ಜಗತ್ತಿನ ಬೇರೆ ಬೇರೆ ದೇಶಂಗಳಲ್ಲಿಪ್ಪ ವಿವಿಧ ರಾಜಕೀಯ ವ್ಯವಸ್ಥೆಗಳಲ್ಲಿ ಪ್ರಜಾಪ್ರಭುತ್ವವೇ ಶ್ರೇಷ್ಠ ಹೇಳುದು ಸಾಮಾನ್ಯ ನಂಬಿಕೆ. ಇಲ್ಲಿ ಪ್ರಜೆಗಳೇ ಅವರವರ ಪ್ರತಿನಿಧಿಗಳ ಆಯ್ಕೆ ಮಾಡುವ ಕಾರಣ ತಮಗೆ ತಾವೇ ಧನಿಗೊ ಹೇಳುವ ವಾದ. ನಮ್ಮದು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಹೇಳುವ ಹೆಗ್ಗಳಿಕೆ ಬೇರೆ ಭಾರತೀಯರಾದ ನವಗಿದ್ದು.
ಪ್ರಜಾಪ್ರಭುತ್ವ ಹೇಳುದು ಬಹುಮತದ ಆಧಾರದ ಮೇಲೆ ನಡವ ವ್ಯವಸ್ಥೆ ಆದ ಕಾರಣ, ಇಲ್ಲಿ ಚುನಾವಣೆ ಒಂದು ಮಾಮೂಲು ಪ್ರಕ್ರಿಯೆ. ಇದರಿಂದಾಗಿ ಮತದಾನಕ್ಕೆ ಅಮೂಲ್ಯವಾದ ಮೂಲಭೂತ ಹಕ್ಕು ಹೇಳುವ ಹೆಸರು ಬಂತು. ಚುನಾವಣೆಲಿ ನಮ್ಮ ಮತಂಗಳ ಅತಿ ಯೋಗ್ಯ (ಇಪ್ಪವರಲ್ಲಿ) ಪ್ರತಿನಿಧಿಗೆ ಕೊಡೆಕ್ಕಾದ್ದು ಪ್ರಜೆಗಳ ಕರ್ತವ್ಯ. ಆದರೆ, ಮತಂಗಳ ಮಾರಾಟ ಅಥವಾ ಖರೀದಿ ಆದರೆ, ಪ್ರಜಾಪ್ರಭುತ್ವ ಕಂಗಾಲಾವುತ್ತು. ನಮ್ಮ ದೇಶದ ಪ್ರಜಾಪ್ರಭುತ್ವಕ್ಕೆ ಹೀಂಗಿಪ್ಪ ಒಂದು ಕಪ್ಪು ಚುಕ್ಕೆ ಇದ್ದು. ಸಮಾಜಲ್ಲಿ ವ್ಯಾಪಕವಾಗಿಪ್ಪ ಭ್ರಷ್ಟಾಚಾರದ ಪಿಡುಗು ಚುನಾವಣೆಯನ್ನೂ ಬಿಟ್ಟಿದಿಲ್ಲೆ. ಕಾಲಕ್ರಮೇಣ ಚುನಾವಣೆಗೆ ಒಂದು "ವ್ಯವಹಾರದ" ದೃಷ್ಟಿಕೋನ ಬಂತು. "ಎಷ್ಟು ಪೈಸೆ ಭಂಡವಾಳ ಹಾಕಿರೆ ಎಷ್ಟು ತೆಗವಲಕ್ಕು" ಹೇಳುವ ಲೆಕ್ಕಾಚಾರ ಸುರುವಾತು. ಮತದಾರರ ಮುಗ್ಧತೆಯ ದುರುಪಯೋಗ ಪಡಿಸಿಗೊಂಡು ರಾಜಕಾರಣಿಗೊ ಬರೀ ಆಶ್ವಾಸನೆ ಮಾತ್ರ ಕೊಟ್ಟು ಬದುಕ್ಕುದು ಕಲ್ತುಗೊಂಡವು. ತಿರುಗ ಚುನಾವಣೆ ಬಪ್ಪಗ ಇನ್ನೊಂದೆಂತಾರೂ ನಾಟಕ ಮಾಡುವ ಅಥವಾ ಪಕ್ಷ ಬದಲಿಸಿ ಚುನಾವಣೆಯ ಕಣಕ್ಕಿಳಿವ ವಿದ್ಯೆಲಿ ಪಳಗಿದವು. ಎಷ್ಟೋ ವರ್ಷ "ಪೆತ್ತ ಕಂಜಿ" ಚುನಾವಣಾ ಚಿಹ್ನೆ ಆಗಿತ್ತ ಒಂದು ಪಕ್ಷದವು ಮಾಡಿಗೊಂಡು ಬಂದದು ಇದನ್ನೇ. ಒಟ್ಟಾರೆ ಗೆದ್ದರೆ ಆತನ್ನೆ ? ನಿಜವಾಗಿ ಹೇಳ್ತರೆ, ನಮ್ಮ ಸಂಸತ್ತಿಲ್ಲಿ ಅರ್ಹ ಪ್ರತಿನಿಧಿಗೊ ಹೇಳಿಸಿಗೊಂಬವು ಕಾಂಬಲೆ ಸಿಕ್ಕುದು ಅಪರೂಪ. ಒಟ್ಟಾರೆ, ಒಂದು ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಿ ನಡೆಯಕ್ಕಾದರೆ ಅಲ್ಲಿಯ ಪ್ರಜೆಗೊ ಪ್ರಬುದ್ಧರಾಗಿರೆಕು. ಇದಕ್ಕೆ ಕನಿಷ್ಠ ವಿದ್ಯಾಭ್ಯಾಸ ಹೊಂದಿಪ್ಪ ಸಂಪೂರ್ಣ ಸಾಕ್ಷರ ಸಮಾಜ ಇರೆಕು.
ಹೀಂಗಿದ್ದರೂ ನಮ್ಮಲ್ಲಿ ಪ್ರಜಾಪ್ರಭುತ್ವ ಬೆಳೆಯದ್ರೂ ಉಳುಕ್ಕೊಂಡು ಬೈಂದು. ಇದಕ್ಕೆ ಒಂದು ಮುಖ್ಯ ಕಾರಣ ಹೇಳಿರೆ, ಸಂವಿಧಾನದ ಉಳಿದ ಎರಡು ಅಂಗಂಗೊ - ನ್ಯಾಯಾಂಗ ಮತ್ತು ಕಾರ್ಯಾಂಗ - ರಜ ಆದರೂ ಸರಿಯಾಗಿ ಕೆಲಸ ಮಾಡ್ತಾ ಇಪ್ಪದು. ಇನ್ನೊಂದು ಕಾರಣ ಹೇಳಿರೆ, ನಮ್ಮ ಸೈನ್ಯದವರ ವಿಧೇಯತೆ. ಅವು ತಮ್ಮ ಕೆಲಸದ ಹೊರತಾಗಿ ರಾಜಕೀಯ ಅಧಿಕಾರದ ಕುರ್ಚಿಗೆ ಕಣ್ಣು ಹಾಕಿದ್ದವಿಲ್ಲೆ. ಇಲ್ಲದ್ರೆ, ನಮ್ಮಲ್ಲಿಪ್ಪ ಅವ್ಯವಸ್ಥೆಯ ನೋಡಿರೆ ನಮ್ಮ ನೆರೆಕರೆಯವರ ಹಾಂಗೆ ಇಲ್ಲಿಯೂ ಯಾವಾಗಳೇ ಮಿಲಿಟ್ರಿ ಆಢಳಿತ ಬರೆಕಾಗಿತ್ತು. ನಾವೇ ಸುಮಾರು ಸರ್ತಿ ಹತಾಶರಾಗಿ ನಮ್ಮೊಳಾಣ ಅಸಹಾಯಕತೆಯ ಹೆರಹಾಕುಲೆ "ನವಗೆ ಮಿಲಿಟ್ರಿ ಆಢಳಿತವೇ ಸರಿ" ಅಥವಾ "ಬ್ರಿಟಿಷರ ಆಳ್ವಿಕೆಯ ಕಾಲವೇ ಎಷ್ಟೋ ವಾಸಿ ಇತ್ತಡ" ಇತ್ಯಾದಿಯಾಗಿ ಹೇಳಿಗೊಂಡಿಕ್ಕು. ಅಂಬಗಾಣ ಸೇನಾಧಿಪತಿಯಾಗಿತ್ತ ಮಾಣಿಕ್ ಶಾಂಗೆ ಇತ್ತ ತಥಾಕಥಿತ ರಾಜಕೀಯದ ಮಹತ್ವಾಕಾಂಕ್ಷೆಗೆ ಸಂಬಂಧಿಸಿದ ಅನುಮಾನಂದಾಗಿಯೇ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದ್ದದು ಹೇಳುವ ಶುದ್ದಿ ಒಂದು ಕೆಟ್ಟ ಕಾರ್ಯವ ಸಮರ್ಥಿಸಿಗೊಂಬಲೆ ಹುಟ್ಟುಹಾಕಿದ ಲೊಟ್ಟೆ ಹೇಳಿಯೇ ಎನ್ನ ನಂಬಿಕೆ.
ಚುನಾವಣೆಯ ವಿಷಯ ಬಪ್ಪಗ ಟಿ.ಯನ್.ಶೇಷನ್ ಹೇಳುವ ವ್ಯಂಗ್ಯ ಚಿತ್ರಕಾರರಿಂಗೆ ಸ್ಪೂರ್ತಿ ಕೊಡ್ಳೆ ಹೇಳಿಯೇ ಹುಟ್ಟಿದನೋ ಹೇಳಿ ಕಾಂಬ ಹಾಂಗಿತ್ತ ಡೊಳ್ಳು ಹೊಟ್ಟೆಯ, ಬೋಳು ತಲೆಯ ಭೂತಪೂರ್ವ ಚುನಾವಣಾ ಆಯುಕ್ತನ ಬಗ್ಗೆ ರಜ ಮಾತಾಡದ್ರೆ ಆಗ. ಇವಂದು ಕಾರ್ಯಾಂಗದ ಕುರ್ಚಿಗೆ ಹೇಳಿ ಮಾಡಿಸಿದ ಹಾಂಗಿಪ್ಪ ವ್ಯಕ್ತಿತ್ವ. (ಕುರ್ಚಿಯನ್ನೇ ಇವನ ಅಳತೆಗೆ ಪ್ರತ್ಯೇಕ ತಯಾರಿಸೆಕ್ಕಾಗಿ ಬಂತು ಹೇಳುವ ಕುಚೇಷ್ಟೆಯ ಶುದ್ದಿಯೂ ಇದ್ದು). ಇವಂದಾಗಿ ಚುನಾವಣಾ ಆಯೋಗ ಹೇಳುವ ಒಂದು ಸಂಸ್ಥೆ ಅಸ್ತಿತ್ವಲ್ಲಿ ಇದ್ದು ಹೇಳುದು ಸಾರ್ವಜನಿಕರಿಂಗೆ ಗೊಂತಪ್ಪ ಹಾಂಗೆ ಆತು. ಆಯೋಗದ ಮತ್ತು ಆಯುಕ್ತನ ಅಧಿಕಾರಂಗಳ ಪ್ರಭಾವಶಾಲಿಯಾಗಿ ಉಪಯೋಗಿಸಿದ. ಹೊತ್ತಲ್ಲದ್ದ ಹೊತ್ತಿಲ್ಲಿ ಮೈಕದ ಅಬ್ಬರ, ಸಿಕ್ಕಿದಲ್ಲಿ ಪೂರಾ ಕಾಂಬ ಪೋಸ್ಟರುಗಳ ಹಾವಳಿಗೊಕ್ಕೆ ಸುಮಾರು ಕಡಿವಾಣ ಹಾಕಿದ. ಪ್ರಚಾರದ ಸಮಯಲ್ಲಿ ನೀತಿ ಸಂಹಿತೆಯ ಉಲ್ಲಂಘಿಸಿದವರ ಮೇಲೆ ಎಡಿಗಾದಷ್ಟು ಕ್ರಮ ತೆಕ್ಕೊಂಡ. ಒಟ್ಟಾರೆ ಚುನಾವಣೆಗೊ ತಕ್ಕಮಟ್ಟಿಂಗೆ ನಿಷ್ಪಕ್ಷ, ನಿಯಂತ್ರಿತ ಕಾರ್ಯಕ್ರಮ ಹೇಳಿ ಕಾಂಬ ಹಾಂಗಿಪ್ಪ ವ್ಯವಸ್ಥೆಗಳ ಜ್ಯಾರಿ ಮಾಡಿದ. ಎಲ್ಲಕ್ಕಿಂತ ಹೆಚ್ಚಾಗಿ, ನಂತರ ಬಂದ ಆಯುಕ್ತಂಗೊಕ್ಕೂ ಇವನ ಕಾರ್ಯಕ್ಷಮತೆಯ ಮಾನದಂಡವ ಉಳಿಸಿಗೊಂಬ ಒಂದು ಮುಖ್ಯ ಹೊಣೆಗಾರಿಕೆಯ ವಹಿಸಿಕ್ಕಿ ಹೋದ. ಕೊನೆಗೆ ನಿವೃತ್ತನಾಗಿ ಸುಮಾರು ವರ್ಷ ಮನೆಲೇ ಕೂದುಗೊಂಡಿತ್ತವ ರಾಜಕೀಯವಾಗಿ ಸಕ್ರಿಯನಾಗಿ ಅಡ್ವಾಣಿಯ ಎದುರು ಕೋಂಗ್ರೇಸು ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತ. ಇವಂಗೆ ಹೀಂಗಿಪ್ಪ ದುರ್ಬುದ್ಧಿ ಬಾರದ್ದೆ ಇತ್ತಿದ್ದರೆ, ಒಳ್ಳೆಯ ಕೆಲಸ ಮಾಡಿ ಸಂಪಾದಿಸಿದ ವರ್ಚಸ್ಸಿನ ಉಳಿಸಿಗೊಂಬಲೆ ರಜ ಸುಲಭ ಆವುತ್ತೀತು !
ಇನ್ನು ಸದ್ಯಕ್ಕೆ ಚುನಾವಣೆಗೊ ಎಲ್ಲಿಯೂ ಇಲ್ಲೆ. ಆದರೂ, ಈ ವಿಷಯಲ್ಲಿ ಇತ್ತೀಚೆಗೆ ಒಂದು ಸಕಾರತ್ಮಕ ಶುದ್ದಿ ಕೇಳಿ ಬೈಂದು. ಅದೆಂತ ಹೇಳಿರೆ, ಗುಜರಾತಿಲ್ಲಿ ಮತದಾನವ ಖಡ್ಡಾಯ ಮಾಡುವ ವಿಷಯ. ಇದು ಕಳೆದ ಸುಮಾರು ೧೦ ವರ್ಷಂದ ನಮ್ಮ ದೇಶಲ್ಲಿ ಕಂಡು ಬಂದ ಅನುಕರಣೀಯ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಸುಧಾರಣೆಗಳ ಕೇಂದ್ರ ಬಿಂದುವಾಗಿಪ್ಪ ನರೇಂದ್ರ ಮೋದಿಯ ಚಿಂತನೆಯ ಫಲ. ನಮ್ಮ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಯಾವಾಗಳೂ ೫೦ ರಿಂದ ೬೦% ಅಷ್ಟೇ ಇರ್ತಷ್ಟೆ. ಇದರಲ್ಲಿ ಎಂತ ವಿಶೇಷ ಇಲ್ಲೆ. ಅಮೇರಿಕಾದ ಚುನಾವಣೆಗಳಲ್ಲಿಯುದೇ ಇಷ್ಟೇ ಮತದಾನ ಅಪ್ಪದು. ಆದರೆ, ಅಲ್ಲಿ ೧೦೦% ಅಕ್ಷರಸ್ಥರು ಇಪ್ಪ ಕಾರಣ, ಉಳಿದವು ಎಲ್ಲೋರೂ ಮತದಾನ ಮಾಡಿರೂ ಫಲಿತಾಂಶಲ್ಲಿ ಎಂತ ವಿಶೇಷ ವ್ಯತ್ಯಾಸ ಆಗ. ಆದರೆ, ನಮ್ಮ ದೇಶಲ್ಲಿಪ್ಪ ೫೦% ಅನಕ್ಷರಸ್ಥಲ್ಲಿ ಹೆಚ್ಚು ಕಮ್ಮಿ ಎಲ್ಲೋರೂ ಮತದಾನ ಮಾಡ್ತವು. ಹೇಳಿರೆ, ಅಕ್ಷರಸ್ಥರಲ್ಲಿ ಕೇವಲ ೧೦% ಮಾಂತ್ರ ಮತದಾನ ಮಾಡುದು ಹೇಳಿದ ಹಾಂಗಾತು ! ಅನಕ್ಷರಸ್ಥರೆಲ್ಲಾ ಬೆಗುಡಂಗೊ ಹೇಳುವ ತಾತ್ಪರ್ಯ ಅಲ್ಲ. ಆದರೆ, ದೈನಂದಿನ ಬವಣೆಂದ ಸೋತು ಹೋದಿಪ್ಪ ಅವರ ಕೇವಲ ತತ್ಕಾಲದ ಪರಿಹಾರಂಗಳಿಂದ ಅಥವಾ ಆಮಿಶಂಗಳಿಂದ ಪ್ರೇರೇಪಿಸಿ ಮತ ಗಿಟ್ಟಿಸಿಗೊಂಬ ಸಾಧ್ಯತೆ ಹೆಚ್ಚಿದ್ದು. ಉದಾಹರಣೆಗೆ, ಉಚಿತ ವಿದ್ಯುತ್ ಅಥವಾ ಕಿಲೋವಿಂಗೆ ೧ ರುಪಾಯಿಗೆ ಅಕ್ಕಿ ಕೊಡ್ತೆಯೋ ಹೇಳುವ ಆಶ್ವಾಸನೆಂದ ಅವು ಬಹುತೇಕ ಪ್ರಭಾವಿತರಕ್ಕು. ಅರ್ಥ ವ್ಯವಸ್ಥೆಯ ಮೇಲೆ ಇದರಿಂದ ಅಪ್ಪ ಕೆಟ್ಟ ಪರಿಣಾಮಂಗಳ ಬಗ್ಗೆ ಯೋಚಿಸುವಷ್ಟು ಅವಕ್ಕೆ ಗೊಂತಿರ್ತಿಲ್ಲೆ. ಅದೇ, ಹೆಚ್ಚು ವಿಷಯಜ್ಞಾನ ಮತ್ತು ಲೋಕಜ್ಞಾನ ಇಪ್ಪ ವಿದ್ಯಾವಂತರಿಂಗಾದರೆ ದೂರದೃಷ್ಟಿಂದ ಯೋಚನೆ ಮಾಡ್ಳೆಡಿತ್ತು. ಆದರೆ, ಸುಶಿಕ್ಷಿತರಿಂಗೆ ಟಿವಿಯ ಚರ್ಚೆಗಳಲ್ಲಿ ಭಾಗವಹಿಸಿ ದೇಶಲ್ಲಿ ಎಂತಲ್ಲಾ ಸರಿ ಇಲ್ಲೆ ಹೇಳಿ ಬೊಬ್ಬೆ ಮಾಡುದು ಬಿಟ್ರೆ, ಮತ ಚಲಾಯಿಸುವ ಕರ್ತವ್ಯದ ಬಗ್ಗೆ ನೆಂಪು ಇರ್ತಿಲ್ಲೆ. ಚುನಾವಣೆಯ ದಿನ ಇಪ್ಪ ಸಾರ್ವಜನಿಕ ರಜೆಯ ಶಾರುಕ್ ಖಾನ್ ನ ಸಿನೆಮ ನೋಡಿ ಸದುಪಯೋಗ ಪಡಿಸಿಗೊಳ್ತವೇ ಹೊರತು, ಮತಗಟ್ಟೆಗೆ ಹೋವುತ್ತವಿಲ್ಲೆ. ಹಾಂಗಾಗಿ ಮತದಾನವ ಖಡ್ಡಾಯ ಹೇಳಿ ಮಾಡುದು ಒಂದು ಒಳ್ಳೆ ಬೆಳವಣಿಗೆ ಹೇಳಿ ಕಾಣ್ತು.
ನರೇಂದ್ರ ಮೋದಿಯ ಚಿಂತನೆಗೆ ಜನರ ಅನಕ್ಷರತೆಯನ್ನೇ ರಾಜಕೀಯ ಭಂಡವಾಳವಾಗಿ ಮಾಡಿಗೊಂಡಿಪ್ಪ ಲಾಲೂವಿನ ಹಾಂಗಿಪ್ಪವರ ಸಮರ್ಥನೆ ಸಿಕ್ಕಿದ್ದು ಪರಮಾಶ್ಚರ್ಯದ ಸಂಗತಿ ! ಹಾಂಗಾಗಿ ಇದು ರಾಷ್ಟ್ರವ್ಯಾಪಿಯಾದ ಬದಲಾವಣೆಗೆ ನಾಂದಿ ಆದರೆ, ಮೋದಿಯ ಪ್ರಯತ್ನ ಸಾರ್ಥಕ.
-ಬಾಪಿ/ ಜನವರಿ ೬, ೨೦೧೦
No comments:
Post a Comment