Sunday, September 12, 2010

ತಿಂಗಳ ಚರ್ಚೆ

ಕೆಲವು ಸರ್ತಿ ಬಾಲ್ಯದ ದಿನಂಗೊ ನೆಂಪಪ್ಪಗ  ಅದರ ಸುಮ್ಮನೆ ಮೆಲುಕು ಹಾಕಿಗೊಂಡೇ ಕೂಪೊ ಹೇಳಿ ಕಾಣ್ತು.   "ಆ ದಿನಂಗಳ" ಸವಿನೆನಪಿನ ಜಾಡಿಲ್ಲಿ ಹೋದರೆ ಎಷ್ಟು ಹೊತ್ತಾದರೂ  ಬೊಡಿತ್ತಿಲ್ಲೆ. ಇದೇ ವಿಷಯವ  ವೋ ಕಾಗಝ್  ಕಿ ಕಷ್ಟಿ, ವೋ ಬಾರಿಶ್  ಕಾ ಪಾನಿ  ಹೇಳುವ ಜಗಜೀತ್ ಸಿಂಗ್ ನ ಗಝಲ್ ಲ್ಲಿ, ಸುಶ್ರಾವ್ಯವಾದ ಪದ್ಯರೂಪಲ್ಲಿ  ಅನುಭವಿಸಲಕ್ಕು.
 
ಶಾಲೆಯ ದಿನಂಗಳಲ್ಲಿ ಕ್ಲಾಸಿಲ್ಲಿ ತಿಂಗಳಿಂಗೊಂದು ಚರ್ಚಾಕೂಟ  ನಡಕ್ಕೊಂಡಿತ್ತದು ಹೀಂಗಿಪ್ಪ ಒಂದು ನೆನಪುಗಳಲ್ಲಿ ಒಂದು.  ಹೆಚ್ಚಾಗಿ "ಹಳ್ಳಿ ಮೇಲೋ ಪಟ್ಟಣ ಮೇಲೋ", "ಚಿನ್ನ ಮೇಲೋ ಕಬ್ಬಿಣ ಮೇಲೋ" ಇತ್ಯಾದಿ ವಿದ್ಯಾರ್ಥಿಗಳ ಮಟ್ಟಿಂಗೆ "ಗಹನ" ಹೇಳಿ ಕಾಂಬ ವಿಷಯಂಗಳ ಮೇಲೆ ಚರ್ಚೆ ಮಾಡೆಕ್ಕಾಗಿತ್ತು.   ಕೆಲವು ಮಕ್ಕೊ ಪರ, ಇನ್ನು ಉಳಿದವು ವಿರೋಧವಾಗಿ ಮಾತಾಡೆಕ್ಕಾಗಿತ್ತು.   ವಾದ ಮಾಡ್ಳೆ ಉಶಾರಿಪ್ಪ ಕೆಲವು ಮಕ್ಕೊಗೆ  "ವಕೀಲ"  ಹೇಳುವ ಧರ್ಮದ ಬಿರುದುದೇ ಸಿಕ್ಕಿಗೊಂಡಿತ್ತು!   ಎಲ್ಲಾ  ಮಕ್ಕಳ ಪರ-ವಿರೋಧ ವಾದ ಮಂಡನೆ  ಆದ ಮೇಲೆ ಅಖೇರಿಗೆ ಆ ದಿನದ ಮುಖ್ಯ ಅತಿಥಿ ಆಗಿ ಬಂದ ಮಾಷ್ಟ್ರ ಭಾಷಣ ಮಾಡಿ  ಚರ್ಚೆ ಮುಗುಶುವ ಕ್ರಮ.   ಮಕ್ಕೊಗೆ ಎರಡರಲ್ಲಿ ಯಾವುದಾದರೊಂದರ ಹಿಡುದು ಸಮರ್ಥಿಸುವ ಕೆಲಸ ಆದರೆ, ಮಾಷ್ಟ್ರಂಗೆ  ಎರಡರನ್ನೂ ಸಮರ್ಥಿಸಿ,  "ಸಂದರ್ಭಕ್ಕನುಗುಣವಾಗಿ ಎರಡೂ ಮೇಲು" ಹೇಳಿ ವಿವರಿಸಿ ತೀರ್ಮಾನ ಕೊಡುವ ಸವಾಲಿನ ಕೆಲಸ.  ಅಂಬಗ ವಿದ್ಯಾರ್ಥಿಗಳ ಆಯಾಯ ಗುಂಪಿನವು "ಮಾಷ್ಟ್ರ ಎಂಗಳ ವಿಷಯವ ಹೆಚ್ಚು ಸಮರ್ಥಿಸಿ  ಮಾತಾಡಿದ" ಹೇಳಿ  ತಮ್ಮದೇ ಬೆನ್ನು ತಟ್ಟಿಗೊಂಡ್ರೂ,   ಮುಂದೆ  ಜೀವನದ ಅನುಭವ ಆವುತ್ತಾ ಬಂದ ಹಾಂಗೇ, ನಾವು ಎದುರಿಸುವ  ಯಾವ ವಿಷಯಾಧಾರಿತ ದ್ವಂದ್ವಂಗಳಲ್ಲಿಯೇ ಆದರೂ ಮಧ್ಯ ಮಾರ್ಗವೇ ಸದಾ ಸ್ಥಿರವಾದ್ದು ಹೇಳುವ ಪಾಠವ ಕಲಿತ್ತವು.   ಹೇಳಿರೆ, ಯಾವುದೇ ಎರಡು ವಿಪರೀತ ಧೋರಣೆಗಳ ಮಧ್ಯೆ ಒಂದು ಪಕ್ವವಾದ,   ಎಲ್ಲೋರಿಂಗೂ ಹಿತವಾದ ಮಾರ್ಗ  ಇದ್ದು ಹೇಳುವ ಸಂಗತಿ ಮನವರಿಕೆ ಆವುತ್ತು.  ಇದರೊಟ್ಟಿಂಗೇ,  ಪರಸ್ಪರ ಸಹಕಾರ, ಎಲ್ಲೋರೊಟ್ಟಿಂಗೆ ಅನುಸರಿಸಿಗೊಂಡು ಹೋಯೆಕ್ಕಾದ ಅನಿವಾರ್ಯತೆ ಇತ್ಯಾದಿಗಳ ದರ್ಶನ ಆವುತ್ತು.
 
ಸದ್ಯದ ವಿಷಯಕ್ಕೆ ಪ್ರಸ್ತುತ ಹೇಳಿ ಗ್ರೇಶಿಗೊಂಡು ಒಂದು  ಸಣ್ಣ ಹಾಸ್ಯ ಚಟಾಕಿಯ ಹಂಚಿಗೊಳ್ತೆ.  ಅದು ದೇವರು ತನ್ನ ಕರ್ತವ್ಯದಂತೆ, ಬೇರೆ ಬೇರೆ ಪ್ರಾಣಿಗಳ ಜೀವನಾವಧಿಯ ತೀರ್ಮಾನ ಮಾಡಿ ಆದೇಶ ಹೊರಡಿಸಿದ ಕಾಲ. ಈ ಆದೇಶದ ಪ್ರಕಾರ  ಮನುಷ್ಯರಿಂಗೆ ಕೇವಲ ೨೫ ವರ್ಷ ಆಯುಸ್ಸು  ತೀರ್ಮಾನ ಆಗಿತ್ತಡ. ನಾಯಿಗಳ ಹಾಂಗಿಪ್ಪ ಯಃಕಶ್ಚಿತ್ ಪ್ರಾಣಿಗೊಕ್ಕುದೇ ೫೦ ವರ್ಷದಷ್ಟು ಆಯುಷ್ಯ ದಯಪಾಲಿಸಿತ್ತಿದ್ದಡ.  ಇದಕ್ಕೆ ತಮ್ಮ ಆಕ್ಷೇಪ ವ್ಯಕ್ತಪಡಿಸುಲೆ ಹೇಳಿ  ಮನುಷ್ಯರ  ಕೆಲವು ಪ್ರತಿನಿಧಿಗೊ ದೇವರ ಸನ್ನಿಧಾನಕ್ಕೆ ಹೋದವಡ. ಅವರ ಪ್ರತಿಭಟನೆಯ ವಾದವ ಆಲಿಸಿದ ದೇವರು ಅಖೇರಿಗೆ ಬೇರೆ ಬೇರೆ ಪ್ರಾಣಿಗಳ ಆಯುಷ್ಯವ ಕಮ್ಮಿ ಮಾಡಿ  ಮನುಷ್ಯರಿಂಗೆ ೧೦೦ ವರ್ಷದ ಪೂರ್ಣಯುಷ್ಯವ ಕೊಟ್ಟಾಡ.  "ಇದಾ, ಆನು ಕೊಡುದು ಕೊಟ್ಟಿದೆ, ಇನ್ನು ಇದರ ಫಲವ ಅನುಭವಿಸುದು ನಿಂಗೊಗೆ ಬಿಟ್ಟ ವಿಚಾರ" ಹೇಳಿಯೂ ಒಂದು ಎಚ್ಚರಿಕೆಯ ಮಾತು ಹೇಳಿ ಕಳುಸಿದಡ.   ಹೀಂಗೆ ಪೂರ್ಣಾಯುಷ್ಯದ ವರ ಪಡೆದ  ಮನುಷ್ಯರ ಜೀವನವ ಅವಲೋಕಿಸಿದರೆ ಎಂತ ಕಾಣ್ತು ? ಎಲ್ಲೋರೂ ೨೫ ವರ್ಷ ಕಾಲ ವಿದ್ಯಾಭ್ಯಾಸ ಮಾಡ್ಯೊಂಡು, ಸಿನೆಮಾ ನೋಡ್ಯೊಂಡು, ಸ್ನೇಹಿತರೊಟ್ಟಿಂಗೆ ತಿರಿಗ್ಯೊಂಡು  ಗಮ್ಮತಿಲ್ಲಿ ಇರ್ತವು. ದೇವರು ಸುರುವಿಂಗೆ ಕೊಟ್ಟ ಆಯುಷ್ಯ ಅಲ್ಲಿಗೆ ಮುಗುದಿರ್ತು. ಮತ್ತೆ  ಕೆಲಸಕ್ಕೆ ಸೇರಿ, ವೃತ್ತಿ ಜೀವನ ಸುರು ಆದ ಮೇಲೆ ಮದುವೆ ಆವುತ್ತು.  ಮತ್ತಾಣ ಸುಮಾರು ೨೦ ವರ್ಷ ಕತ್ತೆಯ ಆಯುಷ್ಯವ ಕತ್ತರಿಸಿ ತೆಗೆಶಿಗೊಂಡ ಕಾರಣ ತತ್ಸಮಾನ ಬದುಕು - ಮನೆಗೆ ಬಪ್ಪದು ತಡವಾದರೆ ಬೈಶಿಗೊಂಬದು, ೫೦ ಕಿಲೋ ತೂಕದ ರೇಶನಿನ ಚೀಲವನ್ನೂ ಚಿಮಿಣಿ ಎಣ್ಣೆ ಡಬ್ಬಿಯನ್ನೂ ಹೊತ್ತು  ತಪ್ಪದು, ತೊಟ್ಟಿಕ್ಕುವ ನೀರಿನ ನಲ್ಲಿಯ ರಿಪೇರಿ ಮಾಡ್ಸುದು, ಸರತಿ ಸಾಲಿಲ್ಲಿ ನಿಂದು ಕರೆಂಟಿನ ಬಿಲ್ಲು ಕಟ್ಟುದು ಇತ್ಯಾದಿ..   ಇದಾದ ಮೇಲೆ, ನಿವೃತ್ತಿ ಅಪ್ಪಂದ ಮದಲು ಒಂದು ಭದ್ರತೆ ಇರಲಿ    ಹೇಳಿ ಅಂದಾಜಿ ಮಾಡಿ ಸಾಲ ಗೀಲ ಮಾಡಿ  ಮನೆ ಕಟ್ಸುತ್ತ.  ಅಲ್ಲಿಂದ  ಮತ್ತೆ ಸುಮಾರು ೧೫ ವರ್ಷ ನಾಯಿ ಜೀವನ.  ಅಖೇರಿಗೆ ನಿವೃತ್ತನಾಗಿ ಸಾವನ್ನಾರ ಸರಿಯಾಗಿ ಕಣ್ಣು ಕಾಣದ್ದೆ, ಹಲ್ಲೆಲ್ಲ ಉದುರಿ ಚಕ್ಕುಲಿ ತಿಂಬಲೆಡಿಯದ್ದೆ, ಜಂಬ್ರಕ್ಕೆ ಹೋದರೂ ಸಿಹಿತಿಂಡಿ ತಿಂಬಲೆಡಿಯದ್ದೆ  ನರಕ್ಕ ಬಪ್ಪ ಗೂಬೆಯ ಜೀವನ ಸುರು ಆವುತ್ತು . 
 
ಹಾಂಗಾರೆ, ಆ ಬಾಲ್ಯದ ದಿನಂಗಳ ಎನಗೆ ಹಿಂದಿರುಗಿಸು ಹೇಳಿ ಜಗಜೀತ್ ಸಿಂಗ್  ಬೇಡಿಗೊಂಡದು ಎಂತಕೆ ಹೇಳಿ ಗೊಂತಾತನ್ನೆ ? ದೇವರಿಂಗೇ ಬುದ್ಧಿವಂತಿಕೆ ಹೇಳಿ ಕೊಟ್ರೆ ಇನ್ನೆಂತಕ್ಕು ?
-ಬಾಪಿ
 
 
 
 
 

Friday, September 10, 2010

ಮಾಧ್ಯಮಗಳ ಪ್ರಭಾವ

ಇತ್ತೀಚೆಗೆ ನಮ್ಮ ಸಮಾಜಲ್ಲಿ ಮಾಧ್ಯಮದ ಮಹತ್ವ  ಯಾವಗಂದಲೂ ಹೆಚ್ಚಾವುತ್ತಾ ಇಪ್ಪದರ  ನಾವು ಗಮನಿಸಿಕ್ಕು.  ಸಮಾಜದ ಮೇಲೆ ಮಾಧ್ಯಮಂಗಳ ಪ್ರಭಾವ  ಯಾವಾಗಲೂ ಸಕಾರಾತ್ಮಕವಾಗಿಯೇ ಇರ್ತಿಲ್ಲೆ. ಹಾಂಗಾಗಿ  ಈ ಬಗ್ಗೆ ಒಂದು ಅಭಿಪ್ರಾಯ  ವ್ಯಕ್ತಪಡಿಸುದು ಅಗತ್ಯ ಹೇಳಿ ಕಾಣ್ತು.
 
ಮಾಧ್ಯಮಂಗಳ ಪ್ರಯತ್ನಂದಾಗಿ  ಸುಮಾರು ಸಾಮಾಜಿಕ  ಮಹತ್ವದ ವಿಷಯಂಗೊ ಗಮನಾರ್ಹ ಪ್ರಾಧಾನ್ಯ ಪಡದು ಸುಖಾಂತ ಕಂಡದು ಸಮಾಧಾನಕರ ಬೆಳವಣಿಗೆ.    ಪ್ರಭಾವಿ ವ್ಯಕ್ತಿಗಳ ಕೈವಾಡಂದ ನಡೆದ ಕೆಲವು ಕೊಲೆ ಪ್ರಕರಣಂಗೊ ಮಾಧ್ಯಮಂಗಳ ಒತ್ತಡಂದಾಗಿ ನ್ಯಾಯಾಲಯಂಗಳಲ್ಲಿ ಹೊಸ ತಿರುವು  ಪಡದು ನಿಜವಾದ ಅಪರಾಧಿಗೊಕ್ಕೆ ಶಿಕ್ಷೆ ಆಗಿ ನ್ಯಾಯ ಸಿಕ್ಕುವ ಹಾಂಗೆ ಆದ್ದದೂ ಸಕಾರಾತ್ಮಕ ಪ್ರಭಾವ.   ಇಷ್ಟೆಲ್ಲಾ ಧನಾತ್ಮಕ ಬೆಳವಣಿಗೆಗಳೊಟ್ಟಿಂಗೇ,  ಮಾಧ್ಯಮ ಸಮೂಹದ  ವಾಹಿನಿಗಳ  ಮಧ್ಯೆ  ಮೇಲಾಟದ ಕುಚೇಷ್ಟೆಯನ್ನೂ ನೋಡ್ತಾ  ಇದ್ದು.  ಕೇವಲ ಸಾಧಾರಣ ಸುದ್ದಿಗಳನ್ನೂ  "ಸ್ಪೋಟಕ ವಾರ್ತೆ"ಗಳಾಗಿ ಪ್ರಸಾರ  ಮಾಡಿ ವೀಕ್ಷಕರ ಸಂಖ್ಯೆಯ  ಹೆಚ್ಚುಮಾಡಿಗೊಂಬ  ಹುನ್ನಾರದ  ಬಗ್ಗೆಯೂ ಬೇಕಾದಷ್ಟು ಚರ್ಚೆ ನಡದ್ದು. ಮುಂಬೈಲಿ   ನಡದ ಭಯೋತ್ಪಾದಕರ  ಧಾಳಿಯಂತಹ  ಗಂಭೀರ ಸಂದರ್ಭಲ್ಲಿ  ಘಟನಾ ಸ್ಥಳಂದಲೇ  ನೇರ ಪ್ರಸಾರ ಮಾಡಿ   ರಾಷ್ಟ್ರೀಯ  ಹಿತವ ಕಡೆಗಣಿಸಿದ ವಾಹಿನಿಗಳ ಅಪಚಾರವನ್ನೂ ಸಾರ್ವಜನಿಕರು ಖಂಡಿಸಿದ್ದವು.  ಸರಿಯಾದ ವಾರ್ತೆಯ ಸಮಾಜಕ್ಕೆ ಒದಗಿಸುವ   ಪ್ರಾಥಮಿಕ  ಕರ್ತವ್ಯವ ಬದಿಗೊತ್ತಿ, ಮಾಧ್ಯಮದ ಪ್ರಭಾವವನ್ನೇ  ವ್ಯವಹಾರದ ಭಂಡವಾಳವಾಗಿ ಉಪಯೋಗಿಸುದು  ಸಾಮಾನ್ಯ ಪ್ರಕ್ರಿಯೆ ಆಗಿಬಿಟ್ರೆ,  ಅದು ಸಮಾಜಕ್ಕೆ ಹಾನಿಕಾರಕವೇ ಸರಿ.  ಇಂತ ಸಂದರ್ಭಲ್ಲಿ  ಮಾಧ್ಯಮದ ಪ್ರಾಮಾಣಿಕತೆ ಪ್ರಶ್ನಾರ್ಹ ಆವುತ್ತು.   ಅಮಿತಾಭ್  ಬಚ್ಚನ್  ನಟಿಸಿದ್ದ  ರಣ್ ಚಿತ್ರ ಇದೇ ಸಂದೇಶವ ಒಳಗೊಂಡಿತ್ತು.  ಹಾಂಗಾರೆ ಮಾಧ್ಯಮಂಗೊ ತಮ್ಮ ಪ್ರಭಾವಂದ  ಸಮಾಜದ ಚಿಂತನೆಲಿ ಧನಾತ್ಮಕತೆಯನ್ನೂ ದೇಶಪ್ರೇಮವನ್ನೂ  ಹೆಚ್ಚಿಸುಲೆ ಎಡಿಗೋ ?
 
ಕೊಲೆ, ಸುಲಿಗೆ, ಭಯೋತ್ಪಾದನೆ, ಸಂಸತ್ತು - ವಿಧಾನ ಮಂಡಲಂಗಳಲ್ಲಿ  ಕೋಲಾಹಲ, ಡೆಂಗು, ಅತ್ಯಾಚಾರ, ನಕ್ಷಲ್ ವಾದ ಇತ್ಯಾದಿಗಳೇ ಮುಖಪುಟದ ಸಾಮಾನ್ಯ  ಸುದ್ದಿಗಳಾಗಿಪ್ಪಗ  ಉದಿಯಪ್ಪಗ ಎದ್ದು ಪತ್ರಿಕೆ ಓದುದೇ ಬೇಡ ಹೇಳಿ ಆವುತ್ತಿಲ್ಯೋ ?   ಈ ಸಮಸ್ಯೆ ತಪ್ಪುಸಲೆ  ಹೇಳಿಯೇ  ಪತ್ರಿಕೆಗಳ  ಹಿಂದಾಣ ಪುಟಂದ ಓದುವ ಅಭ್ಯಾಸ ಬೆಳೆಸಿಗೊಂಡ ಎಷ್ಟೋ ಜನ ವಾಚಕರಿರವೋ ?  ಆ  ಪುಟಗಳಲ್ಯಾದರೂ  ಒಬ್ಬ ಕ್ರೀಡಾಪಟುವೋ, ಕೈಗಾರಿಕೋದ್ಯಮಿಯೋ, ಸಂಗೀತಗಾರನೋ  ಮಾಡಿದ ಸಾಧನೆಯ ಸುದ್ದಿಯ ಓದಿ  ಸ್ಪೂರ್ತಿ  ಪಡವ ಅವಕಾಶ ಸಿಕ್ಕಲಿ ಹೇಳಿ ಹಂಬಲಿಸಿದರೆ ಎಂತ ತಪ್ಪು ?  ನಕಾರಾತ್ಮಕ ಪ್ರಭಾವಂಗಳೇ ಹೆಚ್ಚಾಗಿಪ್ಪ ಇಂದ್ರಾಣ  ಸಮಾಜಲ್ಲಿ  ಸ್ಪೂರ್ತಿದಾಯಕ ವಾತಾವರಣದ ಸೃಷ್ಟಿ ಮಾಡುದು ಹೇಂಗೆ ? ಮಾಧ್ಯಮಂಗೊ ಸಾಮೂಹಿಕವಾಗಿ ದೃಢ ಮನಸ್ಸು ಮಾಡಿರೆ ಈ ವಿಷಯಲ್ಲಿ ಖಂಡಿತವಾಗಿ ಅಪಾರ ಕೊಡುಗೆ  ಕೊಡ್ಳೆಡಿಗು.
ದುಷ್ಟ ರಾಜಕಾರಣಿಗೊ, ಭ್ರಷ್ಟ ವ್ಯವಸ್ಥೆ, ಕುಲಗೆಟ್ಟ ಮಾರ್ಗಂಗೊ, ವಾಹನ ದಟ್ಟಣೆ, ಪರಿಸರ ಮಾಲಿನ್ಯ, ವಿದ್ಯುತ್  ಕಡಿತ ಇತ್ಯಾದಿ   ಹೊಲಸುಗಳ ಹೊರತಾಗಿಯೂ   ಸ್ವಂತ ಜೀವನ ಸಂಗ್ರಾಮಲ್ಲಿ   ವಿಜಯಿಗಳಾಗಿ  ಇತರರಿಗೆ ಮಾರ್ಗದರ್ಶಿಗ ಹಾಂಗಿಪ್ಪ    ವ್ಯಕ್ತಿಗೊ    ನಮ್ಮ ಮಧ್ಯೆ ಬೇಕಾದಷ್ಟಿದ್ದವು. ಇಂತ ವ್ಯಕ್ತಿಗಳ ಭಾವಂಚಿತ್ರಂಗೊ ನಮ್ಮ ಪತ್ರಿಕೆಗಳಲ್ಲಿ ರಾರಾಜಿಸುವ  ಹಾಂಗಾಗಲಿ.  ಒಳ್ಳೆ ಕೆಲಸ ಮಾಡುವ ಮಂತ್ರಿಗಳ ಹೆಸರು ಮಾಂತ್ರ ಎದುರಾಣ ಪುಟಲ್ಲಿ ಬರಲಿ.  ಹೀಂಗೆ  ಧನಾತ್ಮಕ ವಾರ್ತೆಗಳ ಮುಖಪುಟಲ್ಲಿ ಓದುವ ಅವಕಾಶ ಹೆಚ್ಚು ಸಿಕ್ಕುವ ಹಾಂಗಾದರೆ, ಕರ್ನಾಟಕದ ಮುಕ್ಕೋಟಿ ಜನರಿಂಗೆ  ಅತ್ಯಗತ್ಯವಾದ  ಹೊಸ ಸುಪ್ರಭಾತ  ಕೇಳಿಸಿದ ಪುಣ್ಯ  ಬಕ್ಕು.  ಮತ್ತೆ, ಕೇವಲ ಮುಖಪುಟಲ್ಲಿ ಶುದ್ದಿ ಮಾಡುದಕ್ಕಾಗಿಯೇ ಬಡಬಡಿಸಿ, ಗುಲ್ಲು ಎಬ್ಬಿಸುವ ರೌಡಿ ರಾಜಕಾರಣಿಗೊಕ್ಕೆ  ಸಂಬಂಧಿಸಿದ ವಾರ್ತೆಗಳ ಹಿಂದಿನ ಪುಟಂಗೊಕ್ಕೆ ವರ್ಗಾವಣೆ ಮಾಡಿರೆ ಅಂತಹವಕ್ಕೆ  ಪಾಠ ಕಲಿಸಿದ ಹಾಂಗಕ್ಕು.
 
ಆದರೆ, ಪುಚ್ಚೆಯ ಕೊರಳಿಂಗೆ ಘಂಟೆ ಕಟ್ಟುವ ಕೆಲಸ ಮಾಡುದು ಆರು ? ಸುದ್ದಿ ಮಾಧ್ಯಮ ವ್ಯವಹಾರದ ಸಂತೆ ಆಗಿಪ್ಪಗ ಎಲ್ಲೋರಿಂಗೂ ಸ್ಪರ್ಧೆಲಿ ಮುಂದೆ ಹೋಪ ಚಾಳಿಯೇ ಹೊರತು, ಸಮಾಜದ  ಚಿಂತೆ ಇಪ್ಪ ಹಾಂಗೆ ಕಾಣ್ತಿಲ್ಲೆ.  ಆದಷ್ಟು ಬೇಗ ಇನ್ನೊಬ್ಬ ರಾಮನಾಥ ಗೋಯೆಂಕ ಹುಟ್ಟಿ ಬರಲಿ.
 
-ಬಾಪಿ