಗಿ ಕಾಶ್ಮೀರವನ್ನೂ ಮಡುಗಿದವು.  ಈ ವಿಷಯಕ್ಕೆ ಬೇಕಾಗಿ ಈಗಾಗಲೇ ೨ ಸರ್ತಿ ಭಾರತಕ್ಕೂ ಪಾಕಿಸ್ತಾನಕ್ಕೂ ಯುದ್ಧವೂ ಆಯಿದು.  ಯುದ್ಧಂಗಳಲ್ಲಿ ಭಾರತಕ್ಕೆ ಜಯ ಸಿಕ್ಕಿದರೂ ಸಮಸ್ಯೆ ಮಾಂತ್ರ ಬಗೆಹರಿದ್ದಿಲ್ಲೆ.  ಬದಲಾಗಿ, ಇನ್ನೂ ಜಟಿಲ ಆವುತ್ತಾ ಇದ್ದು.   ಎರಡೂ ದೇಶಂಗಳಲ್ಲಿ ರಾಜಕೀಯ ಪ್ರಬುದ್ಧತೆ  ಇಲ್ಲದ್ದದೇ ಇದು ಇಷ್ಟು ಮುಂದುವರಿವಲೆ ಕಾರಣ.  ಎರಡು ಕಡೆಯವುದೇ ರಜ ಹೊಸ ದೃಷ್ಟಿಕೋಣಂದ ಯೋಚನೆ ಮಾಡಿರೆ,  "ನಿಂಗೊ ಇಬ್ರೂ  ಯಾವಾಗಳೂ ಕಚ್ಚಾಡಿಗೊಂಡು ಇರೆಕು, ಉದ್ಧಾರ ಆಪ್ಪಲಾಗ"  ಹೇಳುವ ಬ್ರಿಟಿಶರ ಕನಸಿನ ಭಗ್ನ ಮಾಡ್ಳೆ  ಕಷ್ಟ ಇಲ್ಲೆ. 

ಯಾರೋ ಸ್ವಾಭಿಮಾನ ಹೀನರು  ಕಾಶ್ಮೀರಕ್ಕೆ ಭಾರತದ ಸ್ವಿಝರ್ಲ್ಯಾಂಡ್ ಹೇಳುವ ಹೆಸರಿನ ಒಪ್ಪಿಗೊಂಡಿದವು.   ಉತ್ಕಟ ದೇಶಾಭಿಮಾನ ಇಪ್ಪ ನಮ್ಮ ಹಾಂಗಿಪ್ಪವು ಇದರ ಪ್ರತಿಭಟಿಸಿ,  ಸ್ವಿಝರ್ಲ್ಯಾಂಡಿಂಗೆ ಯುರೋಪಿನ ಕಾಶ್ಮೀರ ಹೇಳಿ ಹೆಸರು ಮಡಿಗಿ ಸೇಡು ತೀರಿಸಿಗೊಂಬಲಕ್ಕು.    ಮೇಲ್ನೋಟಕ್ಕೆ, ಇದು ನಾ ಮೇಲು ತಾ ಮೇಲು ಹೇಳುವ ಮಕ್ಕಳಾಟಿಕೆಯ ವಾದದ ಹಾಂಗೆ ಕಂಡರೂ ಇದಲ್ಲಿ ಒಂದು ಬಹು ಮುಖ್ಯವಾದ ತತ್ವ ಇದ್ದು.    ಸ್ವಿಝರ್ಲ್ಯಾಂಡಿನ ಹಾಂಗಿಪ್ಪ ಸಣ್ಣ ದೇಶದ ಪೂರ್ತಿ ಅರ್ಥವ್ಯವಸ್ಥೆಯೇ ಹೊರದೇಶದ ಪ್ರವಾಸಿಗಳ ಮೇಲೆ ಆಧರಿಸಿಪ್ಪದು.  ಹೇಳಿರೆ, ಕಾಶ್ಮೀರಕ್ಕುದೇ ಈ ದಿಕ್ಕಿಲ್ಲಿ ಬೆಳವಲೆ ಅಷ್ಟೇ ಅವಕಾಶ ಇದ್ದು ಹೇಳುವ ತಾತ್ಪರ್ಯ.   ಇದಕ್ಕಿಪ್ಪ ಸದ್ಯದ ಮೊದಲನೇ ತೊಡಕು ಹೇಳಿರೆ,  ಭಯೋತ್ಪಾದಕರ  ಉಪದ್ರ.

ಜಗತ್ತಿಲ್ಲಿ ಎಲ್ಲಿಯೇ ನೋಡಿದರೂ ಶಾಂತಿ, ನೆಮ್ಮದಿಯ ಲಗಾಡಿ ಕೊಡ್ಳೆ ನೋಡುವ ಜನಂಗಳ ಸಂಖ್ಯೆ ಯಾವಾಗಳೂ ಭಾರೀ ಸಣ್ಣ ಪ್ರಮಾಣದ್ದು.   ಸಣ್ಣ ಸಂಖ್ಯೆಲಿಪ್ಪ ಈ ಜನಂಗೊ  ಬೇರೆಯವರ ಕೊಂದೋ, ಹೆದರಿಸಿಯೋ ತಮ್ಮ ದಾರಿಯ ಸುಗಮ ಮಾಡಿಗೊಂಬದು. ಅಂಬಗ, ಬಹುಸಂಖ್ಯಾತ ಶಾಂತಿಪ್ರಿಯರ  ಇಚ್ಚಾಶಕ್ತಿಯ ಕ್ರೋಢೀಕರಿಸಿದರೆ, ಅವರಲ್ಲಿ ಆಶಾವಾದದ ಹುರುಪು ತುಂಬಿದರೆ, ಅಲ್ಪ ಸಂಖ್ಯೆಲಿಪ್ಪ ಶಾಂತಿಭಂಗ ಮಾಡುವವರ  ಬಗ್ಗು ಬಡಿವಲೆ ಕಷ್ಟ ಇಲ್ಲೆ.  ಇವರೊಟ್ಟಿಂಗೆ, ಸಮಾಜಲ್ಲಿ ಮಟ್ಟ ಹಾಕೆಕ್ಕಾದ ಇನ್ನೊಂದು ವರ್ಗವೂ  ಇದ್ದು -  ಅವು ಆರು  ಹೇಳಿರೆ, ಸ್ವತಃ  ಉಗ್ರವಾದದ ದಾರಿ ಹಿಡಿಯದ್ದರುದೇ  ಆ ಕೆಲಸ ಮಾಡುವವರ ಬಗ್ಗೆ ಅನುಕಂಪ ಇದ್ದುಗೊಂಡು ಅವರ ಸಾಂಕುವವು.  ಇತ್ತೀಚೆಗೆ ಉಪ್ಪಳಲ್ಲಿ ಹುಗ್ಗಿ ಕೂದುಗೊಂಡಿತ್ತ ಉಗ್ರವಾದಿಯ ಪೋಲೀಸಿನವು ಹಿಡಿದು ತಪ್ಪಗ, ಆ ಊರಿನ ಅದೇ ಕೋಮಿನ ಕೆಲವು ಜನ ಆದಷ್ಟು ಉಪದ್ರ ಕೊಟ್ಟು ಆ ವ್ಯಕ್ತಿ ತಪ್ಪಿಸಿಗೊಂಡು ಹೋಪಲೆ ಸಹಾಯ ಅಪ್ಪ ಹಾಂಗೆ ವಿಫಲ ಪ್ರಯತ್ನ ಮಾಡಿದ್ದದು ನವಗೆ ನೆಂಪಿಕ್ಕು.   ಇದುದೇ ಕೇವಲ ಸಣ್ಣ ವಿಷಯ ಅಲ್ಲ.   ಹಾಂಗಾಗಿ, ಇವರನ್ನೂ ಉಪೇಕ್ಷೆ  ಮಾಡ್ಳೆ ಸಾಧ್ಯ ಇಲ್ಲೆ      

ಕಾಶ್ಮೀರದ ಸಮಗ್ರ ಬೆಳವಣಿಗೆಯೇ ಅಲ್ಯಾಣ ಸಮಸ್ಯೆಗೆ ಪರಿಹಾರ ಹೇಳಿ ಎನಗೆ ಕಾಣ್ತು. ಸಮಾಜದ ಬೆಳವಣಿಗೆ ಆಗಿ, ಉದ್ಯೋಗಂಗೊ ಸೃಷ್ಟಿ ಆಗಿ ಅರ್ಥ ವ್ಯವಸ್ಥೆ ಸುಧಾರಣೆ ಆದರೆ,  ಭಯೋತ್ಪಾದಕರು ಮೂಲೆಗುಂಪಾವುತ್ತವು.  ಅಂಬಗ ಮುಖ್ಯವಾಹಿನಿಲಿಪ್ಪವು ಸಮಾಜಲ್ಲಿ ಶಾಂತಿ ಕದಡುವ, ತಮ್ಮ ಸುಭದ್ರ ಜೀವನಕ್ಕೆ ಕಲ್ಲು ಹಾಕುವ ಯಾವ  ಪ್ರಯತ್ನಕ್ಕೂ ಸೊಪ್ಪು ಹಾಕುತ್ತವಿಲ್ಲೆ.  ಅದೇ, ಸಮಾಜಲ್ಲಿ ಕಡುಬಡತನ ಇದ್ದು ಯಾವುದೇ ಸೌಲಭ್ಯ ಇಲ್ಲದ್ದ ಪರಿಸ್ಥಿತಿ ಇದ್ದರೆ, ಸರಕಾರದ ವಿರುದ್ಧ ಜನರಲ್ಲಿ ಇಪ್ಪ ಅಸಮಾಧಾನವ ದುರುಪಯೋಗ ಪಡಿಸಿಗೊಂಬಲೆ ಉಗ್ರವಾದಿಗೊಕ್ಕೆ ಸುಲಭ ಆವುತ್ತು ಹೇಳಿ ಎನ್ನ ಅಭಿಪ್ರಾಯ.

ಭಾರತ ದೇಶದ ಈ ವರ್ಷದ ರಕ್ಷಣಾ ಇಲಾಖೆಯ ಖರ್ಚಿಂಗೆ  ಅನುದಾನ ೧೪೦೦೦೦ ಕೋಟಿ ರುಪಾಯಿ ! ಪಾಕಿಸ್ತಾನಲ್ಲಿ ತಿಂಬಲೆ ಗೆತಿ ಇಲ್ಲದ್ರೂ, ಇದರ ಅರ್ಧದಷ್ಟದರೂ ರಕ್ಷಣಾ ಸಾಮಾಗ್ರಿಗಳ ಖರೀದಿಗೆ ಖರ್ಚು ಮಾಡುಗು.  ಹೇಳಿರೆ, ಎರಡೂ ದೇಶದವು ಸೇರಿ ಯಾವಾಗಳೋ ೫೦ ವರ್ಷಕ್ಕೊಂದರಿ ಮಾಡುವ ಸಾಧ್ಯತೆ ಇಪ್ಪ ಯುದ್ಧಕ್ಕಾಗಿ  ಸುಮಾರು ೨೦೦೦೦೦ ಕೋಟಿ ರುಪಾಯಿ  ನಿರಂತರ ಖರ್ಚು ಮಾಡ್ತಾ ಇದ್ದವು.   ಅಲ್ಲಿಗೆ, ಭಾರತ-ಪಾಕಿಸ್ತಾನ ಸೇರಿ  ಸುಮಾರು ೪೦ ಬಿಲಿಯ ಡಾಲರಿನಷ್ಟು ನಮ್ಮ ಅಮೂಲ್ಯ ಸಂಪತ್ತಿನ  ಪಾಶ್ಚಾತ್ಯರಿಂಗೆ ವರ್ಷಂಪ್ರತಿ ದಾನ ಮಾಡಿದ ಹಾಂಗಾತು.  ಭಾರತ-ಪಾಕಿಸ್ತಾನಂಗಳ  ವಿಭಜಿಸಿದ ಕುತಂತ್ರದ ಮೂಲ ಉದ್ದೇಶ ಇದೇ.  ಇದರ ಅರ್ಥ ಮಾಡಿಗೊಂಬಲೆ ಪ್ರಬುದ್ಧತೆ ಬೇಕು.  ಕೌರವ-ಪಾಂಡವರ ಹಾಂಗಿಪ್ಪ ಬದ್ಧ ವೈರಿಗಳೂ ಈ ವಿಷಯವ ಅರ್ಥ ಮಾಡಿಗೊಂಡಿತ್ತಿದ್ದವು ಹೇಳುದು ಗಮನಿಸೆಕ್ಕಾದ ಸಂಗತಿ. ನಮ್ಮ ನಮ್ಮೊಳವೇ ಆದರೆ, ಎಂಗೊ ೧೦೦ ಜನ, ನಿಂಗೊ ೫  ಜನ.  ಆದರೆ ಹೆರಾಣವು ಬಂದರೆ, ನಾವು ೧೦೫ ಜನ ಹೇಳುವ ಸಾಂಘಿಕ ಸ್ಪೂರ್ತಿ ಅವರತ್ರೆ ಇತ್ತದು ಪುರಾಣದ ಕಥೆಲಿ ಓದಿದ ನೆಂಪು.

ಭಾರತದ ಆರ್ಥಿಕ ಪ್ರಗತಿಯ ನೋಡಿ  ಪಾಕಿಸ್ತಾನದವಕ್ಕೆ ಅಸೂಯೆ ಆವುತ್ತಾ ಇಕ್ಕು.  ಅಲ್ಲಿ  ಮುಖ್ಯ ವಾಹಿನಿಲಿಪ್ಪವಕ್ಕೆ ತಮ್ಮ ಗಡಿಂದ ಇತ್ಲಾಗಿ  ಇಪ್ಪ ಸಂಬಂಧಿಕರ ಕಾಂಬಲೆ ಅತಿಯಾದ ಕಾತರತೆ ಇಕ್ಕು. ನೆರೆಕರೆಯ ಸಂಬಂಧ ಒಳ್ಳೆದಿರೆಕು ಹೇಳುವ ತೀವ್ರ ಆಶೆ ಇಕ್ಕು.   ಸಂಬಂಧ ಸುಧಾರಿಸಿದರೆ ತಮ್ಮ ಉದ್ದೇಶ ಹಾಳಪ್ಪ ಕಾರಣ, ಭಾರತ-ಪಾಕಿಸ್ತಾನಂಗೊ ಹೇಂಗಾರು ಯುದ್ಧದ ಹಾದಿ ಹಿಡಿವ ಹಾಂಗೆ ಮಾಡಿ, ಯುದ್ಧಾನಂತರದ ಕುರುಕ್ಷೇತ್ರಲ್ಲಿ ತಮ್ಮ ಕಾರುಬಾರು ಮಾಡುವ ಉಗ್ರಗಾಮಿ ಗುಂಪುಗಳ ಯೋಜನೆ ಸಫಲ ಆಗದ್ದ ಹಾಂಗೆ ನೋಡಿಗೊಳೆಕ್ಕಾದ್ದು ಅತಿ ಮುಖ್ಯ.  ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ದೃಷ್ಟಿಕೋಣಂಗಳಲ್ಲಿ ಅಷ್ಟು ವ್ಯತ್ಯಾಸದ ಧೋರಣೆ ಮಡಿಕ್ಕೊಂಡಿತ್ತ ಪಶ್ಚಿಮ-ಪೂರ್ವ ಜರ್ಮನಿಗೊ ಒಂದಪ್ಪಲೆ ಎಡಿಗಾದರೆ, ಭಾರತ-ಪಾಕಿಸ್ತಾನ ಒಂದಪ್ಪಲೆ ಏಕೆ ಸಾಧ್ಯ ಇಲ್ಲೆ ?  ಹೀಂಗಾದರೆ, ನಮ್ಮ ಮಧ್ಯೆ  ಮೂಗು ತೂರಿಸಿ ಬೇಳೆ ಬೇಯಿಸಿಗೊಂಬ ಚೀನಾದ  ಸೀಂತ್ರಿ ಬುದ್ಧಿಗುದೇ ಕಡಿವಾಣ ಹಾಕ್ಲೆಡಿಗು. ಏನಿದ್ದರೂ ನಮ್ಮದು ರಕ್ತ ಸಂಬಂಧ, ಚೀನಾ ಮತ್ತು ಪಾಶ್ಚಾತ್ಯರು ನವಗೆ ಪರಕೀಯರು ಹೇಳುವ ಸತ್ಯವ ಎರಡೂ ದೇಶದ ಜನರಿಂಗೆ ಅರ್ಥ ಮಾಡಿಸುವ ರಾಜಕೀಯ ಮುತ್ಸದ್ದಿತನ ಬೇಕಪ್ಪದು.  ಭಾರತ-ಪಾಕಿಸ್ತಾನ ವಿಲೀನ ಆಗಿ, ಇಂದಿಸ್ತಾನದ ಉದಯ ಆದರೆ, ನಾವು ಜಗತ್ತಿನ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಿ ಮುಂದೆ ಬಪ್ಪಲೆ ಹೆಚ್ಚು ಸಮಯ ಬೇಡ.

(ಇನ್ನೂ ಇದ್ದು...)

- ಬಾಪಿ / ೧೩.೦೮.೨೦೦೯

Sunday, August 9, 2009

ನಮ್ಮ ಸಮಸ್ಯೆಗೊ-೧

ಭಾರತೀಯರಾದ ನಾವು ಗತವೈಭವದ ಗುಂಗಿಲ್ಲಿ ಎಷ್ಟೋ ಕಾಲ ಜೀವನ ಮಾಡಿ ಆತು.  ಈಗ ನಮ್ಮ ನೈಜ ಪರಿಸ್ಥಿತಿಯ ನಾವೇ ಅವಲೋಕನ ಮಾಡಿಗೊಂಡು ಭವಿಷ್ಯದತ್ತ ಹೆಜ್ಜೆ ಹಾಕೆಕ್ಕಾದ ಕಾಲ ಬೈಂದು.  ಇಲ್ಲದ್ರೆ,  ತೀವ್ರಗತಿಲಿ ಬದಲಾವುತ್ತಾ ಇಪ್ಪ ಕಲಿಯುಗದ ಈ ಕಾಲಲ್ಲಿ ನಾವು ಭಾರೀ ಹಿಂದೆ ಉಳಿದು ಹೋಕು. 

ನಮ್ಮ ಸಮಸ್ಯೆಗಳ ಬಗ್ಗೆ ನವಗೆ ಎಷ್ಟು ಅವಜ್ಞೆ ಇದ್ದು ಹೇಳುದಕ್ಕೆ  ಒಂದು ಸಣ್ಣ ತುಲನೆ ಮಾಡಿ ನೋಡುವೊ.   ತಮ್ಮ ಅಂತರರಾಷ್ಟ್ರೀಯ ವ್ಯವಹಾರಂಗೊಕ್ಕೆ ಇಂಗ್ಲಿಷ್ ಭಾಷೆಯ ಜ್ಞಾನ ಇಲ್ಲದ್ದಿಪ್ಪದು ಒಂದು ದೊಡ್ಡ ತೊಡಕು ಹೇಳಿ ಮನಗಂಡ ಚೀನಾ ಸರಕಾರ ಈಗ ಮಕ್ಕೊಗೆಲ್ಲಾ ಈ ಹೊಸ ಭಾಷೆಯ ಕಲಿಶುಲೆ ವ್ಯವಸ್ಥೆ ಮಾಡಿದ್ದಾಡ.  ಇನ್ನು ೧೦ ವರ್ಷಲ್ಲಿ ಅಲ್ಲಿ ಈ ಸಮಸ್ಯೆ ಇರ್ತಿಲ್ಲೆ.  ನಮ್ಮಲ್ಲಿ ಎಲ್ಲೋರಿಂಗೂ ಗೊಂತಿಪ್ಪ, ಎಲ್ಲೋರೂ ಒಪ್ಪಿಗೊಂಬ ಹೀಂಗಿಪ್ಪ ಸುಮಾರು ಸಮಸ್ಯೆಗೊ ಇದ್ದು.  ವ್ಯತ್ಯಾಸ ಎಂತ ಹೇಳಿರೆ, ನಮ್ಮ ಸರಕಾರ  ಸಮಸ್ಯೆಗಳ ಪರಿಹಾರಕ್ಕೆ ಎಂತ ಕ್ರಮವನ್ನೂ ತೆಕ್ಕೊಳ್ತಿಲ್ಲೆ.  ೫೦ ವರ್ಷ ಮೊದಲು ಎಂತಲ್ಲ ಸಮಸ್ಯೆಗೊ ಇತ್ತೋ, ಇಂದಿಂಗೂ ಅದೇ ಸಮಸ್ಯೆಗಳ ಸಹಿಸಿಗೊಂಡು ನಾವು  ಜೀವನ ಮಾಡ್ತಾ ಇದ್ದು.  ಇಲ್ಲಿ  ಎನಗೆ ಕಂಡ ನಮ್ಮ ದೇಶದ ಕೆಲವು ಸಮಸ್ಯೆಗಳ ಪಟ್ಟಿ ಮಾಡ್ತೆ.

ಹೆಚ್ಚಿನ ಸಮಸ್ಯೆಗಳ ಬೇರು ಬ್ರಿಟಿಷರ ಕಾಲದ್ದಾದ ಕಾರಣ ಅವರ ಗುಣಗಾನ ಮಾಡದ್ದೆ ಸುರು ಮಾಡ್ಳೆ ಎಡಿಯ.  ನಮ್ಮ ದೇಶವ ಆಳಿದ ಅಷ್ಟೂ ಪರಕೀಯರ ಪೈಕಿ ನಮ್ಮ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದವು ಹೇಳಿರೆ ಬ್ರಿಟಿಷರು.  ಭಾರತವ ಆಳಿದ ಹೆಚ್ಚಿನ ಬ್ಯಾರಿ ರಾಜಂಗಳ ಪ್ರಭಾವ ತಾತ್ಕಾಲಿಕವಾದರೆ, ಬ್ರಿಟಿಷರ ಪ್ರಭಾವ ದೂರಗಾಮಿಯಾದ್ದು.  ಇದಕ್ಕೆ ಅವರ ಸೀಂತ್ರಿ ಬುದ್ಧಿಯ ಕುತಂತ್ರಂಗಳೂ ಕಾರಣ.  ಬ್ರಿಟಿಷ್ ಶಾಸನದ ಕರಾಳ ಛಾಯೆ ನಮ್ಮ ಮೇಲೆ ಇನ್ನೂ ಇಪ್ಪದರ ಮೂಲಲ್ಲಿ ಅವು ನಮ್ಮ ದೇಶೀ ಶಿಕ್ಷಣ ಪದ್ಧತಿಯ ನಾಶ ಮಾಡಿ ಕೋನ್ವೆಂಟ್  ಪದ್ಧತಿಯ ಜ್ಯಾರಿ ಮಾಡಿದ್ದು,  ಸ್ವಾತಂತ್ರ್ಯದ ಆಮಿಶಲ್ಲಿ   ಭಾರತ-ಪಾಕಿಸ್ತಾನದ ವಿಭಜನೆ ಮಾಡಿದ್ದೇ ಮೊದಲಾದ ಕಾರಣಂಗಳ ಹುಡುಕ್ಕುಲಕ್ಕು. 

ಬಾಬೂಗಿರಿ : ನಮ್ಮ ಸರಕಾರದ ಯಂತ್ರ  ಆಢಳಿತಶಾಹಿ ವ್ಯವಸ್ಥೆಲಿ ನಡವದು ಹೇಳುದು ಗೊಂತಿಪ್ಪ ವಿಷಯ.  ಒಂದು ಪ್ರಸಿದ್ಧ ಜೋಕು ಹೇಳಿರೆ, ಬ್ರಿಟಿಷರು ನವಗೆ ಬಾಬೂಗಿರಿ (bureaucracy)ಯ  ಬಳುವಳಿ ಕೊಟ್ಟವು. ಅವರ ಈ ಕುಶಾಲಿನ ನಾವು ಭಾರೀ ಗಂಭೀರವಾಗಿ ಪರಿಗಣಿಸಿತ್ತು ಹೇಳುದು.   ಅವರ ಕಾಲಕ್ಕೆ, ಅವರ ಅನುಕೂಲಕ್ಕೆ ತಕ್ಕ ಹಾಂಗೆ ಮಾಡಿ ಮಡುಗಿದ ವ್ಯವಸ್ಥೆಗಳ ನಾವು ಇಂದಿಂಗೂ ಚಾಚೂ ತಪ್ಪದ್ದೆ ಪಾಲಿಸುತ್ತಾ ಇಪ್ಪದು ನಮ್ಮ ಬೋದಾಳತನದ ಪರಮಾವಧಿ.  ನಾವು ಇಷ್ಟರವರೆಗೆ ಆ ವ್ಯವಸ್ಥೆಗಳ ಸಾಧಕ -ಬಾಧಕಂಗಳ ವಿಮರ್ಶೆ ಮಾಡುದಾಗಲೀ,   ಇದರಲ್ಲಿ ಯಾವುದೇ ವ್ಯತ್ಯಾಸ, ಸುಧಾರಣೆ  ಮಾಡುವ ಗೋಜಿಂಗಾಗಲೀ ಹೋಯಿದಿಲ್ಲೆ.  ಉದಾಹರಣೆಗೆ, ನಮ್ಮ ಪೋಲೀಸರು.  ಬ್ರಿಟಿಷರ ಕಾಲಕ್ಕೆ ಅವು ಹೇಳಿದ ಹಾಂಗೆ ಕೇಳಿಗೊಂಡು, ಅವಕ್ಕೆ ನಮ್ಮ ಸಮಾಜದ ಗುಪ್ತ ಮಾಹಿತಿ ಕೊಟ್ಟುಗೊಂಡು ಇಪ್ಪ ಪೋಲೀಸರು ಬೇಕಾಗಿತ್ತು.  ಈ  ವ್ಯವಸ್ಥೆ ಇಂದಿಂಗೂ ನಡಕ್ಕೊಂಡು ಬತ್ತಾ ಇದ್ದು.  ಹಾಂಗಾಗಿಯೇ ಒಂದು ಹೊಸ ಸರಕಾರ ಬಂದಪ್ಪಗ ಹಿಂದಾಣ ಸರಕಾರದವರ ಮೇಲೆ ಕೇಸು ಹಾಕುದು, ತಮ್ಮ ಮೇಲಿಪ್ಪ ಕೇಸುಗಳ ವಜಾ ಮಾಡಿಸಿಗೊಂಬದು ಇತ್ಯಾದಿ ಪ್ರಕರಣಂಗೊ ಅವ್ಯಾಹತವಾಗಿ ನಡವದು.  ವಿಪರ್ಯಾಸ ಹೇಳಿರೆ, ಬ್ರಿಟನ್ ಲ್ಲಿಯೇ  ಇಂತಹ ವ್ಯವಸ್ಥೆ ಮೊದಲೂ ಇತ್ತಿಲ್ಲೆ, ಈಗಳೂ ಇಲ್ಲೆ ! ಅಲ್ಯಾಣ ಪೋಲೀಸು ವಿಭಾಗಕ್ಕೆ ಪೂರ್ತಿ ಸ್ವಾಯತ್ತತೆ ಇದ್ದು.  ನಮ್ಮ ರಾಜಕಾರಣಿಗೊಕ್ಕೆ ಈಗಾಣ ವ್ಯವಸ್ಥೆಯೇ ಅನುಕೂಲ ಆದ್ದರಿಂದ ಇದನ್ನೇ ಮುಂದುವರಿಸಿಗೊಂಡು ಹೋವುತ್ತಾ ಇದ್ದವು.  ಇನ್ನು, ನಮ್ಮ ಆಢಳಿತ ಯಂತ್ರದ ಬಗ್ಗೆ  ಹೇಳಿಗೊಂಬಲೇ ನಾಚಿಗೆ ಆವುತ್ತು.   ಬ್ರಿಟಿಷರ ಕಾಲಲ್ಲಿ, ಯಾವುದೇ ಕೆಲಸಕ್ಕಾದರೂ ಸರಿಯಾದ ಯೋಜನೆ ಮತ್ತೆ ಅದರ ಜ್ಯಾರಿ ಮಾಡುವ ಅಧಿಕಾರಿಗೊಕ್ಕೆ ಅಗತ್ಯವಾದ ಅರ್ಹತೆ, ನಿಯತ್ತು, ಕ್ಷಮತೆ ಎಲ್ಲಾ ಇತ್ತು.  ಈಗ ಯೋಜನೆಯೂ ಇಲ್ಲೆ, ಯೋಗ್ಯತೆ ಮತ್ತು ಕ್ಷಮತೆ ಹೇಂಗೂ ಇಲ್ಲೆ.  ನಿಯತ್ತು ಮಾಂತ್ರ ಇದ್ದು - ಲಂಚ ಕೊಡುವವರ ಅಥವಾ ರಾಜಕಾರಣಿಗಳ ಪಾದಕ್ಕೆ ! 

ಕಾನೂನು ವ್ಯವಸ್ಥೆ :  ಓಬೀರಾಯನ ಕಾಲದ ನಮ್ಮ ಕಾನೂನುಗೊ ಎಷ್ಟು ಅಸಂಗತ ಹೇಳಿ ಗ್ರೇಶಿರೆ ಬೇಜಾರ ಆವುತ್ತು.   ಬ್ರಿಟಿಷರು ಬರದ ಅಷ್ಟೂ ಕಾನೂನಿನ ಗ್ರಂಥಂಗಳ ತಿದ್ದುಪಡಿ ಮಾಡ್ಳೆ ಅಥವಾ ಬದಲಾವಣೆ ಮಾಡ್ಳೆ ನಮ್ಮ ಕಾನೂನು ಪಂಡಿತರಿಂಗೆ ಪುರುಸೊತ್ತೇ ಆಯಿದಿಲ್ಲೆ.   ಕೆಲವು ಗ್ರಂಥಂಗಳ ಎಲ್ಲೋರೂ ಪೂರ್ತಿ ಓದಿದ್ದವೋ ಇಲ್ಯಾ ಹೇಳುದೇ ಸಂಶಯ ! ಎಷ್ಟೋ ವರ್ಷಂದ ಕಾನೂನುಗಳ ಸುಧಾರಣೆ ಬಗ್ಗೆ ಚರ್ಚೆ ಆವುತ್ತಾ ಇದ್ದೇ ಹೊರತು ಇನ್ನುದೇ ಎಂತದೂ ಕೆಲಸ ಸುರು ಆಯಿದಿಲ್ಲೆ ! ಸಮಾನ ನಾಗರಿಕ ಕಾಯಿದೆ ಹಾಂಗಿಪ್ಪ ಮೂಲಭೂತವಾಗಿ ಅಗತ್ಯ ಇಪ್ಪ ವಿಷಯಂಗಳಲ್ಲಿ ಬದಲಾವಣೆ ಅಪ್ಪ ವಿಷಯ ಸದ್ಯಕ್ಕೆ ಹೇಂಗೂ   ಬಿಡುವೊ.  ಇದು ನಮ್ಮ ಜೀವನ ಕಾಲಲ್ಲಿ ಅಪ್ಪಲಿಲ್ಲೆ.  ಮುಂದೆ ಯಾವಗಾದರೂ ಆದರೂ, ಭಾರತದ ಹಿಂದೂಗೊ ಎಲ್ಲಾ  ಮುಸ್ಲಿಮರ ಶರಿಯತ್  ಕಾನೂನಿನ   ಪಾಲಿಸೆಕ್ಕು ಹೇಳುವ  ಕಾನೂನು ಬಂದರೂ ಬಕ್ಕು. ಅಲ್ಲಿಗೆ ಸಮಾನತೆ ತಂದ ಹಾಂಗೆ ಆತನ್ನೆ ? 

(ಇನ್ನೂ ಇದ್ದು...)

- ಬಾಪಿ / ೦೯.೦೮.೨೦೦೯

Monday, August 3, 2009

ಧನಾತ್ಮಕ ಚಿಂತನೆ

ಮನಸ್ಸಿನ ಯಾವಾಗಲೂ ಧನಾತ್ಮಕವಾಗಿ ಯೋಚಿಸುವ ಹಾಂಗೆ ಅಭ್ಯಾಸ ಮಾಡಿಗೊಂಡಿದ್ದರೆ, ಚಿಂತೆ ಕಮ್ಮಿ ಆಗಿ, ಆರೋಗ್ಯ ವೃದ್ಧಿ ಆಗಿ, ಆಯುಷ್ಯ ಹೆಚ್ಚಾವುತ್ತು ಹೇಳಿ ಆಯುರ್ವೇದ ಹೇಳ್ತು.  ಭಾರತೀಯರಿಂಗೆ ಸಾವಿರಾರು ವರ್ಷ ಮೊದಲೇ ಗೊಂತಿತ್ತ  ಈ ವಿಷಯವ ಡೇಲ್ ಕಾರ್ನೆಗೀ ಹಾಂಗಿಪ್ಪವು  ತಮ್ಮ ಜೀವನಪೂರ್ತಿ ಬೋಧಿಸಿ ಮಿಲಿಯಗಟ್ಟಲೆ ಡಾಲರು ಸಂಪಾದಿಸಿದವು.   ಭಾರತ ದೇಶಲ್ಲಿ ಇಂದು ಧನಾತ್ಮಕ ಚಿಂತನೆ ಮತ್ತು  ಆಶಾವಾದ ಇಲ್ಲದ್ರೆ, ಯಾರೂ ಬದುಕ್ಕಿ ಒಳಿವಲೆ ಸಾಧ್ಯವೇ ಇತ್ತಿಲ್ಲೆ.  ಇದು ನಮ್ಮ ನೈಸರ್ಗಿಕ ಸಂಪತ್ತು ಹೇಳಿಯೂ ಹೇಳ್ಳಕ್ಕು ! ಬಡತನ, ನಿರುದ್ಯೋಗ, ಅನಕ್ಷರತೆ, ಹಸಿವು, ಬೆಶಿಲಿನ ತಾಪ, ವಿದ್ಯುತ್  ಕ್ಷಾಮ, ಒಂದೋ ನೆರೆ ಅಥವಾ ಬರಗಾಲ, ಭೂಕಂಪ, ಕೊಳೆರೋಗ, ಹೊಂಡ ಬಿದ್ದ ಮಾರ್ಗಂಗೊ, ಸಂಕ ಇಲ್ಲದ್ದ ತೋಡುಗೊ, ನುಸಿಯ ಉಪದ್ರ  ಇತ್ಯಾದಿಯಾಗಿ  ನಾಗರಿಕ ಸಮಾಜಲ್ಲಿ ಮನುಷ್ಯರಾಗಿ ಬದುಕ್ಕುಲೆ ಭರವಸೆ ಮೂಡಿಸುವ  ಒಂದೇ ಒಂದು ಒಳ್ಳೆಯ ಅಂಶ ಇಲ್ಲಿ ಇಲ್ಲದ್ರೂ ಪ್ರತಿವರ್ಷ ಜನಸಂಖ್ಯೆ ಹೆಚ್ಚಾಯ್ಕೊಂಡೇ  ಹೋದ್ದಲ್ಲದ್ದೆ ಕಮ್ಮಿ ಆಯಿದಿಲ್ಲೆ ! ವೈರಾಗ್ಯದ ಸೋಂಕೇ  ತಟ್ಟದ್ದ, ಅತಿಯಾದ ಜೀವನೋತ್ಸಾಹ ಇಲ್ಲದ್ರೆ ಇದು ಹೇಂಗೆ ಸಾಧ್ಯ ? ಬುದ್ಧಿವಂತಿಕೆಯ ಒಟ್ಟಿಂಗೇ,  ಕಷ್ಟವ ಎದುರಿಸುವ ಧೈರ್ಯ, ಮುಂದಿನ ತಲೆಮಾರಿಂಗಾಗಿ ತಮ್ಮ ಸ್ವಂತ ಜೀವಿತ ಸಮಯಲ್ಲಿ ಮಾಡುವ ತ್ಯಾಗ, ಇಪ್ಪದರಲ್ಲೇ ರಜ ಆದರೂ ಉಳಿತಾಯ ಮಾಡುವ ದೂರದೃಷ್ಟಿ, ತಮ್ಮ ಹೊಟ್ಟೆ ಖಾಲಿ ಇದ್ದರೂ ಮನೆಗೆ ಬಂದ ನೆಂಟರ ಸತ್ಕರಿಸುವ ಉದಾರಗುಣ,  ಕುಟುಂಬದ ಮೇಲಾಣ ಬದ್ಧತೆ, ದೈವಭಕ್ತಿ - ಹೀಂಗಿಪ್ಪ ಹಲವಾರು ಸದ್ಗುಣಂಗಳಿಂದಾಗಿ  ನಮ್ಮ ದೇಶದವಕ್ಕೆ ಸ್ವಾಭಾವಿಕವಾಗಿ ಕಷ್ಟಂಗಳ ಎದುರಿಸಿ, ಗೆಲ್ಲುವ ಶಕ್ತಿ ಹೆಚ್ಚು ಇದ್ದು.  ಹಾಂಗಾಗಿಯೇ ನಮ್ಮವಕ್ಕೆ ಬೇರೆ ಯಾವ ದೇಶಕ್ಕೆ  ಹೋದರೂ ಬೇರೆಯವರಿಂದ ಸುಲಭಲ್ಲಿ ಉದ್ಧಾರ ಅಪ್ಪಲೆ ಎಡಿವದು.  ಎರಡನೇ ಕ್ಲಾಸಿನವಂಗೆ ಒಂದನೇ ಕ್ಲಾಸಿನ ಪರೀಕ್ಷೆ  ಬರವಲೆ ಸುಲಭ ಆವುತ್ತಿಲ್ಯಾ, ಹಾಂಗೇ !  ನಮ್ಮ ದೇಶಲ್ಲಿ ಆರಾದರೂ ರೈತಂಗೊ  ಆತ್ಮಹತ್ಯೆ ಮಾಡಿಗೊಂಡರೆ, ಅದು ಸಾಲ ಮಾಡಿ ತೀರುಸಲೆಡಿಯದ್ದ  ಪಾಪಪ್ರಜ್ಞೆಂದಲೇ ಹೊರತು, ಕಷ್ಟ ಸಹಿಸುಲೆ ಎಡಿಯದ್ದೆ ಅಲ್ಲ.   ಎಷ್ಟೋ ಜನ ಬಹುರಾಷ್ಟ್ರೀಯ ಕಂಪೆನಿಗಳ ವಿದೇಶೀ ಪ್ರಬಂಧಕರು ತಮ್ಮ ತಾಳ್ಮೆಯ ಇನ್ನೂ ಜಾಸ್ತಿ ಮಾಡಿಗೊಂಬಲೆ ಭಾರತಕ್ಕೆ ತಾತ್ಕಾಲಿಕ ವರ್ಗಾವಣೆ ಕೇಳ್ತವಡ ! ಇಲ್ಲಿಯ ವಿಪರೀತ  ಹವೆ, ವಾಹನ ದಟ್ಟಣೆ, ದೂರವಾಣಿ ಸಮಸ್ಯೆ, ಕಾರ್ಮಿಕರ ಹರತಾಳ ಇತ್ಯಾದಿಗಳ ನಡುವೆಯೂ ಉತ್ಪಾದನೆ ಮಾಡಿ, ಕಂಪೆನಿಗೆ  ಲಾಭ ಗಳಿಸುವ ಕೆಲಸ ಹೇಳಿರೆ ದೊಡ್ಡ ಪಂಥಾಹ್ವಾನವೇ ಸರಿ.        

ಗುಡ್ಡೆಯ ಮೇಲಿಪ್ಪ ಒಂದು ಕಾಟು ಮಾವಿನ ಮರ  ಯಾವುದೇ ಗೊಬ್ಬರ, ನೀರು ಇತ್ಯಾದಿಗಳ ಪೋಷಣೆ ಇಲ್ಲದ್ದೆ, ಎಲ್ಲಾ ಪ್ರಕೃತಿ ವಿಕೋಪಂಗಳನ್ನೂ ಸಹಿಸಿಗೊಂಡು ರುಚಿಯಾದ ಫಲ ಕೊಡುವ  ತ್ಯಾಗ ಜೀವನಲ್ಲಿಯೇ ಧನ್ಯತೆ ಕಾಣ್ತು.    ಅದೇ ಯಾವುದಾದರೂ ಹಣ್ಣಿನ ಕೃಷಿ ಮಾಡುವವನ ತೋಟಲ್ಲಿಪ್ಪ ಮಾವಿನ ಮರಕ್ಕೆ ಬೇಕಾದ ಹಾಂಗೆ ನೀರಿನ ವ್ಯವಸ್ಥೆ, ರಸಗೊಬ್ಬರ, ಕೀಟನಾಶಕದ ಸಿಂಚನ ಇತ್ಯಾದಿಗಳ  ಸರ್ವ ಸೌಕರ್ಯವೂ ಸಿಕ್ಕುತ್ತು.   ನಮ್ಮ ದೇಶದವಕ್ಕೂ ಮುಂದುವರಿದ ದೇಶದವಕ್ಕೂ ಇಪ್ಪ ವ್ಯತ್ಯಾಸ ಇಷ್ಟೇ.  ನಮ್ಮ ಇಪ್ಪ ಶಕ್ತಿ ಎಲ್ಲಾ -  ಕಾಟು ಮಾವಿನ ಮರದ ಹಾಂಗೆ - ಉಸುಲು ಹಿಡುಕ್ಕೊಂಡು ಬದುಕ್ಕಿ ಉಳಿಯುವ ಸಂಘರ್ಷಲ್ಲಿಯೇ ವ್ಯಯ ಆವುತ್ತು.  ಬೇರೆ ದೇಶದವರ ಶಕ್ತಿ ಅಪವ್ಯಯ ಆಗದ್ದೆ, ಸರಿಯಾದ ಉದ್ದೇಶಕ್ಕೆ ಬಳಕೆ ಆವುತ್ತು.  ಹಾಂಗಾಗಿ, ಅವರಲ್ಲಿ ಉತ್ಪಾದನಾ ಕ್ಷಮತೆ ಹೆಚ್ಚು.   ಆದರೆ, ಸಣ್ಣ ಕಷ್ಟ ಬಂದರೂ ಅವು (ಕಶಿ ಮಾವಿನ ಮರಂಗಳ ಹಾಂಗೆ) ಜರ್ಜರಿಸಿ ಕಂಗಾಲಾಗಿ ಹೋಪ ಸಾಧ್ಯತೆ ಹೆಚ್ಚು.

ಬೇರೆಯವು ನಮ್ಮ ಟೀಕೆ ಮಾಡಿರೆ ನವಗೆ ಕೋಪ ಬಪ್ಪದು ಸಹಜ.  ಹಾಂಗಾರೆ, ನಮ್ಮ ನಾವೇ ವಿಮರ್ಶೆ ಮಾಡಿಗೊಂಬ ಕ್ರಮವ ಬೆಳೆಶಿಗೊಂಬದು ಸೂಕ್ತ.   ಬುದ್ಧಿಶಕ್ತಿಲಿ ಭಾರತೀಯರು ಯಾರಿಂಗೂ ಕಮ್ಮಿ ಇಲ್ಲದ್ದ ಕಾರಣ, ನಮ್ಮ ದೌರ್ಬಲ್ಯಂಗಳ ಗುರುತಿಸಿ, ಸರಿಪಡಿಸಿಗೊಂಡು  ಮುಂದುವರಿಯುವ ಪ್ರಯತ್ನ ತ್ವರಿತವಾಗಿ ಆಯೆಕ್ಕಾಯಿದು.  ಇಲ್ಲದ್ರೆ,  ಕಾಟು ಮಾವಿನ ಮರದ ಹಾಂಗೆ  ಸಾಧಾರಣ  ಬೆಳವಣಿಗೆ ಮಾಂತ್ರ ಸಾಧ್ಯ ಇದ್ದಷ್ಟೆ.   ನಮ್ಮ  ಪ್ರತಿಭೆಗೆ ಅನುಗುಣವಾದ ಪ್ರಗತಿ  ಆಯೆಕ್ಕಾದರೆ, ನಮ್ಮ ಒಟ್ಟಾರೆ ಧೋರಣೆಲಿ ಬದಲಾವಣೆಯ ಅಗತ್ಯ ಇದ್ದು.  ದೇಶದ ಎಲ್ಲಾ ಪ್ರಜೆಗಳ ಪ್ರಶ್ನಾತೀತವಾದ ರಾಷ್ಟ್ರೀಯ ಬದ್ಧತೆ, ದೇಶಾಭಿಮಾನ ಇಲ್ಲದ್ದೆ ಯಾವ ದೇಶವೂ ಉದ್ಧಾರ ಆದ ಉದಾಹರಣೆ ಇಲ್ಲೆ.  ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ರಾಜಕೀಯ ನಾಯಕತ್ವದ ಗುಣಮಟ್ಟ ಗಣನೀಯವಾಗಿ ಸುಧಾರಣೆ ಆಯೆಕ್ಕು.   ಈ ಸರ್ತಿಯ ಸಂಸತ್ತಿನ  ಚುನಾವಣೆಲಿ ಅತಿ ಹೆಚ್ಚು ಯುವ ಸಂಸದರು ಆಯ್ಕೆ ಆಗಿ ಬೈಂದವು  ಹೇಳುವ ಶುಭ ಶುದ್ದಿಯ ಈ ಮೊದಲೇ ಒಂದರಿ ಬರದ ನೆಂಪು. ಸದ್ಯಕ್ಕೆ, ಇದುವೇ ನಮ್ಮ ದೇಶದ ಮಟ್ಟಿಂಗೆ ದೊಡ್ಡ ಧನಾತ್ಮಕ ಸಂಗತಿ.   

- ಬಾಪಿ /  ೦೩.೦೮.೨೦೦೯

ಪ್ರವಾಸ ಕಥನ


ಈ ಸರ್ತಿ, ಎನ್ನ ಇತ್ತೀಚಿನ ಅಮೇರಿಕಾ ಪ್ರವಾಸದ ಕೆಲವು ಅನುಭವಂಗಳ ಹಂಚಿಗೊಂಬ ಪ್ರಯತ್ನ ಮಾಡ್ತೆ.

ಆನು ಹೋದ ರೋಚೆಸ್ಟರ್ ಹೇಳುವ ಪೇಟೆ ನ್ಯೂಯಾರ್ಕ್ ರಾಜ್ಯಲ್ಲಿಪ್ಪದು. ಎಮಿರೇಟ್ಸ್  ವಿಮಾನಸಂಸ್ಥೆಯವರ ಬೆಂಗ್ಳೂರಿಂದ ದುಬೈ ಮೂಲಕ ನ್ಯೂಯಾರ್ಕಿಂಗೆ ಹೋಪ ಮಾರ್ಗ ಸೌಕರ್ಯ ಹೇಳಿ ಕಂಡ ಕಾರಣ ಅದನ್ನೇ ಆಯ್ಕೆ ಮಾಡಿದೆ. ನಮ್ಮ ಭಾರತದ ಹವಾಮಾನಕ್ಕೆ ಒಗ್ಗಿ ಹೋಗಿಪ್ಪ ಎನ್ನ ಹಾಂಗಿಪ್ಪವರ ದೃಷ್ಟಿಂದ, ಅಲ್ಲಿಗೆ ಹೋಪಲೆ ಜೂನ್ ತಿಂಗಳು ಅತ್ಯಂತ ಅನುಕೂಲದ ಸಮಯ - ಹೆಚ್ಚು ಸೆಖೆಯೂ ಇಲ್ಲದ್ದೆ, ವಿಪರೀತ ಛಳಿಯೂ ಇಲ್ಲದ್ದೆ ಹಿತವಾಗಿತ್ತು. ನಯಾಗರಾ ಜಲಪಾತ ಕೇವಲ ೬೦ ಮೈಲು ದೂರಲ್ಲಿತ್ತ  ಕಾರಣ ಒಂದು ವಾರಾಂತ್ಯಲ್ಲಿ  ಅಲ್ಲಿಗೂ ಹೋಪ ಅವಕಾಶ ಸಿಕ್ಕಿತ್ತು. ಅಂದು ಆದಿತ್ಯವಾರ ಆದ ಕಾರಣ, ನಯಾಗರಾಲ್ಲಿ ತುಂಬ ಜನಸಂದಣಿ ಇತ್ತು - ಮತ್ತೆ, ಅಲ್ಲಿ ಕಂಡ ಪ್ರತಿ ಎರಡನೇ ಮೋರೆ ಭಾರತೀಯನದ್ದಾಗಿತ್ತು ! ಅಮೇರಿಕಾಲ್ಲಿ ನಮ್ಮವು ಎಷ್ಟು ಜನ ತುಂಬಿದ್ದವು ಹೇಳುದಕ್ಕೆ  ಇದೇ ಸಾಕ್ಷಿ.  

ಭಾರತ, ಅಮೇರಿಕಾ ಎರಡೂ ಪ್ರಜಾಪ್ರಭುತ್ವ ರಾಷ್ಟ್ರಂಗೊ. ಹಾಂಗಾರೆ, ಎರಡಕ್ಕೂ ಇಪ್ಪ ವ್ಯತ್ಯಾಸ ಎಂತ ? ವಿಮಾನಂದ ಕೆಳ ನೋಡಿರೆ, ಎರಡೂ ದೇಶಗಳ ವಿಹಂಗಮ ನೋಟ ಒಂದೇ ನಮುನೆ ಸುಂದರ ! ಅದೃಷ್ಟವಶಾತ್, ಮನುಷ್ಯರ  ಕಣ್ಣಿಂಗೆ   zoom lens ಇಲ್ಲೆ.  ಅದೇ  ಒಳ್ಳೆದಾತು,  ಭಾರತಮಾತೆ ಮೇಲಂದಾದರೂ ಚೆಂದ ಕಾಣಲಿ !   ಕೆಳ ಇಳುದಪ್ಪಗ ವ್ಯತ್ಯಾಸಂಗೊ ಒಂದೊಂದಾಗಿ ಕಾಂಬಲೆ ಸುರು ಆವುತ್ತು.  ಅಮೇರಿಕಾ ದೇಶಲ್ಲಿ ನಮ್ಮಂದ ಎಷ್ಟೋ ಹೆಚ್ಚು ಸಂಪತ್ತು ಇಕ್ಕು. ಅಲ್ಯಾಣ ಸಾಮಾಜಿಕ ವ್ಯವಸ್ಥೆಗೊ ನಮ್ಮಂದ ತುಂಬಾ ಮುಂದುವರಿದಿಕ್ಕು.  ಅಲ್ಲಿ ತಾಂತ್ರಿಕ ಅವಿಷ್ಕಾರಂಗಳ ಹೆಚ್ಚು ನಿತ್ಯ ಜೀವನದ ಅನುಕೂಲಕ್ಕೆ ಅಳವಡಿಸಿಗೊಂಡಿಕ್ಕು.   ಆದರೆ, ಭಾರತಲ್ಲಿ ಇಪ್ಪದನ್ನೂ ಸರಿಯಾಗಿ ನೋಡಿಗೊಂಬಲೆ ಎಡಿಯದ್ದಿಪ್ಪ ನಮ್ಮ ರೋಗಗ್ರಸ್ತ ಮನಸ್ಸಿನ ಅರ್ಥ ಮಾಡಿಗೊಂಬಲೆ ಮತ್ತು ಸಹಿಸಿಗೊಂಬಲೆ ಭಾರೀ ಕಷ್ಟ ಆವುತ್ತು.  ನಾವು ನಮ್ಮ ಕುಟುಂಬಕ್ಕಾಗಿ ಭಯಂಕರ ತ್ಯಾಗ ಮಾಡ್ತು, ಮನೆಯ ಆದಷ್ಟು ಸಗಣ ಬಳುಗಿ ಚೆಂದ ಮಡಿಕ್ಕೊಂಡು, ಹೊಸ್ತಿಲಿಂಗೆ  ರಂಗೋಲಿ ಎಲ್ಲ ಹಾಕುತ್ತು. ಆದರೆ, ಮನೆಂದ ಹೆರ ಕಾಲು ಮಡಿಗಿದ ಕೂಡ್ಳೇ ನಮ್ಮ ಸೌಂದರ್ಯ ಪ್ರಜ್ಞೆ ಮಾಯ ಆವುತ್ತು.  ನಮ್ಮಷ್ಟೂ  ಸಾಮಾಜಿಕ ಕಳಕಳಿ ಇಲ್ಲದ್ದ  ಅನಾಗರಿಕ  ಜೀವನ ಶೈಲಿ ಇನ್ನೊಂದು ದಿಕ್ಕೆ ಕಾಂಬಲೆ ಸಿಕ್ಕ.  ಇಂಫೋಸಿಸ ನ ನಾರಾಯಣ ಮೂರ್ತಿ ಬರದ  ”better india better world"  ಹೇಳುವ  ಪುಸ್ತಕಲ್ಲಿ  ಈ ವಿಷಯವ ಭಾರೀ ಲಾಯಿಕಲ್ಲಿ ವಿಮರ್ಶೆ ಮಾಡಿದ್ದ. 

ಮಾನವೀಯ ಮೌಲ್ಯಂಗೊಕ್ಕೆಲ್ಲಾ ಉಗಮ ಸ್ಥಾನ ಆಗಿತ್ತ ನಮ್ಮ ದೇಶದ ಪುರಾತನ ಸಂಸ್ಕೃತಿಯ ಇಷ್ಟು ಹೀನ ಸ್ಥಿತಿಲಿ ನೋಡ್ಳೆ ಸಂಕಟ ಆವುತ್ತು.   ಎಲ್ಲದಕ್ಕೂ ಸರಕಾರ ಖಂಡಿತವಾಗಿ ಹೊಣೆ ಅಲ್ಲ.   ಆದರೆ, ಸಮಾಜದ ರೀತಿ ನೀತಿಗಳ ರೂಪಿಸುವ ಅತಿ ಹೆಚ್ಚಿನ  ನಿಯಂತ್ರಣ ಮತ್ತು ಜವಾಬ್ದಾರಿ ಸರಕಾರದ ಮೇಲಿದ್ದು.  ನಾವು ಎಷ್ಟು ಬುದ್ಧಿಗೇಡಿಗೊ ಹೇಳಿರೆ, ನವಗೆ ಅನುಕೂಲ ಅಪ್ಪ ವಿಷಯಂಗಳಲ್ಲಿ ಮಾತ್ರ  (ಹೇಳಿರೆ, ಬೇಡದ್ದದರ)  ಪಾಶ್ಚಾತ್ಯರ ನಕಲು ಮಾಡಿ, ನಮ್ಮತ್ರೆ ಇಪ್ಪ ಒಳ್ಳೆಯ ವಿಷಯಂಗಳ ಎಲ್ಲಾ  ಮರತು ಅವಸಾನದ ದಾರಿಲಿ ಸಾಗುತ್ತಾ ಇದ್ದು.  ಅವು ಮಾತ್ರ ನಮ್ಮತ್ರೆ ಇಪ್ಪ ಒಳ್ಳೆದೆಲ್ಲವನ್ನೂ  ಕಲ್ತುಗೊಂಡು, ತಮ್ಮ ಸಂಸ್ಕೃತಿಯ ಇನ್ನೂ ಔನ್ನತ್ಯಕ್ಕೆ ತೆಕ್ಕೊಂಡು ಹೋವುತ್ತಾ ಇದ್ದವು.  ನಮ್ಮದು "worst of both worlds"  ಹೇಳುವ ಹಾಂಗಿಪ್ಪ ಪರಿವರ್ತನೆ ಆದರೆ, ಅವರದ್ದು  "best of both worlds" ಹೇಳ್ಳಕ್ಕು.    
      
ಇದಿಷ್ಟೂ ನಕಾರಾತ್ಮಕ ಯೋಚನೆಯ ಹಾಂಗೆ ಕಂಡರೆ ಕ್ಷಮೆ ಇರಲಿ.  ಎಂತಾರೂ ಬದಲಾವಣೆ ಆಯೆಕ್ಕಾದರೆ, ನಮ್ಮ ಶಿಕ್ಷಣ ವ್ಯನಸ್ಥೆಯೇ ಬದಲಾಯೆಕ್ಕು.  ಇಂಗ್ಲಿಷಿನ ಮೇಲಿನ ನಮ್ಮ ಕುರುಡು ವ್ಯಾಮೋಹ ನಿಲ್ಲೆಕ್ಕು.  ಮಕ್ಕಳ ಮುಗ್ಧ ಮನಸ್ಸಿನ ಸರಿಯಾಗಿ ರೂಪಿಸುವ ಪ್ರಯತ್ನ ಆಯೆಕ್ಕು.  ಸತ್ತು ಮಣ್ಣಾದ ಟಿಪ್ಪು ಸುಲ್ತಾನನ ಹಾಂಗಿಪ್ಪವರ ಜೀವನ ಚರಿತ್ರೆಯ ಮಕ್ಕೊಗೆ ಬಾಯಿ ಪಾಠ ಮಾಡಿಸುವ ಬದಲು  ತತ್ಕಾಲದ ವಸ್ತುಸ್ಥಿತಿಯ ಬಗ್ಗೆ ಚಿಂತಿಸಿ ಒಳ್ಳೆಯ ಭವಿಷ್ಯವ ರೂಪಿಸಿಗೊಂಬ ಹಾಂಗೆ ಪ್ರೇರೇಪಿಸುದು ಒಳ್ಳೆದು.  ಸ್ವಾಭಿಮಾನದ, ಸ್ವಾವಲಂಬನೆಯ ಹೊಸ ತಲೆಮಾರಿನ ಸೃಷ್ಟಿ ಆಯೆಕ್ಕು.  ಕೇವಲ ಹತ್ತು ವರ್ಷಲ್ಲಿ ಭಾರತಮಾತೆಗೆ ಸಂಪೂರ್ಣ ಕಾಯಕಲ್ಪ ಮಾಡಿ, ಫಳಫಳಿಸುವ, ಘಮಘಮಿಸುವ,  ಮೊದಲಾಣ ಹಾಂಗಿಪ್ಪ ಸುಂದರ, ಅನುಕರಣೀಯ ಸಮಾಜವ ಸೃಷ್ಟಿ ಮಾಡ್ಳೆಡಿಗು.  ದೃಢ  ಸಂಕಲ್ಪ ಬೇಕಪ್ಪದಷ್ಟೆ.    ಇದು ಶುದ್ಧ ಭಾರತೀಯರಿಂದ ಆಯೆಕ್ಕಾದ ಕೆಲಸ. ಇಟೆಲಿಲಿ ಹುಟ್ಟಿದವರಿಂದ ಈ  ಕೆಲಸವ ಅಪೇಕ್ಷೆ ಮಾಡ್ಳೆಡಿಯ. 

- ಬಾಪಿ / ೦೩.೦೮.೨೦೦೯