ಇತ್ತೀಚೆಗೆ ನಮ್ಮ ಸಮಾಜಲ್ಲಿ ಮಾಧ್ಯಮದ ಮಹತ್ವ ಯಾವಗಂದಲೂ ಹೆಚ್ಚಾವುತ್ತಾ ಇಪ್ಪದರ ನಾವು ಗಮನಿಸಿಕ್ಕು. ಸಮಾಜದ ಮೇಲೆ ಮಾಧ್ಯಮಂಗಳ ಪ್ರಭಾವ ಯಾವಾಗಲೂ ಸಕಾರಾತ್ಮಕವಾಗಿಯೇ ಇರ್ತಿಲ್ಲೆ. ಹಾಂಗಾಗಿ ಈ ಬಗ್ಗೆ ಒಂದು ಅಭಿಪ್ರಾಯ ವ್ಯಕ್ತಪಡಿಸುದು ಅಗತ್ಯ ಹೇಳಿ ಕಾಣ್ತು.
ಮಾಧ್ಯಮಂಗಳ ಪ್ರಯತ್ನಂದಾಗಿ ಸುಮಾರು ಸಾಮಾಜಿಕ ಮಹತ್ವದ ವಿಷಯಂಗೊ ಗಮನಾರ್ಹ ಪ್ರಾಧಾನ್ಯ ಪಡದು ಸುಖಾಂತ ಕಂಡದು ಸಮಾಧಾನಕರ ಬೆಳವಣಿಗೆ. ಪ್ರಭಾವಿ ವ್ಯಕ್ತಿಗಳ ಕೈವಾಡಂದ ನಡೆದ ಕೆಲವು ಕೊಲೆ ಪ್ರಕರಣಂಗೊ ಮಾಧ್ಯಮಂಗಳ ಒತ್ತಡಂದಾಗಿ ನ್ಯಾಯಾಲಯಂಗಳಲ್ಲಿ ಹೊಸ ತಿರುವು ಪಡದು ನಿಜವಾದ ಅಪರಾಧಿಗೊಕ್ಕೆ ಶಿಕ್ಷೆ ಆಗಿ ನ್ಯಾಯ ಸಿಕ್ಕುವ ಹಾಂಗೆ ಆದ್ದದೂ ಸಕಾರಾತ್ಮಕ ಪ್ರಭಾವ. ಇಷ್ಟೆಲ್ಲಾ ಧನಾತ್ಮಕ ಬೆಳವಣಿಗೆಗಳೊಟ್ಟಿಂಗೇ, ಮಾಧ್ಯಮ ಸಮೂಹದ ವಾಹಿನಿಗಳ ಮಧ್ಯೆ ಮೇಲಾಟದ ಕುಚೇಷ್ಟೆಯನ್ನೂ ನೋಡ್ತಾ ಇದ್ದು. ಕೇವಲ ಸಾಧಾರಣ ಸುದ್ದಿಗಳನ್ನೂ "ಸ್ಪೋಟಕ ವಾರ್ತೆ"ಗಳಾಗಿ ಪ್ರಸಾರ ಮಾಡಿ ವೀಕ್ಷಕರ ಸಂಖ್ಯೆಯ ಹೆಚ್ಚುಮಾಡಿಗೊಂಬ ಹುನ್ನಾರದ ಬಗ್ಗೆಯೂ ಬೇಕಾದಷ್ಟು ಚರ್ಚೆ ನಡದ್ದು. ಮುಂಬೈಲಿ ನಡದ ಭಯೋತ್ಪಾದಕರ ಧಾಳಿಯಂತಹ ಗಂಭೀರ ಸಂದರ್ಭಲ್ಲಿ ಘಟನಾ ಸ್ಥಳಂದಲೇ ನೇರ ಪ್ರಸಾರ ಮಾಡಿ ರಾಷ್ಟ್ರೀಯ ಹಿತವ ಕಡೆಗಣಿಸಿದ ವಾಹಿನಿಗಳ ಅಪಚಾರವನ್ನೂ ಸಾರ್ವಜನಿಕರು ಖಂಡಿಸಿದ್ದವು. ಸರಿಯಾದ ವಾರ್ತೆಯ ಸಮಾಜಕ್ಕೆ ಒದಗಿಸುವ ಪ್ರಾಥಮಿಕ ಕರ್ತವ್ಯವ ಬದಿಗೊತ್ತಿ, ಮಾಧ್ಯಮದ ಪ್ರಭಾವವನ್ನೇ ವ್ಯವಹಾರದ ಭಂಡವಾಳವಾಗಿ ಉಪಯೋಗಿಸುದು ಸಾಮಾನ್ಯ ಪ್ರಕ್ರಿಯೆ ಆಗಿಬಿಟ್ರೆ, ಅದು ಸಮಾಜಕ್ಕೆ ಹಾನಿಕಾರಕವೇ ಸರಿ. ಇಂತ ಸಂದರ್ಭಲ್ಲಿ ಮಾಧ್ಯಮದ ಪ್ರಾಮಾಣಿಕತೆ ಪ್ರಶ್ನಾರ್ಹ ಆವುತ್ತು. ಅಮಿತಾಭ್ ಬಚ್ಚನ್ ನಟಿಸಿದ್ದ ರಣ್ ಚಿತ್ರ ಇದೇ ಸಂದೇಶವ ಒಳಗೊಂಡಿತ್ತು. ಹಾಂಗಾರೆ ಮಾಧ್ಯಮಂಗೊ ತಮ್ಮ ಪ್ರಭಾವಂದ ಸಮಾಜದ ಚಿಂತನೆಲಿ ಧನಾತ್ಮಕತೆಯನ್ನೂ ದೇಶಪ್ರೇಮವನ್ನೂ ಹೆಚ್ಚಿಸುಲೆ ಎಡಿಗೋ ?
ಕೊಲೆ, ಸುಲಿಗೆ, ಭಯೋತ್ಪಾದನೆ, ಸಂಸತ್ತು - ವಿಧಾನ ಮಂಡಲಂಗಳಲ್ಲಿ ಕೋಲಾಹಲ, ಡೆಂಗು, ಅತ್ಯಾಚಾರ, ನಕ್ಷಲ್ ವಾದ ಇತ್ಯಾದಿಗಳೇ ಮುಖಪುಟದ ಸಾಮಾನ್ಯ ಸುದ್ದಿಗಳಾಗಿಪ್ಪಗ ಉದಿಯಪ್ಪಗ ಎದ್ದು ಪತ್ರಿಕೆ ಓದುದೇ ಬೇಡ ಹೇಳಿ ಆವುತ್ತಿಲ್ಯೋ ? ಈ ಸಮಸ್ಯೆ ತಪ್ಪುಸಲೆ ಹೇಳಿಯೇ ಪತ್ರಿಕೆಗಳ ಹಿಂದಾಣ ಪುಟಂದ ಓದುವ ಅಭ್ಯಾಸ ಬೆಳೆಸಿಗೊಂಡ ಎಷ್ಟೋ ಜನ ವಾಚಕರಿರವೋ ? ಆ ಪುಟಗಳಲ್ಯಾದರೂ ಒಬ್ಬ ಕ್ರೀಡಾಪಟುವೋ, ಕೈಗಾರಿಕೋದ್ಯಮಿಯೋ, ಸಂಗೀತಗಾರನೋ ಮಾಡಿದ ಸಾಧನೆಯ ಸುದ್ದಿಯ ಓದಿ ಸ್ಪೂರ್ತಿ ಪಡವ ಅವಕಾಶ ಸಿಕ್ಕಲಿ ಹೇಳಿ ಹಂಬಲಿಸಿದರೆ ಎಂತ ತಪ್ಪು ? ನಕಾರಾತ್ಮಕ ಪ್ರಭಾವಂಗಳೇ ಹೆಚ್ಚಾಗಿಪ್ಪ ಇಂದ್ರಾಣ ಸಮಾಜಲ್ಲಿ ಸ್ಪೂರ್ತಿದಾಯಕ ವಾತಾವರಣದ ಸೃಷ್ಟಿ ಮಾಡುದು ಹೇಂಗೆ ? ಮಾಧ್ಯಮಂಗೊ ಸಾಮೂಹಿಕವಾಗಿ ದೃಢ ಮನಸ್ಸು ಮಾಡಿರೆ ಈ ವಿಷಯಲ್ಲಿ ಖಂಡಿತವಾಗಿ ಅಪಾರ ಕೊಡುಗೆ ಕೊಡ್ಳೆಡಿಗು.
ದುಷ್ಟ ರಾಜಕಾರಣಿಗೊ, ಭ್ರಷ್ಟ ವ್ಯವಸ್ಥೆ, ಕುಲಗೆಟ್ಟ ಮಾರ್ಗಂಗೊ, ವಾಹನ ದಟ್ಟಣೆ, ಪರಿಸರ ಮಾಲಿನ್ಯ, ವಿದ್ಯುತ್ ಕಡಿತ ಇತ್ಯಾದಿ ಹೊಲಸುಗಳ ಹೊರತಾಗಿಯೂ ಸ್ವಂತ ಜೀವನ ಸಂಗ್ರಾಮಲ್ಲಿ ವಿಜಯಿಗಳಾಗಿ ಇತರರಿಗೆ ಮಾರ್ಗದರ್ಶಿಗ ಹಾಂಗಿಪ್ಪ ವ್ಯಕ್ತಿಗೊ ನಮ್ಮ ಮಧ್ಯೆ ಬೇಕಾದಷ್ಟಿದ್ದವು. ಇಂತ ವ್ಯಕ್ತಿಗಳ ಭಾವಂಚಿತ್ರಂಗೊ ನಮ್ಮ ಪತ್ರಿಕೆಗಳಲ್ಲಿ ರಾರಾಜಿಸುವ ಹಾಂಗಾಗಲಿ. ಒಳ್ಳೆ ಕೆಲಸ ಮಾಡುವ ಮಂತ್ರಿಗಳ ಹೆಸರು ಮಾಂತ್ರ ಎದುರಾಣ ಪುಟಲ್ಲಿ ಬರಲಿ. ಹೀಂಗೆ ಧನಾತ್ಮಕ ವಾರ್ತೆಗಳ ಮುಖಪುಟಲ್ಲಿ ಓದುವ ಅವಕಾಶ ಹೆಚ್ಚು ಸಿಕ್ಕುವ ಹಾಂಗಾದರೆ, ಕರ್ನಾಟಕದ ಮುಕ್ಕೋಟಿ ಜನರಿಂಗೆ ಅತ್ಯಗತ್ಯವಾದ ಹೊಸ ಸುಪ್ರಭಾತ ಕೇಳಿಸಿದ ಪುಣ್ಯ ಬಕ್ಕು. ಮತ್ತೆ, ಕೇವಲ ಮುಖಪುಟಲ್ಲಿ ಶುದ್ದಿ ಮಾಡುದಕ್ಕಾಗಿಯೇ ಬಡಬಡಿಸಿ, ಗುಲ್ಲು ಎಬ್ಬಿಸುವ ರೌಡಿ ರಾಜಕಾರಣಿಗೊಕ್ಕೆ ಸಂಬಂಧಿಸಿದ ವಾರ್ತೆಗಳ ಹಿಂದಿನ ಪುಟಂಗೊಕ್ಕೆ ವರ್ಗಾವಣೆ ಮಾಡಿರೆ ಅಂತಹವಕ್ಕೆ ಪಾಠ ಕಲಿಸಿದ ಹಾಂಗಕ್ಕು.
ಆದರೆ, ಪುಚ್ಚೆಯ ಕೊರಳಿಂಗೆ ಘಂಟೆ ಕಟ್ಟುವ ಕೆಲಸ ಮಾಡುದು ಆರು ? ಸುದ್ದಿ ಮಾಧ್ಯಮ ವ್ಯವಹಾರದ ಸಂತೆ ಆಗಿಪ್ಪಗ ಎಲ್ಲೋರಿಂಗೂ ಸ್ಪರ್ಧೆಲಿ ಮುಂದೆ ಹೋಪ ಚಾಳಿಯೇ ಹೊರತು, ಸಮಾಜದ ಚಿಂತೆ ಇಪ್ಪ ಹಾಂಗೆ ಕಾಣ್ತಿಲ್ಲೆ. ಆದಷ್ಟು ಬೇಗ ಇನ್ನೊಬ್ಬ ರಾಮನಾಥ ಗೋಯೆಂಕ ಹುಟ್ಟಿ ಬರಲಿ.
-ಬಾಪಿ
1 comment:
ಸುಮಾರು ಸಮಯದ ಮತ್ತೆ ಬರದ ಬರಹ ಸಮಯೋಚಿತ. ಈ ಸಮಯಲ್ಲಿ ಎನ್ನ ನೆನಪ್ಪಿಂಗೆ ಬಪ್ಪ ಒಂದು ವಿಷಯ ಎಂತ ಹೇಳಿಯರೆ, ೯೦ರ ದಶಕಲ್ಲಿ ಸಿ.ಎನ್.ಎನ್ ಗಲ್ಫ್ ಯುದ್ಧದ ಸಮಯಲ್ಲಿ ರಣಭೂಮಿಂದ ನೇರವಾಗಿ ಪ್ರಸಾರ ಪಡಿಸಿ ಹೆಸರು ಪಡಕ್ಕೊಂಡದು. ಅಂದು ಆ ಪ್ರಸಾರ ಅಮೇರಿಕದ ಪ್ರಜೆಂಗೊಕ್ಕೆ ಖುಷಿ ಆದರೂ ಅದರಿಂದ ಸದ್ದಾಮಂಗಳ ಹುಟ್ಟುಹಾಕುವಲ್ಲಿ ಕಾರಣ ಆತು. ಹಾಂ... ಹೇಳಿದ ಹಾಂಗೆ ಮಹಾಭಾರತ ಸಮಯಲ್ಲಿಯೂ ಸಂಜಯ ಇದೇ ಮಾಡಿತ್ತಿದ್ದ..!
Post a Comment