Wednesday, March 18, 2009

ತೃತೀಯ ರಂಗ

ಈ ಸರ್ತಿಯ  ಚುನಾವಣೆಲಿ ಪ್ರಕೃತ ಅತ್ಯಂತ ಹೆಚ್ಚು ಗೌಜಿ ಮಾಡ್ತಾ ಇಪ್ಪ ತೃತೀಯ ರಂಗದ ಬಗ್ಗೆ ರಜ ಮಾತಾಡದ್ರೆ ಹೇಂಗೆ ?

ಕಾಂಗ್ರೆಸು ಮತ್ತು ಭಾಜಪ ಮೈತ್ರಿಕೂಟಂಗೊಕ್ಕೂ ಇವಕ್ಕೂ ಇಪ್ಪ ಮುಖ್ಯ ವ್ಯತ್ಯಾಸ ಹೇಳಿರೆ, ಈ ರಂಗಲ್ಲಿ ಯಾವುದೇ ನಿಜವಾದ ರಾಷ್ಟ್ರೀಯ ಪಕ್ಷಂಗೊ ಇಲ್ಲದ್ದಿಪ್ಪದು.  ನಿಜ ಹೇಳ್ತರೆ,  ಸ್ವಂತವಾಗಿ ತಮ್ಮ ತಮ್ಮ ರಾಜ್ಯಂಗಳ ಬಿಟ್ಟು ಹೊರ ರಾಜ್ಯಂಗಳಲ್ಲಿ ಯಾವುದೇ ಅಸ್ತಿತ್ವ ಇಲ್ಲದ್ದ  ಪಕ್ಷಂಗೊ  ಒಬ್ಬನ ಬೆನ್ನು ಇನ್ನೊಬ್ಬ ತಟ್ಟಿಗೊಂಬಲೆ ಮಾಡಿಗೊಂಡ ವ್ಯವಸ್ಥೆಯೇ ಈ ತೃತೀಯ ರಂಗ.   ಕುಂಟನೂ ಕುರುಡನೂ ಸೇರಿ ಹೊಳೆ ದಾಂಟಿದ ಹಾಂಗೆ.  ಇದರಲ್ಲಿ ಎಷ್ಟು ಪಕ್ಷಂಗೊ ಇದ್ದೋ,  ಅಷ್ಟೇ ಪ್ರಧಾನಿ ಸ್ಥಾನದ ಆಕಾಂಕ್ಷಿಗಳೂ ಇಪ್ಪದು ಇವರ ಹೆಗ್ಗಳಿಕೆಯೂ ಅಪ್ಪು, ದೌರ್ಬಲ್ಯವೂ ಅಪ್ಪು. ಉತ್ತರದ ದೂಮಾವತಿ, ದಕ್ಷಿಣದ ಬೆರ್ಚಪ್ಪ ಗೌಡ, ಪೂರ್ವದ ಕತ್ತಿಮುಟ್ಟಿಗೊ - ಹೀಂಗೆ ಪರಸ್ಪರ ಯಾವುದೇ ಸಂಬಂಧ ಇಲ್ಲದ್ದವೆಲ್ಲ  ಒಟ್ಟಿಂಗೆ  ಸೇರಿದ್ದು ನೋಡಿದರೆ,  ಧರ್ಮಸ್ಥಳದ ಸಾಮೂಹಿಕ ಮದುವೆಯ ಭಾವಚಿತ್ರ ನೋಡಿದ ಅನುಭವ  ಆವುತ್ತು !   

ತೃತೀಯ ರಂಗ ಉದ್ಭವ ಆದ್ದದು ಭಾಜಪಕ್ಕೆ ಶುಭಸೂಚನೆ ಹೇಳಿ ಎನ್ನ ಅನಿಸಿಕೆ.  ಎಂತ ಹೇಳಿದರೆ, ಇಡೀ ಭಾರತದ ಮತದಾರರಲ್ಲಿ  ಎರಡೇ ವಿಧ - ಭಾಜಪ ಪರ ಮತ್ತು ವಿರೋಧ. ಭಾಜಪ ವಿರೋಧಿ ಮತಂಗೊ ಹಂಚಿ ಹೋದಷ್ಟು ಒಳ್ಳೆದೇ !  ಇಷ್ಟರ ವರೆಗೆ ಪ್ರಬಲವಾದ ತೃತೀಯ ರಂಗ ಇಲ್ಲದ್ದೆ, ಕಾಂಗ್ರೆಸು ಮತ್ತು ಭಾಜಪದ ಮಧ್ಯೆ ನೇರ ಸ್ಪರ್ಧೆ ಇಪ್ಪಲ್ಲಿ ಕೆಲವು ಕಡೆ - ಹೇಳಿರೆ, ಅಲ್ಪ ಸಂಖ್ಯಾತರ ಮತ ನಿರ್ಣಾಯಕವಾಗಿಪ್ಪಲ್ಲಿ - ತೊಂದರೆ ಆಯಿಕ್ಕೊಂಡಿತ್ತು.  ಈ ಸರ್ತಿ ಈ ತೊಂದರೆ ಇರ ಹೇಳಿ ಕಾಣ್ತು.  ಮತ್ತೊಂದು ನಿರೀಕ್ಷೆ ಎಂತ ಹೇಳಿರೆ, ತಮಿಳುನಾಡಿಲ್ಲಿ ಜಯಲಲಿತನ ಪಕ್ಷಕ್ಕೆ ಒಳ್ಳೆ ಫಲಿತಾಂಶ ಬಂದು, ಚುನಾವಣೆಯ ನಂತರ ಮೋದಿಯ ಪ್ರಭಾವಂದಾಗಿ ಅದರ ಬೆಂಬಲ ಭಾಜಪಕೂಟಕ್ಕೆ ಸಿಕ್ಕುಗು ಹೇಳಿ. ದೂಮಾವತಿಯ ಪ್ರಧಾನಿ ಮಾಡ್ಳೆ ಜಯಲಲಿತನ ಒಲವು ಇಲ್ಲೆ ಹೇಳುದು ಸ್ಪಷ್ಟ.  ದೇಶದ ಹಿತದೃಷ್ಟಿಂದ ಈ ವಿಮರ್ಶೆಯ ಹಾಂಗೆ ಫಲಿತಾಂಶ ಬರಲಿ ಹೇಳಿ ದೇವರಲ್ಲಿ ಒಂದು ಸಣ್ಣ ಪ್ರಾರ್ಥನೆ.    

-ಬಾಪಿ                   

No comments: