ಆಂಧ್ರಪ್ರದೇಶವ ಎರಡು ತುಂಡು ಮಾಡಿ ತೆಲಂಗಾನ ಹೇಳುವ ಹೆಸರಿನ ಹೊಸ ರಾಜ್ಯ ಸ್ಥಾಪನೆ ಮಾಡೆಕ್ಕು ಹೇಳುವ ಬೇಡಿಕೆ ಮತ್ತು ಬೊಬ್ಬೆ ಕೆಲವು ದಿನಂದ ತಾರಕಕ್ಕೆ ಏರಿದ್ದು. ಇದರೊಟ್ಟಿಂಗೇ ಮೊದಲಿಂದಲೇ ಇತ್ತ ಇನ್ನೂ ಕೆಲವು ಪ್ರತ್ಯೇಕ ರಾಜ್ಯಂಗಳ ಬೇಡಿಕೆಗೊಕ್ಕೂ ಹೊಸ ಜೀವ ಬಂದು, ಭಾರತದ ಭೂಪಟದ ದೃಶ್ಯವೇ ಸಂಪೂರ್ಣ ಬದಲಪ್ಪ ಸಾಧ್ಯತೆ ಕಾಣ್ತಾ ಇದ್ದು. ಮೊದಲೇ ಧರ್ಮ, ಜಾತಿಗಳ ಬಾಹುಳ್ಯ ಇಪ್ಪ ನಮ್ಮ ದೇಶಲ್ಲಿ ಭಾಷಾವಾರು ಪ್ರಾಂತ್ಯಂಗಳ ನಿರ್ಮಾಣ ಮಾಡಿ ನಮ್ಮ ರಾಜಕೀಯ ನಾಯಕರು ಗೊಂದಲವ ಇನ್ನೂ ಜಾಸ್ತಿ ಮಾಡಿದವು ಹೇಳುವ ಆರೋಪದ ಬಗ್ಗೆ ಚರ್ಚೆ ಯಾವಾಗಳೂ ನಡೆತ್ತಲೇ ಬೈಂದು. ಅಂತೂ, ನಮ್ಮ ದೇಶದ ಭಾಷೆಗೊ ಜನಂಗಳ ಮಧ್ಯೆ ಸಂವಹನದ ಮಾಧ್ಯಮವಾಗಿ ಉಳಿವ ಬದಲು, ಪರಕೀಯತೆಯ ಭಾವನೆಯ ಸೃಷ್ಟಿ ಮಾಡಿದ್ದಂತೂ ಸತ್ಯ. ಕಾಸರಗೋಡು, ಬೆಳಗಾವಿ ಹಾಂಗಿಪ್ಪ ಗಡಿ ಪ್ರದೇಶಂಗಳಲ್ಲಿ ಪರಸ್ಪರ ಭಾಷಾ ವೈಷಮ್ಯ ಯಾವಾಗಳೂ ಹೊಗೆ ಆಡ್ತಾ ಇಪ್ಪದು ಇದರ ಸಣ್ಣ ನಮೂನೆ ಅಷ್ಟೆ. ಸ್ವಾತಂತ್ರ್ಯ ಪೂರ್ವಲ್ಲಿ ಇಡೀ ದೇಶವೇ ಹೆಮ್ಮೆ ಪಟ್ಟ ಯೋಧರ, ನಾಯಕರ ತಾಣವಾಗಿತ್ತ ಮಹಾರಾಷ್ಟ್ರ, ಇಂದು ಕೀಳು ಮಟ್ಟದ ಭಾಷಾ ರಾಜಕಾರಣದ ಮುಂಚೂಣಿಲಿದ್ದು. ಅಮೇರಿಕಾದ ಭೂಪಟದ ಹಾಂಗೆ, ಸರ್ತ ಗೀಟು ಹಾಕಿ ತುಂಡು ಮಾಡಿದ ಹಲ್ವಾದ ತುಂಡುಗಳ ಹಾಂಗೆ ಕಾಂಬ ರಾಜ್ಯಂಗಳ ನಮ್ಮಲ್ಲಿಯೂ ಸೃಷ್ಟಿ ಮಾಡಿದ್ದರೆ ಹೇಂಗಿರ್ತೀತು ?
ತೆಲಂಗಾನದ ವಿಷಯಲ್ಲಿ ಇಪ್ಪ ಒಂದು ವ್ಯತ್ಯಾಸ ಎಂತ ಹೇಳಿರೆ, ಇದು ಭಾಷೆಯ ತಕರಾರು ಅಲ್ಲ. ಹಾಂಗೆ ಹೇಳಿ ದೊಡ್ದ ದೂರದೃಷ್ಟಿಯ ಚಿಂತನೆಯ ಆಧರಿಸಿದ ಆಂದೋಳನವೂ ಅಲ್ಲ. ನಿಜ ಹೇಳ್ತರೆ, ಅವಭಿಜಿತ ಆಂಧ್ರದ ಸರಕಾರಲ್ಲಿ ಪಶು ಸಂಗೋಪನಾ ಸಚಿವ ಅಪ್ಪಲೂ ಯೋಗ್ಯತೆ ಇಲ್ಲದ್ದ ವ್ಯಕ್ತಿ ಒಬ್ಬ ತೆಲಂಗಾನ ಹೇಳುವ ಪ್ರತ್ಯೇಕ ರಾಜ್ಯ ಆದರೆ, ತಾನೇ ಮುಖ್ಯಮಂತ್ರಿ ಅಪ್ಪಲಕ್ಕು ಹೇಳುವ ಸ್ವಾರ್ಥಂದ ಸುರು ಮಾಡಿದ ಗಲಾಟೆಯ ಹಾಂಗೆ ಕಾಣ್ತು. ಆದರೂ, ನಮ್ಮ ದೇಶಲ್ಲಿ ಹೊಸ ಸಣ್ಣ ರಾಜ್ಯಂಗಳ ಸೃಷ್ಟಿ ಮಾಡುವ ವಾದಲ್ಲಿ ಹುರುಳು ಇದ್ದು ಹೇಳಿ ಎನ್ನ ಅಭಿಪ್ರಾಯ. ಒಟ್ಟಾರೆಯಾಗಿ, ನಮ್ಮ ಎಲ್ಲಾ ಸಮಸ್ಯೆಗಳ ತೀವ್ರತೆಯ ಹಿಂದೆಯೂ ನಮ್ಮ ಜನಸಂಖ್ಯೆಯೇ ಒಂದು ಸಾಮಾನ್ಯ ಆಂಶ ಆಗಿಪ್ಪದು ಸ್ಪಷ್ಟವಾಗಿ ಕಾಣ್ತು. ಇನ್ನೊಂದು ರೀತಿಲಿ ಹೇಳ್ತರೆ, ನಮ್ಮ ಮೊದ್ಳಾಣ ಅಜ್ಜಂದ್ರು ಸ್ವಂತಕ್ಕೆ ಇಪ್ಪ ಅರ್ಧ ಎಕ್ರೆ ತೋಟದ ಆಸ್ತಿಗೆ ೧೨ ಜನ ಮಕ್ಕಳ ದೊಡ್ಡ ಸಂತಾನವ ಸೃಷ್ಟಿ ಮಾಡಿ ಹಾಕಿ, ಯಾವ ಮಕ್ಕಳ ಮೇಲುದೇ ವಿಶೇಷ ಗಮನ ಕೊಡದ್ದೆ ಅವರವರಷ್ಟಕೇ ಬೆಳವಲೆ ಬಿಟ್ಟ ಹಾಂಗಿಪ್ಪ ಅ(ವ್ಯ)ವಸ್ಥೆ. ಭಾರತ ದೇಶದ ಭೂಪ್ರದೇಶದ ಒಟ್ಟು ವಿಸ್ತೀರ್ಣ (೧.೨ ಮಿಲಿಯ ಚದರ ಮೈಲು) ಅಮೇರಿಕಾದ ವಿಸ್ತೀರ್ಣ(೩.೫ ಮಿಲಿಯ ಚದರ ಮೈಲು)ದ ಕೇವಲ ೩೦% ಇಪ್ಪದಾದರೂ ನಮ್ಮ ಜನಸಂಖ್ಯೆ ೩.೫ ಪಟ್ಟು ಹೆಚ್ಚಿದ್ದು. ಹೇಳಿರೆ, ಇಲ್ಯಾಣ ಜನಸಾಂದ್ರತೆ ಅಮೇರಿಕಂದ ಸುಮಾರು ೧೦ ಪಟ್ಟು ಹೆಚ್ಚು. ಇನ್ನು ನಮ್ಮ ಮರುಭೂಮಿ, ಕಾಡು, ಗುಡ್ಡ ಪ್ರದೇಶಂಗಳ ಲೆಕ್ಕ ಬಿಟ್ರೆ, ಜನಸಾಂದ್ರತೆಯ ತೀವ್ರತೆ ಇನ್ನೂ ಹೆಚ್ಚಾವುತ್ತು. ಅಮೇರಿಕಾದ ರಾಜ್ಯಂಗಳ ಸರಾಸರಿ ಜನಸಂಖ್ಯೆ ೬೦ ಲಕ್ಷ ಆದರೆ, ನಮ್ಮದು ೩ ಕೋಟಿ ! ಅಲ್ಯಾಣ ಅತಿಹೆಚ್ಚು ಜನಸಂಖ್ಯೆ ಹೇಳಿರೆ ಕ್ಯಾಲಿಫೋರ್ನಿಯಾದ ೩.೫ ಕೋಟಿಯಾದರೆ, ನಮ್ಮ ಉತ್ತರಪ್ರದೇಶಲ್ಲಿ ೧೬ ಕೋಟಿ ಜನ ಇದ್ದವು. ನಮ್ಮ ಹಲವಾರು ಸಮಸ್ಯೆಗೊ ಉಲ್ಬಣ ಅಪ್ಪದು ಇದರಂದಾಗಿಯೇ ಹೇಳಿ ಧಾರಾಳ ಹೇಳ್ಳಕ್ಕು.
ಅಷ್ಟು ಹೆಚ್ಚು ಸಂಖ್ಯೆಯ ಸಾಕ್ಷರರು ಇಪ್ಪ ಮುಂದುವರಿದ ಸಮಾಜದ ವ್ಯವಸ್ಥೆಗೊ ಹೇಂಗೆ ನಡೆತ್ತಾ ಬಂದಿಕ್ಕು ಹೇಳಿ ತಿಳುಕ್ಕೊಂಬ ಉದ್ದೇಶಂದ ಅಮೇರಿಕಾದ ಹೋಲಿಕೆ ಮಾಡೆಕ್ಕಾಗಿ ಬಂತು. ನಮ್ಮಲ್ಲಿ ಅನಕ್ಷರತೆಂದ ಹಿಡುದು ಪ್ರತಿಯೊಂದು ಸಾಮಾಜಿಕ ಸಮಸ್ಯೆಯೂ ದೊಡ್ಡ ಪ್ರಮಾಣಲ್ಲಿ ಇಪ್ಪಗ, ಆದಷ್ಟು ಕಮ್ಮಿ ಜನರ ಮೇಲೆ ಗಮನ ಮತ್ತು ಶಕ್ತಿಗಳ ಕೇಂದ್ರೀಕರಿಸುಲೆ ಎಡಿಗಾದರೆ ಸುಲಭ ಅಕ್ಕು. ಗ್ರಾಮ ಪಂಚಾಯತುಗಳ ಸಬಲೀಕರಣದ ಹಿಂದೆ ಇಪ್ಪ ಚಿಂತನೆ ಇದೇ ಆದರೂ, ಆಯಾ ರಾಜ್ಯಂಗೊ ಆರ್ಥಿಕವಾಗಿ ಸುದೃಢ ಆಗದ್ರೆ, ಸ್ವಂತವಾಗಿ ಒಂದು ಸಣ್ಣ ತೋಡಿಂಗೆ ಸಂಕ ಕಟ್ಟುವ ಸಾಮರ್ಥ್ಯವೂ ಇಲ್ಲದ್ದ ಗ್ರಾಮ ಪಂಚಾಯತುಗೊಕ್ಕೆ ಎಂತ ಮಾಡ್ಳೆಡಿಗು ? ಈ ದೃಷ್ಟಿಂದ ನೋಡಿರೆ, ರಾಜ್ಯಂಗೊ ಸಣ್ಣ ಆದಷ್ಟೂ, ಕ್ಷೇತ್ರೀಯ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಹರಿಸಿ ಪರಿಹಾರ ಕಂಡುಗೊಂಡು ಬೇಗ ಉದ್ಧಾರ ಅಪ್ಪಲೆ ಸಾಧ್ಯ ಅಕ್ಕು ಹೇಳಿ ಕಾಣ್ತು. ಆದರೆ, ಇನ್ನು ಮುಂದೆ ಅಪ್ಪ ಯಾವ ರಾಜ್ಯಂಗಳ ಪುನರ್ವಿಭಜನೆಯೂ ಭಾಷೆ ಅಥವಾ ಜಾತಿಯ ಆಧಾರದ ಮೇಲೆ ಅಪ್ಪದರ ಬದಲು, ಭೌಗೋಳಿಕ ಮತ್ತು ಆರ್ಥಿಕ ಸ್ವಾವಲಂಬನೆಯ ಮಾನದಂಡಂದ ಆದರೆ ದೇಶದ ಭವಿಷ್ಯದ ದೃಷ್ಟಿಂದ ಒಳ್ಳೆದು.
-ಬಾಪಿ/ ದಶಂಬ್ರ ೨೦, ೨೦೦೯
No comments:
Post a Comment