ಲವ್ ಜಿಹಾದ್ : ಕೇರಳ, ಕರ್ನಾಟಕದ ಹಾಂಗಿಪ್ಪ ರಾಜ್ಯಂಗಳಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಹುಡುಗಿಯರಿಂಗೆ ಪ್ರೀತಿಯ ಬಲೆ ಬೀಸಿ, ಮದುವೆ ಆಗಿ, ಮತಾಂತರ ಮಾಡ್ಸುವ ಮುಸ್ಲಿಮರ ವ್ಯವಸ್ಥಿತ ಜಾಲವೇ ಇದ್ದಡ. ಇದಕ್ಕೆ ಲವ್-ಜಿಹಾದ್ ಹೇಳುವ ಹೆಸರಾಡ. ಈ ಹುಡುಗಿಯರಲ್ಲಿ ಹೆಚ್ಚಿನವು ಕಾಣೆ ಅಪ್ಪದು ಅಥವಾ ಬ್ಯಾರಿಗಳ ಒಟ್ಟಿಂಗೆ ಓಡಿ ಹೋಪದು. ನಮ್ಮ ಊರಿಲ್ಲಿಯೇ ಹೀಂಗಿಪ್ಪ ಬೇಕಾದಷ್ಟು ಉದಾಹರಣೆಗೊ ಇದ್ದಡ. "ಪ್ರೀತಿ ಮಾಡಿದ ಮೇಲೆ ಹೆದರಿಕೆ ಎಂತಕೆ” ಎಂಬಿತ್ಯಾದಿ ಸಿನೆಮಾದ ಸಂಭಾಷಣೆಗಳೇ ಆದರ್ಶವಾಗಿಪ್ಪ ಈಗಾಣ ಕೂಸುಗೊಕ್ಕೆ ಅಬ್ಬೆಪ್ಪನ ಮತ್ತು ಸಮಾಜದ ಎಂತ ಗೊಡವೆಯೂ ಇಪ್ಪ ಹಾಂಗೆ ಕಾಣ್ತಿಲ್ಲೆ. ಹೀಂಗೆ ಮೋಸ ಹೋದವರಲ್ಲಿ ಹೆಚ್ಚಿನವು ಜವ್ವನದ ಕಿಚ್ಚು ತಣಿದ ಮೇಲೆ ಬಹುಪತ್ನಿತ್ವದ ವ್ಯವಸ್ಥೆಯ ಸಹಿಸಿಗೊಂಡು, ಜೀವನ ನಿರ್ವಹಣೆಗಾಗಿ ಬೀಡಿ ಕಟ್ಟಿಗೊಂಡು ಬದುಕ್ಕುವ ದಯನೀಯ ಸ್ಥಿತಿಲಿದ್ದವಡ. ಇಷ್ಟೆಲ್ಲಾ ಆದ ಮೇಲೆ ಬುದ್ಧಿ ಬಂದರುದೇ ಎಂತ ಸುಖ ? ಇಷ್ಟರವರೆಗೆ ಅದೆಷ್ಟು ಸಾವಿರ ಕೂಸುಗೊ ಹೀಂಗೆ ಕಾಣೆ ಆಗಿ ಹೋಗಿ, ಬೀಡಿ ಉದ್ಯಮವ ಉದ್ಧಾರ ಮಾಡಿಗೊಂಡಿದ್ದವೋ ? ಹಿಂದೂ ಸಮಾಜಲ್ಲಿ ಒಟ್ಟಾರೆಯಾಗಿ ಎಲ್ಲದರ ಬಗ್ಗೆಯೂ ದಿವ್ಯ ನಿರ್ಲಕ್ಷ್ಯ ಮತ್ತು ನಿಷ್ಕ್ರಿಯತೆ ಇಪ್ಪ ಕಾರಣವೇ ಮುಸ್ಲಿಮರಿಂಗೆ ಹೀಂಗಿಪ್ಪ ಕುಟಿಲ ತಂತ್ರಂಗಳ ಕಾರ್ಯಗತ ಮಾಡುವ ಧೈರ್ಯ ಬಪ್ಪದು ಹೇಳಿ ಕಾಣ್ತು.
ಇಷ್ಟರ ವರೆಗೆ ಹೀಂಗಿಪ್ಪ ಯಾವ ಪ್ರಕರಣಂಗಳಲ್ಲಿಯೂ ಯಾವುದೇ ಪ್ರತಿಭಟನೆ ಆದ್ದದಾಗಲೀ, ಓಡಿ ಹೋದವರ ರಕ್ಷಿಸಿ ವಾಪಾಸು ಕರಕ್ಕೊಂಡು ಬಂದದಾಗಲೀ ಗೊಂತಾಯಿದಿಲ್ಲೆ. ಈಗ ಇದಕ್ಕೆ ವಿರುದ್ಧವಾದ ಇನ್ನೊಂದು ಘಟನೆಯ ರಜ ವಿಮರ್ಶೆ ಮಾಡುವೊ. ರಜನೀಶ್ ಶರ್ಮ ಹೇಳುವ ಜಮ್ಮುವಿನ ಹಿಂದೂ ಹುಡುಗನುದೇ ಅಮೀನಾ ಹೇಳುವ ಕಾಶ್ಮೀರದ ಮುಸ್ಲಿಮ್ ಹುಡುಗಿಯುದೇ ಪ್ರೀತಿಸಿ ಮದುವೆ ಆದವು. ಅಮೀನಾ ಮದುವೆ ಆದ ಮೇಲೆ ಆಂಚಲ್ ಶರ್ಮ ಹೇಳಿ ಹೆಸರು ಬದಲಾಯಿಸಿಗೊಂಡತ್ತು. ಇವರ ಮದುವೆ ಆಗಿ ಸುಮಾರು ಒಂದು ತಿಂಗಳು ಅಪ್ಪಗ, ಕಾಶ್ಮೀರದ ಪೋಲೀಸುಗೊ ಹುಡುಗನ ವಿಚಾರಣೆಗೆ ಹೇಳಿ ಕರಕ್ಕೊಂಡು ಹೋದವು. ಕೆಲವು ದಿನ ಆದ ಮೇಲೆ ಆ ಹುಡುಗ ಅವನ ಕೂಡಿ ಹಾಕಿದ ಕೋಣೆಲಿ ನೇಣು ಹಾಕಿಗೊಂಡು ಸತ್ತ ಹೇಳುವ ಶುದ್ದಿಯ ಪೋಲೀಸಿನವು ಬಿಡುಗಡೆ ಮಾಡಿದವು. ಸದ್ರಿ ಮುಸ್ಲಿಮ್ ಹುಡುಗಿಯ ಅಪ್ಪ ಕಾಶ್ಮೀರದ ಪೋಲೀಸು ಇಲಾಖೆಲಿ ಕೆಲಸ ಮಾಡಿಗೊಂಡಿತ್ತದು ಕೇವಲ ಕಾಕತಾಳೀಯ ! ಈ ವಿಷಯದ ಬಗ್ಗೆ ಮಾನವ ಹಕ್ಕು ಹಿತರಕ್ಷಣೆಯವಾಗಲೀ, ಮಾಧ್ಯಮದವಾಗಲೀ ಇಷ್ಟರವರೆಗೆ ಚಕಾರ ಎತ್ತಿದ್ದವಿಲ್ಲೆ. ಅದೇ, ಕಲ್ಕತ್ತಾಲ್ಲಿ ಆದ ರಿಝ್ವಾನ್ ಹೇಳುವ ಮುಸ್ಲಿಮ್ ಹುಡುಗನೊಟ್ಟಿಂಗೆ ಆದ ಪ್ರಿಯಾಂಕಾ ತೋಡಿ ಹೇಳುವ ಹಿಂದೂ ಹುಡುಗಿಯ ಮದುವೆ ಮತ್ತು ತದನಂತರ ಹುಡುಗನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ವ್ಯಾಜ್ಯವ ಪ್ರತಿದಿನ ಬಿಡದ್ದೆ ಹಿಂಬಾಲಿಸಿ ದೊಡ್ಡ ಶುದ್ದಿ ಅಪ್ಪ ಹಾಂಗೆ ಮಾಡಿತ್ತಿದ್ದವು. ಹಾಂಗೇ, ಕಾಶ್ಮೀರದ ಶೋಪಿಯಾಲ್ಲಿ ಇಬ್ಬರು ಮುಸ್ಲಿಂ ಮಹಿಳೆಯರ ಮೇಲೆ ಸೈನಿಕರು ನಡೆಶಿದವು ಹೇಳಲಾದ ಅತ್ಯಾಚಾರದ ವಿಷಯಲ್ಲಿ ತಕ್ಷಣ ಕಾರ್ಯನಿರತನಾದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಂಗೆ ರಜನೀಶ್ ಶರ್ಮನ ವಿಷಯಲ್ಲಿ ಯಾವ ಹೇಳಿಕೆಯನ್ನೂ ಕೊಡ್ಳೆ ಪುರುಸೊತ್ತು ಆಯಿದಿಲ್ಲೆ. ಇದು ಧರ್ಮ ನಿರಪೇಕ್ಷ, ಸ್ವತಂತ್ರ ಭಾರತಲ್ಲಿ ನಡೆತ್ತಾ ಇಪ್ಪ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದವರ ವೃತ್ತಿಪರ ನಡವಳಿಕೆ.
ಮುಸ್ಲಿಮರು ಬಹು ಸಂಖ್ಯಾತರಾಗಿಪ್ಪ ಕಾಶ್ಮೀರಲ್ಲಿ ಹಿಂದು ಮತ್ತು ಬೌದ್ಧ ಧರ್ಮೀಯರ ಮೇಲಿನ ದಬ್ಬಾಳಿಕೆ ಎಲ್ಲೋರಿಂಗೂ ಗೊಂತಿಪ್ಪದೇ. ಹಾಂಗಾಗಿ, ಆ ರಾಜ್ಯಲ್ಲಿ ಅಪ್ಪ ಶೋಷಣೆಯ ಹೇಂಗಾರು ಅರ್ಥ ಮಾಡಿಗೊಂಬಲಕ್ಕು. ಹಿಂದೂಗಳೇ ಬಹು ಸಂಖ್ಯಾತರಾಗಿಪ್ಪ ದಕ್ಷಿಣದ ಪ್ರದೇಶಂಗಳಲ್ಲಿ ಅಪ್ಪ ದುಷ್ಕೃತ್ಯಂಗಳನ್ನೂ ಎಂತಕೆ ಸಹಿಸಿಗೊಳೆಕ್ಕು ? ಹೀಂಗಿಪ್ಪ ವಿಷಯಂಗಳಲ್ಲಿ ಹಿಂದೂಗಳ ಪೈಕಿ ರಜ ಆದರೂ ಸಕ್ರಿಯವಾಗಿಪ್ಪವು ಹೇಳಿರೆ ಭಜರಂಗ ದಳ ಮತ್ತು ಶ್ರೀರಾಮ ಸೇನೆಯವು. ಆದರೆ ದುರ್ದೈವದ ಸಂಗತಿ ಹೇಳಿರೆ, ಈ ಸಂಸ್ಥೆಗಳ ವಿರುದ್ಧ ಹೆರಾಣವರಿಂದಲೂ ಹೆಚ್ಚು ಹಿಂದೂ ಸಮಾಜದ ಬುದ್ಧಿಜೀವಿಗಳೇ ಟೀಕೆ ಮಾಡ್ತವು. ಪ್ರೀತಿ ಹೇಳುದಕ್ಕೆ ಧರ್ಮದ ಗೋಡೆ ಅಡ್ಡ ಅಪ್ಪಲಾಗ ಹೇಳುವ ವಾದ ಸರಿಯಾಗಿಪ್ಪಲೂ ಸಾಕು. ಆದರೆ, ಅದು ಮುಂದಾಲೋಚನೆ ಇಲ್ಲದ್ದ ಕುರುಡು ಪ್ರೀತಿ ಆದರೆ ಅಥವಾ ಹುಡುಗಿಯರ ಮುಗ್ಧತೆಯ ದುರುಪಯೋಗ ಪಡಿಸಿಗೊಂಬ ನಾಟಕದ ಪ್ರೀತಿ ಆದರೆ, ಅದರ ಬಗ್ಗೆ ಜಾಗ್ರತೆ ಮಾಡೆಕ್ಕಾವುತ್ತು.
ಅಹಿಂಸಾವಾದ : ಜಗತ್ತಿನಾದ್ಯಂತ "ಶಾಂತಿದೂತ” ಹೇಳಿಯೇ ಹೆಸರು ಮಾಡಿದ ಮಹಾತ್ಮ ಗಾಂಧಿಗೆ ನೋಬೆಲ್ ಶಾಂತಿ ಪ್ರಶಸ್ತಿ ಬಾರದ್ದದು ವಿಪರ್ಯಾಸವೇ ಸರಿ. ಈ ಪ್ರಶಸ್ತಿಗಾಗಿ ಒಬಾಮಾ ಅಥವಾ ಮದರ್ ಥೆರೆಸಾನ ಹಾಂಗಿಪ್ಪ ಹೆಚ್ಚು ಅರ್ಹತೆ ಇಪ್ಪವರೊಟ್ಟಿಂಗೆ ಪೈಪೋಟಿ ಮಾಡೆಕ್ಕಾದ ಪರಿಸ್ಥಿತಿ ಇಪ್ಪಗ, ಗಾಂಧಿಗೆ ಪ್ರಶಸ್ತಿ ಸಿಕ್ಕುದಾದರೂ ಹೇಂಗೆ ? ಅದು ಹೇಂಗೂ ಇರಲಿ. ಸದ್ಯದ ಚೋದ್ಯ ಎಂತ ಹೇಳಿರೆ, ಗಾಂಧಿಯ ಅಹಿಂಸಾವಾದ ಈಗಾಣ ಕಾಲಕ್ಕೆ ಎಷ್ಟು ಪ್ರಸ್ತುತ ಹೇಳುವ ವಿಷಯ. ಈ ಚಿಂತನೆಯನ್ನೇ ಆಧರಿಸಿ ಮುನ್ನಾಭಾಯಿ ಹೇಳುವ ಎರಡು ಆವೃತ್ತಿಯ ಸಿನೆಮಾವನ್ನೂ ಮಾಡಿದವು. ಆ ಸಿನೆಮಾ ಒಳ್ಳೆ ಮನರಂಜನೆ ಕೊಟ್ಟು, ಗಾಂಧಿಯ ನೆಂಪು ಮರುಕಳಿಸುವ ಹಾಂಗೆ ಮಾಡಿತ್ತೇ ಹೊರತು ಬೇರೆಂತ ಪ್ರಯೋಜನ ಆಯಿದಿಲ್ಲೆ. ತತ್ಕಾಲದ ಯಾವ ಗಹನವಾದ ಪ್ರಶ್ನೆಗೊಕ್ಕೂ ಅದಲ್ಲಿ ಉತ್ತರ ಸಿಕ್ಕುತ್ತಿಲ್ಲೆ. ಉದಾಹರಣೆಗೆ, ಜಗತ್ತಿನ ಎಲ್ಲೆಡೆ ಹಿಂಸೆ ತಾಂಡವ ಆಡ್ತಾ ಇಪ್ಪ ಈ ಸಂದರ್ಭಲ್ಲಿ ಗಾಂಧಿ ಬದುಕ್ಕಿತ್ತಿದ್ದರೆ ಎಂತ ಮಾಡ್ತೀತ ? ಪಾಕಿಸ್ತಾನದವು ಎಷ್ಟು ಕೆಣಕಿದರೂ ನಮ್ಮ ಸರಕಾರ ತಾಳ್ಮೆ ವಹಿಸಿಗೊಂಡೇ ಬಂದರೂ, ಮತ್ತೆ ಮತ್ತೆ ಕಾಲು ಕೆದರಿ ಜಗಳಕ್ಕೆ ಬಪ್ಪ ಈ ನೆರೆಕರೆಯ ಪೀಡೆಯ ಬಗ್ಗೆ ಬೇರೆ ಯಾವ ನಮುನೆಯ ಧೋರಣೆ ಸಮರ್ಪಕ ಅಕ್ಕು ? ಅಖೇರಿಗೆ ತಡವಲೆಡಿಯದ್ದೆ ಪ್ರತೀಕಾರವಾಗಿ ನಾವುದೇ ಹಿಂಸೆಯನ್ನೇ ಕೈಗೆತ್ತಿಗೊಂಬ ಹಾಂಗೆ ಆದರೆ, ಇಷ್ಟು ದಿನ ಪಾಲಿಸಿದ ಅಹಿಂಸಾವಾದಂದ ಎಂತ ಪುರುಷಾರ್ಥ ದಕ್ಕಿದ ಹಾಂಗಾತು ?
ಅಹಿಂಸೆ ಹೇಳುದು ಒಂದು ಸೈದ್ಧಾಂತಿಕ ಮನೋಭಾವವಾದರೆ, ಹಿಂಸೆ ಹೇಳುದು ಪ್ರವೃತ್ತಿ ಅಥವಾ ಚಟವಾಗಿ ತೋರುತ್ತು. ಅಹಿಂಸೆಯ ಹಿಂದೆ ವಿವೇಕ ಇದ್ದರೆ, ಹಿಂಸೆಯ ಹಿಂದೆ ತಿಳಿಗೇಡಿತನ ಇದ್ದು. ಆದರೆ, ಅಹಿಂಸೆ ಹೇಳುದು ಹೇಡಿತನದ ಮುಖವಾಡವಾಗಿ ಕಂಡರೆ ಅಲ್ಲಿ ಹಿಂಸೆಯ ಕೈ ಮೇಲಾವುತ್ತು. ಹಾಂಗಾರೆ, ನಮ್ಮ ಅಹಿಂಸಾವಾದ ನಿಜವಾಗಿ ಸಾರ್ಥಕ ಅಪ್ಪದು ಯಾವಾಗ ? ನಾವು ಸ್ವಂತ ಬಲಶಾಲಿಗಳಾಗಿದ್ದರೂ ಬೇರೆಯವರ ಮೇಲೆ ನಾವಾಗಿ ಆಕ್ರಮಣ ಮಾಡದ್ದಿಪ್ಪಗ. ಮತ್ತೆ ಸ್ವಂತ ಸ್ಥಿಮಿತವ ಕಳಕೊಳ್ಳದ್ದ ನಮುನೆಯ ಆಕ್ರಾಮಕ ಧೋರಣೆಯ ಮೂಲಕ ಹಿಂಸೆಯ ಪ್ರಚೋದಕರು ನಮ್ಮ ಮುಟ್ಟುವಂದ ಮದಲು ೧೦೦ ಸರ್ತಿ ಆಲೋಚನೆ ಮಾಡುವ ಹಾಂಗಿಪ್ಪ ಎಚ್ಚರಿಕೆಯ ಸಂದೇಶವ ಜಗತ್ತಿಂಗೆ ನಾವು ಕಾಲಕಾಲಕ್ಕೆ ಕೊಟ್ಟುಗೊಂಡು ಬಂದಪ್ಪಗ. ಈ ಸಂದರ್ಭಲ್ಲಿ ಚರಿತ್ರೆಯ ಒಂದು ವಿಷಯವ ಉಲ್ಲೇಖ ಮಾಡ್ತೆ. ಬೌದ್ಧ ಧರ್ಮ ಪ್ರಸಾರ ಆದ ಪ್ರದೇಶದವೆಲ್ಲಾ ತಮ್ಮ ಮೊದಲಾಣ ಸ್ವಾಭಾವಿಕವಾದ ಪ್ರತಿರೋಧ ಮತ್ತು ಹೋರಾಟದ ಮನೋಭಾವವ ಕಳಕ್ಕೊಂಡ ಕಾರಣ ಮೊದಲು ಸುಭದ್ರವಾಗಿತ್ತ ಹಲವು ಸಂಸ್ಥಾನಂಗೊ ಪರಕೀಯರ ಆಕ್ರಮಣಕ್ಕೆ ಬಲಿಯಾಗಿ ನಾಶ ಆದವು ಹೇಳುವ ವಿಷಯವ ಯಾರೋ ಇತಿಹಾಸತಜ್ಞರು ವಿಮರ್ಶೆ ಮಾಡಿದ್ದರ ಓದಿದ ನೆಂಪು ಆವುತ್ತಾ ಇದ್ದು. ಇದಲ್ಲಿ ಎಲ್ಲೋರೂ ಕಲಿಯೆಕ್ಕಾದ ಒಂದು ಪಾಠ ಇದ್ದು ಹೇಳಿ ಎನಗೆ ಕಾಣ್ತು.
ನಮ್ಮ ದೇಶಲ್ಲಿ ಅಸಮರ್ಥ ಸರಕಾರ, ಅದಕ್ಷ ಆರಕ್ಷಕ ಇಲಾಖೆ, ರಾಷ್ಟ್ರೀಯ ಭದ್ರತೆಯ ವಿಷಯಲ್ಲಿಯೂ ಒಗ್ಗಟ್ಟಿಂದ ವರ್ತಿಸಲೆಡಿಯದ್ದ ಸ್ವಾರ್ಥಿ ರಾಜಕಾರಣಿಗೊ, ಛಿದ್ರವಾದ ಗಡಿಪ್ರದೇಶದ ಬೇಲಿ - ಇಷ್ಟೆಲ್ಲಾ ಮಡಿಕ್ಕೊಂಡು ಅಹಿಂಸಾವಾದದ ಮಾತಾಡಿದರೆ ಎಲ್ಲಿಗೆ ಉದ್ಧಾರ ಅಪ್ಪದು ?
- ಬಾಪಿ/ ನವೆಂಬ್ರ ೩೦, ೨೦೦೯
No comments:
Post a Comment